ಬುಧವಾರ, ಜೂನ್ 16, 2021
21 °C

ಯುಗಾದಿ: ಉದ್ಯಾನ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ:  ಪಟ್ಟಣದ ಚೆನ್ನಪ್ಪ ಬಡಾವಣೆಯ ಸಮಾನ ಮನಸ್ಕ ನಿವಾಸಿಗಳ ಸಕಾರಾತ್ಮಕ ಚಿಂತನೆಯ ಫಲವಾಗಿ ಸುಂದರ ಉದ್ಯಾನವನವೊಂದು ಯುಗಾದಿ ಹಬ್ಬದಂದು ಅನಾವರಣಗೊಂಡು ಹೊಸ ವರ್ಷದ ವೈಚಾರಿಕತೆಗೆ ನಾಂದಿ ಹಾಡಿತು.ಬಡಾವಣೆಯಲ್ಲಿ ಪ್ರಜ್ಞಾವಂತ ಪ್ರಜೆಗಳಿದ್ದಾಗ ಮೂಲಭೂತ ಸೌಲಭ್ಯಗಳನ್ನು ಸ್ವಯಂ ಸೇವೆಯಿಂದ ಹೇಗೆ ಮಾಡಿಕೊಳ್ಳಬಹುದು ಎಂಬುದಕ್ಕೆ ಜ್ವಲಂತ ನಿದರ್ಶನ ಇದಾಗಿದೆ. ಔಷಧಿ ಮತ್ತು ಅಲಂಕಾರಿಕ ಸಸ್ಯಗಳಿಂದ ಕಂಗೊಳಿಸುವ ಈ ಉದ್ಯಾನದಲ್ಲಿ ಹಿರಿಯರಿಗಾಗಿ ವಿಶ್ರಾಂತಿಧಾಮ, ಅಧ್ಯಯನಾಸಕ್ತರಿಗೆ ವಾಚನಾಲಯ, ಪುಟ್ಟ ಮಕ್ಕಳಿಗೆ ಜೋಕಾಲಿ ನಿರ್ಮಿಸಲಾಗಿದೆ. ಸುಂದರ ಪುಷ್ಪಗಳ ರಾಶಿ ನೋಡುಗರನ್ನು ಆಕರ್ಷಿಸುತ್ತದೆ.ನೀರಿನ ಪೂರೈಕೆಗಾಗಿ ಕೊಳವೆ ಬಾವಿಯೊಂದನ್ನು ಕೊರೆಸಿ ಪುರಸಭೆಗೆ ಹಸ್ತಾಂತರಿಸಿದ ಹೆಗ್ಗಳಿಕೆಯೂ ಬಡಾವಣೆಯ ನಿವಾಸಿಗಳಿಗೆ ಸಲ್ಲುತ್ತದೆ. ಯುಗಾದಿ ಹಬ್ಬದಂದು ಹೊಸ ಬಟ್ಟೆ ಧರಿಸಿ ಭಕ್ಷ್ಯ ಭೋಜನಗಳನ್ನು ಸವಿದು ಕಳೆಯುವುದರೊಂದಿಗೆ ಕಳೆದ ವರ್ಷದ ಯುಗಾದಿಯಂದು ಅಂಕುರಗೊಂಡ ಉದ್ಯಾನದ ಕನಸು ಈ ಯುಗಾದಿಗೆ ನನಸಾಗಿದೆ. ಈ ಸಾರ್ಥಕ ಕಾರ್ಯಕ್ಕೆ ಭೂದಾನ ಮಾಡಿದ ನಾರಾಯಣಪ್ಪ, ಪ್ರೇರಣೆ ನೀಡಿದ ಡಾ.ಧನಪಾಲ್, ಕಾರ್ಯಾನುಷ್ಠಾನಗೊಳಿಸಿದ ಅಯ್ಯಪ್ಪ, ಪ್ರೋತ್ಸಾಹಿಸಿದ ಎನ್.ಗಣೇಶ್, ಬೈರಶೆಟ್ಟಿ, ವೀರಭದ್ರಪ್ಪ, ಚಂದ್ರಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಹಾರ- ತುರಾಯಿ ಭಾಷಣಗಳ ಅಬ್ಬರವಿಲ್ಲದೆ ಜೋಕಾಲಿ ಆಡುವುದರೊಂದಿಗೆ ಪುಟಾಣಿ ಮಕ್ಕಳೇ ಉದ್ಯಾನವನವನ್ನು ಉದ್ಘಾಟಿಸಿದ್ದು ವಿಶೇಷವಾಗಿತ್ತು. ಎಂ.ಇ.ಎಸ್. ಶಾಲೆಯ ಮಕ್ಕಳಿಂದ ಮನರಂಜನೆ, ಬಡಾವಣೆಯ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಕರಾಟೆ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.