ಭಾನುವಾರ, ಜನವರಿ 19, 2020
23 °C

ಮೌಲ್ಯಮಾಪನ ಬಹಿಷ್ಕರಿಸಿದ ಉಪನ್ಯಾಸಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಪದವಿ ಪರೀಕ್ಷಾ ಕಾರ್ಯಕ್ಕೆ ಹಾಜರಾಗದ 12 ಜನ ಉಪನ್ಯಾಸಕರ ಒಂದು ತಿಂಗಳ ಸಂಬಳ ಕಡಿತಗೊಳಿಸುವಂತೆ ವಿವಿ ಕುಲಪತಿಯವರು ಉನ್ನತ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿರುವ ಕ್ರಮವನ್ನು ಖಂಡಿಸಿರುವ ಉಪನ್ಯಾಸಕರು ಸೋಮವಾರ ಆರಂಭವಾಗ­ಬೇಕಿದ್ದ ಪದವಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕರಿಸಿದರು.ಸ್ಥಳೀಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಸಿಂಡಿಕೇಟ್‌ ಸಭೆಯಲ್ಲಿ ಕುಲಪತಿ ಡಾ.ಮಂಜಪ್ಪ ಹೊಸಮನೆ ಅವರು 12 ಜನ ಉಪನ್ಯಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದ್ದಾರೆ. ಉಪನ್ಯಾಸಕರ ವಿರುದ್ಧ ಇದು ಕುಲಪತಿಯವರ ಏಕಪಕ್ಷೀಯ ನಿರ್ಧಾರವಾಗಿದೆ. ಕೂಡಲೇ ಕುಲಪತಿಯವರು ಕ್ಷಮೆ ಯಾಚಿಸ­ಬೇಕು ಎಂದು ಆಗ್ರಹಿಸಿ ಮೌಲ್ಯಮಾಪನ ಕಾರ್ಯದಿಂದ ಹೊರಗುಳಿಯಲಾಗಿದೆ ಎಂದು ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳ ಅಧ್ಯಾಪಕರ ಸಂಘದ ಅಧ್ಯಕ್ಷ ಬಿ.ಆರ್‌. ಮಂಜುನಾಥ ತಿಳಿಸಿದರು.ಮೌಲ್ಯಮಾಪನ ಕಾರ್ಯ ಬಹಿಷ್ಕರಿಸು­ವುದಾಗಿ ಮೊದಲೇ ತಿಳಿಸಲಾಗಿದೆ. ಆದರೂ, ಕೇವಲ ವಿವಿಯ ಮೌಲ್ಯಮಾಪನ ವಿಭಾಗದ ಪ್ರಭಾರಿ ಕುಲಸಚಿವ ಸುರೇಶ ಅವರು ಸ್ಥಳಕ್ಕೆ ಆಗಮಿಸಿ ಮನವಿ ಮಾಡಿದರು. ಕುಲಪತಿ­ಯವರು ಬಂದು ಮನವಿ ಸ್ವೀಕರಿಸುವವರೆಗೂ ಮೌಲ್ಯಮಾಪನ ಕಾರ್ಯ ಆರಂಭಿಸುವುದಿಲ್ಲ ಎಂದು ಅವರು ತಿಳಿಸಿದರು.ಆರೋಗ್ಯ ಸಂಬಂಧಿ ಸಮಸ್ಯೆಯಿಂದಾಗಿ ಪರೀಕ್ಷಾ ಕಾರ್ಯದಲ್ಲಿ ಕೆಲವರು ಭಾಗವಹಿಸಿಲ್ಲ. ಸ್ಥಳೀಯ ಸರಳಾದೇವಿ ಸತೀಶಚಂದ್ರ ಅಗರ್‌ವಾಲ್‌ ಸರ್ಕಾರಿ  ಪ್ರಥಮ ದರ್ಜೆ ಕಾಲೇಜಿನ ಕನ್ನಡ ಅಧ್ಯಾಪಕ ಡಾ.ಮಾನಕರಿ ಶ್ರೀನಿವಾಸಾಚಾರ್ಯ ಸೇರಿದಂತೆ ಕೆಲವರು ಈ ಕುರಿತು ಮುಂಚಿತವಾಗಿಯೇ ಸಂಬಂಧಿಸಿದ ಪ್ರಾಚಾರ್ಯರಿಗೆ ತಿಳಿಸಿದರೂ ಅವರ ವಿರುದ್ಧವೂ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅವರು ದೂರಿದರು.ಬಹುತೇಕ ಉಪನ್ಯಾಸಕರೂ ಪ್ರಾಚಾರ್ಯರಿಗೆ ಕಾರಣ ತಿಳಿಸಿಯೇ ಪರೀಕ್ಷಾ ಕಾರ್ಯದಿಂದ ದೂರ ಉಳಿದಿದ್ದು, ಕೆಲವರು ಪಾಠ– ಪ್ರವಚನದ ಹಿನ್ನೆಲೆಯಲ್ಲಿ ಪರೀಕ್ಷಾ ಕಾರ್ಯಕ್ಕೆ ತೆರಳಲಾಗಿಲ್ಲ. ಈ ಕಾರಣಗಳಿದ್ದರೂ ಅವರ ವಿರುದ್ಧ ಕ್ರಮ ಕೈಗೊಂಡಿರುವುದು ಸರಿಯಲ್ಲ ಎಂದು ಅವರು ಹೇಳಿದರು.ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಮಲ್ಲೇಶಪ್ಪ, ಸೋಮನಾಥ, ರಾಧಾಕೃಷ್ಣ, ಉಪನ್ಯಾಸಕರಾದ ಬಿ.ಶ್ರೀನಿವಾಸ­ಮೂರ್ತಿ, ಇಂದಿರಾ, ಟಿ.ಬಸವರಾಜ, ದೇವಣ್ಣ, ಡಾ.ಕೆ.ಬಸಪ್ಪ, ಶ್ಯಾಂ ಮೂರ್ತಿ, ಸತ್ಯನಾರಾ­ಯಣ, ಮೀನಾಕ್ಷಿ ಜಂಗಮನಿ, ಹುಲಿಗೆಮ್ಮ, ಡಾ.ಮಾನಕರಿ ಶ್ರೀನಿವಾಸಾಚಾರ್ಯ, ಮನೋಹರನ್‌, ಡಾ.ಚಂದ್ರಬಾಬು, ಡಾ.ದಿವಾಕರ್‌ ಮತ್ತಿತರರು ಉಪಸ್ಥಿತರಿದ್ದರು.ನಗರದ ವುಂಕಿ ಮರಿಸಿದ್ದಪ್ಪ ಕಾನೂನು ಕಾಲೇಜಿನಲ್ಲಿ ನಡೆಯಬೇಕಿದ್ದ ಮೌಲ್ಯಮಾಪನ ಕಾರ್ಯ ಬಹಿಷ್ಕರಿಸಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.ಕಪ್ಪು ಪಟ್ಟಿ ಧರಿಸಲು ನಿರ್ಧಾರ: ಕುಲಪತಿಯವರ ಕ್ರಮವನ್ನು ವಿರೋಧಿಸಿ ಮಂಗಳವಾರದಿಂದ ಕಪ್ಪು ಪಟ್ಟಿ ಧರಿಸಿ ಮೌಲ್ಯಮಾಪನ ಕಾರ್ಯ ಆರಂಭಿಸುವ ಕುರಿತು ಸಂಜೆ ಉಪನ್ಯಾಸಕರು ಸಭೆ ನಡೆಸಿ ನಿರ್ಧರಿಸಿದರು.

ಕುಲಪತಿಯವರು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸುವವರೆಗೂ ಕಪ್ಪು ಪಟ್ಟಿ ಧರಿಸಿ ಮೌಲ್ಯಮಾಪನ ನಡೆಸಲಾಗುವುದು ಎಂದು ಅಧ್ಯಾಪಕರ ಸಂಘ ತಿಳಿಸಿದೆ.

ಪ್ರತಿಕ್ರಿಯಿಸಿ (+)