ಶುಕ್ರವಾರ, ಫೆಬ್ರವರಿ 26, 2021
31 °C

ಯುವಜನೋತ್ಸವ: ಮೇಳೈಸಿದ ಜಾನಪದ ನೃತ್ಯ

ಪ್ರಜಾವಾಣಿ ವಾರ್ತೆ/ ಸತೀಶ್ ಕೊಣಾಜೆ Updated:

ಅಕ್ಷರ ಗಾತ್ರ : | |

ಯುವಜನೋತ್ಸವ: ಮೇಳೈಸಿದ ಜಾನಪದ ನೃತ್ಯ

ಮುಡಿಪು: ಮೂರು ದಿನಗಳಿಂದ ಮಂಗಳೂರು ವಿವಿಯ ಆವರಣದಲ್ಲಿ ಜಾತ್ರಾ ಸಂಭ್ರಮ. ವಿವಿಯ ಆವರಣದಲ್ಲಿ ನಿರ್ಮಿಸಲಾಗಿರುವ ಐದು ವೇದಿಕೆಗಳಲ್ಲಿ ಮಂಗಳೂರು ವಿವಿ ದಕ್ಷಿಣವಲಯ ಅಂತರ ವಿವಿ ಯುವಜನೋತ್ಸವ ‘ವೇವ್ಸ್-2015’ರಲ್ಲಿ ವಿವಿಧ ರಾಜ್ಯಗಳ ಯುವ ಪ್ರತಿಭೆಗಳಿಂದ ಸ್ಪರ್ಧಾ ಕಾರ್ಯಕ್ರಮಗಳು ನಡೆಯುತ್ತಿವೆ. ಇದರಿಂದ ವಿವಿಯ ಆವರಣವು ಸಾಂಸ್ಕೃತಿಕ ಹಬ್ಬದ ಆಕರ್ಷಣೆಯ ಕೇಂದ್ರವಾಗಿದೆ.ಬುಧವಾರ ಮಂಗಳಾ ಸಭಾಂಗಣದ ಡಾ.ಶಿವರಾಮ ಕಾರಂತ ವೇದಿಕೆಯಲ್ಲಿ ಏಕಪಾತ್ರಾಭಿನಯ ಹಾಗೂ ಕಿರು ರೂಪಕ ಸ್ಪರ್ಧೆಗಳು  ಪೈಪೋಟಿಯಿಂದ ನಡೆದವು. ವಿಜ್ಞಾನ ಸಂಕೀರ್ಣ ಕಟ್ಟಡದಲ್ಲಿ ವಿವಿಧ ಸಂಗೀತ ಸ್ಪರ್ಧೆಗಳು ನಡೆದರೆ ಹಳೆ ಸೆನೆಟ್ ಸಭಾಂಗಣದ ಪಂಜೆ ಮಂಗೇಶರಾವ್ ವೇದಿಕೆಯಲ್ಲಿ ಚರ್ಚಾ ಸ್ಪರ್ಧೆ ನಡೆಯಿತು. ಮಾನವಿಕ ವಿಭಾಗದಲ್ಲಿರುವ ಇದಿನಬ್ಬ ವೇದಿಕೆಯಲ್ಲಿ ಪೋಸ್ಟರ್ ಮೇಕಿಂಗ್ ಹಾಗೂ ವ್ಯಂಗ್ಯ ಚಿತ್ರ ರಚನೆ ಸ್ಪರ್ಧೆಯು ಆಕರ್ಷಕವಾಗಿತ್ತು. ವ್ಯಂಗ್ಯ ಚಿತ್ರ ರಚನೆ ಸ್ಪರ್ಧೆಯಲ್ಲಿ ಸುಮಾರು 19 ವಿದ್ಯಾರ್ಥಿಗಳು ವಿಭಿನ್ನವಾದ ವ್ಯಂಗ್ಯ ಚಿತ್ರ ರಚನೆಯು ಮೂಲಕ ಕಲಾ ಸಾಮರ್ಥ್ಯವನ್ನು ಮೆರೆದರು.ಮಂಗಳಾ ಸಭಾಂಗಣದ ಬಳಿ ಇರುವ ಕಯ್ಯಾರ ಕಿಞ್ಞಣ್ಣ ರೈ ವೇದಿಕೆಯಲ್ಲಿ ನಡೆದ ಜನಪದ ನೃತ್ಯ ಸ್ಪರ್ಧೆಯು ಜನರ ಮನ ಸೂರೆಗೊಂಡಿತು. ಈ ಸ್ಪರ್ಧಾಕೂಟದಲ್ಲಿ ದಕ್ಷಿಣ ವಲಯ ರಾಜ್ಯಗಳ ವಿವಿಧ ವಿವಿಯ ಸುಮಾರು 26 ತಂಡಗಳು ಭಾಗವಹಿಸಿ ಪ್ರಾದೇಶಿಕ ವೈವಿಧ್ಯ ಸಾರುವ ನೃತ್ಯವನ್ನು ಪ್ರದರ್ಶಿಸಿದರು.ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದ ಡೊಳ್ಳು ಕುಣಿತ ಹಾಗೂ ಮಂಗಳೂರು ವಿವಿಯ ವೀರಗಾಸೆ ನೃತ್ಯ ಸೇರಿದಂತೆ ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ, ಆಂದ್ರಪ್ರದೇಶ ಕೃಷ್ಣ ವಿಶ್ವವಿದ್ಯಾಲಯ, ತಿರುಪತಿಯ ವೆಂಕಟೇಶ್ವರ ವಿವಿಯ ಮತ್ತು ಗುಲ್ಬರ್ಗ ವಿವಿ ಮುಂತಾದ ವಿಶ್ವವಿದ್ಯಾಲಯಗಳು ಪ್ರದರ್ಶಿಸಿದ ಜನಪದ ನೃತ್ಯಗಳು ಆಕರ್ಷಕವಾಗಿದ್ದವು.ಕಯ್ಯಾರ ಕಿಞ್ಞಣ್ಣ ರೈ ವೇದಿಕೆಯಲ್ಲಿ ನಡೆದ ಜನಪದ ನೃತ್ಯ ಪ್ರದರ್ಶನವನ್ನು ವೀಕ್ಷಿಸಲು ಸಭಾಂಗಣದ ಮುಂದೆ ಕಿಕ್ಕಿರಿದು ಜನ ಸೇರಿದ್ದರು.  ಪ್ರದರ್ಶನವು ಮಧ್ಯಾಹ್ನ ನಡೆದುದರಿಂದ ಬಿಸಿಲಿನ ಬೇಗೆಗೆ ವೇದಿಕೆಯಲ್ಲಿ ಹಾಕಲಾಗಿದ್ದ ಲೈಟಿಂಗ್‌ಗಳು ಅಷ್ಟಾಗಿ ಪ್ರಭಾವ ಬೀರಲಿಲ್ಲ.ಊಟೋಪಚಾರ

ಬುಧವಾರವೂ ವಿವಿಧ ರಾಜ್ಯ­ಗಳಿಂದ ಯುವಜನೋತ್ಸವ  ಸ್ಪರ್ಧೆಗೆಂದು ಬಂದಿದ್ದ ವಿದ್ಯಾರ್ಥಿಗಳು ಮಂಗಳಾ ಸಭಾಂಗಣದ ಬಳಿ ಏರ್ಪಡಿಸಲಾಗಿದ್ದ ಮಂಗಳೂರು ಶೈಲಿಯ ಊಟದ ಸವಿಯನ್ನು ಸವಿದರು. ಮಂಗಳೂರು ವಿವಿಯ ವಿದ್ಯಾರ್ಥಿಗಳೂ ಪಾಲ್ಗೊಂಡು ಊಟೋಪಾಚಾರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.ಗುರುವಾರ ಏಕಪಾತ್ರಾಭಿನಯ, ಶಾಸ್ತ್ರೀಯ ನೃತ್ಯ , ಜನಪದ ಸಂಗೀತ, ರಂಗೋಲಿ ಸ್ಪರ್ಧೆ ಹೀಗೆ ಹಲವಾರು ಸ್ಪರ್ಧೆಗಳು ವಿವಿಧ ವೇದಿಕೆಗಳಲ್ಲಿ ನಡೆಯಲಿವೆ. 22ರಂದು ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮವು ನಡೆಯಲಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.