ಮಂಗಳವಾರ, ಏಪ್ರಿಲ್ 13, 2021
24 °C

ಮೊಟಕಾದ ಅಸ್ಸಾಂ ಸಿನಿಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರನ್ನು ಮೂದಲಿಸಿದ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಸದಸ್ಯರ ಪ್ರತಿಭಟನೆಗೆ ಮಣಿದು ಕ್ಷಮೆಯಾಚಿಸಿದ ಘಟನೆ ಗುರುವಾರ ರಾಜ್ಯಸಭೆಯಲ್ಲಿ ನಡೆಯಿತು. ಶಿಂಧೆ ಆಡಿದ ಹಗುರ ಮಾತಿಗೆ ರಾಜ್ಯಸಭೆಯ ಅನೇಕ ಸದಸ್ಯರು ತಿರುಗಿಬಿದ್ದರು. ಸಚಿವರು ಕ್ಷಮೆ ಕೋರಿ,  ತಮ್ಮ ಮೂದಲಿಕೆ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ತೀವ್ರವಾದಾಗ ಶಿಂಧೆ ಅನಿವಾರ್ಯವಾಗಿ ಕ್ಷಮೆ ಕೋರಬೇಕಾಯಿತು.ಅಸ್ಸಾಂ ಹಿಂಸಾಚಾರದ ಬಗ್ಗೆ ಗುರುವಾರ ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ಶಿಂಧೆ ಮಾತನಾಡುತ್ತಿದ್ದರು. ಆಗ ಜಯಾ ಬಚ್ಚನ್ ಅವರು, `ಸಚಿವರು ಸದಸ್ಯರ ನಿರ್ದಿಷ್ಟ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸುತ್ತಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.ತಮಗೆ ಅಡಚಣೆ ಉಂಟುಮಾಡಿದ  ಜಯಾ ಬಚ್ಚನ್ ಅವರಿಗೆ ಶಿಂಧೆ, `ಇದು ತುಂಬ ಗಂಭೀರ ವಿಷಯ. ಸಿನಿಮಾ ಅಲ್ಲ~ ಎಂದು ಹಂಗಿಸುವಂತಹ ಮಾತುಗಳನ್ನು ಆಡಿದರು. ಬಾಲಿವುಡ್ ನಟಿಯೂ ಆಗಿರುವ ಜಯಾ ಬಚ್ಚನ್, ಸಚಿವರ ಮಾತಿಗೆ ಬಲವಾಗಿ ಆಕ್ಷೇಪಿಸಿದರು. ಇದಕ್ಕೆ ಇತರ ಅನೇಕ ಸದಸ್ಯರೂ ದನಿಗೂಡಿಸಿದರು. ಆಗ ಸದನದಲ್ಲಿ ಹುಯಿಲು ಎದ್ದಿತು.`ಜಯಾ ಬಚ್ಚನ್ ಶ್ರೇಷ್ಠ ನಟಿ. ಈ ಸದನದ ಸದಸ್ಯರು. ನೀವು (ಶಿಂಧೆ) ಗೃಹ ಸಚಿವರಾಗಿ ಅವರನ್ನು ಮೂದಲಿಸುವಂತಹ ಮಾತುಗಳನ್ನಾಡಿದ್ದು ಸರಿಯಲ್ಲ. ಕ್ಷಮೆ ಕೋರಿ, ಬಳಕೆ ಮಾಡಿದ ಪದ  ಹಿಂದಕ್ಕೆ ಪಡೆಯಿರಿ~ ಎಂದು ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಒತ್ತಾಯಿಸಿದರು.ಈ ಒತ್ತಾಯಕ್ಕೆ ಮೊದಲು ಮಣಿಯದ ಶಿಂಧೆ, `ನಾನು ಮಾತನಾಡುತ್ತಿದ್ದಾಗ ಜಯಾ ಅವರು ಮಧ್ಯೆ ಬಾಯಿ ಹಾಕಿದ್ದು ಸರಿಯಾದ ಕ್ರಮವಲ್ಲ~ ಎಂದು ತಮ್ಮ ಮಾತುಗಳನ್ನು ಸಮರ್ಥಿಸಿಕೊಳ್ಳಲು ನೋಡಿದರು. ಆಗ ಜೇಟ್ಲಿ, ಅಧ್ಯಕ್ಷರ ಪೀಠದಲ್ಲಿ ಆಸೀನರಾಗಿದ್ದ ತಾರಿಕ್ ಅನ್ವರ್ ಅವರನ್ನು ಮಧ್ಯ ಪ್ರವೇಶಿಸಲು ಕೋರಿ; ಸಚಿವರು ತಾವಾಡಿದ ಮಾತನ್ನು ಹಿಂದಕ್ಕೆ ಪಡೆಯದಿದ್ದರೆ, ಅದನ್ನು ಕಡತದಿಂದ ತೆಗೆದುಹಾಕಬೇಕು ಎಂದರು.ನಂತರ ಶಿಂಧೆ, `ನನ್ನ ಮಾತುಗಳಿಂದ ಅವರಿಗೆ (ಜಯಾ ಬಚ್ಚನ್) ನೋವಾಗಿದ್ದರೆ ಕ್ಷಮೆ ಕೋರುವೆ. ಅವರು ನನ್ನ ತಂಗಿಯಂತೆ.ಬಚ್ಚನ್ ಅವರ ಕುಟುಂಬದ ಬಗ್ಗೆ ನನಗೆ ಅಪಾರ ಗೌರವ ಇದೆ~ ಎಂದರು. ಈ ಗದ್ದಲದಲ್ಲಿ, ಶಿಂಧೆ ಅವರು ಅಸ್ಸಾಂ ದಳ್ಳುರಿಯ ಕುರಿತು ನೀಡುತ್ತಿದ್ದ ಹೇಳಿಕೆಯನ್ನು ಅರ್ಧಕ್ಕೆ  ನಿಲ್ಲಿಸಿಬಿಟ್ಟರು. ಇದರಿಂದ ಸದಸ್ಯರ ಅನೇಕ ಪ್ರಶ್ನೆಗಳಿಗೆ ಉತ್ತರವೇ ದೊರಕಲಿಲ್ಲ. `ಸಿನಿಮಾ~ ಅರ್ಧಕ್ಕೆ ಮೊಟಕುಗೊಂಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.