ಸೋಮವಾರ, ಮಾರ್ಚ್ 1, 2021
30 °C

ರಂಗ ಸುಗ್ಗಿ; ಬೀದಿ ನಾಟಕಗಳ ಹುಗ್ಗಿ

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

ರಂಗ ಸುಗ್ಗಿ; ಬೀದಿ ನಾಟಕಗಳ ಹುಗ್ಗಿ

ಆವಿಷ್ಕಾರ‌ ಬೀದಿ ನಾಟಕೋತ್ಸವ ಆರಂಭಗೊಂಡಿದ್ದು 1996ರಲ್ಲಿ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸರ್ವಾಧಿಕಾರದ ವಿರುದ್ಧ ಪ್ರತಿಭಟನೆಯ ಹರಿತ ಆಯುಧವಾಗಿ ರೂಪುಗೊಂಡಿದ್ದ ಬೀದಿ ನಾಟಕ ಮಾಧ್ಯಮ ತನ್ನ ಕ್ರಮೇಣ ತನ್ನ ಮೊನಚನ್ನು ಕಳೆದುಕೊಂಡಿತ್ತು. ಸಾಂಸ್ಕೃತಿಕ ಚಳುವಳಿಯಾಗಿ ಪ್ರಭಾವಿಯಾಗಿದ್ದ ಬೀದಿ ನಾಟಕಗಳು ಸರ್ಕಾರಿ ಯೋಜನೆಗಳ ಪ್ರಚಾರ ಮಾಧ್ಯಮವಾಗಿ ಬದಲಾಗಿದ್ದವು. ಆಗಷ್ಟೇ ಮನೆಮೆನೆಗೆ ಲಗ್ಗೆಯಿಡುತ್ತಿದ್ದ ಟೆಲಿವಿಷನ್‌ ಪ್ರಭಾವದಿಂದ ರಂಗಭೂಮಿ ತನ್ನ ಪ್ರೇಕ್ಷಕರನ್ನು ಕಳೆದುಕೊಳ್ಳುವ ಆತಂಕದಲ್ಲಿತ್ತು. ಇಂಥ ಸಾಂಸ್ಕೃತಿಕ ಬಿಕ್ಕಟ್ಟಿನಲ್ಲಿ ಹುಟ್ಟಿಕೊಂಡಿದ್ದು ಆವಿಷ್ಕಾರ ಬೀದಿ ನಾಟಕೋತ್ಸವ.ಬೀದಿ ನಾಟಕಗಳಿಗೆ ಹಳೆಯ ವರ್ಚಸ್ಸು ತರಬೇಕು, ಅದನ್ನು ಸಾಮಾಜಿಕ, ಸಾಂಸ್ಕೃತಿಕ ಅರಿವಿನ ಪ್ರಬಲ ಮಾಧ್ಯಮವಾಗಿ ಮರುರೂಪಿಸಬೇಕು ಎಂಬ ಹಂಬಲದಿಂದ ಆರಂಭವಾದ ನಾಟಕೋತ್ಸವವಿದು. 20ನೇ ಬೀದಿ ನಾಟಕೋತ್ಸವದ ಸಂದರ್ಭದಲ್ಲಿ ರಾಷ್ಟ್ರೀಯ ರಂಗೋತ್ಸವವನ್ನೂ ಆಯೋಜಿಸಿರುವುದು ಈ ಸಲದ ವಿಶೇಷ. ಇದೇ ಭಾನುವಾರದಿಂದ (ಜ.24ರಿಂದ 31) ಒಂದು ವಾರ ಈ ನಾಟಕೋತ್ಸವ ನಡೆಯಲಿದೆ.ಪ್ರತಿ ವರ್ಷ ಒಂದೊಂದು ಸಾಮಾಜಿಕ ಕಾಳಜಿಯ ವಿಷಯವನ್ನಿಟ್ಟುಕೊಂಡು ಈ ನಾಟಕೋತ್ಸವವನ್ನು ಆಯೋಜಿಸಲಾಗುತ್ತದೆ. ‘ಮೊದಲ ವರ್ಷ ಸ್ವಾತಂತ್ರ್ಯ ಸಿಕ್ಕಿ ಐವತ್ತು ವರ್ಷ ಆಗುತ್ತಿರುವ ವಿಷಯವನ್ನಿಟ್ಟುಕೊಂಡು ನಾಟಕೋತ್ಸವ ಏರ್ಪಡಿಸಿದ್ದೆವು. ನಂತರ ರೈತರ ಆತ್ಮಹತ್ಯೆ ಸಮಸ್ಯೆಯನ್ನಿಟ್ಟುಕೊಂಡು ನಾಟಕೋತ್ಸವ ಆಯೋಜಿಸಿದ್ದೆವು.ಈ ವರ್ಷ ಸೌಹಾರ್ದತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ವಿಷಯವನ್ನು ಇಟ್ಟುಕೊಂಡಿದ್ದೇವೆ. ಅದರಲ್ಲಿಯೂ ಆವಿಷ್ಕಾರ ಪ್ರಸ್ತುತಪಡಿಸುತ್ತಿರುವ ‘ಶವಗಳು ಕೇಳಿದ ಪ್ರಶ್ನೆ’ ನಾಟಕವಂತೂ ಅದೇ ವಿಷಯದ ಕುರಿತಾಗಿದೆ. ಉಳಿದ ನಾಟಕಗಳು ಕೂಡ ಸಾಮಾಜಿಕ ಸಮಸ್ಯೆ ಕುರಿತಾದದ್ದು, ಸಾಮಾಜಿಕ ಕಳಕಳಿಯನ್ನು ಒಳಗೊಂಡವೇ ಆಗಿವೆ’ ಎಂದು ವಿವರಿಸುತ್ತಾರೆ ಆವಿಷ್ಕಾರ ರಾಜ್ಯ ಸಂಚಾಲಕ ಬಿ.ಆರ್‌. ಮಂಜುನಾಥ್‌.ಈ ಸಲ ನಾಟಕೋತ್ಸವದಲ್ಲಿ ನಾಲ್ಕು ಹೊರ ರಾಜ್ಯದ (ಆಂಧ್ರಪ್ರದೇಶ, ಕೇರಳ, ಒರಿಸ್ಸಾ, ಪಶ್ಚಿಮಬಂಗಾಳ) ನಾಟಕಗಳು ಪ್ರದರ್ಶನ ಕಾಣಲಿವೆ. ಮಧ್ಯಪ್ರದೇಶದ ಒಂದು ತಂಡವೂ ಭಾಗವಹಿಸುವ ಸಾಧ್ಯತೆ ಇದೆ. ಜನವರಿ 24( ಭಾನುವಾರ) ಕಬ್ಬನ್‌ ಉದ್ಯಾನದ ಕೆ.ಜಿ.ಎಸ್‌. ಸಭಾಂಗಣದಲ್ಲಿ ರಾಷ್ಟ್ರೀಯ ನಾಟಕೋತ್ಸವವು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಿಂದ ಉದ್ಘಾಟನೆಗೊಳ್ಳಲಿದೆ. ಖ್ಯಾತ ಸರೋದ್‌ ವಾದಕ ರಾಜೀವ ತಾರಾನಾಥ ಉಪಸ್ಥಿತರಿರುತ್ತಾರೆ.ಬೀದಿ ನಾಟಕೋತ್ಸವ ಜನವರಿ 29ರಂದು(ಶುಕ್ರವಾರ) ಸಾಹಿತಿ ಎಸ್‌.ಜಿ. ಸಿದ್ಧರಾಮಯ್ಯ ಅವರಿಂದ ಉದ್ಘಾಟನೆಗೊಳ್ಳಲಿದೆ. ಸಮಾರೋಪ ಸಮಾರಂಭಕ್ಕೆ ಕೋಟಿಗಾನಳ್ಳಿ ರಾಮಯ್ಯ  ಬರಲಿದ್ದಾರೆ. ಈ ನಾಟಕೋತ್ಸವದಲ್ಲಿ ಒಟ್ಟು 12 ಬೀದಿ ನಾಟಕಗಳು ಪ್ರದರ್ಶಿತವಾಗಲಿವೆ. ಅದಕ್ಕೂ ಮೊದಲು ಮೂರು ರಂಗನಾಟಕಗಳೂ ಪ್ರದರ್ಶಿತವಾಗಲಿವೆ.ರಂಗನಾಟಕಗಳು ಕೆ.ಎಚ್‌. ಕಲಾಸೌಧ, ಪ್ರಭಾಸ್‌ ಥಿಯೇಟರ್‌ ಮತ್ತು ಎಂ.ಇ.ಎಸ್‌. ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಅಡಿಟೋರಿಯಂ ಈ ಮೂರು ವೇದಿಕೆಗಳಲ್ಲಿ ನಡೆಯಲಿದೆ. ಬೀದಿ ನಾಟಕಗಳೆಲ್ಲ ಮಲ್ಲೇಶ್ವರದ ಮೈದಾನದ ಎದುರಿನ ಸರ್ಕಾರಿ ಉರ್ದು ಶಾಲೆಯ ಮೈದಾನದಲ್ಲಿ ನಡೆಯಲಿದೆ.ಪೂರ್ವಭಾವಿ ಕಾರ್ಯಕ್ರಮಗಳು

ಬೀದಿ ನಾಟಕೋತ್ಸವಕ್ಕೆ ಪೂರ್ವಭಾವಿಯಾಗಿ ಕಳೆದ ಒಂದು ವಾರಗಳಿಂದ ಬೇರೆ ಬೇರೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಬೆಂಗಳೂರಿನ ವಿವಿಧ ಕಾಲೇಜುಗಳಲ್ಲಿ ವಿಚಾರಸಂಕಿರಣಗಳನ್ನು ನಡೆಸಲಾಗಿದೆ. ಹಾಗೆಯೇ ‘ಪ್ರಸ್ತುತ ಶೇಕ್ಸ್‌ಪಿಯರ್‌’, ‘ಅಗ್ನಿ ದಿವ್ಯ’ ಮತ್ತು ‘ಮಹಾನರಕ ಪಾಲಿಕಾ ದರ್ಶನಂ’ ನಾಟಕಗಳನ್ನು ನಗರದ ಬೇರೆ ಬೇರೆ ವೇದಿಕೆಗಳಲ್ಲಿ ಪ್ರದರ್ಶಿಸಲಾಗಿದೆ. 24ರಿಂದ ನಾಟಕೋತ್ಸವ ವಿಧ್ಯುಕ್ತವಾಗಿ ಆರಂಭವಾಗಲಿದೆ. ಅದರಲ್ಲಿ ಮತ್ತೆ ಈ ನಾಟಕಗಳು ಪ್ರದರ್ಶಿತಾಗಲಿವೆ.ಜನ ಸಂಗೀತ– ನಾಟ್ಯ

ಬರೀ ನಾಟಕಗಳಷ್ಟೇ ಅಲ್ಲದೇ ‘ಜನಸಂಗೀತ’ ಎಂಬ ಇಡೀ ದಿನದ ಸಂಗೀತ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ. 24ಕ್ಕೆ ಅನೇಕ ಪ್ರಸಿದ್ಧ ಸಂಗೀತಗಾರರು ಮತ್ತು ತಂಡಗಳು ಇಡೀ ದಿನ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಹಾಗೆಯೇ 25ಕ್ಕೆ ಮಲ್ಲೇಶ್ವರದ ಸೇವಾ ಸದನದಲ್ಲಿ ಜನನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಉಷಾ ದಾತಾರ್‌ ಈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿವಿಧ ತಂಡಗಳು ಜನಪದ ನೃತ್ಯ, ಯಕ್ಷನೃತ್ಯ, ಕಂಸಾಳೆ, ಕಾವ್ಯ ನೃತ್ಯ, ಕಥಕ್‌ ನೃತ್ಯ ಹೀಗೆ ಹಲವು ಪ್ರಕಾರಗಳ ನೃತ್ಯಪ್ರದರ್ಶನ ನೀಡಲಿವೆ. ಈ ನಾಟಕೋತ್ಸವದ ಎಲ್ಲ ಕಾರ್ಯಕ್ರಮಗಳೂ ಉಚಿತವಾಗಿರುತ್ತವೆ.ವಿಸ್ತರಣೆಯ ಹಂಬಲ

ಆವಿಷ್ಕಾರ ಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ವಿಸ್ತರಿಸಿಕೊಳ್ಳುವ ಹಂಬಲವೂ ಸಂಘಟಕರಿಗೆ ಇದೆ. ‘ಈಗಾಗಲೇ ಆವಿಷ್ಕಾರ ಸಂಘಟನೆಯನ್ನು ಬೇರೆ ಬೇರೆ ಜಿಲ್ಲೆಗಳಿಗೆ ವಿಸ್ತರಿಸಿದ್ದೇವಿ. ಅದನ್ನು ಇನ್ನೂ ಬಲಗೊಳಿಸಬೇಕು ಎಂಬ ಯೋಜನೆ ಇದೆ. ಅಲ್ಲದೇ ಮುಂದಿನ ದಿನಗಳಲ್ಲಿ ಕಾರ್ಯಾಗಾರಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಚನೆ ಇದೆ. ಈ ಸಲ ಮಹಾನ್‌ ವ್ಯಕ್ತಿಗಳ ಸೂಕ್ತಿಗಳ ನೂರು ಫಲಕಗಳ ಪ್ರದರ್ಶನವನ್ನು ರಾಜ್ಯದಾದ್ಯಂತ ಏರ್ಪಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅಲ್ಲದೇ ಮಕ್ಕಳ ರಂಗಭೂಮಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತದೆ’ ಎಂದು ವಿವರಿಸುತ್ತಾರೆ ಮಂಜುನಾಥ್‌.

*

ಆವಿಷ್ಕಾರ ನಾಟಕೋತ್ಸವದ ವಿವರಗಳು

‘ಜನಸಂಗೀತ’

ಸ್ಥಳ:
ಕೆ.ಜಿ.ಎಸ್‌. ಸಭಾಂಗಣ, ಕಬ್ಬನ್‌ ಉದ್ಯಾನ.

ಜ. 24ಕ್ಕೆ ಬೆಳಿಗ್ಗೆ 11.30.

ಸೌಹಾರ್ದತೆಯ ಸಂಗೀತ–ಪಂಡಿತ್‌ ನಾಗರಾಜ್‌ ಹವಾಲ್ದಾರ್‌, ರಂಗಗೀತೆಗಳು– ಆರ್‌.ಪರಮಶಿವನ್‌, ಆಧುನಿಕ ರಂಗಗೀತಗಳು– ರಾಮಚಂದ್ರ ಹಡಪದ್‌, ಪ್ರಗತಿಪರ ಗೀತೆಗಳು– ಸಂಗೀತಕಲಾ, ರಾಗ ಆತ್ಮಕಥನ– ಸುಮತಿ, ‘ಶರೀಫ’ ಮಾನವನ ಏಕತೆಗಾಗಿ ಶರೀಫರ ಪಯಣ, ಸಂಗೀತ ನಾಟಕ–ತಂಡ ಏಕತಾರಿ, ಮೈಸೂರು‘ಜನನಾಟ್ಯ’

ಸ್ಥಳ:
ಸೇವಾಸದನ, ಮಲ್ಲೇಶ್ವರ.

ಜ. 25, ಸಂಜೆ 6.

ಜಾನಪದ ನೃತ್ಯ, ಯಕ್ಷನೃತ್ಯ– ಶ್ರೀಪಾದ ಹೆಗ್ದೆ ತಂಡ, ಮಹಿಳಾ ಕಂಸಾಳೆ ನೃತ್ಯ, ನಿತ್ಯಾಂಜಲಿ– ಶಮಾ ಕೃಷ್ಣ ತಂಡ, ಕಾವ್ಯ–ನೃತ್ಯ– ಡಿವಿಜಿಯವರ ಗೀತೆ, ಹಾಡು ಕುಣಿ– ಬೇಂದ್ರೆಯವರ ಕವನ, ಕಥಕ್‌ ನೃತ್ಯ–ಬಸಂತ್‌ ತಂಡ, ನಾದಂ ಎನ್ಸೆಂಬೆಲ್‌

*

ರಂಗನಾಟಕಗಳು

ಸ್ಥಳ:
ಕೆ.ಇ.ಎ ಪ್ರಭಾತ್‌ ಕಲಾಭವನ, ಬಸವೇಶ್ವರನಗರ.

ಜ. 27 ಸಂಜೆ 6.30.

ರಂಗಗೀತೆಗಳು– ಶಾಂತಲಾ ಕಲಾವಿದರು ತಂಡದಿಂದ ‘ತೆರೆಯೋ ಬಾಗಿಲನು’. ಆವಿಷ್ಕಾರ ತಂಡದಿಂದ ‘ಪ್ರಸ್ತುತ ಷೇಕ್ಸ್‌ಪಿಯರ್‌’, ನಿರ್ದೇಶನ–ದಾಕ್ಷಾಯಿಣಿ ಭಟ್‌, ಪರಿಕಲ್ಪನೆ– ಬಿ.ಆರ್‌. ಮಂಜುನಾಥ್‌, ಪ್ರತಿಕ್ರಿಯೆ– ಸಂವಾದ– ವಿ.ಎನ್‌. ಲಕ್ಷ್ಮೀನಾರಾಯಣ.ಸ್ಥಳ: ಕೆ.ಎಚ್‌. ಕಲಾಸೌಧ, ಹನುಮಂತನಗರ. ಜ. 26 ಸಂಜೆ 6ಕ್ಕೆ,

ಹೋರಾಟದ ಹಾಡುಗಳು– ಆವಿಷ್ಕಾರ ತಂಡದಿಂದ. ‘ಅಗ್ನಿದಿವ್ಯ’ ನಾಟಕ ಪ್ರದರ್ಶನ. ನಿರ್ದೇಶನ– ಭಾನು, ರಚನೆ– ಬಿ.ಆರ್‌. ಮಂಜುನಾಥ್‌, ಪ್ರತಿಕ್ರಿಯೆ–ಸಂವಾದ– ಜಿ. ರಾಮಕೃಷ್ಣ, ಕೆ. ರಾಧಾಕೃಷ್ಣಸ್ಥಳ: ಸೇವಾಸದನ, ಮಲ್ಲೇಶ್ವರ. ಜ. 28 ಸಂಜೆ 6.30.

ರಂಗಗೀತೆಗಳು–  ತರಿಕಿಟ ತಂಡ. ‘ರೆಕ್ಕೆ ಕಟ್ಟುವಿರಾ’, ರಚನೆ– ಬಿ. ಸುರೇಶ್‌, ದು. ಸರಸ್ವತಿ, ಚಿತ್ರಾ. ಆವಿಷ್ಕಾರ ತಂಡದಿಂದ ‘ಮೋಜಿನ ಸೀಮೆಯಾಚೆ ಒಂದೂರು’, ನಿರ್ದೇಶನ– ಭಾನು

*

ಬೀದಿ ನಾಟಕಗಳು

ಸ್ಥಳ:
 ಸರ್ಕಾರಿ ಉರ್ದು ಶಾಲಾ ಮೈದಾನ, ಮಲ್ಲೇಶ್ವರ ಮೈದಾನದ ಎದುರು.ಜ.29 ಸಂಜೆ 5.30.

*‘ಇಸ್ಪೀಟ್‌ ರಾಜ್ಯ’ –ತಂಡ ಮಕ್ಕಳ ಮಂಟಪ, ಮೂಲ– ರವೀಂದ್ರನಾಥ ಟಾಗೂರ್‌, ರೂಪಾಂತರ– ಎನ್‌.ಎಸ್‌ ಲಕ್ಷ್ಮೀನಾರಾಯಣ ಭಟ್ಟ, ನಿರ್ದೇಶನ– ಮೈಟಿ ಗಿಬ್ಸನ್‌

* ‘ಕುಂಟಾ ಕುಂಟಾ ಕುರುವತ್ತಿ’–ತಂಡ– ಇಪ್ಟಾ, ರಚನೆ– ಚಂದ್ರಶೇಖರ ಪಾಟೀಲ, ನಿರ್ದೇಶ–ಶಶಿಕಾಂತ್‌ ಯಡವಳ್ಳಿ

* ಜ್ಞಾನಜ್ಯೋತಿ(ತೆಲಗು) ತಂಡ– ಶ್ರಾವಂತಿ ಸಾಂಸ್ಕೃತಿಕ ವೇದಿಕ, ರಚನೆ ಮತ್ತು ನಿರ್ದೇಶನ– ಭರತೇಶ್‌.

*ಡಮರುಗ ತಂಡದಿಂದ ನಾಟಕಜ.30 ಸಂಜೆ 5.30

* ‘ಹೊನ್ನಿರೋಗ’, ತಂಡ– ಅಂಕುರ, ಕಥೆ– ವಿನಯಾ ವಕ್ಕುಂದ, ನಾಟಕ ರೂಪಾಂತರ– ಸುಬ್ರಹ್ಮಣ್ಯ ಸ್ವಾಮಿ, ನಿರ್ದೇಶನ–ಪ್ರಮೋದ್‌ ಮಸ್ಕಿ

*‘ನೇಪಥ್ಯೆ’ (ಒರಿಯಾ)ತಂಡ– ಅನ್ಯದೃಷ್ಟಿ

* ‘ಮೆಡಿಕಲ್‌ ಮಾಫಿಯಾ’ ಅಭಿನಯ ತರಂಗ, ರಚನೆ ಮತ್ತು ನಿರ್ದೇಶನ– ಜಯತೀರ್ಥ

* ‘ಫ್ರಿಡ್ಜಲ್ಲಿ ಏನಿದೆ’,

ತಂಡ–ಸಮುದಾಯ, ರಚನೆ– ಎಸ್‌. ಮಂಜುನಾಥ್‌, ನಿರ್ದೇಶನ–ಶಶಿಧರ್‌ ಬಾರಿಘಾಟ್‌ಜ. 31 ಸಂಜೆ 5.30ಕ್ಕೆ

* ‘ಶವಗಳು ಕೇಳಿದ ಪ್ರಶ್ನೆಗಳು’, ತಂಡ– ಆವಿಷ್ಕಾರ, ನಿರ್ದೇಶನ– ಎಸ್‌.ಕೆ. ಶೆಟ್ಟಿ

*‘ಬದ್ನಾಮ್‌’(ಬಂಗಾಳಿ), ತಂಡ– ಚಾರಣಿಕ್‌

* ‘ಮಾ ನಿಷಾದ’ (ಮಲಯಾಳಂ), ತಂಡ– ಬ್ಯಾನರ್‌ ನಾಟಕ ಸಂಘ

* ‘ಪಾಂಚಾಲಿ ಶಪಥ’ (ಯಕ್ಷಗಾನ ಶೈಲಿ) , ತಂಡ ಕರ್ನಾಟಕ ಮಹಿಳಾ ಯಕ್ಷಗಾನನಾಟಕೋತ್ಸವದ ಕುರಿತು ಹೆಚ್ಚಿನ ವಿವರಗಳಿಗೆ www.aavishkaara.in ಜಾಲತಾಣಕ್ಕೆ ಭೇಟಿ ನೀಡಬಹುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.