ಸೋಮವಾರ, ಮಾರ್ಚ್ 27, 2023
24 °C
ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉಪಸಮಿತಿಗಳ ಸಭೆ

ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ: ವಿಶ್ವನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ: ವಿಶ್ವನಾಥ್‌

ಮಡಿಕೇರಿ: ವಿಶಿಷ್ಟ ಸಂಸ್ಕೃತಿ, ಕ್ರೀಡೆಗೆ ಹೆಸರಾದ ಜಿಲ್ಲೆಯಲ್ಲಿ 32 ವರ್ಷಗಳ ಬಳಿಕ ನಡೆಯುತ್ತಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಎಲ್ಲರೂ ಕೈಜೋಡಿಸುವಂತೆ ಸಂಸದ ಎಚ್.ವಿಶ್ವನಾಥ್ ಕೋರಿದರು.ನಗರದ ಡಿ.ದೇವರಾಜ ಅರಸು ಭವನದಲ್ಲಿ ಸೋಮವಾರ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಬಂಧಿಸಿದಂತೆ ಉಪ ಸಮಿತಿಗಳ ಪ್ರಮುಖರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.ಸಮ್ಮೇಳನಕ್ಕೆ ಸರ್ಕಾರ ಬಜೆಟಿನಲ್ಲಿ ಒಂದು ಕೋಟಿ ರೂಪಾಯಿ ಮೀಸಲಿಟ್ಟಿದೆ. ಮುಖ್ಯಮಂತ್ರಿ ಅವರು ಹೆಚ್ಚುವರಿಯಾಗಿ ಒಂದು ಕೋಟಿ ರೂಪಾಯಿ ನೀಡಲು ಭರವಸೆ ನೀಡಿದ್ದಾರೆ. ಇನ್ನೂ ರೂ.1.75 ಕೋಟಿ ಹಣದ ಬೇಡಿಕೆಯಿದ್ದು, ಸಂಪನ್ಮೂಲ ಕ್ರೋಡೀಕರಿಸಲು ಮುಂದಾಗುವಂತೆ ಅವರು ಸಲಹೆ ಮಾಡಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಪಿ. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ಉಪಸಮಿತಿಗಳು ಇದುವರೆಗೆ ಕೈಗೊಂಡಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಒದಗಿಸುವಂತೆ  ಕೋರಿದರು.ವಸತಿ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಅನುಚೇತ್ ಮಾತನಾಡಿ, 7,500 ಮಂದಿಗೆ ವಸತಿ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಸತಿ ಸೌಲಭ್ಯಕ್ಕಾಗಿ ರೂ.72 ಲಕ್ಷ ಬೇಕಿದೆ ಎಂದು ಅವರು ತಿಳಿಸಿದರು.ಆಹಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೇಶವ ಕಾಮತ್ ಮಾತನಾಡಿ, ಅತಿಥಿಗಳಿಗೆ ಪೊಲೀಸ್ ಕವಾಯತು ಮೈದಾನದಲ್ಲಿ ಊಟದ ವ್ಯವಸ್ಥೆಗಾಗಿ ತಯಾರಿ ಮಾಡಿಕೊಳ್ಳಲಾಗಿದೆ. ಊಟೋಪಚಾರಕ್ಕಾಗಿ ಸುಮಾರು ₨80ರಿಂದ 90 ಲಕ್ಷ  ವೆಚ್ಚವಾಗಲಿದೆ ಎಂದು ಮಾಹಿತಿ ನೀಡಿದರು.ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಜಿ. ಚಿದ್ವಿಲಾಸ್ ಮಾತನಾಡಿ, 20 ರಿಂದ 30 ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.ಸಾರಿಗೆ ಸಮಿತಿ ಪ್ರಧಾನ ಕಾರ್ಯದರ್ಶಿ ಹೊಸೂರು ರಮೇಶ್ ಜೋಯಪ್ಪ ಮಾತನಾಡಿ, ಸಮ್ಮೇಳನದ ಚಟುವಟಿಕೆಗಳಿಗಾಗಿ ಶಾಲಾ ವಾಹನ ಸೇರಿದಂತೆ ಇತರೆ ವಾಹನಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಜಿ.ರಾಜೇಂದ್ರ ಮಾತನಾಡಿ, ಸ್ಮರಣ ಸಂಚಿಕೆ ಹೊರತರಲು ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ. ಉತ್ತಮ ಮಾಹಿತಿಯನ್ನು ಒಳಗೊಂಡ ಅಂಕಣಗಳು ಪ್ರಕಟಿಸಲಾಗುತ್ತದೆ ಎಮದು ತಿಳಿಸಿದರು.

ಕೈಪಿಡಿ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಅವರು 20 ಪುಟದ ಬಣ್ಣದ ಕೈಪಿಡಿಯನ್ನು ಹೊರ ತರಲಾಗುತ್ತಿದೆ.ನೋಂದಾಯಿತ ಪ್ರತಿನಿಧಿಗಳಿಗೆ 10 ದಿನದ ಮೊದಲೇ ಕೈಪಿಡಿಯನ್ನು ತಲುಪಿಸಲು ಪ್ರಯತ್ನಿಸಲಾಗುವುದು ಎಂದರು.

ಮಾಧ್ಯಮ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿ ಮಾತನಾಡಿ, ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸುವ ಸುಮಾರು 400 ಪತ್ರಕರ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಒಟ್ಟಾರೆ 500 ಮಂದಿ ಪತ್ರಕರ್ತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಬೇಕಿದೆ ಎಂದರು.ಪುಸ್ತಕ ಬಿಡುಗಡೆ ಸಮಿತಿ ಅಧ್ಯಕ್ಷ

ಬಿ.ಎ. ಷಂಶುದ್ದೀನ್ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ 25 ಪುಸ್ತಕಗಳನ್ನು ಹೊರತರಲಾಗುತ್ತಿದ್ದು, ಇದಕ್ಕಾಗಿ ₨ 18 ಲಕ್ಷ ವೆಚ್ಚವಾಗಲಿದೆ ಎಂದರು.  

 

ವಿವಿಧ ಉಪ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಧನಂಜಯ ಪ್ರಾರ್ಥಿಸಿದರು. ಬಿ.ಎ. ಷಂಶುದ್ದೀನ್ ಸ್ವಾಗತಿಸಿದರು. ಮುನೀರ್ ಅಹಮ್ಮದ್ ಅವರು ನಿರೂಪಿಸಿ, ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.