ಗುರುವಾರ , ಮೇ 19, 2022
20 °C

ಮೈಸೂರು ನೆನಪಿಸಿದ ಜೆ.ಸಿ.ನಗರ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು ನೆನಪಿಸಿದ ಜೆ.ಸಿ.ನಗರ ಉತ್ಸವ

ಬೆಂಗಳೂರು: ನೀರು ಸಿಂಪಡಿಸಿಕೊಂಡ ಬೀದಿಗಳು, ಅಲ್ಲಲ್ಲಿ ತಳಿರು ತೋರಣದ ಸಿಂಗಾರ, ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ, ಬೆಳಕಿನ ದೀಪಗಳೊಂದಿಗೆ ಝಗಮಗಿಸುತ್ತಿದ್ದ ಮೆರವಣಿಗೆ ವಾಹನಗಳು... ನಗರದ ಜನತೆಗೆ ಮೈಸೂರು ದಸರೆಯನ್ನು ನೆನಪಿಗೆ ತರುತ್ತಿತ್ತು ಗುರುವಾರ ನಡೆದ `ಜೆ.ಸಿ.ನಗರ ದಸರಾ~.ಜೆ.ಸಿ ನಗರ ಮಾತ್ರವಲ್ಲದೆ ಗಂಗಾನಗರ, ಹೆಬ್ಬಾಳ, ದಿಣ್ಣೂರು, ಕಾವಲ್ ಬೈರಸಂದ್ರ, ಸುಲ್ತಾನ್ ಪಾಳ್ಯ, ನಂದಿದುರ್ಗ ರಸ್ತೆ ಮುಂತಾದ ಕಡೆಗಳಿಂದ ಆಗಮಿಸಿದ್ದ ಸುಮಾರು 76 ದೇವತೆಗಳ ಮೆರವಣಿಗೆ ದಸರೆಯ ರಂಗನ್ನು ಹೆಚ್ಚಿಸಿತು. ಗಣಪತಿ, ಆಂಜನೇಯ, ಮಹೇಶ್ವರಮ್ಮ ಏಳು ಮಂದಮ್ಮ, ಗಂಗಾಭವಾನಿ, ಮಾರಮ್ಮ, ಪೆದ್ದಮ್ಮ, ಆದಿಶಕ್ತಿ, ಭುವನೇಶ್ವರಿ, ಚಾಮುಂಡೇಶ್ವರಿ ಹೀಗೆ ವಿವಿಧ ದೇವತೆಗಳು ವೆುರವಣಿಗೆಯಲ್ಲಿ ಪಾಲ್ಗೊಂಡವು.ಸಂಜೆ 7ರ ಸುಮಾರಿಗೆ ಜೆ.ಸಿ.ನಗರ ಮುಖ್ಯ ರಸ್ತೆಯಿಂದ ಮಹೇಶ್ವರಮ್ಮ, ಗಣಪತಿ, ಆಂಜನೇಯ ದೇವತೆಗಳ ಉತ್ಸವ ಆರಂಭವಾಯಿತು. ಭಕ್ತರು ದೇವತೆಗಳಿಗೆ ಪೂಜೆ ಸಲ್ಲಿಸುವ ದೃಶ್ಯ ಎಲ್ಲೆಡೆ ಕಂಡು ಬಂತು. ವಿವಿಧ ಭಾಗಗಳಿಂದ ಬಂದ ಉತ್ಸವ ಮೂರ್ತಿಗಳು ವೆುರವಣಿಗೆಗೆ ಸೇರುತ್ತಿದ್ದವು. ಗಂಗಾನಗರದಿಂದ 12, ದಿಣ್ಣೂರಿನಿಂದ 6 ಹಾಗೂ ಕಾವಲ್ ಬೈರಸಂದ್ರದಿಂದ 3 ದೇವತೆಗಳು ಉತ್ಸವದಲ್ಲಿ ಭಾಗವಹಿಸಿದವು. ವೆುರವಣಿಗೆಯುದ್ದಕ್ಕೂ ಪಟಾಕಿ ಸಿಡಿಸಿ ಜನರು ಸಂಭ್ರಮ ವ್ಯಕ್ತಪಡಿಸಿದರು.ಪ್ಯಾರಚ್ಯೂಟ್ ರೆಜಿಮೆಂಟ್ ತರಬೇತಿ ಕೇಂದ್ರದ ಮುಂಭಾಗದಲ್ಲಿರುವ ಸರ್ಕಾರಿ ಶಾಲಾ ಮೈದಾನವನ್ನು ತಲುಪಿತು. ಬೇರೆ ಬೇರೆ ಭಾಗಗಳಿಂದ ಬಂದ ಗ್ರಾಮದೇವತೆಗಳು ಬನ್ನಿ ಪೂಜೆ ನೆರವೇರಿಸಿದವು. ಅಂಬು ಕಡಿದು ಬನ್ನಿ ಪತ್ರೆಗಳನ್ನು ಭಕ್ತರಿಗೆ ಹಂಚಲಾಯಿತು. ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ ಜೆ.ಸಿ.ನಗರದ ವಿವಿಧ ಭಾಗಗಳಲ್ಲಿ ವೆುರವಣಿಗೆ ನಡೆಯಿತು. ರಾತ್ರಿಯಿಡೀ ಮೆರವಣಿಗೆ ನಡೆದ ಹಿನ್ನೆಲೆಯಲ್ಲಿ ಭದ್ರತೆಗಾಗಿ ಸುಮಾರು 1200 ಪೊಲೀಸರನ್ನು ನೇಮಿಸಲಾಗಿತ್ತು.ರಾತ್ರಿ ವೇಳೆ ಬನ್ನಿ ಪೂಜೆ: ವಿಜಯದಶಮಿ ದಿನ ಸೂರ್ಯ ಮುಳುಗುವ ಮೊದಲು ಬನ್ನಿ ಪೂಜೆ ನೆರವೇರಿಸುವುದು ಸಾಮಾನ್ಯ ಸಂಗತಿ. ಆದರೆ ಜೆ.ಸಿ.ನಗರದಲ್ಲಿ ರಾತ್ರಿಯ ವೇಳೆ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಬಹು ಹಿಂದಿನಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. `ರಾತ್ರಿ ವೇಳೆಯೇ ಬನ್ನಿ ಪೂಜೆ ನಡೆಯುವುದಕ್ಕೆ ಸ್ಪಷ್ಟ ಕಾರಣ ಗೊತ್ತಿಲ್ಲ. ಆದರೂ ಇದೊಂದು ವಿಶಿಷ್ಟ ಆಚರಣೆ~ ಎನ್ನುತ್ತಾರೆ ಸ್ಥಳೀಯರು.ಸಾಂಸ್ಕೃತಿಕ ಮೆರಗು: ಡೊಳ್ಳು ಕುಣಿತ, ಪೂಜಾ ಕುಣಿತ, ಕೀಲು ಕುದುರೆ, ಕರಡಿ ಮೇಳ, ಗೊರವರ ಕುಣಿತ, ಪಟ ಕುಣಿತ ಇತ್ಯಾದಿ ಜಾನಪದ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆಗೆ ವಿಶೇಷ ಮೆರುಗು ತಂದವು.  ಶಿವಮೊಗ್ಗದಿಂದ ಬಂದಿದ್ದ ಡೊಳ್ಳು ಕುಣಿತದ ತಂಡದವರು ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಾನಪದ ಮೆರವಣಿಗೆಗೆ ಪ್ರಾಯೋಜಕತ್ವ ನೀಡಿತ್ತು.ಸುಮಾರು ಆರು ಸಾವಿರ ಮಂದಿ ಧಾರ್ಮಿಕ ಆಚರಣೆಗೆ ಸಾಕ್ಷಿಯಾದರು. ಮೈದಾನದಲ್ಲಿ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು. ಪ್ರಮುಖ ಬೀದಿಗಳಲ್ಲಿರುವ ಅಂಗಡಿ ಮುಂಗಟ್ಟುಗಳ ಎದುರು ಸಂಜೆಯಿಂದಲೇ ಪೂಜಾವಿಧಿಗಳು ನಡೆದವು. ಒಂದು ಬದಿಯಲ್ಲಿ ವಿವಿಧ ಮಳಿಗೆಗಳು, ಮತ್ತೊಂದು ಬದಿಯಲ್ಲಿ ಮಕ್ಕಳ ಮನರಂಜನೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜೆ.ಸಿ.ನಗರ ನಿವಾಸಿ ದಿನಕರ್, `ಜೆ.ಸಿ.ನಗರ ದಸರಾಕ್ಕೆ ಮೈಸೂರು ದಸರಾದಷ್ಟು ವಿಜೃಂಭಣೆ ಇಲ್ಲದಿರಬಹುದು. ಆದರೆ ರಾತ್ರಿಯಿಡೀ ಜನರು ಪಾಲ್ಗೊಳ್ಳುವುದು ಗಮನಿಸಬೇಕಾದ ವಿಚಾರ. ನಗರದ ದೈನಂದಿನ ಏಕತಾನತೆ ಮರೆತು ಜನ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ~ ಎಂದು ಹೇಳಿದರು.

ರಾಜರ ಕಾಲದ ಆಚರಣೆ: ಉತ್ಸವದ ಕುರಿತು ಮಾಹಿತಿ ನೀಡಿದ ಮಹೇಶ್ವರಮ್ಮ ದೇವಾಲಯದ ಕಾರ್ಯದರ್ಶಿ ವೇಣುಗೋಪಾಲ್, `ಸುಮಾರು 200 ವರ್ಷಗಳಿಂದ ಜೆ.ಸಿ.ನಗರದಲ್ಲಿ ದಸರಾ ಉತ್ಸವ ನಡೆಯುತ್ತಿದೆ. ಮೊದಲು ಕುದುರೆಗಳು ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದವು. ಬೇರೆ ಬೇರೆ ಕಡೆಗಳಿಂದ ಬರುತ್ತಿದ್ದ ಸೈನಿಕರು ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದರು. ನಾವು ಚಿಕ್ಕವರಿದ್ದಾಗ ಕುಸ್ತಿ ಪಂದ್ಯಗಳು ನಡೆಯುತ್ತಿದ್ದವು. ಪ್ರತಿ ಮನೆಗಳ ಮುಂದೆ ರಂಗೋಲಿ ಹಾಕಿ ಹೆಣ್ಣು ಮಕ್ಕಳು ಮೆರವಣಿಗೆಗೆ ಸ್ವಾಗತ ಕೋರುತ್ತಿದ್ದರು~ ಎಂದರು.ನವರಾತ್ರಿ ಸಂಭ್ರಮ: ವಿಜಯದಶಮಿಗೆ ಮುನ್ನ ಒಟ್ಟು ಒಂಬತ್ತು ದಿನಗಳ ಕಾಲ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಶಿವರಾಂ ವೇದಿಕೆಯಲ್ಲಿ ಈ ವರ್ಷವೂ ರಾಜ್ಯದ ವಿವಿಧ ಭಾಗದ ಕಲಾವಿದರಿಂದ ನಾಟಕ, ಸಂಗೀತ ಕಾರ್ಯಕ್ರಮ, ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆದವು.

ಮತ್ತೆ ನೆನಪಾದ ಒಡೆಯರು!

ಜೆ.ಸಿ.ನಗರ ದಸರಾದಲ್ಲಿ ಪ್ರತಿವರ್ಷ ಜಯಚಾಮರಾಜೇಂದ್ರ ಒಡೆಯರನ್ನು ತಪ್ಪದೆ ಸ್ಮರಿಸುತ್ತದೆ. ಎಲ್ಲ ದೇವತೆಗಳಿಗೂ ಮೊದಲು ಜಯ ಚಾಮರಾಜರ ಪುತ್ಥಳಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ.

`ಜಯಚಾಮರಾಜೇಂದ್ರ ಒಡೆಯರ ಸ್ಮರಣಾರ್ಥವಾಗಿಯೇ ಈ ಪ್ರದೇಶಕ್ಕೆ ಜೆ.ಸಿ.ನಗರ ಎಂದು ನಾಮಕರಣ ಮಾಡಲಾಗಿದೆ.ಉತ್ಸವಕ್ಕೆ ಹಿಂದಿನಿಂದಲೂ ರಾಜ ಮಹಾರಾಜರ ಪ್ರೋತ್ಸಾಹ ಇತ್ತು. ತಲೆಮಾರುಗಳಿಂದ ರಾಜರ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಕೊಂಡೊಯುವುದು ರೂಢಿಯಲ್ಲಿದೆ~ ಎಂದು ಜಯಚಾಮರಾಜೇಂದ್ರ ಯುವಕರ ಸಂಘದ ಸದಸ್ಯರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.