ಭಾನುವಾರ, ಮೇ 16, 2021
28 °C

ಯುವ ನೀತಿ ರೂಪಿಸಲು ಚಿಂತನೆ: ಮುಖ್ಯಮಂತ್ರಿ ಸದಾನಂದಗೌಡ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: “ಅದ್ಭುತ ಯುವ ಶಕ್ತಿಯನ್ನು ಸಾಮಾಜಿಕ ಶಕ್ತಿಯನ್ನಾಗಿ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ `ಯುವ ನೀತಿ~ ರೂಪಿಸಲು ಉದ್ದೇಶಿಸಲಾಗಿದೆ” ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಇಲ್ಲಿ ಸೋಮವಾರ ತಿಳಿಸಿದರು.

ರಾಜ್ಯ ಸರ್ಕಾರದ ವತಿಯಿಂದ ಪ್ರಥಮ ಬಾರಿಗೆ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುತ್ತಿರುವ `ಶಿವಾಜಿ ಜಯಂತಿ~ ಉತ್ಸವವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

“ಹೋರಾಟ- ಸಾಧನೆ- ತ್ಯಾಗದ ಪರಿಕಲ್ಪನೆಯಲ್ಲಿ ಯುವ ಪಡೆಯನ್ನು ಸಜ್ಜುಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಯುವ ನೀತಿ ರೂಪಿಸುವ ಬಗ್ಗೆ ರಾಜ್ಯದ ಚಿಂತಕರ ಹಾಗೂ ಜನರ ಅಭಿಪ್ರಾಯಗಳನ್ನು ಪಡೆಯಲಾಗುವುದು. ಮುಂದಿನ ಬಜೆಟ್‌ನಿಂದ ಯುವಜನರಿಗಾಗಿ ವಿಶೇಷ ಅನುದಾನ ನೀಡಲಾಗುವುದು” ಎಂದು ಮುಖ್ಯಮಂತ್ರಿಗಳು ಘೋಷಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ, “ಶಿವಾಜಿ ಜಯಂತಿಯನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಬೇಕು ಎಂದು ಕಳೆದ 30 ವರ್ಷಗಳಿಂದ ನಾಡಿನ ಜನರು ಒತ್ತಾಯಿಸುತ್ತಿದ್ದರು. ಇದೀಗ ರಾಜ್ಯ ಸರ್ಕಾರವೇ ಶಿವಾಜಿ ಜಯಂತಿಯನ್ನು ಆಚರಿಸಲು ಆರಂಭಿಸಿರುವುದರಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಈ ಉತ್ಸವ ಸೇತುವೆಯಾಗಲಿದೆ” ಎಂದರು.

ಸಭೆಯ ಅಧ್ಯಕ್ಷತೆಯನ್ನು ಶಾಸಕ ಅಭಯ ಪಾಟೀಲ ಅವರು ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಶಾಸಕರಾದ ಸಂಜಯ ಪಾಟೀಲ, ಪ್ರಕಾಶ ಹುಕ್ಕೇರಿ, ವೀರಕುಮಾರ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು. ಶಿವಾಜಿ ಉದ್ಯಾನದಲ್ಲಿ ಅಂದಾಜು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶಿವಾಜಿ ಜೀವನ ಚರಿತ್ರೆಯನ್ನು ಬಿಂಬಿಸುವ `ಶಿವಸೃಷ್ಟಿ~ ಕೇಂದ್ರಕ್ಕೆ ಸದಾನಂದ ಗೌಡ ಇದೇ ಸಂದರ್ಭದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.