ಗುರುವಾರ , ಮೇ 28, 2020
27 °C

ಯೋಜನೆ ರೂಪಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ಜಿಲ್ಲೆಯಲ್ಲಿ ಕಾಡಾನೆಗಳ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರ ಮತ್ತು ಅರಣ್ಯ ಇಲಾಖೆಗಳೇ ಸೂಕ್ತ ಯೋಜನೆ ರೂಪಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆದಿದ್ದೇನೆ, ಶೀಘ್ರದಲ್ಲೇ ಇನ್ನೊದು ಪತ್ರ ರವಾನಿಸುತ್ತೇನೆ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನುಡಿದರು.ಮಂಗಳವಾರ ಹಾಸನಕ್ಕೆ ಬಂದಿದ್ದ ಅವರು ತಮ್ಮನ್ನು ಭೇಟಿಮಾಡಿದ ಪತ್ರಕರ್ತರೊಡನೆ ಮಾತನಾಡಿದರು.‘ಈಚೆಗೆ ಮೂರು ಆನೆಮರಿಗಳು ಸತ್ತಿರುವ ವಿಚಾರ ಅತ್ಯಂತ ಬೇಸರ ಮೂಡಿಸಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ರೈತರು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ವಾದದಲ್ಲಿ ಹುರುಳಿಲ್ಲ. ಅರಣ್ಯದೊಳಗೆ ಅವರು ಕೃಷಿ ಮಾಡಿಲ್ಲ. ಜಾಗ ಅರಣ್ಯ ಪ್ರದೇಶಕ್ಕೆ ಸೇರಿದ್ದರೂ ಅನೇಕ ಸಂದರ್ಭದಲ್ಲಿ ಅಲ್ಲಿ ಅರಣ್ಯವೇ ಇರುವುದಿಲ್ಲ. ಇಂಥ ಕಡೆ ರೈತರು ಕೃಷಿ ಮಾಡಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಅರಣ್ಯ ಇಲಾಖೆ ಹಾಗೂ ಕೇಂದ್ರದವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.‘ಜಾವಾಬ್ದಾರಿಯುತ ಸ್ಥಾನದಲ್ಲಿ ಜವಾಬ್ದಾರಿಯುತ ವ್ಯಕ್ತಿ ಕುಳಿತಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಆದರೆ ಕೇಂದ್ರದಲ್ಲಿ ಸಚಿವರ ನಡುವೆಯೇ ತಾಳ-ಮೇಳವಿಲ್ಲ. ಸಮಸ್ಯೆಗಳು ಬಂದಾಗ ಒಬ್ಬೊಬ್ಬ ಸಚಿವ ಒಂದೊಂದು ರೀತಿ ಮಾತನಾಡು ತ್ತಾರೆ. ಯಾರನ್ನು ನಂಬಬೇಕು ಎಂಬುದೇ ತಿಳಿಯುವುದಿಲ್ಲ. ನಾನೂ ಪ್ರಧಾನಿಯ ಕುರ್ಚಿಯಲ್ಲಿ ಕುಳಿತು ಬಂದಿದ್ದೇನೆ. 13ಪಕ್ಷಗಳ ಬೆಂಬಲ ದಿಂದ ಸರ್ಕಾರ ನಡೆಸಿದ್ದರೂ ಒಮ್ಮೆಯೂ ಸಚಿವರು ಗೊಂದಲ ಮೂಡಿಸುವ ಹೇಳಿಕೆಗಳನ್ನು ನೀಡಿ ರಲಿಲ್ಲ ಎಂದರು.ಪ್ರಾಣಿಗಳ ರಕ್ಷಣೆಗೆ ಪ್ರತ್ಯೇಕ ಕಾಯಿದೆಯೇ ಇದೆ. ಪ್ರಾಣಿ ಸತ್ತರೆ ಕೆಲವರು ಸುದ್ದಿಮಾಡುತ್ತಾರೆ, ಪ್ರಾಣಿ ದಾಳಿಯಿಂದ ಮನುಷ್ಯ ಸತ್ತರೆ ಇನ್ನೊಂದು ರೀತಿಯ         ಸುದ್ದಿಯಾಗುತ್ತದೆ. ಇಂಥ ವಿಚಿತ್ರ ಸನ್ನಿವೇಶದಲ್ಲಿ ನಾವಿದ್ದೇವೆ. ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವವರು ಚಿಂತಿಸಬೇಕು ಎಂದು ದೇವೇಗೌಡ ನುಡಿದರು.ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ಜವರೇಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.