ಶನಿವಾರ, ಏಪ್ರಿಲ್ 17, 2021
33 °C

ರಣಬೀರ್-ದೀಪಿಕಾ ಮತ್ತೆ ಒಂದಾದ ಮೇಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಮ್ಮಸುಮ್ಮನೆ ತುಟಿಯನ್ನು ಮುಂದಕ್ಕೆ ಮಾಡಿ, ವಿಚಿತ್ರ ಮುಖಭಾವದಲ್ಲೇ ಏನನ್ನೋ ಹೇಳುವ ಸಿದ್ಧಾರ್ಥ ಮಲ್ಯ ಈ ಸಲದ ಐಪಿಎಲ್ ಕ್ರಿಕೆಟ್‌ನಲ್ಲಿ ಒಂಟಿಯಾಗಿಯೇ ನಿಂತು ಚಪ್ಪಾಳೆ ತಟ್ಟುತ್ತಿದ್ದರು.

 

ಅವರ ಪಕ್ಕ ದೀಪಿಕಾ ಪಡುಕೋಣೆ ಇರಲಿಲ್ಲ. ಹಿಂದೆ ಬೆಂಗಳೂರು ರಾಯಲ್ ಚಾಲೆಂಜರ್ಸ್‌ ತಂಡದ ವಿಜಯೋತ್ಸವಕ್ಕೆ ಚುಂಬನದ ರುಜು ಹಾಕಿದ್ದ ಆ ಜೋಡಿಯ ಕೊಂಡಿ ಕಳಚಿರುವುದು ಈಗ ಸುದ್ದಿಯೇ ಅಲ್ಲ. ಆದರೆ, ಹಿಂದೆ ಕಳಚಿಕೊಂಡಿದ್ದ ರಣಬೀರ್ ಜೊತೆಗಿನ ಕೊಂಡಿ ಮತ್ತೆ ಬೆಸೆದುಕೊಂಡಿದೆ ಎಂಬುದು ಸುದ್ದಿ. ದೀಪಿಕಾ-ರಣಬೀರ್ ಮತ್ತೆ ಒಂದಾಗಿದ್ದಾರೆಂದು ಬಿ-ಟೌನ್ ಮಾತನಾಡಿಕೊಳ್ಳುತ್ತಿದೆ.ಅಯನ್ ಮುಖರ್ಜಿ ಕನಸು ಕಟ್ಟಿಕೊಂಡು ಮಾಡುತ್ತಿರುವ `ಯೇ ಜವಾನಿ ಹೈ ದಿವಾನಿ~ ಸಿನಿಮಾದಲ್ಲಿ ರಣಬೀರ್-ದೀಪಿಕಾ ಜೋಡಿ. ಈ ಇಬ್ಬರನ್ನೂ ಮತ್ತೆ ಸೇರಿಸುವ ದುಸ್ಸಾಹಸಕ್ಕೆ ಅಯನ್ ಕೈಹಾಕಿದಾಗ ಆ ಸಿನಿಮಾ ಪೂರೈಸುವುದೇ ಇಲ್ಲ ಎಂದು ಕೆಲವರು ಕಿಚಾಯಿಸಿದರು. ಇನ್ನು ಕೆಲವರು ಸುಮ್ಮಸುಮ್ಮನೆ ಇಲ್ಲಸಲ್ಲದ್ದನ್ನು ಹೇಳುತ್ತಿದ್ದಾನೆ ಎಂದು ಕಟಕಿಯಾಡಿದರು. ಅಯಾನ್ ಈಗ ಅವರೆಲ್ಲರ ಬಾಯಿ ಮುಚ್ಚಿಸಿದ್ದಾರೆ.ಚಿತ್ರೀಕರಣ ಶುರುವಾಗಿ ತಿಂಗಳು ದಾಟಿದೆ. ಮೊದಮೊದಲು ದೀಪಿಕಾ, ರಣಬೀರ್ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಲೇ ಇರಲಿಲ್ಲ. ಅಯನ್ ಮೆಲ್ಲಗೆ `ಹೀಗೇ ಇದ್ದರೆ ಕೆಮಿಸ್ಟ್ರಿ ವರ್ಕ್‌ಔಟ್ ಆಗೋಲ್ಲ~ ಎಂದು ರಣಬೀರ್ ಕಿವಿಯಲ್ಲಿ ಹೇಳಿದ್ದಾರೆ. ಹೇಳಿಕೇಳಿ ರಣಬೀರ್ ವೃತ್ತಿಪರ.ವೈಯಕ್ತಿಕ ವಿಚಾರಗಳಿಂದ ಸಿನಿಮಾ ಹಾಳಾಗಕೂಡದೆಂಬುದು ಅವರ ಧೋರಣೆ. ದೀಪಿಕಾ ಬಳಿಗೆ ತಾವೇ ಧಾವಿಸಿ ಕೆಮಿಸ್ಟ್ರಿ ಏರ್ಪಡಿಸಿಕೊಳ್ಳುವ ಯತ್ನಕ್ಕೆ ಕೈಹಾಕಿ, ಯಶಸ್ವಿಯೂ ಆಗಿದ್ದಾರೆ.ರಣಬೀರ್ ಈಗ ಪಳಗಿದ ನಟ. ಅವಕಾಶ ಹಾಗೂ ಅಭಿನಯದಲ್ಲಿ ಆಗಿರುವ ಪಲ್ಲಟಗಳ ದೃಷ್ಟಿಯಿಂದ ದೀಪಿಕಾ ಅವರಿಗಿಂತ ಮುಂದು ಎನ್ನಬಹುದು. ಮೇಲಾಗಿ ಸಹಜ ಹಾಸ್ಯಪ್ರಜ್ಞೆ ಇರುವುದರಿಂದ ಸೆಟ್‌ನಲ್ಲಿ ಅವರ ಸಾಹಚರ್ಯ ಹಿತಕರ. ದೀಪಿಕಾ ಬರಬರುತ್ತಾ ರಣಬೀರ್ ಜೊತೆ ಸಹಜವಾಗಿ ವರ್ತಿಸತೊಡಗಿದರು. ಸಣ್ಣ ತಮಾಷೆಯಿಂದ ಹೊಮ್ಮಿದ ನಗು ದೊಡ್ಡ ಮಾತುಕತೆಗೆ ದಿಡ್ಡಿ ಬಾಗಿಲು ತೆರೆಯಿತು.ಇಬ್ಬರೂ ಪರಸ್ಪರ ಮಾತಾಡಿಕೊಂಡರು. ಹಿಂದೆ ತಾವು ಪ್ರೇಮಿಗಳಾಗಿದ್ದ ದಿನಗಳನ್ನು ಮೆಲುಕು ಹಾಕಿದರು. ಕಾದಾಡಿಕೊಂಡ ಕ್ಷಣಗಳನ್ನೂ ನೆನಪಿಸಿಕೊಂಡು ಕಣ್ಣಲ್ಲಿ ಹನಿ ತುಂಬಿಕೊಂಡರು. ಶಾಟ್‌ಗೆ ಕರೆದಾಗ ಕಣ್ಣಲ್ಲಿ ಕಣ್ಣಿಟ್ಟರು. `ಕಟ್~ ಎಂದ ನಂತರವೂ ಕಣ್ಣಾಟ ಮುಂದುವರಿಯಿತು. 

 

ವೀರೇಂದ್ರ ಸೆಹ್ವಾಗ್ ಕರೆದಿದ್ದ ಐಪಿಎಲ್ ನೈಟ್‌ಗೆ ಹೋಗಿ, ಒಂದೇ ಮೇಜಿನಲ್ಲಿ ಊಟ ಮಾಡಿಕೊಂಡು ಬಂದರು. ಕರಣ್ ಜೋಹರ್ ಹುಟ್ಟುಹಬ್ಬಕ್ಕೆ ಉದಯಪುರದಿಂದ ವಿಮಾನದಲ್ಲಿ ಹೋಗಿಬಂದರು. ಅಲ್ಲಿ ನೆರೆದಿದ್ದ ಮಾಧ್ಯಮಕ್ಕೆ ಚಳ್ಳೆಹಣ್ಣು ತಿನ್ನಿಸಿ ಇಬ್ಬರೂ ಬೇರೆ ಬೇರೆ ಕಾರುಗಳಲ್ಲಿ ಅಲ್ಲಿ ತಲುಪಿಕೊಂಡು, ಕಳ್ಳದಾರಿಯಲ್ಲೇ ಒಳಹೊಕ್ಕರು.ಮಗನ ಮೇಲಿನ ಮಮತೆಯಿಂದ ನೀತು ಸಿಂಗ್ ಏನಾದರೂ ತಿನಿಸು ಮಾಡಿಕೊಂಡು ಹೋದರೆ, ರಣಬೀರ್ ಈಗ ಅದನ್ನು ದೀಪಿಕಾ ಜೊತೆ ಹಂಚಿಕೊಂಡು ತಿನ್ನುವುದು ಮಾಮೂಲಾಗಿದೆ.ಇಷ್ಟೆಲ್ಲವೂ ಸಿನಿಮಾ ಸೆಟ್‌ನವರಿಂದ ಹೊಮ್ಮಿರುವ ಸರಕು. ಆದರೆ, ದೀಪಿಕಾ ಆಗಲೀ ರಣಬೀರ್ ಆಗಲೀ ಈ ವಿಷಯವನ್ನು ಎಲ್ಲೂ ಬಾಯಿ ಬಿಡುತ್ತಿಲ್ಲ. ಹಿಂದೆ ಇಬ್ಬರ ಪ್ರೇಮ ಜಗಜ್ಜಾಹೀರಾದ ಮೇಲೆ ಪರಸ್ಪರ ವೈಮನಸ್ಸು ಉಂಟಾಗಿತ್ತು. ಈ ಸಲ ಎಲ್ಲವೂ ಖಾಸಗಿಯಾಗಿಯೇ ಇರಲೆಂಬುದು ಕಟ್ಟೆಚ್ಚರವಂತೆ.ಸಿದ್ಧಾರ್ಥ ಮಲ್ಯ ಉಗುರು ಕಚ್ಚುವುದು ಮುಂದುವರಿದಿದೆ. ರಣಬೀರ್ ಬಿಡುವು ಮಾಡಿಕೊಂಡು ಜಾಹೀರಾತು ಚಿತ್ರೀಕರಣದಲ್ಲೂ ಆಗೀಗ ತೊಡಗಿಕೊಳ್ಳುತ್ತಾರೆ. ದೀಪಿಕಾ ಪಡುಕೋಣೆ ಕೈಲಿ ಅರ್ಧ ಡಜನ್ ಚಿತ್ರಗಳಿವೆ. ರಣಬೀರ್ ಜೊತೆ ಕುಣಿಯಲೂ ಅವರಿಗೀಗ ಮುಜುಗರವಿಲ್ಲ. ಇಬ್ಬರೂ ಒಂದಾಗಲು ತಮ್ಮ `ಕಾಫಿ ವಿತ್ ಕರಣ್ ಶೋ~ ಕಾರಣವಿರಬಹುದೆ ಎಂಬ ಜಿಜ್ಞಾಸೆ ಕರಣ್ ಜೋಹರ್ ಅವರದ್ದು.ಇಷ್ಟರ ನಡುವೆ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಮದುವೆ ಮುಂದಕ್ಕೆ ಹೋಗುತ್ತಲೇ ಇದೆ. ಬಾಲಿವುಡ್ ಮಂದಿಯ ಪ್ರೇಮದ ಪರಿ ಅರಿವಿನ ಪರಿಧಿಯನ್ನು ಮೀರಿದ್ದೇ ಹೌದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.