ಗುರುವಾರ , ಮೇ 13, 2021
18 °C

ಮೋದಿ ಕೈಗೆ ಪ್ರಚಾರಸೂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆಹಲಿಯತ್ತ ಮುಖ ಮಾಡಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೆಗಲಿಗೆ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ನೇತೃತ್ವದ ಹೊಣೆ ಏರಿದೆ. ಮೋದಿ ಅಭಿಮಾನಿಗಳಲ್ಲಿ ಸಂಚಲನ ಉಂಟುಮಾಡುವ ಈ ನಿರ್ಧಾರ ಗೋವಾದ ಪಣಜಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಹೊರಬಿದ್ದಿದೆಮೋದಿ ಅವರಿಗೆ ಹೆಚ್ಚಿನ ಜವಾಬ್ದಾರಿ ವಹಿಸುವ ಪ್ರಸ್ತಾವಕ್ಕೆ ಪಕ್ಷದ ಒಂದು ಬಣದ ವಿರೋಧ ಇತ್ತು.  ಎಲ್.ಕೆ.ಅಡ್ವಾಣಿ, ಯಶವಂತ ಸಿನ್ಹಾ, ಜಸ್ವಂತ್ ಸಿಂಗ್, ಮೇನಕಾ ಗಾಂಧಿ ಮೊದಲಾದ ನಾಯಕರು ಕಾರ್ಯಕಾರಣಿಗೆ ಗೈರುಹಾಜರಾಗಲು ಇದೇ ಕಾರಣ ಎಂದು ವಿಶ್ಲೇಷಿಸಲಾಗಿದೆ.ಇವರೆಲ್ಲರ ವಿರೋಧದ ನಡುವೆಯೇ ಕಾರ್ಯಕಾರಿಣಿಯಲ್ಲಿ ಮಹತ್ವದ ತೀರ್ಮಾನ ಕೈಗೊಂಡಿರುವುದು ಕುತೂಹಲಕಾರಿ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿನ ಗುಂಪುಗಾರಿಕೆ ಮತ್ತೆ ಬೀದಿಗೆ ಬಂದಿದೆ. ಅಡ್ವಾಣಿ ಮನೆ ಎದುರು ಮೋದಿ ಬೆಂಬಲಿಗರು ಪ್ರತಿಭಟನೆ ನಡೆಸುವ ಮಟ್ಟಿಗೆ ಈ ಕಲಹ ಚಾಚಿದೆ. ಅಡ್ವಾಣಿ ಮತ್ತು ಮೋದಿ ಪರ ಗುಂಪುಗಳು ಪರಸ್ಪರ ಹಾವು ಮುಂಗುಸಿಗಳಂತೆ ಬಸುಗುಡುತ್ತಿವೆ.ಹಗರಣಗಳಿಂದ ಪೇಚಿಗೆ ಸಿಲುಕಿದ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆ ಎದುರಿಸಲು ಸರ್ವ ಸಿದ್ಧತೆ ನಡೆಸಿರುವಾಗ, ಪ್ರಧಾನಿ ಸ್ಥಾನದ ಮೇಲೆ ಕಣ್ಣಿರಿಸಿದ ಅಡ್ವಾಣಿ ಮತ್ತು ಮೋದಿ ನಡುವಣ ಭಿನ್ನಾಭಿಪ್ರಾಯ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಹಣದುಬ್ಬರ, ಕುಂಠಿತ ಅಭಿವೃದ್ಧಿ ದರ, ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಮುಂತಾದವುಗಳು ಕಾಂಗ್ರೆಸ್ ಆಡಳಿತಕ್ಕೆ ಅಂಟಿದ ಕಳಂಕಗಳು.ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಲಾಭಕ್ಕೆ ವಿರೋಧ ಪಕ್ಷಗಳು ಮುಂದಾಗುವುದು ಸಹಜ. ಬಿಜೆಪಿ ಇದರ ಲಾಭ ಪಡೆಯಲು ಹವಣಿಸುತ್ತಿರುವಾಗಲೇ ಪಕ್ಷದಲ್ಲಿ ಬಿಕ್ಕಟ್ಟು ಉಲ್ಬಣಿಸಿದೆ. ಇದನ್ನು ಕೂಡಲೇ ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ.ಅಡ್ವಾಣಿ ಪರ ಮತ್ತು ಅಟಲ್ ಬಿಹಾರಿ ವಾಜಪೇಯಿ ಪರ ಗುಂಪುಗಳು ಈ ಹಿಂದೆ ಸುದ್ದಿಯಲ್ಲಿದ್ದವು. ಅಡ್ವಾಣಿ ಅವರು 2005ರಲ್ಲಿ ಪಾಕಿಸ್ತಾನದಲ್ಲಿ  ಪ್ರವಾಸ ಮಾಡಿದ ಸಂದರ್ಭದಲ್ಲಿ ಮಹಮದ್ ಅಲಿ ಜಿನ್ನಾ ಅವರನ್ನು ಜಾತ್ಯತೀತ ಎಂದು ಬಣ್ಣಿಸಿದಾಗಲೇ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರ ವಿರೋಧಿಗಳು ಅವರು ಅಧ್ಯಕ್ಷ ಗಾದಿ ಬಿಟ್ಟು ಹೋಗುವವರೆಗೆ ಬಿಡಲಿಲ್ಲ. ಅವರನ್ನು ವಿರೋಧಿಸಿದವರಲ್ಲಿ ಆರೆಸ್ಸೆಸ್ ಮುಂಚೂಣಿಯಲ್ಲಿತ್ತು.ಈ ವಿವಾದದ ನಂತರ ಅವರ ವಿರೋಧಿ ಬಣ ಪಕ್ಷದಲ್ಲಿ ಸಕ್ರಿಯವಾಗಿ ಉಳಿದಿದೆ. ಗುಜರಾತ್‌ನಲ್ಲಿ ಗೋಧ್ರಾ ರೈಲು ಮೇಲಿನ ದಾಳಿಯ ಬಳಿಕ ನಡೆದ ವ್ಯಾಪಕ ಹಿಂಸಾಚಾರ, ನಕಲಿ ಎನ್‌ಕೌಂಟರ್, ಹಿರಿಯ ಪೊಲೀಸ್ ಅಧಿಕಾರಿಗಳೇ ಮೋದಿ ವಿರುದ್ಧ ತಿರುಗಿಬಿದ್ದ ಘಟನೆ ಮೋದಿ ವಿರೋಧಿಗಳಿಗೆ ಅವರ ವಿರುದ್ಧದ ದಾಳಿಗೆ ಮೇವನ್ನು ಒದಗಿಸಿದ್ದವು. ಆದರೆ ಗುಜರಾತಿನಲ್ಲಿ ಪಕ್ಷವನ್ನು ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ತರುವುದರಲ್ಲಿ ಯಶಸ್ವಿಯಾದದ್ದು; ಇತ್ತೀಚೆಗೆ ಗುಜರಾತಿನಲ್ಲಿ ನಡೆದ ಉಪಚುನಾವಣೆಯಲ್ಲಿ ಪಕ್ಷದ ಎಲ್ಲ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಾಧ್ಯವಾದದ್ದು ಅವರ ವರ್ಚಸ್ಸು ವೃದ್ಧಿಗೆ ಪ್ರಮುಖ ಕಾರಣವಾಗಿತ್ತು. ಈಗ ತಮ್ಮ ಪಕ್ಷದಲ್ಲೇ ನಡೆದ ಹೋರಾಟದಲ್ಲಿ ಮೊದಲ ಯಶಸ್ಸು ಗಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.