ಮಂಗಳವಾರ, ಮೇ 11, 2021
25 °C

ರಂಗಭೂಮಿ: ಆಧುನಿಕ ತಂತ್ರಜ್ಞಾನ ಬಳಕೆಗೆ ಚಿಂತನೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಆಧುನಿಕ ತಂತ್ರಜ್ಞಾನಗಳ ಸಾಧ್ಯತೆಗಳೆಲ್ಲವನ್ನೂ ಬಳಸಿಕೊಂಡು ಭಾರತೀಯ ರಂಗಭೂಮಿಯನ್ನು ಶ್ರೀಮಂತಗೊಳಿಸುವ ಬಗ್ಗೆ ಎಲ್ಲ ರಂಗಕರ್ಮಿಗಳೂ ಚಿಂತನೆ ನಡೆಸಬೇಕು~ ಎಂದು ಕೇಂದ್ರ ಸಂಸ್ಕೃತಿ, ನಗರಾಭಿವೃದ್ಧಿ ಹಾಗೂ ಬಡತನ ನಿರ್ಮೂಲನೆಗಳ ಖಾತೆಯ ಸಚಿವೆ ಶೆಲ್ಜಾ ಹೇಳಿದರು.ನಗರದಲ್ಲಿ ಬುಧವಾರ ಬೆಂಗಳೂರು ವಿಶ್ವವಿದ್ಯಾಲಯದ ಬಳಿಯ ಕಲಾಗ್ರಾಮದಲ್ಲಿ ರಾಷ್ಟ್ರೀಯ ನಾಟಕ ಶಾಲೆಯ (ಎನ್‌ಎಸ್‌ಡಿ) ಬೆಂಗಳೂರು ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.`ವಿಶ್ವದ ಇತರೆ ದೇಶಗಳಲ್ಲಿ ಆಗುತ್ತಿರುವ ರಂಗಭೂಮಿಯ ಆವಿಷ್ಕಾರಗಳು ಹಾಗೂ ಆಧುನಿಕ ತಂತ್ರಜ್ಞಾನಗಳ ಅಧ್ಯಯನ ನಡೆಸಿ ನಮ್ಮಲ್ಲಿಯೂ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನಗಳಾಗಬೇಕು. ಆಧುನಿಕ ರಂಗವಿನ್ಯಾಸ, ಬೆಳಕು, ಪ್ರಸಾಧನಗಳ ಬಗ್ಗೆ ನಮ್ಮಲ್ಲಿನ ರಂಗಕರ್ಮಿಗಳು ಹೆಚ್ಚು ಹೆಚ್ಚು ಅಧ್ಯಯನ ನಡೆಸಬೇಕು. ನಮ್ಮಲ್ಲಿರುವ ಸಾಂಪ್ರದಾಯಿಕ ಜ್ಞಾನವನ್ನು ಬಳಸಿಕೊಂಡು ರಂಗಭೂಮಿಯನ್ನು ಬೆಳೆಸುವ ಪ್ರಕ್ರಿಯೆ ನಡೆಯಬೇಕು~ ಎಂದು ಅವರು ತಿಳಿಸಿದರು.`ಕಲೆಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಹೆಚ್ಚಿನ ಸಹಕಾರ ನೀಡುತ್ತಿದ್ದು, ಕಲೆಗಳ ಅಧ್ಯಯನದಲ್ಲಿ ತೊಡಗುವ ಯುವ ಜನರಿಗೆ ವಿಶೇಷ ಆರ್ಥಿಕ ನೆರವನ್ನು ನೀಡಲು ಹಾಗೂ ಎಲ್ಲ ಕಲಾ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರ ಬದ್ಧವಿದೆ. ದೆಹಲಿಯ ನಂತರದ ಬೆಂಗಳೂರಿನಲ್ಲಿ ಸ್ಥಾಪನೆಗೊಳ್ಳುತ್ತಿರುವ ಕೇಂದ್ರಕ್ಕೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ. ಅಂತರರಾಷ್ಟ್ರೀಯ ಮಟ್ಟದ ಅಧ್ಯಾಪಕ ವರ್ಗ ಹಾಗೂ ತಂತ್ರಜ್ಞಾನಗಳನ್ನು ಬಳಸಿಕೊಂಡು ದೆಹಲಿಯ ಮಟ್ಟದಲ್ಲೇ ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯೂ ಬೆಳೆಯಬೇಕು~ ಎಂದು ಅವರು ಆಶಿಸಿದರು.ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷೆ ಅಮಾಲ್ ಅಲ್ಲಾನ ಮಾತನಾಡಿ, `ನಾಟಕ ಶಾಲೆಯ ಬೆಂಗಳೂರಿನ ಕೇಂದ್ರಕ್ಕೆ ಮೂರು ಎಕರೆ ಭೂಮಿಯನ್ನು ಕರ್ನಾಟಕ ಸರ್ಕಾರ ನೀಡಿದೆ.  ಬೆಂಗಳೂರು ವಿಶ್ವವಿದ್ಯಾಲಯದ ಆವರಣದ ಪ್ರಶಾಂತ ವಾತಾವರಣದಲ್ಲಿ ಕೇಂದ್ರಕ್ಕೆ ಭೂಮಿ ಸಿಕ್ಕಿದೆ. ಕೇಂದ್ರವನ್ನು ಅಂತರರಾಷ್ಟ್ರೀಯ ಮಟ್ಟದ ನಾಟಕ ಶಾಲೆಯಾಗಿಸುವ ಪ್ರಯತ್ನ ಮಾಡಲಾಗುವುದು~ ಎಂದು ತಿಳಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್ ಮಾತನಾಡಿ, `ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರಿನ ಕೇಂದ್ರಕ್ಕೆ ಎಲ್ಲ ರೀತಿಯ ಸಹಕಾರಗಳನ್ನು ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ. ಕರ್ನಾಟಕಕ್ಕೆ ರಾಷ್ಟ್ರೀಯ ನಾಟಕ ಶಾಲೆಯ ಕೇಂದ್ರ ಬರಬೇಕೆಂಬುದು ಬಹುದಿನಗಳ ಕನಸಾಗಿತ್ತು, ಅದು ಈಗ ನೆರವೇರಿದೆ~ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜು, ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕಿ ಅನುರಾಧಾ ಕಪೂರ್, ಸಾಹಿತಿಗಳಾದ ಡಾ.ಯು.ಆರ್.ಅನಂತಮೂರ್ತಿ, ಡಾ.ಚಂದ್ರಶೇಖರ ಕಂಬಾರ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.