ಭಾನುವಾರ, ಮೇ 29, 2022
21 °C

ಯುಪಿಸಿಎಲ್: ಶಾಶ್ವತ ಉಸ್ತುವಾರಿ ಸಮಿತಿ ನೇಮಕಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ:  ಪರಿಸರ ಮಾಲಿನ್ಯ ಸಮಸ್ಯೆ ನಿವಾರಣೆ ಆಗುವವರೆಗೂ ನಂದಿಕೂ  ರಿನ ಉಷ್ಣವಿದ್ಯುತ್ ಸ್ಥಾವರವನ್ನು (ಯುಪಿಸಿಎಲ್) ತಾತ್ಕಾಲಿಕವಾಗಿ ಮುಚ್ಚಲೇಬೇಕು ಎಂದು ರಾಜ್ಯ ಸರ್ಕಾರವನ್ನು ಮತ್ತೆ ಆಗ್ರಹಿಸಿರುವ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ಈ ಕುರಿತು ಮುಖತಃ ಮಾತುಕತೆಗೆ ತಕ್ಷಣ ಏರ್ಪಾಡು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂ   ರಪ್ಪ ಅವರನ್ನು ಆಗ್ರಹಿಸಿದ್ದಾರೆ.ಈ ಕುರಿತು ಯಡಿಯೂರಪ್ಪ ಅವರಿಗೆ ಬುಧವಾರ ಪತ್ರ ಬರೆದಿರುವ ಸ್ವಾಮೀಜಿ, ನಂದಿಕೂರಿನಲ್ಲಿ ವಾಸಿಸುತ್ತಿರುವವರ ಮನೆಗೆ ಭೇಟಿ ಕೊಟ್ಟು ಪರಿಸ್ಥಿತಿಯನ್ನು ಕಣ್ಣಾರೆ ಕಾಣುವಂತೆ ಸಲಹೆ ನೀಡಿದ್ದಾರೆ. ಶಾಖೋತ್ಪನ್ನ ವಿದ್ಯುತ್ ಸ್ಥಾವರದಿಂದಾಗುವ ಮಾಲಿನ್ಯವನ್ನು ನಿಯಂತ್ರಿಸಲು ಶಾಶ್ವತ ಉಸ್ತುವಾರಿ ಸಮಿತಿಯೊಂದನ್ನು ನೇಮಿಸುವುದೂ ಸೇರಿದಂತೆ ಐದು ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟಿದ್ದಾರೆ.ಪರಿಸರ ಮಾಲಿನ್ಯದಿಂದ ನೀರು, ನೆಲ ಕಲುಷಿತವಾಗಿದೆ. ಅಲ್ಲಿನ ನೀರನ್ನು ಕುಡಿಯಲು ಸಾಧ್ಯವೇ ಇಲ್ಲ. ಬೆಳೆಗಳು ಕರಟಿ ಹೋಗಿವೆ. ಜನರ ಬದುಕು ದುಸ್ತರವಾಗಿದೆ. ಅವರಿಗೆ ಪರಿಹಾರವೇನೂ ಸಿಗುತ್ತಿಲ್ಲ. ಬೇರೆ ಜಾಗವನ್ನೂ ಕೊಟ್ಟಿಲ್ಲ. ಆ ಜನರು ಜೀವಿಸುವುದಾ  ದರೂ ಹೇಗೆ? ಜಾಗ ಬಿಟ್ಟು ಹೋಗುವುದಾದರೂ ಎಲ್ಲಿಗೆ? ಎಂದು ಸ್ವಾಮೀಜಿ ಪ್ರಶ್ನಿಸಿದ್ದಾರೆ.‘ಆಧುನಿಕ ತಂತ್ರಜ್ಞಾನ ಬಳಸಿ ಪರಿಸರ ಮಾಲಿನ್ಯವಾಗದಂತೆ ನೋಡಿಕೊಳ್ಳುವ ಭರವಸೆ ಆರಂಭದಲ್ಲಿ ಯುಪಿಸಿಎಲ್‌ನಿಂದ ದೊರಕಿದ್ದಿತು. ಅದೀಗ ಹುಸಿಯಾಗಿದೆ.

 

ಮಾಲಿನ್ಯ ನಿಯಂತ್ರಣ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗಿಲ್ಲ. ಪಶ್ಚಿಮಘಟ್ಟ ಸಮೀಪದ ಈ ಪ್ರದೇಶ ಹೆಚ್ಚು ಮಳೆ ಬೀಳುವ ಸೂಕ್ಷ್ಮ ಪ್ರದೇಶವಾಗಿದ್ದು, ಹಾರುಬೂದಿಯಿಂದ ಆಗುವ ಹಾನಿ ತಪ್ಪಿಸಲು ಸಾಧ್ಯವೇ ಇಲ್ಲ. ಸರ್ಕಾರದ ನಿಯಮಗಳನ್ನೂ ಯುಪಿಸಿಎಲ್ ಪಾಲನೆ ಮಾಡದಿದ್ದಲ್ಲಿ ಮಾಲಿನ್ಯ ತಡೆಯಲು ಸಾಧ್ಯವೂ ಇಲ್ಲ’ ಎಂದಿದ್ದಾರೆ. ‘ರಾಜ್ಯಕ್ಕೆ ವಿದ್ಯುತ್ ಅವಶ್ಯಕತೆಯಿದೆ ಎಂಬುದನ್ನು ಒಪ್ಪುತ್ತೇನೆ. ಆದರೆ ಸ್ಥಾವರ ಇರುವ ಪ್ರದೇಶದ ಜನರಿಗೂ ಸರಿಯಾದ ವ್ಯವಸ್ಥೆಯಾಗಬೇಕಾದ್ದು ಅವಶ್ಯ. ಅಲ್ಲಿಯ ಜನರ ಸಂಕಷ್ಟವನ್ನೂ ನೋಡಿ ನೊಂದು ಮಾ. 19ರಿಂದ ನಿತ್ಯೋಪವಾಸ ಆರಂಭಿಸಿದ್ದೇನೆ. ಒಂದು ಹೊತ್ತು ಊಟ. ಉಳಿದಂತೆ ನಿರ್ಜಲ ಉಪವಾಸ. ಇದು ನಿಮ್ಮ ಸರ್ಕಾರದ ವಿರುದ್ಧವಲ್ಲ. ಶಾಖೋತ್ಪನ್ನ ಸ್ಥಾವರದ ವಿರುದ್ಧ. ಆ ಕಂಪೆನಿಯವರು ಚಾಚೂ ತಪ್ಪದೇ ನಿಯಮ ಪಾಲಿಸಲಿ, ಸರ್ಕಾರ ಯುಪಿಸಿಎಲ್ ಬಗ್ಗೆ ಹೆಚ್ಚು ನಿಗಾವಹಿಸಲಿ, ಜನರಲ್ಲಿಯೂ ಜಾಗೃತಿ ಮೂಡಲಿ ಎನ್ನುವುದೇ ನಿತ್ಯೋಪವಾಸದ ಉದ್ದೇಶ’ ಎಂದಿದ್ದಾರೆ.‘ನಿಮ್ಮ ಮೇಲೆ ನನಗೆ ವಿಶೇಷ ಅಭಿಮಾನವಿದ್ದರೂ ಅನಿವಾರ್ಯವಾಗಿ ಉಪವಾಸ ನಡೆಸಿದ್ದೇನೆ. ನೀವು ಎಲ್ಲ ಸಮಸ್ಯೆ ಸರಿಪಡಿಸಿ ಪರಿಸರ ಮಾಲಿನ್ಯ ಪೂರ್ಣವಾಗಿ ಪರಿಹರಿಸಿ ಜನ ನೆಮ್ಮದಿಯಿಂದ ಬದುಕುವಂತೆ ಮಾಡಬೇಕು ಎಂಬುದೇ ನಮ್ಮ ಅಪೇಕ್ಷೆ. ಆಗ ಸಂತೋಷದಿಂದ ಉಪವಾಸ ಸಮಾಪ್ತಿಗೊಳಿಸುವೆ’ ಎಂದು ಸ್ವಾಮೀಜಿ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.ಅಭಿನಂದನೆ: ತಮ್ಮ ಮಾತಿಗೆ ಗೌರವ ನೀಡಿ ಎಂಎಸ್‌ಇಜೆಡ್‌ಗಾಗಿ   2ನೇ ಹಂತದ 2350 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣವಾಗಿ ಸ್ಥಗಿತಗೊಳಿಸಿದ್ದಕ್ಕಾಗಿ ಮುಖ್ಯಮಂತ್ರಿ ಅವರನ್ನು ಸ್ವಾಮೀಜಿ ಅಭಿನಂದಿಸಿದ್ದಾರೆ. ಆದರೆ ಈ ಜಮೀನು ಡಿನೋಟಿಫೈ ಆಗಿದ್ದರಿಂದ ರೈತರಿಗೆ ಬ್ಯಾಂಕ್ ಹಾಗೂ ಸರ್ಕಾರದಿಂದ ಯಾವುದೇ ಸಹಾಯ ದೊರೆಯಲು ತೊಂದರೆಯಾಗಿದೆ. ಹೀಗಾಗಿ ನೋಟಿಫಿಕೇಶನ್ ವಾಪಸ್ ಪಡೆಯುವ    ಆದೇಶವನ್ನು ಕೂಡಲೇ ಮಾಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.ಸಿಎಂಗೆ ಪೇಜಾವರ ಶ್ರೀ ಬೇಡಿಕೆ

*  ಯುಪಿಸಿಎಲ್ ಸ್ವಲ್ಪವೂ ವಂಚಿಸದೇ ಆಧುನಿಕ ತಂತ್ರಜ್ಞಾನ ಬಳಸುವಂತೆ ಏರ್ಪಾಡು ಮಾಡಬೇಕು. 

* ಕಂಪೆನಿ ಪರಿಸರ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟು ಪಾಲಿಸುವಂತೆ ನೋಡಿಕೊಳ್ಳಬೇಕು.

* ಹಾರುಬೂದಿ, ಉಪ್ಪುನೀರು, ಕಲ್ಲಿದ್ದಲು ಸಾಗಣೆಯಿಂದಾಗಿರುವ ಅನಾಹುತ ಪೂರ್ಣ ನಿವಾರಣೆಯಾಗಬೇಕು. 

* ಮುಂದೆ ಮತ್ತೆ ಪರಿಸರ ಮಾಲಿನ್ಯವುಂಟಾಗುವ ಅಪಾಯವಿರುವುದರಿಂದ ಶಾಶ್ವತ ಉಸ್ತುವಾರಿ ಸಮಿತಿ ನೇಮಿಸಬೇಕು. ಸಮಿತಿಯಲ್ಲಿ ನಾವು ಸೂಚಿಸುವ ಪರಿಸರ ತಜ್ಞರೂ ಇರಬೇಕು. ಅವರಿಗೆ ಆ ಪ್ರದೇಶದಲ್ಲಿ ಸ್ವತಂತ್ರವಾಗಿ ಪ್ರವೇಶಿಸುವ ಹಾಗೂ ಎಲ್ಲವನ್ನೂ ಪರಿಶೀಲಿಸುವ ಅಧಿಕಾರ ನೀಡಬೇಕು.

* ಎಲ್ಲ ಏರ್ಪಾಡು ಮಾಡಿಯೂ ಪರಿಸರ ಮಾಲಿನ್ಯ ನಿವಾರಣೆಯಾಗದಿದ್ದಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.