ಮೊದಲ ನೀರಿಗೇ ಕೊಚ್ಚಿಹೋದ ನಾಲೆ!

ಶ್ರೀರಂಗಪಟ್ಟಣ: ಕೆಆರ್ಎಸ್ ಅಚ್ಚುಕಟ್ಟು ಪ್ರದೇಶದ ಚಿಕ್ಕದೇವರಾಯ ನಾಲೆಯು ಆಧುನೀಕರಣಗೊಳಿಸಿದ ಎರಡೇ ತಿಂಗಳಲ್ಲಿ ಕುಸಿದಿದೆ. ಮೊದಲಬಾರಿಗೆ ಹರಿಸಿದ ನೀರಿಗೇ ಸಿಮೆಂಟ್ ಗೋಡೆ ಕೊಚ್ಚಿ ಹೋಗಿದೆ.
ಸುಮಾರು 10 ಮೀಟರ್ಗೂ ಹೆಚ್ಚು ಉದ್ದದಷ್ಟು ನಾಲೆಯ ಗೋಡೆ ಕುಸಿದಿದೆ. ಕಾಮಗಾರಿ ನಡೆದು ಎರಡು ತಿಂಗಳು ಕಳೆಯುವ ಮೊದಲೇ ನಾಲೆಯ ಸಿಮೆಂಟ್ ಗೋಡೆ ಕುಸಿದಿರುವುದು ಅಚ್ಚರಿ ಮೂಡಿಸಿದೆ. ಕಳಪೆ ಕಾಮಗಾರಿಯ ಕಾರಣಕ್ಕೆ ಗೋಡೆ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಾಲೆಯ ಗೋಡೆ ಕುಸಿದಿರುವ ಸಂಗತಿಯನ್ನು ಮುಚ್ಚಿ ಹಾಕಲು ಅಧಿಕಾರಿಗಳು ರಾತ್ರಿಯೇ ಕಾಮಗಾರಿ ನಡೆಸಿದ್ದಾರೆ. ಅದಕ್ಕಾಗಿ ನಾಲೆಯಲ್ಲಿ ರಾತ್ರಿ ವೇಳೆ ನೀರು ನಿಲ್ಲಿಸಿ ಗೋಡೆ ನಿರ್ಮಾಣ ಕೆಲಸ ಮಾಡಲಾಗಿದೆ. ಸಾರ್ವಜನಿಕರು ಹಾಗೂ ರೈತರ ಗಮನಕ್ಕೆ ಬಾರದಂತೆ ತರಾತುರಿಯಲ್ಲಿ ಕೆಲಸ ಮುಗಿಸಲಾಗಿದೆ. ಗೋಡೆಗೆ ಕಬ್ಬಿಣದ ಸರಳು ಕಟ್ಟಿ ಕೂಲಿ ಕಾರ್ಮಿಕರು ಹಾಗೂ ಜೆಸಿಬಿ ಯಂತ್ರ ಬಳಸಿ ಕಾಮಗಾರಿ ನಡೆಸಲಾಗಿದೆ.
‘ದೇವರಾಯ ನಾಲೆಯ ಕಾಮಗಾರಿ ಮುಗಿದು ಒಂದೆರಡು ತಿಂಗಳು ಮಾತ್ರ ಕಳೆದಿದೆ. ಕಾಮಗಾರಿಯ ವಾಸನೆ ಮಾಸುವ ಮುನ್ನವೇ ನಾಲೆಯ ಗೋಡೆ ಕುಸಿದಿದೆ.
ನಾಲೆ ಆಧುನೀಕರಣ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಲೋಪ ಎಸಗಿದ್ದಾರೆ ಎಂಬುದಕ್ಕೆ ನಾಲೆಯ ಗೋಡೆ ಕುಸಿದಿರುವುದು ಸಾಕ್ಷಿಯಾಗಿದೆ. ನಾಲೆ ಕಾಮಗಾರಿ ಕುರಿತು ಸಮಗ್ರ ತನಿಖೆಯಾಗಬೇಕು.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು‘ ಎಂದು ರೈತರಾದ ಬೆಳಗೊಳ ಸುನಿಲ್, ವಿಷಕಂಠು ಇತರರು ಒತ್ತಾಯಿಸಿದ್ದಾರೆ.
‘ದೇವರಾಯ ನಾಲೆಯ ಒಂದು ಭಾಗದ ಗೋಡೆ ಸುಮಾರು 6ರಿಂದ 7 ಮೀಟರ್ ಉದ್ದದಷ್ಟು ಕುಸಿದಿದೆ. ಮಣ್ಣು ಜಾರಿದ ಪರಿಣಾಮ ನಾಲೆಯ ಸಿಮೆಂಟ್ ಗೋಡೆಗೆ ಹಾನಿಯಾಗಿದೆ. ಕುಸಿದಿರುವ ಭಾಗವನ್ನು ತಕ್ಷಣ ದುರಸ್ತಿ ಮಾಡಲಾಗಿದೆ.
ಕಾಮಗಾರಿಗೆ ಎಷ್ಟು ಹಣ ಖರ್ಚಾಗಿದೆ, ಕಾಮಗಾರಿಯನ್ನು ಯಾರು ನಡೆಸಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಈಗಷ್ಟೇ ಇಲ್ಲಿಗೆ ವರ್ಗವಾಗಿ ಬಂದಿದ್ದೇನೆ. ನನ್ನಲ್ಲಿ ಹೆಚ್ಚಿನ ಮಾಹಿತಿ ಇಲ್ಲ’ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಮ್ಮೇಗೌಡ ಹೇಳಿದ್ದಾರೆ.
ದೇವರಾಯ ನಾಲೆಯಲ್ಲಿ 100 ಕ್ಯುಸೆಕ್ ನೀರು ಹರಿಯುತ್ತದೆ. ಈ ನಾಲೆಯಿಂದ ಶೇ 50ರಷ್ಟು ನೀರನ್ನು ಮೈಸೂರು ನಗರಕ್ಕೆ ಕುಡಿಯುವ ಉದ್ದೇಶಕ್ಕೆ ಸರಬರಾಜು ಮಾಡಲಾಗುತ್ತದೆ.
ಚಿಕ್ಕದೇವರಾಯ ಒಡೆಯರ್ ಕಾಲದಲ್ಲಿ, 17ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ನಾಲೆಯನ್ನು ಸುಮಾರು ₹ 80 ಕೋಟಿ ವೆಚ್ಚದಲ್ಲಿ ಈಚೆಗಷ್ಟೇ ಆಧುನೀಕರಣ ಮಾಡಲಾಗಿದೆ. ಇಂತಹ ಪ್ರಮುಖ ನಾಲೆಯ ಗೋಡೆ ನಿರ್ಮಾಣಗೊಂಡ ಕೆಲವೇ ದಿನಗಳಲ್ಲಿ ಕುಸಿದು ಬಿದ್ದಿರುವುದು ಟೀಕೆಗೆ ಗ್ರಾಸವಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.