ಶನಿವಾರ, ಫೆಬ್ರವರಿ 27, 2021
31 °C

ಯೋಧನ ಮೃತದೇಹ ಇಂದು ಗ್ರಾಮಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯೋಧನ ಮೃತದೇಹ ಇಂದು ಗ್ರಾಮಕ್ಕೆ

ಕೃಷ್ಣರಾಜಪೇಟೆ :  ಅಸ್ಸಾಂ ರಾಜ್ಯದ ಗಡಿಭಾಗದಲ್ಲಿ ಬುಧವಾರ ಸಂಭವಿಸಿದ ದೋಣಿ ದುರಂತದಲ್ಲಿ ಸಾವಿಗೀಡಾದ ಗಡಿ ಭದ್ರತಾ ಪಡೆ ಯೋಧ ಜಯರಾಮೇಗೌಡರ ಸ್ವಗ್ರಾಮ ತಾಲ್ಲೂಕಿನ ಅಗ್ರಹಾರಬಾಚಹಳ್ಳಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಮತ್ತಿತರ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಮೃತ ಯೋಧನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.  ಮೃತ ಯೋಧ ಜೆ. ಜಯರಾಮೇಗೌಡರ ಪಾರ್ಥಿವ ಶರೀರವನ್ನು ಶನಿವಾರ ಬೆಳಿಗ್ಗೆ ಮಂಡ್ಯದಲ್ಲಿ ಜಿಲ್ಲಾಡಳಿತದ ವತಿಯಿಂದ ಗೌರವ ಸಲ್ಲಿಕೆಯಾದ ನಂತರ ಪಾಂಡವಪುರ, ಚಿನಕುರಳಿ. ಕೃಷ್ಣರಾಜಪೇಟೆ ಮಾರ್ಗವಾಗಿ  ಅಗ್ರಹಾರಬಾಚಹಳ್ಳಿಗೆ ತರಲಾಗುವುದು. ಮಾರ್ಗ ಮಧ್ಯದಲ್ಲಿ ಸಾರ್ವಜನಿಕರ ಅಂತಿಮ ನಮನ ಸಲ್ಲಿಸಲು ಅವಕಾಶ ನೀಡಲಾಗುವುದು. ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗ್ರಾಮಸ್ಥರು ಮೃತ ಯೋಧನ ಅಂತಿಮ ದರ್ಶನ ಪಡೆಯಲು ಅಗತ್ಯ ವ್ಯವಸ್ಥೆ ಮಾಡಲಾಗಿದ್ದು,  ಗ್ರಾಮದ ಮಲ್ಲಸಮುದ್ರ ಕೆರೆ ಬಳಿಯಲ್ಲಿರುವ ಯೋಧನ ಕುಟುಂಬದ ಜಮೀನಿನಲ್ಲಿ ಅಂತಿಮ ಸಂಸ್ಕಾರ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ತಿಳಿಸಿದರು.ಪತಿಯ ಸಾವಿನ ಸುದ್ದಿ ತಿಳಿದು ತೀವ್ರ ಅಸ್ವಸ್ಥೆಯಾಗಿರುವ ಮೃತ ಯೋಧನ ಪತ್ನಿ ಮಮತಾ ಅವರಿಗೆ ಪಟ್ಟಣದ ಲಕ್ಷ್ಮಮ್ಮ ದುಂಡಶೆಟ್ಟಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಜಯಶೇಖರ್ ಮತ್ತು ಸಿಬ್ಬಂದಿ ವರ್ಗದವರು ಚಿಕಿತ್ಸೆ ನೀಡಿದರು.ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಸಿ. ಜಯಣ್ಣ, ಉಪವಿಭಾಗಾಧಿಕಾರಿ ಜ್ಞಾನೇಶ್, ತಹಶೀಲ್ದಾರ್ ಬಿ. ಅಹೋಬಲಯ್ಯ, ತಾಲ್ಲೂಕು ಪಂಚಾಯಿತಿ ಈ.ಓ ವೈ.ಎನ್. ಚಂದ್ರಮೌಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಅಂಬರೀಷ್ ಸಂತಾಪ

ಮಂಡ್ಯ: ದೋಣಿ ದುರಂತದಲ್ಲಿ ಸಾವನ್ನಪ್ಪಿದ ಗಡಿ ಭದ್ರತಾ ಪಡೆಯ ಯೋಧ, ಜಿಲ್ಲೆಯ ಹೆಮ್ಮೆಯ ಪುತ್ರ ಜೆ. ಜಯರಾಮೇಗೌಡ ಅವರ ಪಾರ್ಥೀವ ಶರೀರವು ಶುಕ್ರವಾರ ಮಧ್ಯರಾತ್ರಿ ವೇಳೆಗೆ ಮಂಡ್ಯಕ್ಕೆ ಬರಲಿದೆ.ನಗರದ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುತ್ತಿದ್ದು, ಬೆಳಿಗ್ಗೆ 7.30ಕ್ಕೆ ಜಿಲ್ಲಾಡಳಿತದ ವತಿಯಿಂದ ಗೌರವ ಸಲ್ಲಿಸಲಾಗುವುದು. ನಂತರ ಇಲ್ಲಿಂದ ಮೆರವಣಿಗೆಯಲ್ಲಿ ಕೆ.ಆರ್. ಪೇಟೆಗೆ ತೆಗೆದುಕೊಂಡು ಹೋಗಲಾಗುವುದು. ಕೆ.ಆರ್. ಪೇಟೆ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.ಸಚಿವರ ಸಂತಾಪ: ದೋಣಿ ದುರಂತದಲ್ಲಿ ಸಾವನ್ನಪ್ಪಿದ್ದ ಗಡಿ ಭದ್ರತಾ ಪಡೆ ಯೋಧ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕು ಅಗ್ರಹಾರಚಾಚಹಳ್ಳಿಯ ಜೆ.ಜಯರಾಮೇಗೌಡ ನಿಧನಕ್ಕೆ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಎಚ್. ಅಂಬರೀಷ್ ಸಂತಾಪ ವ್ಯಕ್ತಪಡಿಸಿದ್ದಾರೆ.ಗೌಡರು, ಗಡಿಭದ್ರತಾ ಪಡೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ನಾಡಿಗೆ ಹಾಗೂ ಜಿಲ್ಲೆಗೆ ಹೆಸರು ತಂದಿದ್ದರು. ಅವರ ಅಗಲಿಕೆಯಿಂದ ಉಂಟಾದ ನೋವನ್ನು ಭರಿಸುವ ಶಕ್ತಿಯನ್ನು ಇವರ ಬಂಧು ವರ್ಗದವರಿಗೆ, ಹಿತೈಷಿಗಳಿಗೆ ದೇವರು ನೀಡಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.