ಭಾನುವಾರ, ಜನವರಿ 19, 2020
22 °C
ಕೆ.ಬಿ. ಹಾಳ್ ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ಆರೋಪ

ಯಗಚಿ ಕೊಳವೆಗೆ ಕನ್ನ: ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ತಾಲ್ಲೂಕಿನ 58 ಗ್ರಾಮಗಳಿಗೆ ಯಗಚಿ ನದಿ ಮೂಲದಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಮಾರ್ಗದಲ್ಲಿನ ಕೊಳವೆಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿಕೊಂಡಿರುವವರ ವಿರುದ್ಧ ಇಲ್ಲಿನ ಜಿಲ್ಲಾ ಪಂಚಾಯಿತಿ  ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಬೇಲೂರಿನ ಯಗಚಿ ಜಲಾಶಯದಿಂದ ತಾಲ್ಲೂಕಿನ ಪ್ಲೋರೆಡ್‌ ಪೀಡಿತ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಚಿಕ್ಕಮಗಳೂರು ತಾಲ್ಲೂಕಿನ ಕೆ.ಬಿ. ಹಾಳ್‌ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಕೊಳವೆಯ ಒಂದು ಭಾಗದಲ್ಲಿ ಅಕ್ರಮವಾಗಿ ಪೈಪ್‌ ಅಳವಡಿಸಿ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ನೀರು ಸರಬರಾಜು ಮಾಡಿಕೊಂಡಿರುವುದರಿಂದ ಯೋಜನೆಯ ಉದ್ದೇಶಿತ ಗ್ರಾಮಗಳಿಗೆ ನೀರು ಪೂರೈಕೆಯಾಗದೆ ತೊಂದರೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ದೇಶಿತ ರಾಜೀವ್‌ ಗಾಂಧಿ ಸಬ್‌–ಮೆಷಿನ್‌ ಯೋಜನೆಯಡಿ ಪ್ರಥಮ ಹಂತದಲ್ಲಿ ತಾಲ್ಲೂಕಿನ 58 ಗ್ರಾಮಗಳು ಹಾಗೂ ಮಾರ್ಗ ಮಧ್ಯದಲ್ಲಿ ಬರುವ ಬೇಲೂರು ತಾಲ್ಲೂಕಿನ 12 ಗ್ರಾಮಗಳಿಗೆ ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ಯಗಚಿಯಿಂದ ಕೊಳವೆ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.ಈ ಭಾಗದ ಜನತೆ ತಮ್ಮ ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿಲ್ಲ ಎಂದು ಅರಸೀಕೆರೆ ಜಿಲ್ಲಾ ಪಂಚಾಯಿತಿ  ಎಂಜಿನಿಯರಿಂಗ್‌ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಶೇಖರಪ್ಪ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದಾಗ ಅಕ್ರಮ ಸಂಪರ್ಕ ಬೆಳಕಿಗೆ ಬಂದಿದೆ.ಕೆ.ಬಿ. ಹಾಳ್‌ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಕೊಳವೆ ಗೇಟ್‌ವಾಲ್‌ ಹಾಗೂ ಏರ್‌ವಾಲ್‌ಗಳಿಗೆ ಧಕ್ಕೆ ಮಾಡಿ  ಅಕ್ರಮವಾಗಿ ನೀರಿನ ಸಂಪರ್ಕ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಒಂದು ವರ್ಷದಿಂದ 70 ಹಳ್ಳಿಗಳಿಗೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಪಿಡಿಒ ತಪ್ಪಿನಿಂದಾಗಿ ತಾಲ್ಲೂಕಿನ ಜಾವಗಲ್‌ ಹಾಗೂ ಕಸಬಾ ಹೋಬಳಿಯ 58 ಗ್ರಾಮಗಳ 75 ಸಾವಿರಕ್ಕೂ ಹೆಚ್ಚಿನ ಜನರು ನೀರಿಗಾಗಿ ಪರದಾಡುವಂತಾಗಿದೆ.‘ನೀರು ಪೂರೈಕೆ ಮಾಡುವ ಮಾರ್ಗ ಮಧ್ಯ ಬರುವ ಕೆಲವು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಕಿಡಿಗೇಡಿಗಳು ನಿರಂತರವಾಗಿ ಗೇಟ್‌ವಾಲ್‌ ಹಾಗೂ ಏರ್‌ವಾಲ್‌ಗಳಿಗೆ ಧಕ್ಕೆ ಮಾಡುವುದು ಮತ್ತು ಕೊಳವೆಗೆ ಕನ್ನ ಕೊರೆದು ಅಕ್ರಮ ಸಂಪರ್ಕ ಪಡೆಯುತ್ತಿರುವುದರಿಂದ ಯೋಜನೆಯ ಉದ್ದೇಶ ಹಳ್ಳಹಿಡಿಯುತ್ತಿದೆ’ ಎಂದು ಶೇಖರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)