ಸೋಮವಾರ, ಏಪ್ರಿಲ್ 12, 2021
25 °C

ಮ್ಯಾರಥಾನ್: ಸ್ಟೀಫನ್ ಕಿಪ್ರೊಟಿಚ್‌ಗೆ ಬಂಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಉಗಾಂಡದ ಸ್ಟೀಫನ್ ಕಿಪ್ರೊಟಿಚ್ ಲಂಡನ್ ಒಲಿಂಪಿಕ್ಸ್ ಮ್ಯಾರಥಾನ್‌ನ ಪುರುಷರ ವಿಭಾಗದ ಚಿನ್ನದ ಪದಕ ಗೆದ್ದುಕೊಂಡರು. ಕಣದಲ್ಲಿದ್ದ ಭಾರತದ ರಾಮ್‌ಸಿಂಗ್ ಯಾದವ್‌ಗೆ 78ನೇ ಸ್ಥಾನ ದೊರೆಯಿತು.ಕೂಟದ ಅಂತಿಮ ದಿನವಾದ ಭಾನುವಾರ ನಡೆದ ಸ್ಪರ್ಧೆಯಲ್ಲಿ ಸ್ಟೀಫನ್ 42.1 ಕಿ.ಮೀ. ದೂರವನ್ನು ಎರಡು ಗಂಟೆ 8 ನಿಮಿಷ ಮತ್ತು ಒಂದು ಸೆಕೆಂಡ್‌ಗಳಲ್ಲಿ ಪೂರೈಸಿದರು. ಈ ಮೂಲಕ ಲಂಡನ್ ಕೂಟದಲ್ಲಿ ಉಗಾಂಡಕ್ಕೆ ಮೊದಲ ಪದಕ ತಂದಿತ್ತರು.ಕೆನ್ಯಾದ  ಸ್ಪರ್ಧಿಗಳಾದ ಅಬೆಲ್ ಕಿರುಯ್ (2:08.27) ಮತ್ತು ವಿಲ್ಸನ್ ಕಿಪ್ಸಂಗ್ ಕಿಪ್ರೊಟಿಚ್ (2:09.37) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು. ಅಮೆರಿಕದ ಮೆಬ್ರಾಟಮ್ ಕೆಫ್ಲೆಜಿಗಿ ನಾಲ್ಕನೇ ಸ್ಥಾನ ಪಡೆದರು.ರಾಮ್‌ಸಿಂಗ್‌ಗೆ ನಿರಾಸೆ: ಭಾರತದ ರಾಮ್‌ಸಿಂಗ್ ಯಾದವ್ 78ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು. ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನ ರಾಮ್‌ಸಿಂಗ್ ನಿಗದಿತ ಗುರಿ ಕ್ರಮಿಸಲು ಎರಡು ಗಂಟೆ 30 ನಿಮಿಷ ಹಾಗೂ ಆರು ಸೆಕೆಂಡ್‌ಗಳನ್ನು ತೆಗೆದುಕೊಂಡರು.ಕಣದಲ್ಲಿ ಒಟ್ಟು 105 ಮಂದಿ ಸ್ಪರ್ಧಿಗಳಿದ್ದರು. ಇದರಲ್ಲಿ 20 ಅಥ್ಲೀಟ್‌ಗಳು ಸ್ಪರ್ಧೆ ಪೂರೈಸಲು ವಿಫಲರಾದರು.

ರಾಮ್‌ಸಿಂಗ್ ಅವರ ವೈಯಕ್ತಿಕ ಶ್ರೇಷ್ಠ ಪ್ರದರ್ಶನ 2:16.59 ಆಗಿದೆ. ಆದರೆ ಭಾನುವಾರ ಅವರಿಂದ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ. ಇದರೊಂದಿಗೆ ಅಥ್ಲೆಟಿಕ್ಸ್‌ನಲ್ಲಿ ಭಾರತ `ಬರಿಗೈ~ನಲ್ಲಿ ಮರಳಿದ ಹಾಗಾಗಿದೆ.

ಭಾರತದ ಒಟ್ಟು 14 ಅಥ್ಲೀಟ್‌ಗಳು ಲಂಡನ್ ಕೂಟದ ವಿವಿಧ ವಿಭಾಗಗಳಲ್ಲಿ ಪಾಲ್ಗೊಂಡಿದ್ದರು.32 ವರ್ಷಗಳ ಬಿಡುವಿನ ಬಳಿಕ ಒಲಿಂಪಿಕ್ಸ್‌ನ ಮ್ಯಾರಥಾನ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅಥ್ಲೀಟ್ ಎಂಬ ಗೌರವ ರಾಮ್‌ಸಿಂಗ್ ಒಲಿಯಿತು. ಭಾರತದ ಶಿವನಾಥ್ ಸಿಂಗ್ 1976ರ ಮಾಂಟ್ರಿಯಲ್ ಒಲಿಂಪಿಕ್ಸ್‌ನಲ್ಲಿ 11ನೇ ಸ್ಥಾನ ಪಡೆದಿದ್ದರೆ, 1980ರ ಮಾಸ್ಕೊ ಕೂಟದಲ್ಲಿ ಸ್ಪರ್ಧೆ ಕೊನೆಗೊಳಿಸಲು ವಿಫಲರಾಗಿದ್ದರು. ಆ ಭಾರತದ ಬಳಿಕ ಯಾರೊಬ್ಬರೂ ಮ್ಯಾರಥಾನ್‌ನಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿರಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.