ಗುರುವಾರ , ಮೇ 19, 2022
23 °C

ಯಕ್ಷಗಾನಕ್ಕೂ ಕಥಕ್ಕಳಿಯ ಮಾನ್ಯತೆ ಸಿಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ರಾಷ್ಟ್ರದಲ್ಲಿ ಕಥಕ್ಕಳಿಗೆ ದೊರೆತ ಮಾನ್ಯತೆ ಯಕ್ಷಗಾನಕ್ಕೆ ಸಿಕ್ಕಿದಾಗ ಅದು ರಾಷ್ಟ್ರದ ರಂಗಭೂಮಿಯಾಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಕೆ ಚಿನ್ನಪ್ಪಗೌಡ ಹೇಳಿದರು.ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಸೋದೆ ವಾದಿರಾಜ ಮಠದ ಆಶ್ರಯದಲ್ಲಿಗೋವಿಂದ ವೈಭವ ಸಮಿತಿ ರಾಜಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಗೋವಿಂದ ವೈಭವ ಸಮಾರಂಭದಲ್ಲಿ ಕೆ.ಗೋವಿಂದ ಭಟ್ ಅವರ ಜೀವನ-ಸಾಧನೆ ಅವಲೋಕನದ ವಿಚಾರಗೋಷ್ಠಿ ಕಲೋಪಾಸನಾ ವೈಭವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಯಕ್ಷಗಾನದಲ್ಲಿ ಚಲನಶೀಲತೆ ಇದೆ. ಹೊಸ ಪ್ರಯೋಗಗಳ ಮೂಲಕ ಯಕ್ಷಗಾನ ನಮ್ಮದೇ ಆಟ ಆಗಬಾರದು. ಯಕ್ಷಗಾನ ನಾವೆಲ್ಲ ಗ್ರಹಿಸಬಹುದಾದ ರಂಗಭೂಮಿ, ಯಕ್ಷಗಾನದಲ್ಲಿ ಅರುವತ್ತು ವರ್ಷ ತಿರುಗಾಟ ಮಾಡಿದ ಕೆ.ಗೋವಿಂದ ಭಟ್ಟ ಅವರು 15 ಸಾವಿರ ಪಾತ್ರ ನಿರ್ವಹಿಸಿದ್ದಾರೆ. ಅವರ ಶಕ್ತಿ ಸಾಮಾರ್ಥ್ಯದ ಬಗ್ಗೆ ಬೇರೆ ವ್ಯಾಖ್ಯಾನ ಬೇಕಿಲ್ಲ ಎಂದು ಹೇಳಿದರು.ಆಕಸ್ಮಿಕವಾಗಿ ಬಂದ ಪಾತ್ರಗಳನ್ನು ಸವಾಲಾಗಿ ಸ್ವೀಕರಿಸಿ ಅವರು ಬೆಳೆದಿದ್ದಾರೆ. ಯಕ್ಷಗಾನ ಕಲಾವಿದರನ್ನು ವಿವರಣೆ ಮೂಲಕ ಹೇಳಲು ಸಾಧ್ಯ ಇಲ್ಲ. ಅವರು ಮುಂದಿನ ತಲೆಮಾರಿಗೆ ಮಾರ್ಗದರ್ಶರಾಗಿದ್ದಾರೆ. ರಾಷ್ಟ್ರದ ರಂಗಭೂಮಿ ಕಲಾವಿದರಾಗಿರುವ ಗೋವಿಂದ ಭಟ್ ಅವರ ಯಕ್ಷಗಾನದ ಬಹುಮುಖಗಳ ದಾಖಳೆ ಆಗುತ್ತಿರುವುದು ಕರಾವಳಿಯಲ್ಲಿಯೇ ದಾಖಲೆ.

 

ಈ ಕಾರಣದಿಂದ ಮೂರರಿಂದ ನಾಲ್ಕು ಪ್ರಬಂಧಗಳು ಸಿದ್ಧಗೊಳ್ಳುವಷ್ಟು ಮಾಹಿತಿ ಸಂಗ್ರಹವಾಗಿದೆ. ದಾಖಲಾತಿ ನಿಂತ ನೀರಾಗದೇ ನಿರಂತರವಾಗಿ ಮುಂದುವರಿಯಬೇಕು. ನೂರಾರು ಕಲಾವಿದರ ದಾಖಲಾತಿ ಮೂಲಕ ಯಕ್ಷಗಾನ ಕರಾವಳಿಯ ಕಲೆಯಾದರೂ ಕರ್ನಾಟಕದ ರಂಗಭೂಮಿಯಲ್ಲ ಅದು ರಾಷ್ಟ್ರದ ರಂಗಭೂಮಿ ಎಂದು ತೋರಿಸುವ ಸಾಮರ್ಥ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.ಅರ್ಥಧಾರಿಯಾಗಿ ಗೋವಿಂದ ಭಟ್ಟ, ಗುರು ಗೋವಿಂದ ಭಟ್ಟ, ಪ್ರಯೋಗಶೀಲ ವೇಷಧಾರಿಯಾಗಿ ಗೋವಿಂದ ಭಟ್ಟ ವಿಷಯದಲ್ಲಿ ಹಿರಣ್ಯ ವೆಂಕಟೇಶ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಕೃಷ್ಣಮೂರ್ತಿ ಕವತ್ತಾರ್ ಉಪನ್ಯಾಸ ನೀಡಿದರು. ಕೆ.ಉಮಾಕಾಂತ ಭಟ್ ಅಧ್ಯಕ್ಷತೆ ವಹಿಸಿದ್ದರು. ಕೆ.ಗೋವಿಂದ ಭಟ್ ಅವರೊಂದಿಗೆ ಸುಬ್ಬಣಕೋಡಿ ರಾಮ ಭಟ್, ದಿವಾಣ ಶಿವಶಂಕರ ಭಟ್, ಸತೀಶ್ ಕಾರ್ಕಳ ಅವರು ನಾಟ್ಯಾಭಿನಯ ವೈಭವದಲ್ಲಿ ಯಕ್ಷಗಾನದವಿವಿಧ ನಾಟ್ಯ ಪ್ರಕಾರಗಳ ಪ್ರಾತ್ಯಕ್ಷಿಕೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.