ಸೋಮವಾರ, ಆಗಸ್ಟ್ 2, 2021
25 °C

ರಣಜಿ ಕ್ರಿಕೆಟ್: ಡ್ರಾ ಪಂದ್ಯದಲ್ಲಿ ಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾನ್ಪುರ: ಸ್ಟುವರ್ಟ್ ಬಿನ್ನಿ ಮತ್ತು ಗಣೇಶ ಸತೀಶ್ ಶತಕಗಳಿಂದ ಶನಿವಾರ ಸೃಷ್ಟಿಯಾದ ರನ್ನುಗಳ ಪ್ರವಾಹದಲ್ಲಿ ಉತ್ತರ ಪ್ರದೇಶ ತಂಡ ಕೊಚ್ಚಿಹೋಯಿತು!

ಕೈಫ್ ಬಳಗದ ಕ್ವಾರ್ಟರ್‌ಫೈನಲ್ ಕನಸನ್ನು ಶುಕ್ರವಾರವೇ ಭಗ್ನಗೊಳಿಸಿದ್ದ ಕರ್ನಾಟಕ ಇಡೀ ದಿನ ಬ್ಯಾಟಿಂಗ್ ಮಾಡಿ 4 ವಿಕೆಟ್‌ಗಳಿಗೆ 537 ರನ್ನು ಗಳಿಸಿ ಪಂದ್ಯ ಮುಗಿಸಿತು. ಡ್ರಾದಲ್ಲಿ ಮುಗಿದ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 97 ರನ್ನುಗಳ ಮುನ್ನಡೆ ಗಳಿಸಿದ್ದ ಕರ್ನಾಟಕ 3 ಮತ್ತು ಉತ್ತರ ಪ್ರದೇಶ ಒಂದು ಪಾಯಿಂಟ್ ಪಡೆದವು.ಭರ್ಜರಿ ಬ್ಯಾಟಿಂಗ್: ಕ್ವಾರ್ಟರ್‌ಫೈನಲ್ ಹಂತದಲ್ಲಿ ಘಟಾನುಘಟಿ ತಂಡಗಳ ವಿರುದ್ಧ ಸಿದ್ಧವಾಗಲು ಕೋಚ್ ಸನತ್‌ಕುಮಾರ ನೀಡಿದ ಸೂಚನೆಯನ್ನು ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಅಕ್ಷರಶಃ ಪಾಲಿಸಿದರು. ಉತ್ತರ ಪ್ರದೇಶಕ್ಕೆ ಎರಡನೇ ಇನಿಂಗ್ಸ್ ಬ್ಯಾಟಿಂಗ್‌ಗೆ ಇಳಿಯುವ ಅವಕಾಶವನ್ನೇ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ನೀಡಲಿಲ್ಲ. ಪ್ರಸಕ್ತ ಋತುವಿನಲ್ಲಿ ಎರಡನೇ ತಕ ದಾಖಲಿಸಿದ ಸ್ಟುವರ್ಟ್ ಬಿನ್ನಿ (ಅಜೇಯ 127; 157ಎಸೆತ, 13ಬೌಂಡರಿ, 3 ಸಿಕ್ಸರ್, 189ನಿಮಿಷ) ಮತ್ತು ಋತುವಿನ ಮೊದಲ ಶತಕ ಗಳಿಸಿದ ಗಣೇಶ ಸತೀಶ್ (ಅಜೇಯ 100; 157ಎಸೆತ, 12ಬೌಂಡರಿ, 207ನಿಮಿಷ) ಐದನೇ ವಿಕೆಟ್‌ಗೆ 237 ರನ್ನುಗಳ ಪಾಲುದಾರಿಕೆ ಆಟದಿಂದ ಆತಿಥೇಯರು ಸೋತು ಸುಣ್ಣವಾದರು.ಶುಕ್ರವಾರ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 178 ರನ್ ಗಳಿಸಿದ್ದ ಕರ್ನಾಟಕದ ಮೊತ್ತವನ್ನು ಬೆಟ್ಟದೆತ್ತರಕ್ಕೆ ಬೆಳೆಸುವ ಕೆಲಸವನ್ನು ಬೆಳಿಗ್ಗೆ ಎಡಗೈ ಬ್ಯಾಟ್ಸ್‌ಮನ್ ಅಮಿತ್ ವರ್ಮಾ (89; 136ಎಸೆತ, 15ಬೌಂಡರಿ, 1ಸಿಕ್ಸರ್, 182 ನಿಮಿಷ) ಮತ್ತು  ಮನೀಶ್ ಪಾಂಡೆ (50; 115ಎಸೆತ, 12ಬೌಂಡರಿ, 147ನಿಮಿಷ) ಬಿರುಸಿನಿಂದಲೇ ಆರಂಭಿಸಿದರು.ಮೊದಲೇ ಸುದೀಪ್ ತ್ಯಾಗಿ, ಆರ್.ಪಿ. ಸಿಂಗ್ ಮತ್ತು ಪ್ರವೀಣಕುಮಾರ ಬೌಲಿಂಗ್ ಸೇವೆಯಿಲ್ಲದೇ ಕಣಕ್ಕಿಳಿದಿದ್ದ ಆತಿಥೇಯರಿಗೆ ಕೊನೆಯ ದಿನ ಭುವನೇಶ್ವರಕುಮಾರ ಕೂಡ ಬೌಲಿಂಗ್ ಮಾಡದಿರುವುದು ಕಂಟಕವಾಯಿತು. ಅಮಿತ್ ವರ್ಮಾ ಮತ್ತು ಮನೀಶ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.ಫೀಲ್ಡಿಂಗ್‌ನಲ್ಲಿ ಗಣೇಶ್ ಸತೀಶ್ ಗಾಯಗೊಂಡಿದ್ದರಿಂದ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದ ಅಮಿತ್ ವರ್ಮಾ ಶತಕ ಬಾರಿಸುವ ಭರವಸೆ ಮೂಡಿಸಿದ್ದರು. ಇಡೀ ಋತುವಿನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ವರ್ಮಾಗೆ ಈ ಬಾರಿಯೂ ಅದೃಷ್ಟ ಕೈಕೊಟ್ಟಿತು. 89 ರನ್ ಗಳಿಸಿದ್ದಾಗ ಶಿವಕಾಂತ್ ಶುಕ್ಲಾ ಎಸೆತವನ್ನು ಕಟ್ ಮಾಡುವ ಯತ್ನದಲ್ಲಿ ಸ್ಲಿಪ್‌ನಲ್ಲಿದ್ದ ಕೈಫ್‌ಗೆ ಕ್ಯಾಚ್ ಆಗಿ ಹೊರ ನಡೆದರು. ಆಗ ತಂಡದ ಮೊತ್ತ 300ರ ಗಡಿ ಮುಟ್ಟಿತ್ತು. ಇದಕ್ಕೂ ಮುನ್ನ ಅರ್ಧಶತಕ ಗಳಿಸಿದ್ದ ಮನೀಶ್ ಪಾಂಡೆ ಶುಕ್ಲಾ ಬೌಲಿಂಗ್‌ನಲ್ಲಿ ಒಳನುಗ್ಗಿದ ಚೆಂಡಿನ ತಿರುವನ್ನು ಗುರುತಿಸಿದೇ ಕ್ಲೀನ್‌ಬೌಲ್ಡ್ ಆಗಿದ್ದರು.ಸ್ಟುವರ್ಟ್ ಸ್ಪೋಟ: ಕಾಲುನೋವಿನಿಂದ ಚೇತರಿಸಿಕೊಂಡು ಬಂದಿದ್ದ ಗಣೇಶ್ ಸತೀಶ್ ಜೊತೆ ಸೇರಿದ ಸ್ಟುವರ್ಟ್ ಬೌಲರ್‌ಗಳ ಮೇಲೆ ಗದಾಪ್ರಹಾರ ಆರಂಭಿಸಿದರು.ಊಟದ ವಿರಾಮಕ್ಕೆ 319 ಆಗಿದ್ದ ಮೊತ್ತ ಚಹಾ ವೇಳೆಗೆ 472ರ ಗಡಿ ಮುಟ್ಟಲು ಬಿನ್ನಿಯ ಆಟವೇ ಕಾರಣ.ಇನ್ನೊಂದು ಕಡೆ ಮೆಲ್ಲಗೆ ತಮ್ಮ ನೈಜ ಫಾರ್ಮ್‌ಗೆ ಮರಳುವ ಯತ್ನದಲ್ಲಿ ಗಣೇಶ್ ಇದ್ದರು. ಆದರೆ, ಬಿನ್ನಿ ಮಾತ್ರ ಬ್ಯಾಟ್ಸ್‌ಮನ್‌ಗಳ ಸ್ವರ್ಗದಂತಿದ್ದ ಪಿಚ್ ಮೇಲೆ  ‘ಕ್ರಿಸ್‌ಮಸ್’ ಸಂಭ್ರಮ ಆಚರಿಸಿದರು. ಗಣೇಶಗಿಂತ ಮುನ್ನವೇ ಅರ್ಧಶತಕದ ಗಡಿ ದಾಟಿದರು. ನಂತರವೂ ರನ್ನುಗಳ ಬೇಟೆ ಮುಂದುವರೆಸಿದರು. ಚಹಾದ ವೇಳೆಗೆ 96 ರನ್ ಗಳಿಸಿದ್ದ ಬಿನ್ನಿ ನಂತರ ಶುಕ್ಲಾ ಎಸೆತವನ್ನು ಸಿಕ್ಸರ್ ಎತ್ತುವ ಮೂಲಕ ಶತಕ ಪೂರೈಸಿದರು. ಇನ್ನೊಂದು ಕಡೆ ಅರ್ಧಶತಕ ಪೂರೈಸಿಕೊಂಡಿದ್ದ ಗಣೇಶ್ ಕೂಡ ಬೌಂಡರಿಗಳ ಬೇಟೆಯಲ್ಲಿ ನಿರತರಾಗಿದ್ದರು. ಪಟಪಟನೆ ರನ್ನುಗಳನ್ನು ಸೇರಿಸಿದರು.ಸ್ಕೋರು ವಿವರ:ಕರ್ನಾಟಕ 416 ಮತ್ತು 121 ಓವರುಗಳಲ್ಲಿ 4 ವಿಕೆಟ್‌ಗೆ 537

ಉತ್ತರಪ್ರದೇಶ 319

ಅಮಿತ್ ವರ್ಮಾ ಸಿ  ಕೈಫ್ ಬಿ ಶುಕ್ಲಾ  89

ಮನೀಶ್ ಪಾಂಡೆ ಬಿ ಶುಕ್ಲಾ  50

ಗಣೇಶ್ ಸತೀಶ್ ಅಜೇಯ  100

ಸ್ಟುವರ್ಟ್ ಬಿನ್ನಿ ಅಜೇಯ  127

(ಬೈ 21, ಲೆಗ್‌ಬೈ 18, ನೋಬಾಲ್ 9, ವೈಡ್ 6) ಇತರೆ:  54

ವಿಕೆಟ್ ಪತನ:  3-281 ( 65.5 ಪಾಂಡೆ), 4-300 (71.3 ವರ್ಮಾ).

ಬೌಲಿಂಗ್: ಶಲಭ್ ಶ್ರೀವಾಸ್ತವ 14-2-70-0 (ವೈಡ್ 4 ನೋಬಾಲ್1), ಭುವನೇಶ್ವರಕುಮಾರ 5-2-25-0, ಪಿಯೂಷ್ ಚಾವ್ಲಾ 25-3-88-0 (ನೋಬಾಲ್ 6), ಪ್ರವೀಣ್ ಗುಪ್ತಾ 34-7-120-0, ರೋಹಿತ್ ಚೌಧರಿ  21-1-99-2, ಶಿವಕಾಂತ್ ಶುಕ್ಲಾ 18-1-81-2

ಫಲಿತಾಂಶ: ಪಂದ್ಯ ಡ್ರಾ. ಪಾಯಿಂಟ್: ಕರ್ನಾಟಕ: 3, ಉತ್ತರ ಪ್ರದೇಶ: 1

ಪಂದ್ಯಶ್ರೇಷ್ಠ: ಸಿ.ಎಂ. ಗೌತಮ್

ಕ್ವಾರ್ಟರ್‌ಫೈನಲ್: ಡಿಸೆಂಬರ್ 24ರಿಂದ 27ರವರೆಗೆ: ಮಧ್ಯಪ್ರದೇಶದ ಎದುರು. ಸ್ಥಳ:  ಇಂದೋರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.