ಶನಿವಾರ, ಜನವರಿ 25, 2020
15 °C

ಯಾವುದು ಗಂಡಸ್ತಿಕೆ, ಯಾವುದು ಹೆಣ್ತನ?

ಲೇಖಕರು ಮನಃಶಾಸ್ತ್ರ ತಜ್ಞರು,ಪ್ರಾಧ್ಯಾಪಕರು,ನಿರೂಪಣೆ: ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಪ್ರತಿ ಸಂಸ್ಕೃತಿಯೂ ಭಿನ್ನ. ಅದು ಹಲವು ಬೆಳಕುಗಳನ್ನು ಸೂಸುತ್ತದೆ. ಅಂತೆಯೇ ಕೆಲವೆಡೆ ಕತ್ತಲೂ ಕವಿಯುತ್ತದೆನ್ನಿ. ಅತ್ಯಾಚಾರ ಎಂಬುದು ಮಹಿಳೆಯರ ಕುರಿತ ನಮ್ಮ ಧೋರಣೆಯ ಉಪ ಪರಿಣಾಮವಷ್ಟೇ. ನಮ್ಮ ಹೆಣ್ಣುಮಕ್ಕಳು ಮನೆಯಲ್ಲೂ ಸುರಕ್ಷಿತರಲ್ಲ. ನನಗೆ ಗೊತ್ತಿರುವ ಒಬ್ಬ ಸಂಗೀತ ಶಿಕ್ಷಕ ಹಲವು ಹೆಣ್ಣುಮಕ್ಕಳ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದ.

ನಾಗರಿಕತೆಯು ಪ್ರಾಣಿ ಪ್ರಭೇದದಿಂದ ನಮ್ಮನ್ನು ಹೊರತಾಗುವಂತೆ ಮಾಡಿ, ಮನುಷ್ಯರನ್ನಾಗಿಸಿದೆ. ತರುಣ್ ತೇಜ್‌ಪಾಲ್ ಹಲವು ಹಗರಣಗಳನ್ನು ಕುಟುಕು ಕಾರ್ಯಾಚರಣೆಯ ಮೂಲಕ ಬಯಲು ಮಾಡಿರಬಹುದು. ಆದರೆ, ಅವರು ತಮ್ಮ ಅಸಭ್ಯ ವರ್ತನೆಯಿಂದಾಗಿ ಮನುಷ್ಯರಾಗಿ ಉಳಿದಿಲ್ಲ ಎಂಬುದೇ ನನ್ನ ಭಾವನೆ.‘ಮೇಲ್‌ನೆಸ್’ ಅಥವಾ ‘ಗಂಡಸ್ತಿಕೆ’ ಎಂಬುದು ಪುರುಷರಲ್ಲಿ ಹಾರ್ಡ್ ವೈರಿಂಗ್ ಆಗಿರುತ್ತದೆ. ಅದನ್ನು ಮೀರುವುದೇ ‘ಗಂಡಸ್ತಿಕೆ’. ನನ್ನ ಮನೆಯದ್ದೇ ಒಂದು ಘಟನೆಯನ್ನು ಉದಾಹರಿಸುತ್ತೇನೆ– ಅಣ್ಣ ಮದುವೆಯಾಗಿ ಆರು ತಿಂಗಳಾಗಿತ್ತಷ್ಟೆ. ನಾವೆಲ್ಲಾ ಒಂದೇ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದೆವು. ಊಟ ಮುಗಿಯುತ್ತಿದ್ದಂತೆ ನನ್ನ ತಾಯಿ ಅತ್ತಿಗೆಯತ್ತ ಕಣ್ಣಿನಿಂದಲೇ ತಟ್ಟೆಗಳನ್ನು ತೆಗೆಯುವಂತೆ ಸೂಚಿಸಿದರು.ಸೊಸೆ ಕುರಿತ ಅತ್ತೆಯೊಬ್ಬಳ ಧೋರಣೆ ಅದು. ಅಲ್ಲಿಯತನಕ ನಾವು ಅಣ್ಣ-ತಮ್ಮಂದಿರು ನಮ್ಮ ತಟ್ಟೆಗಳನ್ನು ನಾವೇ ತೊಳೆದುಕೊಳ್ಳುತ್ತಿದ್ದೆವು. ಅಣ್ಣ ಮದುವೆಯಾದ ನಂತರ ಸೊಸೆಯ ಮೇಲೆ ಮನೆಯವರ ಅಂಥ ಧೋರಣೆ ಶುರುವಾಯಿತು. ಇಂಗ್ಲಿಷ್‌ನಲ್ಲಿ ಅದನ್ನು ‘ಮ್ಯಾಸೋಜಿನಿ’ ಎನ್ನುತ್ತಾರೆ. ಅದು ಒಂದು ವಿಧದ ತಾತ್ಸಾರ ಭಾವ. ಅಲ್ಲಿ ಉಸಿರುಗಟ್ಟಿಸುವ ವಾತಾವರಣದ ಸುರಕ್ಷತೆ ಹೆಣ್ಣುಮಕ್ಕಳಿಗೆ ಸಿಗುತ್ತದಷ್ಟೆ. ಅದನ್ನು ‘ಸ್ಟೈಫ್ಲಿಂಗ್ ಪ್ರೊಟೆಕ್ಷನ್’ ಎನ್ನುತ್ತೇವೆ.ಸಾರ್ವಜನಿಕರ ನಡುವೆ ಯಾರಿಗಾದರೂ ಕಪಾಳಮೋಕ್ಷವಾದರೆ ಸಿಟ್ಟಿಗೇಳುತ್ತಾರೆ. ಅಂಥಾದ್ದರಲ್ಲಿ ಅತ್ಯಾಚಾರ ನಡೆಯುವ ಹೆಣ್ಣುಮಗುವಿನ ಮನಸ್ಸು ಏನಾಗಬೇಡ? ಅದನ್ನು ಭಯ, ಹೇಸಿಗೆಯ ಭಾವ ಎನ್ನುತ್ತೇವೆ. ಈ ದೇಶದಲ್ಲಿ ಮಹಿಳೆಯರು ತೊಡುವ ಉಡುಗೆಗಳೇ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡುತ್ತವೆ ಎಂದು ಅನೇಕರು ವಾದಿಸಿದ್ದಾರೆ.

ಇನ್ನು ಕೆಲವರು ಭಾರತಮಾತೆಯಂತೆ ವಸ್ತ್ರ ತೊಟ್ಟವರಿಗೆ ಅತ್ಯಾಚಾರವಾಗದು ಎಂದೂ ಅಭಿಪ್ರಾಯ ತೇಲಿಬಿಟ್ಟಿದ್ದಾರೆ. ಈ ಭಾವನೆ ಸರಿಯಲ್ಲ. ಎದುರಲ್ಲಿ ಸಂಪೂರ್ಣ ವಿವಸ್ತ್ರಳಾದ ಹೆಣ್ಣುಮಗಳು ಇದ್ದರೂ ಅವಳ ಮೇಲೆ ಅತ್ಯಾಚಾರ ಎಸಗುವಂತಿಲ್ಲ. ಕೆಲವು ಮಹಿಳೆಯರು ಕಚೇರಿಯಲ್ಲಿ ಸಂಬಳ ಹೆಚ್ಚಿಸಿಕೊಳ್ಳಲೋ, ಉನ್ನತ ಸ್ಥಾನಕ್ಕೇರಲೋ ತಮ್ಮ ಸೆಕ್ಸ್ ಅನ್ನು ಬಳಸಿರುವ ಉದಾಹರಣೆಗಳಿವೆ.

ಅದು ಅವರ ಬಲ. ಪುರುಷರಿಗೆ ಹಣ ಹಾಗೂ ಯಶಸ್ಸಿನಿಂದ ಅಂಥ ಬಲ ಬರುತ್ತದೆ. ಮಹಿಳೆಯರು ಅಂಥ ಪವರ್ ಪಡೆಯಲು ಸೆಕ್ಸನ್ನು ಉಪಯೋಗಿಸುತ್ತಾರೆ. ಪುರುಷರು ಹಣ, ಯಶಸ್ಸನ್ನು ಬಳಸಿಕೊಳ್ಳುತ್ತಾರೆ. ಅದೊಂದು ತುಂಬಾ ಕಠಿಣವಾದ ಸಮತೋಲನ ಬೇಡುವ ಪ್ರಕ್ರಿಯೆ. ತರುಣ್ ತೇಜ್‌ಪಾಲ್ ಅವರನ್ನು ನೋಡಿದರೆ, ಅವರೊಳಗೆ ಒಬ್ಬ ಅಸುರಕ್ಷಿತ ಆಸಾಮಿ ಇದ್ದಾನೆ ಎಂದು ನನಗೆ ಅನ್ನಿಸುತ್ತದೆ. ಹಾಗಾಗಿಯೇ ಸೊಗಸಾದ ಬರವಣಿಗೆ ಇರುವ ಅವರು ಮಾಡಿರುವುದು ಅಕ್ಷರ ಹಾದರ ಎನ್ನದೇ ವಿಧಿಯಿಲ್ಲ. ‘ಸೆಕ್ಸ್ ಎಂಬುದು ಮೌನದಲ್ಲಿ ಶುರುವಾಗಿ ಪಿಸುಮಾತಿನಲ್ಲಿ ಮುಗಿಯುವಂಥದ್ದು’ ಎಂದು ವಾತ್ಸಾಯನ ಹೇಳಿದ್ದಾನೆ. ಎಂಥ ದೊಡ್ಡ ಮಾತು.ಇಂದು ಕಾಣುತ್ತಿರುವ ‘ಮೇಲ್‌ನೆಸ್’ ಅಥವಾ ಗಂಡಸ್ತಿಕೆ ವಾಸ್ತವದಲ್ಲಿ ಗಂಡಸ್ತಿಕೆ ಅಲ್ಲ. ಅಸ್ಸಾಂನಲ್ಲಿ ನಮ್ಮ ಭೂಸೇನೆಯ ಯೋಧರು ಮಾಡಿದ್ದೇನು? ಕಾಶ್ಮೀರದಲ್ಲಿ ಸೈನಿಕರು ಮಾಡಿದ್ದೇನು? ‘ಅತ್ಯಾಚಾರಕ್ಕೆ ಒಳಗಾದವರನ್ನು ಕೊಂದದ್ದು ಸರಿಯಲ್ಲ’ ಎಂದು ಕೆಲವರು ತಿಪ್ಪೆ ಸಾರಿಸುವಂತೆ ಮಾತಾಡಿದರು. ‘ಅತ್ಯಾಚಾರ ಮಾಡಿದರೆ ಮಾಡಿಕೊಳ್ಳಲಿ, ಆದರೆ ಕೊಂದದ್ದು ಸರಿಯಲ್ಲ’ ಎಂಬುದು ಅಂಥವರ ವಾದದ ಧ್ವನಿ. ಇಂಥ ಮಾತಿನಿಂದ ಅತ್ಯಾಚಾರಕ್ಕೆ ಸಾಂಸ್ಕೃತಿಕ ಒಪ್ಪಿಗೆ ಸಿಕ್ಕಂತಾಗುತ್ತದೆ. ಸಾಂಸ್ಕೃತಿಕವಾಗಿ ಅತ್ಯಾಚಾರ ಮಾಡದ ಮನಸ್ಸುಗಳನ್ನು ಬೆಳೆಸುವುದು ಈ ದಿನಮಾನದ ಅಗತ್ಯ.ಆಕ್ರಮಣ ಅಥವಾ ‘ಅಗ್ರೆಶನ್’ನ ಮೂಲ ಮನಸ್ಥಿತಿಯ ಹಿಂದೆ ಇರುವುದು ಅಭದ್ರತಾ ಭಾವ. ಮಹಿಳೆ ತನಗೆ ಒಪ್ಪಿಗೆ ಇಲ್ಲ ಎಂದು ಹೇಳಲು ಚೀರಬೇಕು, ಗೋಗರೆಯಬೇಕು. ಪುರುಷನಿಗೆ ಬೇಡ ಎಂದು ಹೇಳಲು ನಮ್ಮ ಸಮಾಜದಲ್ಲಿ ಅಂಥ ಕಷ್ಟವೇನಿಲ್ಲ. ಒಂದು ಕಾಲದಲ್ಲಿ ನಾಲ್ಕು ಜನರನ್ನು ಮದುವೆಯಾಗಿ, ಸುಖವಾಗಿ ನೋಡಿಕೊಂಡ ಎಂದು ಪುರುಷರನ್ನು ಕೊಂಡಾಡಿದವರು ನಾವು. ಪುರುಷರಿಗೆ ಈ ಜಗತ್ತಿನಲ್ಲಿ ಏನು ಬೇಕೋ ಅದನ್ನು ಮಹಿಳೆಯರು ಕೊಡಬೇಕು.

ಇಂಥ ಆಕ್ರಮಣಕಾರಿ ಧೋರಣೆಯಿಂದಲೇ ಪುರುಷ ತನ್ನ ಪ್ರಭುತ್ವವನ್ನು ಸ್ಥಾಪಿಸುತ್ತಾ ಹೋಗುತ್ತಾನೆ. ಮಹಿಳೆಯರು ಶಾಂತಿ ಸ್ಥಾಪನೆಗೆ ಮೆಲುದನಿಯಲ್ಲಿಯೇ, ಒಳಗೊಳಗೇ ಪರದಾಡತೊಡಗುತ್ತಾರೆ. ಮಹಿಳೆಯರನ್ನು ಲೈಂಗಿಕ ಸರಕುಗಳಾಗಿ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಅವರನ್ನು ‘ಬಯಲಾಜಿಕಲ್’ ಆಗಿ ನೋಡುತ್ತಿಲ್ಲ. ಪುರುಷರಿಗೆ ವಯಾಗ್ರ ಬಂತು, ಮಹಿಳೆಯರಿಗೆ ಅದಕ್ಕೆ ಪರ್ಯಾಯವಾಗಿ ಏನೂ ಬರಲಿಲ್ಲವಲ್ಲ.ಪವರ್ ಎಂಬುದನ್ನು ತುಂಬಾ ಅವೈಜ್ಞಾನಿಕವಾಗಿ ವ್ಯಾಖ್ಯಾನಿಸುತ್ತಾರೆ. ‘ಇವತ್ತು ಈ ರಸ್ತೆಯಲ್ಲಿ ಚಪ್ಪಲಿ ಏಟು ಬಿತ್ತೆಂದರೆ, ಮುಂದಿನ ವರ್ಷ ಇನ್ನೊಂದು ರಸ್ತೆಯಲ್ಲಿ’ ಎನ್ನುವ ಗಾದೆ ಇದೆ. ದಿನೇದಿನೇ ನಗರದಲ್ಲಿನ ಜನರ ಬದುಕು ನಾಜೂಕಾಗುತ್ತಿದೆ. ಅದರ ಜೊತೆಗೇ ಸೆಕ್ಸ್‌ನಲ್ಲೂ ಹಲವು ಬಗೆಗಳು ಹುಟ್ಟಿಕೊಳ್ಳುತ್ತಿವೆ; ‘ಥ್ಯಾಂಕ್ ಯೂ ಸೆಕ್ಸ್’ (ಧನ್ಯವಾದದ ಸೆಕ್ಸ್), ‘ರಿವೆಂಜ್ ಸೆಕ್ಸ್’ (ಸೆಕ್ಸ್ ಮುಯ್ಯಿ), ‘ಪಿಟಿ ಸೆಕ್ಸ್’ (ದಯಾ ಸೆಕ್ಸ್), ‘ಪ್ರಮೋಟ್ ಮಿ ಸೆಕ್ಸ್’ (ಸೆಕ್ಸ್ ಮಾಡಿ, ಬಡ್ತಿ ಕೊಡಿ) ಹೀಗೆ.ಪ್ರಾಣಿಗಳಲ್ಲಿ ಸಗೋತ್ರ ಎಂಬುದಿಲ್ಲ. ಹಾಗಾಗಿ ಅಲ್ಲಿ ಸೆಕ್ಸ್ ಎಂಬುದು ಒಂದು ಚಟುವಟಿಕೆಯಷ್ಟೇ. ಆದರೆ ಮನುಷ್ಯ ಅವುಗಳಿಗಿಂತ ಈ ವಿಷಯದಲ್ಲಿ ಹೀನ. ಪಾಪಪ್ರಜ್ಞೆ, ಸುಳ್ಳು ಇತ್ಯಾದಿ ಸೇರಿದ ಇದು ಬರೀ ಚಟುವಟಿಕೆಯಾಗಿ ಉಳಿದಿಲ್ಲ. ಕೆಲವರಿಗೆ ಇದು ಪ್ರಾಣಿಗಳಂತೆ ಹತ್ತುವ, ಇಳಿಯುವ ಯಕಶ್ಚಿತ್ ಕ್ರಿಯೆ ಅಷ್ಟೆ. ತರುಣ್ ಮೊದಲ ಸಲ ತಪ್ಪು ಮಾಡಿದ್ದು ಅರಿವಾಗಿ, ಕ್ಷಮೆ ಕೇಳಿದ್ದರೆ ಚೆನ್ನಾಗಿತ್ತು. ಆದರೆ, ಅವರು ಅದೇ ತಪ್ಪನ್ನು ಪುನರಾವರ್ತಿಸಿದ್ದಾರೆ. ಇದು ‘ಪವರ್‌’ನಿಂದ, ‘ಪೊಲಿಟಿಕಲ್ ಕರೆಕ್ಟ್‌ನೆಸ್’ನಿಂದ ಮೂಡುವಂಥ ಧೋರಣೆ.ನಮ್ಮ ದೇಶದಲ್ಲಿ ಅತ್ಯಾಚಾರದ ವಿಷಯದಲ್ಲಿ ದಮನ ಪ್ರಕ್ರಿಯೆ ಇದೆ. ಬೇರೆ ದೇಶಗಳು ಹೆಚ್ಚು ಮುಕ್ತವಾಗಿರುವುದರಿಂದ ಅಲ್ಲಿ ಅತ್ಯಾಚಾರ ಪ್ರಕರಣಗಳು ಇಲ್ಲಿಯಷ್ಟು ಹೆಚ್ಚಾಗಿಲ್ಲ. ಭಾರತೀಯ ಪುರುಷ ಹಣ, ಅಧಿಕಾರ, ದರ್ಪ, ಮೌನ, ಸ್ವಪ್ರತಿಷ್ಠೆ, ಗಟ್ಟಿಯಾಗಿ ನೆಲೆನಿಂತ ಭಾವಲೋಕದ ಒಂದು ಭ್ರಮೆಯಲ್ಲೇ ಬದುಕುತ್ತಿರುತ್ತಾನೆ. ಎಷ್ಟೋ ಅಪ್ಪಂದಿರು ತಮ್ಮ ಗಂಡು ಮಕ್ಕಳಿಗೆ ದಾಟಿಸುವುದು ಈ ಭ್ರಮೆಯನ್ನೇ.

ಪುರುಷರ ‘ಪವರ್’ ಬಗೆಗೆ ಮಾತನಾಡುವಂತೆಯೇ ನಾವು ನಗರದ ಹಲವು ಮಹಿಳೆಯರ ‘ಪವರ್’ನಲ್ಲಿ ದಿನೇದಿನೇ ಆಗುತ್ತಿರುವ ಬದಲಾವಣೆಯನ್ನು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಸೂಕ್ಷ್ಮವಾಗಿ ನೋಡಬೇಕು.ಬೆಂಗಳೂರಿನಂಥ ನಗರದಲ್ಲಿ ಈಗ ಪಾರ್ಟಿಗಳು ಸಾಮಾನ್ಯ. ಅನೇಕ ಕಿಟಿ ಪಾರ್ಟಿಗಳಲ್ಲಿ ಕಾರ್ ಕೀಗಳನ್ನು ಒಂದು ಟ್ರೇನಲ್ಲಿ ಹಾಕಿ, ಅವನ್ನು ಬೆರೆಸಿದಂತೆ ಮಾಡಿ, ಅವರವರ ಆಯ್ಕೆಗೆ ಬಿಡಲಾಗುತ್ತದೆ. ಯಾವ ಮಹಿಳೆಗೆ ಯಾವ ಕೀ ಸಿಗುತ್ತದೋ ಆ ಕಾರಿನ ಪುರುಷನ ಜೊತೆ ಹೋಗಬೇಕು ಎಂಬುದು ‘ಪಾರ್ಟಿಯ ಆಟ’. ಇಂಥ ಆಧುನಿಕ ಬದಲಾವಣೆಗೆ ಮುಕ್ತವಾಗಿ ತೆರೆದುಕೊಂಡ ಒಬ್ಬ ಮಹಿಳೆಗೆ ಈಗೀಗ ಪಾಪಪ್ರಜ್ಞೆ ಕಾಡತೊಡಗಿ, ಮೈಗ್ರೇನ್ ಶುರುವಾಗಿತ್ತು.

ಅವರು ನನ್ನಲ್ಲಿ ಸಲಹೆ ಪಡೆದು ತಮ್ಮ ಮನೋವೇದನೆಯನ್ನು ನಿಗ್ರಹಿಸಿಕೊಳ್ಳುತ್ತಿದ್ದಾರೆ. ಚಾಚೂ ತಪ್ಪದೆ ದೇವಸ್ಥಾನಕ್ಕೆ ಹೋಗಿ ಅಡ್ಡಬಿದ್ದು, ಕಾಣಿಕೆ ಸಲ್ಲಿಸುವ ಬೆಂಗಳೂರಿನ ಹಲವು ಮಡಿವಂತ ವರ್ತಕರು ‘ಥ್ರಿಲ್’ಗಾಗಿ ಲೈವ್ ಸೆಕ್ಸ್ ಪ್ರದರ್ಶನಗಳನ್ನು ಆಯೋಜಿಸುವುದೂ ಇದೆ. ಬಿಡದಿಯ ತಟ್ಟೆ ಇಡ್ಲಿ ಅಂಗಡಿಯವನು ವಿಪರೀತ ಸಾಲ ಮಾಡಿಕೊಂಡಿದ್ದನಂತೆ. ಸಾಲಗಾರರು ಹೋಗಿ ಹಣಕ್ಕಾಗಿ ಪೀಡಿಸತೊಡಗಿದಾಗ, ಹಾಗೆ ಮಾಡಿದರೆ ತನ್ನ ಮೇಲೆ ಅತ್ಯಾಚಾರದ ಯತ್ನ ನಡೆಸಿದ್ದಾಗಿ ದೂರು ಕೊಡುವುದಾಗಿ ಆ ಅಂಗಡಿಯವನ ಪತ್ನಿ ಬೆದರಿಸಿದಳಂತೆ. ಇದು ಕಾನೂನಿನ ತಪ್ಪು ಬಳಕೆಗೆ ಉದಾಹರಣೆ.ಒಮ್ಮೆ ಲಿಡೊ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಹೋಗಿದ್ದೆ. ನ್ಯೂಸ್ ರೀಲ್‌ನಲ್ಲಿ ಫೀಡೆಲ್ ಕ್ಯಾಸ್ಟ್ರೊ, ಇಂದಿರಾ ಗಾಂಧಿ ಅವರನ್ನು ತಬ್ಬಿಕೊಳ್ಳುವ ದೃಶ್ಯ. ಆಜಾನುಬಾಹು ಫೀಡೆಲ್ ಕ್ಯಾಸ್ಟ್ರೋ ಇಂದಿರಾ ಅವರನ್ನು ಅಪ್ಪಿದ ದೃಶ್ಯ ಕಂಡ ಚಿತ್ರಮಂದಿರದಲ್ಲಿದ್ದ ಮಹಿಳೆಯರು, ‘ಇಂದಿರಾಗಾಂಧಿಗೆ ಎಂಥ ಅದೃಷ್ಟ’ ಎಂದು ಮಾತಾಡಿದ್ದು ನನ್ನ ಕಿವಿಮೇಲೆ ಬಿತ್ತು. ಮಹಿಳೆಯರಿಗೂ ಸೆಕ್ಸ್ ವಿಷಯದಲ್ಲಿ ಫ್ಯಾಂಟಸಿ ಇರುತ್ತದೆ.ನಾನು ಬಸ್ಸಿನಲ್ಲಿ ಕುಳಿತು, ಶಾಲಾ ಕಾಲೇಜು ವಿದ್ಯಾರ್ಥಿಗಳು ಮಾತನಾಡುವುದನ್ನು ಸುಮ್ಮನೆ ರೆಕಾರ್ಡ್ ಮಾಡಿಕೊಂಡಿದ್ದೇನೆ. ಸೆಕ್ಸ್ ಕುರಿತ ಅವರ ಸಂಭಾಷಣೆ ಬೆಚ್ಚಿಬೀಳಿಸುತ್ತದೆ. ದೃಶ್ಯ ಮಾಧ್ಯಮಕ್ಕೆ ಬೇಗ ತೆರೆದುಕೊಳ್ಳುವ ಅಂಥವರ ಮನಸ್ಸು ಪೋರ್ನೋಗ್ರಫಿಯ ಚಟಕ್ಕೆ ಬಿದ್ದು, ಚಿಕ್ಕ ವಯಸ್ಸಿನಲ್ಲೇ ಸೆಕ್ಸ್ ಒಂದು ಕ್ರಿಯೆಯಷ್ಟೇ ಎಂಬ ಭಾವನೆ ಗಟ್ಟಿಗೊಳ್ಳುತ್ತದೆ. ಅದು ‘ವೀಕೆಂಡ್‌ ಕಂಪಲ್ಷನ್’ ಆಗುತ್ತಿರುವುದು ಅದೇ ಕಾರಣಕ್ಕೆ.ಇನ್ನು ಅತ್ಯಾಚಾರದ ಕಾನೂನಿನ ವಿಷಯ. ಧನಬಲ ಇರುವವರ ಪರವಾಗಿ ಇಂಥ ಪ್ರಕರಣಗಳಲ್ಲಿ ವಾದಿಸುವ ಎಷ್ಟೋ ವಕೀಲರು ತಾಂತ್ರಿಕ ಪ್ರಶ್ನೆಗಳನ್ನು ಕೇಳಿ, ಅತ್ಯಾಚಾರಕ್ಕೆ ಒಳಗಾದವರನ್ನು ಇನ್ನೂ ಪೇಚಿಗೆ ಸಿಲುಕಿಸುತ್ತಾರೆ. ದೊಡ್ಡ ಆಘಾತಕ್ಕೆ ಒಳಗಾದ ಅವರ ಮಾನಸಿಕ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳದೆ ಪಾಟೀ ಸವಾಲು ಮಾಡುವುದೋ, ಪ್ರಶ್ನೆಗಳನ್ನು ಹಾಕುವುದೋ ಮಾಡಿ ಸಾಕ್ಷ್ಯಗಳು ಆರೋಪಿಯ ಪರವಾಗುವಂತೆ ಮಾಡುತ್ತಾರೆ. ದೆಹಲಿಯ ಅತ್ಯಾಚಾರ ಪ್ರಕರಣ ನಡೆಯುವವರೆಗೆ ಇಂಥ ಪ್ರಕರಣಗಳು ಸಹಜ ಎಂಬಂಥ ಭಾವ ಕಾನೂನು ಕ್ಷೇತ್ರದಲ್ಲಿ ಇರುವವರಲ್ಲೂ ಇತ್ತು. ನೀತಿ ನಿರೂಪಕರು, ವಕೀಲರು, ನ್ಯಾಯಮೂರ್ತಿಗಳು ಅತ್ಯಾಚಾರಕ್ಕೆ ಒಳಪಟ್ಟವರ ಮಾನಸಿಕ ಸ್ಥಿತಿಯನ್ನು ಲಕ್ಷ್ಯಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಬೇಕಾದದ್ದು ಮಾನವೀಯ.ನನ್ನ ಒಬ್ಬ ಶಿಷ್ಯೆ ಚೆನ್ನೈನಲ್ಲಿದ್ದಾಳೆ. ಅವಳದ್ದು ಲಿವ್–ಇನ್ ಸಂಬಂಧ. ಹಾಗೆ ಒಟ್ಟಾಗಿ ಬದುಕತೊಡಗಿದ ಸಂಗಾತಿಯ ಗೆಳೆಯನಿಗೆ ಈಗ ಮೂತ್ರಕೋಶ ವೈಫಲ್ಯದ ಸಮಸ್ಯೆ. ಆದರೂ ಅವರು ಬೇರೆಯಾಗಿಲ್ಲ. ಕಸದ ತೊಟ್ಟಿಯಲ್ಲಿ ಸಿಕ್ಕಿದ ಒಂದು ಮಗುವನ್ನು ತಂದು ಸಾಕುತ್ತಾ, ಬಂದದ್ದೆಲ್ಲಾ ಬರಲಿ ಎಂದು ಅವರದ್ದೇ ಭಾವಲೋಕದ ಸಂಸಾರದಲ್ಲಿ ವಿಹರಿಸುತ್ತಿದ್ದಾರೆ. ಬದುಕು ಹೀಗೂ ಇರಬಲ್ಲದು ಎಂಬುದು ಕೆಟ್ಟ ಸುದ್ದಿಗಳ ನಡುವೆ ಭರವಸೆಯ ಬೆಳ್ಳಿಬೆಳಕಿನಂತೆ ಕಾಣುತ್ತದೆ.

                                                                           ***

ಸಿನಿಮಾದಲ್ಲಿ ಸಮಸ್ಯೆಗಳು...

ಸಿನಿಮಾದಲ್ಲಿ ಹೇಗೆ ನಮ್ಮನ್ನು ನಾವು ಪ್ರಚಾರಪಡಿಸಿಕೊಳ್ಳುತ್ತೇವೆ ಎಂಬುದು ಅವಕಾಶಗಳನ್ನು ಒಡ್ಡುವ ಅಂಶವಾಗುತ್ತದೆ. ಅದಕ್ಕೆ ಇದಮಿತ್ಥಂ ಎನ್ನುವ ಮಾನದಂಡ ಇಲ್ಲ. ಪುರುಷರು ಉಳಿದ ಕ್ಷೇತ್ರಗಳಂತೆ ಇಲ್ಲಿಯೂ ತಮಗೆ ಬೇಕಾದದ್ದನ್ನೇ ಬಯಸುತ್ತಾರೆ. ಅವರ ಆ ‘ಬೇಕು’ಗಳಿಗೆ ಸ್ಪಂದಿಸುವುದು ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಯಾರಿಂದಲೋ ಒತ್ತಡ ಬರುತ್ತಿದೆ ಎನಿಸಿದರೆ ಅಂಥ ವಾತಾವರಣದಿಂದ ಹೊರನಡೆಯುವುದೇ ಸೂಕ್ತ.

ವಿವಿಧ ವಯೋಮಾನದ ಪುರುಷ, ಮಹಿಳೆಯರು ಸಿನಿಮಾಗಳಲ್ಲಿ ತೊಡಗುತ್ತಾರೆ. ಹಲವು ಮನಸ್ಥಿತಿಗಳು ಅಲ್ಲಿ ಕೆಲಸ ಮಾಡುತ್ತವೆ. ಹುಡುಗಿಯೊಬ್ಬಳಿಂದ ಮತ್ತೊಬ್ಬ ನಟಿಗೆ ಕಿರಿಕಿರಿ ಆಗಬಹುದು. ಪುರುಷರಿಂದಲೂ ಅದು ಆಗಬಹುದು. ಅಂಥ ಸಮಸ್ಯೆಗಳ ಪ್ರಮಾಣ ಕಡಿಮೆ ಇದ್ದು, ಎಲ್ಲವೂ ಸುಸೂತ್ರವಾಗಿ ನಡೆದರೆ ಅಲ್ಲಿ ಕೌಟುಂಬಿಕ ವಾತಾವರಣ ಇದೆ ಎಂದು ಹೇಳುತ್ತೇವೆ.ಸಿನಿಮಾಗಳಿಗೆ ಏನನ್ನೋ ಸಾಧಿಸುವ ಗುರಿ ಇಟ್ಟುಕೊಂಡು ಬರುವವರಿದ್ದಾರೆ. ಮುಗ್ಧತೆಯಿಂದ, ಬಣ್ಣದ ಲೋಕದ ಬೆರಗಿನಿಂದ ಆಕರ್ಷಿತರಾಗಿ ಬರುವವರು ಇನ್ನೊಂದು ಕಡೆ. ಬಹುಶಃ ಇಲ್ಲಿನ ಬೇರೆ ಬೇರೆ ಮನಸ್ಥಿತಿಯವರ ಒತ್ತಡ ಕಂಡೇ ಚಿಕ್ಕ ವಯಸ್ಸಿನ ನಟಿಯರ ಜೊತೆ ಅಮ್ಮಂದಿರು ಚಿತ್ರೀಕರಣ ನಡೆಯುವ ಸ್ಥಳಕ್ಕೆ ಬರುವುದು ಮಾಮೂಲಾಗಿದೆ.ಬಾಲಿವುಡ್‌ನಲ್ಲಿ ಬರುವ ಹೆಣ್ಣುಮಕ್ಕಳು ಇಲ್ಲಿನವರಿಗಿಂತ ಹೆಚ್ಚು ಗಟ್ಟಿಯಾಗಿರುತ್ತಾರೆ. ಗಟ್ಟಿ ಎಂದರೆ ‘ಬೋಲ್ಡ್‌’ ಎಂದು ಅರ್ಥವಲ್ಲ. ಜನರ ಜೊತೆ ವ್ಯವಹರಿಸುವುದು ಹೇಗೆ ಎಂಬುದನ್ನು ಅವರು ಚೆನ್ನಾಗಿ ಬಲ್ಲವರಾಗಿರುತ್ತಾರೆ. ಹಳ್ಳಿಗಳಿಂದ ಬರುವವರಿಗೆ ಹಲವು ಮೆಟ್ಟಿಲುಗಳನ್ನು ಹತ್ತುವಷ್ಟರಲ್ಲಿ ಎಷ್ಟು ರಾಕ್ಷಸರು ಎದುರಾಗುತ್ತಾರೋ ಹೇಳಲಾಗದು. ಒಟ್ಟಿನಲ್ಲಿ ನಟಿಯರಲ್ಲಿ ಸರಿ, ತಪ್ಪು ಗ್ರಹಿಸುವ ವಿವೇಕ ಇರಬೇಕು. ನಮ್ಮ ಬಗ್ಗೆ ನಮಗೆ ಆತ್ಮವಿಶ್ವಾಸ ಇದ್ದಾಗ ಮಾನಸಿಕವಾಗಿ ತುಂಬಾ ಬಲಾಢ್ಯರಾಗಿ ಇರುತ್ತೇವೆ. ನನ್ನ ಪ್ರಕಾರ ಸಮಾಜ ಎನ್ನುವುದು ಬರೀ ಪುರುಷ ವರ್ಸಸ್‌ ಮಹಿಳೆ ಅಲ್ಲ; ಒಳಿತು ವರ್ಸಸ್‌ ಕೆಡುಕು. ಇಲ್ಲವಾದಲ್ಲಿ ಅದು ಪರಿಪೂರ್ಣ ಸಮಾಜ ಅಲ್ಲ. ಒಳಿತು ಇದ್ದಂತೆ ಕೆಡುಕೂ ಇದೆ. ಅದನ್ನೆಲ್ಲಾ ಮೀರುವುದು ಸವಾಲು.

ಪ್ರತಿಕ್ರಿಯಿಸಿ (+)