ಸೋಮವಾರ, ಮೇ 23, 2022
20 °C

ಯುವ ಕಾಂಗ್ರೆಸ್‌ಗೆ ಹೊಸದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಮೊದಲ ಬಾರಿಗೆ ಯುವ ಕಾಂಗ್ರೆಸ್ ಪದಾಧಿಕಾರಿಗಳ ಸ್ಥಾನಕ್ಕೆ ಜನತಾಂತ್ರಿಕವಾಗಿ ನಡೆದ ಚುನಾವಣೆ ಮುಗಿದು ಹೊಸ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.ಹೆಚ್ಚಿನ ಗದ್ದಲವಿಲ್ಲದೆ ನಡೆದ ಚುನಾವಣೆಯಲ್ಲಿ 31 ವರ್ಷದ ಮೈಸೂರಿನ ಯುವಕ ರಿಜ್ವಾನ್ ಅರ್ಷದ್ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.ಪಕ್ಷದಲ್ಲಿ ಗುಂಪುಗಾರಿಕೆ ಮತ್ತು ಭಿನ್ನಮತ ಇದ್ದರೂ ಸುಸೂತ್ರವಾಗಿ ನಡೆದಿರುವ ಪಕ್ಷದ ಆಂತರಿಕ ಚುನಾವಣೆ ಒಳ್ಳೆಯ ಬೆಳವಣಿಗೆ. ಒಂದು ಕಾಲಕ್ಕೆ ಯುವ ಕಾಂಗ್ರೆಸ್ ಎಂದರೆ ಗೂಂಡಾಗಿರಿಗೆ ಕುಖ್ಯಾತಿ ಪಡೆದಿತ್ತು.ದೇವರಾಜ ಅರಸು ಮತ್ತು ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಯುವ ಕಾಂಗ್ರೆಸ್ ಸಂಸ್ಕೃತಿಗೆ ಜನರು ಹೆದರುತ್ತಿದ್ದರು. ಅಂತಹ, ಪರಿಸ್ಥಿತಿ ಇತ್ತೀಚಿನ ದಿನಗಳಲ್ಲಿ ಇಲ್ಲದಿರುವುದು ಸಮಾಧಾನಕರ.ಆದರೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಹುರುಪು ತುಂಬಬೇಕಾದ ಬಿಸಿರಕ್ತದ ಯುವ ಪಡೆಯ ಕೊರತೆ ದಟ್ಟವಾಗಿ ಕಾಡುತ್ತಿದೆ. ಅಖಿಲ ಭಾರತ ಮಟ್ಟದಲ್ಲಿ  ಯುವಶಕ್ತಿಯನ್ನು ಸೆಳೆಯುವ ರಾಹುಲ್‌ಗಾಂಧಿ ಪ್ರಯತ್ನಕ್ಕೆ ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ.ಅನಾಯಾಸವಾಗಿ ಒದಗಿಬಂದ ಅವಕಾಶವನ್ನು ಬಳಸಿಕೊಂಡು ನಾಯಕನಾಗಿ ಹೊರಹೊಮ್ಮಲು ಅವರಿಗೂ ಸಾಧ್ಯವಾಗುತ್ತಿಲ್ಲ.ಪಕ್ಷದಲ್ಲಿ ಅವರು ಹೊಂದಿರುವ ವಿಶೇಷ ಸ್ಥಾನಮಾನದಿಂದಾಗಿ ಬೇರೆ ಯುವನಾಯಕರಿಗೆ ಬೆಳೆಯಲು ಅವಕಾಶವೂ ಇಲ್ಲದಂತಾಗಿದೆ ಎನ್ನುವುದು ವಾಸ್ತವ. ಮೊದಲು ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಬೇಕು.ರಾಹುಲ್‌ಗಾಂಧಿ ಜತೆ ಬೇರೆ ಯುವನಾಯಕರು ಕೂಡಾ ರಾಷ್ಟ್ರಮಟ್ಟದಲ್ಲಿ ಬೆಳೆಯಲು ಕಾಂಗ್ರೆಸ್ ಅವಕಾಶ ನೀಡಬೇಕು.ರಾಜಕಾರಣ ಎನ್ನುವುದು ಇತ್ತೀಚಿನ ದಿನಗಳಲ್ಲಿ ಒಂದು ದಂಧೆಯಾಗಿದೆ. ಹಣ ಮಾಡುವುದೇ ರಾಜಕಾರಣಿಗಳ ಗುರಿ ಎನ್ನುವಂತಾಗಿದೆ.ಪಕ್ಷದಲ್ಲಿ ಎಲ್ಲ ಅಧಿಕಾರವನ್ನು ಅನುಭವಿಸಿ ಆ ಅಧಿಕಾರ ತಮ್ಮ ಕುಟುಂಬಕ್ಕೇ ಇರಲಿ ಎಂದು ಲೆಕ್ಕಾಚಾರ ಹಾಕುವ ನಾಯಕರ ಸಂಕುಚಿತ ಮನೋಭಾವ ಮತ್ತು ಸ್ವಾರ್ಥದಿಂದಾಗಿ ಎಲ್ಲ ಪಕ್ಷಗಳೂ ನೈತಿಕವಾಗಿ ದಿವಾಳಿಯಾಗುತ್ತಿವೆ.ಆದರ್ಶ ಇಟ್ಟುಕೊಂಡು ಬರುವ ಯುವಕರಿಗೆ ಬೆಳೆಯುವ ಅವಕಾಶ ಇಲ್ಲದಾಗಿದೆ. ಇದರಿಂದ ಭ್ರಮನಿರಸನಗೊಂಡ ಯುವಕರು ರಾಜಕೀಯ ಎಂದರೆ ದೂರವೇ ಉಳಿಯುತ್ತಿದ್ದಾರೆ. ಇದು ನಿಜಕ್ಕೂ ದುರಂತ.ಹಣ ಮತ್ತು ಅಧಿಕಾರ ಹೊಂದಿರುವ ಕೆಲವೇ ನಾಯಕರು ತಮಗೆ ಪರಾಕು ಹಾಕುವ ಮತ್ತು ತಮ್ಮ ಹಿಂಬಾಲಕರಾಗುವವರಿಗೇ ಮಾತ್ರ ಮಣೆ ಹಾಕುತ್ತಿದ್ದಾರೆ. ಎಲ್ಲ ರಾಜಕಾರಣಿಗಳಲ್ಲೂ ಪುತ್ರ ವ್ಯಾಮೋಹ ಮತ್ತು ಸ್ವಜಾತಿ ಪ್ರೇಮ  ಹೆಚ್ಚುತ್ತಿರುವುದು ಯುವಕರು ರಾಜಕಾರಣದಲ್ಲಿ ಆಸಕ್ತಿ ಕಳೆದುಕೊಳ್ಳಲು ಇನ್ನೊಂದು ಕಾರಣ.

 

ಈ ಬೆಳವಣಿಗೆ ಪಕ್ಷಕ್ಕಾಗಲಿ, ಸಮಾಜಕ್ಕಾಗಲಿ ಒಳ್ಳೆಯದಲ್ಲ. ಉತ್ತಮ  ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಮಾಜಿಕ ಕಾಳಜಿಯೊಂದಿಗೆ ರಾಜಕೀಯಕ್ಕೆ ಕಾಲಿಡುವ ಯುವಜನರಿಗೆ ಅವಕಾಶವೇ ಇಲ್ಲದಂತಾಗಿದೆ.ಈ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ಸಿಗೆ ಚುನಾವಣೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆ. ಇದು ಯುವ ಕಾಂಗ್ರೆಸ್ಸಿಗಷ್ಟೇ ಸೀಮಿತವಾಗುವುದು ಬೇಡ, ಪ್ರದೇಶ ಕಾಂಗ್ರೆಸ್ ಸಮಿತಿಗೂ ಇದೇ ರೀತಿ ಪ್ರಜಾತಾಂತ್ರಿಕ ರೀತಿಯಲ್ಲಿ ಚುನಾವಣೆ ನಡೆಯಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.