ಭಾನುವಾರ, ಮೇ 22, 2022
22 °C

ಯುಪಿಸಿಎಲ್ ತಕ್ಷಣ ಮುಚ್ಚಿ: ಉಮಾಭಾರತಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ:  ನಂದಿಕೂರಿನ ‘ಯುಪಿಸಿಎಲ್’(ಉಡುಪಿ ಪವರ್ ಕಂಪೆನಿ ಲಿ.)ನಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಕೆಲಸವನ್ನು ಕಂಪೆನಿ ಕೂಡಲೇ ಸ್ಥಗಿತಗೊಳಿಸಬೇಕು ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಇಲ್ಲಿ ಆಗ್ರಹಿಸಿದರು.ಸೋಮವಾರ ಬೆಳಿಗ್ಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಯುಪಿಸಿಎಲ್‌ನಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಪೇಜಾವರ ಶ್ರೀ ತಮಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಪೇಜಾವರ ಸ್ವಾಮೀಜಿ ನನ್ನ ಗುರು. ಸ್ವಾಮೀಜಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವುದು ನನ್ನ ಕರ್ತವ್ಯ. ಅಷ್ಟಕ್ಕೂ ಇದು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ. ಹೀಗಾಗಿ ಸ್ವಾಮಿಜಿ ಜತೆಗೂಡಿ ಹೋರಾಟಕ್ಕಿಳಿಯುವೆ ಎಂದರು.ಇಂದು ಭೇಟಿ: ಯುಪಿಸಿಎಲ್ ಇಲ್ಲಿನ ಜನರಿಗೆ ತೊಂದರೆ ನೀಡುತ್ತಿದೆ. ಪರಿಸರಕ್ಕೆ ಪೂರಕವಾದ ಯಾವುದೇ ಅಂಶಗಳನ್ನೂ ಪಾಲಿಸುತ್ತಿಲ್ಲ, ಹೀಗಾಗಿ ಆ ಪರಿಸರದ ಜನರಿಗೆ ತೊಂದರೆಯಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಈಗಲೇ ಭೇಟಿ ನೀಡಬೇಕು ಎನ್ನುವ ಹಂಬಲ ಇತ್ತು. ಆದರೆ ಶ್ರೀಗಳು ಹೈದರಾಬಾದ್‌ಗೆ ಹೋಗಿ ದ್ದಾರೆ. ಅವರು ಬಂದ ಕೂಡಲೇ ಮಂಗಳವಾರ ಬೆಳಿಗ್ಗೆ ನಂದಿಕೂರಿಗೆ ಭೇಟಿ ನೀಡುವೆ ಎಂದರು.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಯುಪಿಸಿಎಲ್ ಕಂಪೆನಿ ಪರವಾಗಿದ್ದು ಅದನ್ನು ಸಮರ್ಥಿಸಿಕೊಳ್ಳುತ್ತಿದೆ. ಹೀಗಿದ್ದಾಗ ನೀವು ಸ್ವಾಮೀಜಿಯೊಂದಿಗೆ ನಂದಿಕೂರಿಗೆ ಹೋಗಿ ಕಂಪೆನಿ ವಿರುದ್ಧ ಹೋರಾಟ ನಡೆಸುವುದಾಗಿ ಹೇಳುತ್ತಿದ್ದೀರಿ. ಇದು ಸಾಧ್ಯವೇ?’ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಮಾ, ‘ಸರ್ಕಾರದ ನಿಲುವು ಏನೇ ಇರಲಿ. ಸ್ವಾಮೀಜಿ ಮತ್ತು ನನ್ನ ನಿಲುವು ಯುಪಿಸಿಎಲ್ ವಿರುದ್ಧವಾಗಿದೆ. ಕಂಪೆನಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಅದನ್ನು ಕೂಡಲೇ ಮುಚ್ಚಬೇಕು’ ಎಂದರು.‘ಹೋರಾಡಿ ಸಿಎಂ ಹುದ್ದೆ ತ್ಯಾಗ ಮಾಡಿದೆ’: ಕರ್ನಾಟಕ ತಮಗೆ ಬಹಳ ಮುಖ್ಯವಾದ ಪ್ರದೇಶ. 1992ರಲ್ಲಿ ಪೇಜಾವರ ಶ್ರೀಗಳಿಂದ ಸನ್ಯಾಸ ಸ್ವೀಕರಿಸುವ ಮೂಲಕ ಅವರ ಶಿಷ್ಯೆಯಾದೆ. ಪರಮಪೂಜ್ಯ ಗುರುಗಳ ತವರು ನೆಲ ಇದು. 1994ರಲ್ಲಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ವಿಚಾರದಲ್ಲಿಯೂ ಪಾಲ್ಗೊಂಡಿದ್ದೆ ಎಂದು ಸ್ಮರಿಸಿದ ಉಮಾಭಾರತಿ, ರಾಷ್ಟ್ರ ಹಾಗೂ ಜನರ ಹಿತ ಕಾಪಾಡುವ ಯಾವುದೇ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದರು.2004ರಲ್ಲಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ಸಂಬಂಧ ನ್ಯಾಯಾಲಯದಿಂದ ಬಂಧನ ಆದೇಶ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನೇ ಕಳೆದುಕೊಳ್ಳಬೇಕಾಯಿತು. ಆ ಸ್ಥಾನಕ್ಕಿಂತ ರಾಷ್ಟ್ರದ ಮರ್ಯಾದೆ ಮುಖ್ಯ. ಇಲ್ಲಿ ಗುರುಗಳು ಸಮಾಜದ ಹಿತದೃಷ್ಟಿಯಿಂದ ಯುಪಿಸಿಎಲ್ ವಿರುದ್ಧ ನಡೆಸಿರುವ ಹೋರಾಟವೂ ಬಹಳ ಮುಖ್ಯವೇ ಆಗಿದೆ ಎಂದರು.ವರಿಷ್ಠರ ವಿರುದ್ಧವೇ ಮುನಿದು ಬಿಜೆಪಿ ತೊರೆದಿದ್ದ ಉಮಾಭಾರತಿ ಪಕ್ಷಕ್ಕೆ ಮರಳುವ ವಿಚಾರ ಚಾಲ್ತಿಯಲ್ಲಿರುವ ಕುರಿತ ಪ್ರಶ್ನೆಗೆ, ‘ಪಕ್ಷ ಸೇರ್ಪಡೆ ವಿಚಾರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ      ಅವರನ್ನೇ ಕೇಳಿ’ ಎಂದು ಚುಟುಕಾಗಿ ಪ್ರತಿಕ್ರಿಯಿಸಿದರು.ರಾಮಲಲ್ಲಾ ಇರುವ ಜಾಗದಲ್ಲಿಯೇ ರಾಮಮಂದಿರ ನಿರ್ಮಾಣವಾಗಲಿದೆ.ಈ ವಿಚಾರದಲ್ಲಿ ಇದೇ ಮೊದಲ ಬಾರಿಗೆ ನ್ಯಾಯಾಲಯವೇ ಮಧ್ಯಪ್ರವೇಶ ಮಾಡಿ ಆದೇಶ ನೀಡಿದೆ. ಹೀಗಾಗಿ ಅಲ್ಲಿ ಸಮಸ್ಯೆಯಾಗಲಾರದು ಎಂದು ಇನ್ನೊಂದು ಪ್ರಶ್ನೆಗೆ ಅವರು ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.