ಶುಕ್ರವಾರ, ಜೂನ್ 18, 2021
22 °C

ಮೊದಲ ಚುನಾವಣೆ: ಗಾಂಧಿವಾದಿ ಗೆಲುವು

ಉದಯ ಯು/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಈ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬಾರದು ಎಂದು ಕಾಂಗ್ರೆಸ್‌ ಮುಖಂಡ ಜಾಫರ್‌ ಷರೀಫ್‌ ಹೇಳಿಕೆ ನೀಡಿದ್ದು, ನಂತರ ಕಾಂಗ್ರೆಸ್‌ ಅವರಿಗೇ ಟಿಕೆಟ್‌ ನೀಡದೆ ಕಳುಹಿಸಿದ್ದು... ಈ ಎಲ್ಲ ಬೆಳವಣಿಗೆಗಳನ್ನು ರಾಜ್ಯದ ಜನರು ನೋಡಿ ಆಗಿದೆ.ಯಾವುದೇ ಕ್ಷೇತ್ರದಿಂದ ಅಭ್ಯರ್ಥಿ ಅವಿರೋಧ­ವಾಗಿ ಆಯ್ಕೆಯಾಗುವುದು ಇಂದಿನ ಸ್ಥಿತಿಯಲ್ಲಿ ಅಸಾಧ್ಯವೇ. ಆದರೆ, ಹಾಸನ ಲೋಕಸಭಾ ಕ್ಷೇತ್ರದಿಂದ ಹಿಂದೆ ಒಬ್ಬ ಅಭ್ಯರ್ಥಿ ಅವಿರೋಧ­ವಾಗಿ ಆಯ್ಕೆಯಾಗಿದ್ದರು ಎಂಬುದು ಆಸಕ್ತಿಯ ವಿಚಾರವಾಗಿದೆ.ಈ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದ ಸಿದ್ದನಂಜಪ್ಪ ಒಂದು ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಗಾಂಧಿವಾದಿಯಾಗಿದ್ದ ಸಿದ್ದನಂಜಪ್ಪ ಆ ಕಾಲದಲ್ಲಿ ಸರಳ, ಸಜ್ಜನ ವ್ಯಕ್ತಿ ಎಂದೇ ಕ್ಷೇತ್ರದ ಜನರಿಗೆ ಪರಿಚಿತರಾಗಿದ್ದವರು. ಅವರು ತಮ್ಮ ಮೊದಲ ಚುನಾವಣೆಗೆ ಮಾಡಿದ ವೆಚ್ಚ ಕೇವಲ ಒಂದು ಸಾವಿರ ರೂಪಾಯಿ ಎಂಬುದೂ ಅಚ್ಚರಿಯ ವಿಚಾರವೇ.ದೇಶಕ್ಕೆ ಸ್ವಾತಂತ್ರ್ಯ ಬಂದು ಐದು ವರ್ಷದ ಬಳಿಕ, 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸಿದ್ದನಂಜಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ದ್ದರು. ಆ ಕಾಲದಲ್ಲಿ ಹಾಸನ-– ಚಿಕ್ಕಮಗಳೂರು ಜಿಲ್ಲೆ ಸೇರಿ ಒಂದು ಕ್ಷೇತ್ರವಾಗಿತ್ತು. ಆಗ ಇವರ ಎದುರಾಳಿ ಸೋಷಲಿಸ್ಟ್ ಪಕ್ಷದ ಶಿವಪ್ಪ. ಆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 3,54,206 ಮತದಾರರಿದ್ದರು. ಇವರಲ್ಲಿ ಸಿದ್ದನಂಜಪ್ಪ 1,16,561 ಮತ ಪಡೆದು ಗೆದ್ದಿದ್ದರು.ಅವಿರೋಧ ಆಯ್ಕೆ: ಸಜ್ಜನಿಕೆಯಿಂದಲೇ ಜನರ ಮನಗೆದ್ದಿದ್ದ ಸಿದ್ದನಂಜಪ್ಪ ಅವರಿಗೆ 1957ರ ಚುನಾವಣೆಯಲ್ಲಿ ಎದುರಾಳಿಯೇ ಇರಲಿಲ್ಲ. ಆದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ನಂತರ 1962ರ ಚುನಾವಣೆ­ಯಲ್ಲೂ ಗೆಲ್ಲುವ ಮೂಲಕ ಈ ಕ್ಷೇತ್ರದಿಂದ ಹ್ಯಾಟ್ರಿಕ್‌ ಸಾಧಿಸಿದ ಮೊದಲ ವ್ಯಕ್ತಿ ಎನಿಸಿ­ಕೊಂಡರು. ಈ ದಾಖಲೆಯನ್ನು ಸರಿಗಟ್ಟಲು ಈ ಬಾರಿ ದೇವೇಗೌಡರಿಗೆ ಅವಕಾಶ ಇದೆ.ಸಿದ್ದನಂಜಪ್ಪ ಎದುರಿಸಿದ 3ನೇ ಚುನಾವಣೆ ವೇಳೆಗೆ ಹಾಸನ ಮತ್ತು ಚಿಕ್ಕಮಗಳೂರು ಕ್ಷೇತ್ರಗಳು ವಿಂಗಡಣೆ­ಯಾಗಿ­ದ್ದವು. 1962ರಲ್ಲಿ ಗೆದ್ದರೂ ಅವರು ಪಡೆದ ಮತಗಳ ಸಂಖ್ಯೆ ಮೊದಲ ಚುನಾವಣೆ­ಯಲ್ಲಿ ಪಡೆದ ಮತಗಳಿಗಿಂತ ಕಡಿಮೆಯಾಗಿದ್ದವು. ಒಟ್ಟಾರೆ 4,33,487 ಮತಗಳಲ್ಲಿ 1,04,898 ಮತಗಳು  ಸಿದ್ದನಂಜಪ್ಪ ಅವರಿಗೆ ಬಂದಿದ್ದವು. ಇದರಿಂದ ತಮ್ಮ ಸಮೀಪದ ಸ್ಪರ್ಧಿ ಸೋಷಲಿಸ್ಟ್ ಪಕ್ಷದ ಡಿ.ಆರ್.ಕರೀಗೌಡ ವಿರುದ್ಧ ಗೆಲುವಿನ ನಗೆ ಬೀರಿದ್ದರು.ಸರಳ- – ಸಜ್ಜನ: ಸಿದ್ದನಂಜಪ್ಪ ಅಬ್ಬರದ ಪ್ರಚಾರ ಮಾಡಿರಲಿಲ್ಲ. ಕಾಲ್ನಡಿಗೆಯಲ್ಲೇ ಊರೂರು ಅಲೆದು ಮತ ಯಾಚಿಸುತ್ತಿದ್ದರು. ಬ್ಯಾನರ್, -ಬಂಟಿಂಗ್ಸ್, ವಾಹನ, ಮೈಕ್‌ ಅಬ್ಬರ ಯಾವುದೂ ಅವರ ಪ್ರಚಾರದಲ್ಲಿ ಇರುತ್ತಿರಲಿಲ್ಲ.ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿದ್ದಾಗಲೂ ಸಿದ್ದನಂಜಪ್ಪ ಅವರಲ್ಲಿ ಸ್ವಂತ ಕಾರು ಇರಲಿಲ್ಲ.  ಮೂರು ಬಾರಿ ಸಂಸದರಾಗಿದ್ದರೂ ಅವರು ವಿಮಾನ ಏರಿದ್ದು ತಮ್ಮ ಅಜ್ಜ ತೀರಿಕೊಂಡ ಸಂದರ್ಭದಲ್ಲಿ ಮಾತ್ರ. ಆಗ ದೂರದಲ್ಲಿದ್ದ ಅವರು, ಅಂತಿಮ ದರ್ಶನ ಪಡೆಯಲು ವಿಮಾನ ಏರಿ ಬಂದಿದ್ದರು. ಇದು ಅವರ ಸರಳತೆಗೆ ಉದಾಹರಣೆಯಾಗಿದೆ.ಸಿದ್ದನಂಜಪ್ಪ ಅವರ ಸರಳತೆಯನ್ನು ಇಂದಿನ ರಾಜಕಾರಣಿಗಳಲ್ಲಿ ಕಾಣುವುದೂ ಕಷ್ಟವೇ !.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.