ಗುರುವಾರ , ಮೇ 26, 2022
23 °C
ಮೈಸೂರು ವಿಶ್ವವಿದ್ಯಾನಿಲಯದ 93ನೇ ಘಟಿಕೋತ್ಸವ

`ಯುವಕರಿಗೆ ಕೌಶಲ ತರಬೇತಿ ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಈ ದೇಶದಲ್ಲಿ ಶೇ 18ರಷ್ಟು ಉನ್ನತ ಶಿಕ್ಷಣ ಪಡೆದ ಯುವಕರಿದ್ದಾರೆ. 2020ರ ವೇಳೆಗೆ ಶೇ 30ರಷ್ಟು ಯುವಕರು ಉನ್ನತ ಶಿಕ್ಷಣ ಪಡೆದಿರುತ್ತಾರೆ. ಆದರೆ, ಕೌಶಲ ಉಳ್ಳ ಯುವಕರನ್ನು ರೂಪಿಸಲು ತರಬೇತಿ ನೀಡಬೇಕು' ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಡಾ.ಎಂ.ಎಂ. ಪಲ್ಲಂ ರಾಜು ಸಲಹೆ ನೀಡಿದರು.ನಗರದ ಕ್ರಾಫರ್ಡ್ ಭವನದಲ್ಲಿ ಶುಕ್ರವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯದ 93ನೇ ಘಟಿಕೋತ್ಸವದಲ್ಲಿ `ಘಟಿಕೋತ್ಸವ ಭಾಷಣ' ಮಾಡಿ ಅವರು ಮಾತನಾಡಿದರು.`ಶಿಕ್ಷಣ ಹಕ್ಕು ಕಾಯ್ದೆಯಡಿ 23 ಕೋಟಿ ಮಕ್ಕಳು ಶಾಲೆಗಳಿಗೆ ದಾಖಲಾಗಿದ್ದಾರೆ. ಇದು ಮಹತ್ತರ ಸಾಧನೆ. ನಿರಂತರವಾಗಿ ಶಿಕ್ಷಣ ಪಡೆಯುವಂತೆ ಮಕ್ಕಳನ್ನು ಉತ್ತೇಜಿಸಬೇಕು' ಎಂದು ಅವರು ಅಭಿಪ್ರಾಯಪಟ್ಟರು.`ದೃಷ್ಟಿಗೆ ಗೋಚರವಾಗದ ರೀತಿಯಲ್ಲಿ ನೆಲದಾಳದ ಚೈತನ್ಯವನ್ನು ಮರದ ಬೇರುಗಳು ಹೀರಿಕೊಂಡು ಕಾಂಡ, ಕೊಂಬೆ, ಟಿಸಿಲುಗಳಿಗೆ ಕಳುಹಿಸುವ ರೀತಿಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಪಡೆದ ಜ್ಞಾನದ ಪ್ರಸರಣದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು' ಎಂದು ಕಿವಿಮಾತು ಹೇಳಿದರು.`ಗಳಿಸಿಕೊಂಡಿರುವ ಶಿಕ್ಷಣ ಬದುಕಿನುದ್ದಕ್ಕೂ ಒದಗಿ ಬರುವಂಥ ಬ್ಯಾಂಕ್ ಬ್ಯಾಲೆನ್ಸ್. ಆ ಡಿವಿಡೆಂಡ್ ಅನ್ನು ನೀವು ಇತರರೊಡನೆ ಹಂಚಿಕೊಳ್ಳಬಹುದು. ಒಂದು ಘಟ್ಟದಲ್ಲಿ ಪಡೆದಿರುವ ಸಹಾಯವನ್ನು ಸಮಾಜಕ್ಕೆ ಉಪಕಾರವಾಗಿ ವಾಪಸು ನೀಡಬಹುದು. ಇದರಿಂದ ಸಮಾಜದಲ್ಲಿ ಸಂಯಮ, ಸಮಾಧಾನ, ಶ್ರೇಯಸ್ಸು ನೆಲೆಗೊಳ್ಳುವುದು.ಮುಖ್ಯವಾಗಿ ಸಮುದಾಯ ಉನ್ನತ ಮಟ್ಟಕ್ಕೆ ಏರಲು ನೆರವಾಗಬೇಕು. ಹೀಗೆ ದೇಶಕ್ಕೆ ಸಮರ್ಪಿಸಬಹುದಾದ ಅತ್ಯಂತ ಮಹತ್ವದ ಕಾಣಿಕೆ' ಎಂದು ತಿಳಿವಳಿಕೆ ಹೇಳಿದರು.`1918ರಲ್ಲಿ ಮೊದಲ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಸರ್ ಅಶುತೋಷ್ ಮುಖರ್ಜಿ ಅವರು, ಬದುಕಿನ ಬಹುಮುಖ್ಯವಾದ ಸಂಗತಿಯ ಕಡೆ ನಮ್ಮ ಗಮನ ಸೆಳೆದಿದ್ದಾರೆ. ನಿಮ್ಮ ಸಾಮರ್ಥ್ಯ ಮತ್ತು ಅವಕಾಶಗಳಿಗೆ ಅನುಗುಣವಾಗಿ ನೈತಿಕತೆ ಹಾಗೂ ಉತ್ತಮ ಶಿಕ್ಷಣವನ್ನು ಎತ್ತಿ ಹಿಡಿಯುವುದಾಗಿ ಮಾತು ಕೊಟ್ಟಿದ್ದೀರಿ. ಹಾಗೆಯೇ, ಸಾಮಾಜಿಕ ಸ್ವಾಸ್ಥ್ಯ ಮತು ನಿಮ್ಮ ಸಹ-ಮಾನವರ ಶ್ರೇಯಸ್ಸನ್ನೂ ಎತ್ತಿ ಹಿಡಿಯುವ ಸಂಕಲ್ಪ ಹೊತ್ತಿದ್ದೀರಿ. ಹೀಗೆ ಸಮಾಜದಲ್ಲಿ ವಿದ್ಯಾವಂತರಾದವರು ಗುರುತರವಾದ ಹೊಣೆ ಹೊರಬೇಕು ಮತ್ತು ಬದಲಾವಣೆಯನ್ನು ತರಬೇಕು. ವಿದ್ಯೆ ಎಂಬ ಬೆಳಕು ಕಾಣದ ನತದೃಷ್ಟ ಸಹೋದರ-ಸಹೋದರಿಯರಿಗೆ ಮಾರ್ಗದರ್ಶನ ಮಾಡಬೇಕು. ಸದುದ್ದೇಶಗಳಿಗೆ ಸಮರ್ಪಿಸಿಕೊಳ್ಳಿ' ಎಂದು ಹೇಳಿದರು.`ನಮ್ಮ ದೇಶದಲ್ಲಿ ಹಸಿವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಾಗಿಲ್ಲ. ಎಲ್ಲರಿಗೂ ಆಶ್ರಯ, ಶಿಕ್ಷಣ ಕೊಡಲು ಆಗಿಲ್ಲ. ಈ ಗುರಿಗಳನ್ನು ಸಾಧಿಸುವ ತನಕ ಇತರ ದೇಶಗಳ ಜನರ ಗೌರವಕ್ಕೆ ಪಾತ್ರರಾಗಲಾರೆವು. ವಿಜ್ಞಾನ- ತಂತ್ರಜ್ಞಾನ ಎಷ್ಟೇ ಅನುಕೂಲಗಳನ್ನು ಕಲ್ಪಿಸಿದರೂ ವಿಪರೀತವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಎಲ್ಲವನ್ನೂ ಆಪೋಷಣೆ ತೆಗೆದುಕೊಳ್ಳುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದರು.ವಿವಿಗಳು ಜ್ಞಾನದ ಕಣಜ: ಪಂ. ಜವಾಹರಲಾಲ್ ನೆಹರೂ ಅವರು `ವಿವಿಗಳು ಜ್ಞಾನದ ಕಣಜ. ನಾಗರಿಕತೆಗಳನ್ನು ಪೋಷಿಸಿ, ಪಾಲಿಸುವಂಥ, ಅಳಿದರೂ ಉಳಿದರೂ ದಾರಿ ತೋರುವಂಥ ಜ್ಞಾನವನ್ನು ಸಂರಕ್ಷಣೆ ಮಾಡುವುದು ವಿವಿಗಳು' ಎಂದಿದ್ದನ್ನು ಸದಾ ಸ್ಮರಿಸಬೇಕು. ಆದರೆ, ಉನ್ನತ ಶಿಕ್ಷಣ ಎನ್ನುವುದು ಕೇವಲ ಜ್ಞಾನದಲ್ಲೇ ತಂಗುವಂಥದಲ್ಲ.ಅದನ್ನು ದಾಟಿ ವಿವೇಕದತ್ತ ಸಾಗುವುದು. ವಿವೇಕ ಎಂದರೆ ಒಳ್ಳೆಯದಾಗುವುದು, ದೋಷಿಪೂರಿತವಾದುದು ಯಾವುದು ಎಂದು ವಿವೇಚಿಸುವ ಸಾಮರ್ಥ್ಯ. ಉನ್ನತ ಶಿಕ್ಷಣದ ಉದ್ದೇಶ ಎಂದರೆ, ವಿವೇಕವನ್ನು ಮೆರೆಯುವುದು. ಲೌಕಿಕವಾದ ಭೋಗದಿಂದ ದೂರ ನಡೆದು ಮನುಷ್ಯನ ಮೂಲಭೂತ ಅನ್ವೇಷಣೆಯ ಕಡೆ ಅವನನ್ನು ಪ್ರೇರೇಪಿಸುವಂತಾಗಬೇಕು' ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.