ಭಾನುವಾರ, ಮೇ 9, 2021
24 °C

`ಯಕ್ಷಗಾನ ಭಿನ್ನ ಸಂಗೀತ ಕಲೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನೃತ್ಯ ಮತ್ತು ರಂಗಭೂಮಿಯ ಸಂಗೀತಕ್ಕಿಂತ ಭಿನ್ನವಾದ ಸಂಗೀತ ಸಂಯೋಜನೆ ಯಕ್ಷಗಾನದಲ್ಲಿದೆ' ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.ದೆಹಲಿ ಮಿತ್ರ ಪ್ರಕಾಶನದ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ನಡೆದ ತೆಂಕುತಿಟ್ಟಿನ ಯಕ್ಷಗಾನ ಕಲಾವಿದ `ಅಳಿಕೆ ರಾಮಯ್ಯ ರೈ' ಅವರ ಕುರಿತ `ಅಳಿಕೆ' ಕೃತಿ (ಸಂಪಾದಕರು-ಡಾ. ನಿತ್ಯಾನಂದ ಬಿ. ಶೆಟ್ಟಿ) ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ಅಳಿಕೆ ರಾಮಯ್ಯ ರೈ ಅವರು ತೆಂಕುತಿಟ್ಟಿನ ಮೇರು ಕಲಾವಿದ. ಅವರು ಪಾತ್ರವನ್ನು ನಿರ್ವಹಿಸುತ್ತಿದ್ದ ರೀತಿ ಅದ್ಭುತವಾದದ್ದು.ಅಭಿನಯದ ಜತೆಗೆ ಸ್ವರದ ಏರಿಳಿತ, ಸಂಭಾಷಣೆಯ ಶೈಲಿ ಎಂತಹವರನ್ನು ಮೋಡಿ ಮಾಡುವಂತದ್ದು. ಅಳಿಕೆಯವರು ಮತ್ತು ಬೋಳಾರ ನಾರಾಯಣ ಶೆಟ್ಟಿ ಅವರ ಮಾತಿನ ಮೋಡಿ ನನ್ನ ಸ್ಮೃತಿಪಟಲದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ' ಎಂದರು. `ಶಿಸ್ತು, ಶ್ರದ್ಧೆ, ಸಂಯಮದಿಂದ ಅವರು ಯಕ್ಷಗಾನವನ್ನು ಆರಾಧಿಸಿದವರು. ಅವರ ಬದುಕು ಇಂದಿನ ಯಕ್ಷಗಾನವನ್ನು ಕಲಿಯುವ ಯುವ ಜನತೆಗೆ ಪಾಠ ಇದ್ದಂತೆ' ಎಂದು ಬಣ್ಣಿಸಿದರು.`ಅಳಿಕೆ ಅವರ ವ್ಯಕ್ತಿಚಿತ್ರಣ ಕೃತಿಯಲ್ಲಿ ಉತ್ತಮವಾಗಿ ಮೂಡಿಬಂದಿದೆ. ನಾಟ್ಯಶೈಲಿ, ಮಾತುಗಾರಿಕೆಯನ್ನು ಕೃತಿಯಲ್ಲಿ ಅಳವಡಿಸಿಕೊಂಡಿದ್ದರೆ ಕೃತಿಯ ತೂಕ ಹೆಚ್ಚುತ್ತಿತ್ತು. ಮುಂದಿನ ಕೃತಿಗಳಲ್ಲಿ ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು' ಎಂದು ಸಲಹೆ ನೀಡಿದರು.ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, `ನಾಲ್ಕನೇ ತರಗತಿ ಓದಿದ ಒಬ್ಬ ಸಾಮಾನ್ಯ ವ್ಯಕ್ತಿ ಯಕ್ಷಗಾನದ ಮೇರು ಪ್ರತಿಭೆಯಾಗುತ್ತಾರೆಂದರೆ ನಿಜಕ್ಕೂ ಅಚ್ಚರಿಯ ಸಂಗತಿ. ಅವರ ಬದುಕನ್ನು ಆಧರಿಸಿದ `ಅಳಿಕೆ' ಕೃತಿಯು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ ಪಠ್ಯವಾಗಲು ಯೋಗ್ಯವಾದ ಕೃತಿ' ಎಂದು ಅಭಿಪ್ರಾಯಪಟ್ಟರು.`ಯಕ್ಷಗಾನದಲ್ಲಿ ಪ್ರೇಕ್ಷಕರ ಸ್ಪಂದನೆಗೆ ಅನುಗುಣವಾಗಿ ಇಲ್ಲಿ ಪ್ರಸಂಗಗಳು ಬದಲಾಗುತ್ತವೆ. ಇಡೀ ಪ್ರಸಂಗವು ಮೂರನೆ ವ್ಯಕ್ತಿಯಿಂದ ಪ್ರಾರಂಭವಾಗುತ್ತದೆ. ಮೂರನೇ ವ್ಯಕ್ತಿಯಿಂದ ಮೊದಲನೆ ವ್ಯಕ್ತಿಗೆ ಪಾತ್ರ ಬದಲಾಗುವ ಸಂದರ್ಭದಲ್ಲಿ ಯಕ್ಷಗಾನ ಸೃಷ್ಟಿಯಾಗುತ್ತದೆ. ಆ ಪರಿಯೇ ರೋಮಾಂಚನಕಾರಿ' ಎಂದರು.ನಟಿ ಜಯಮಾಲಾ, ಕೃತಿಯ ಸಂಪಾದಕ ಡಾ.ನಿತ್ಯಾನಂದ ಬಿ.ಶೆಟ್ಟಿ, ದೆಹಲಿ ಮಿತ್ರದ ವಸಂತ ಶೆಟ್ಟಿ ಬೆಳ್ಳಾರೆ, ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.