ಶನಿವಾರ, ಮೇ 15, 2021
26 °C

ರಮೇಶ್‌ಕುಮಾರ್ ವಿರುದ್ಧ ಅರಣ್ಯ ಸಂರಕ್ಷಣಾಧಿಕಾರಿ ನ್ಯಾಯಾಲಯ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಅವರು ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದಲ್ಲಿ 64.24 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿರುವ ಅರಣ್ಯ ಸಂರಕ್ಷಣಾಧಿಕಾರಿಯವರ ಮೇಲ್ಮನವಿ ಪ್ರಾಧಿಕಾರವು, 30 ದಿನಗಳೊಳಗೆ ಅತಿಕ್ರಮಣ ತೆರವು ಮಾಡುವಂತೆ ಮಾರ್ಚ್ 26ರಂದು ಆದೇಶ ಹೊರಡಿಸಿದೆ.ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಹಿರಿಯ ಸಲಹೆಗಾರ ಎಸ್.ಆರ್.ಹಿರೇಮಠ ಮತ್ತು ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಮಣಿಯನ್ ಅವರು, ಅರಣ್ಯ ಸಂರಕ್ಷಣಾಧಿಕಾರಿ ಅವರ ನ್ಯಾಯಾಲಯದ ಆದೇಶದ ವಿವರ ನೀಡಿದರು. ಆದೇಶದ ಪ್ರಕಾರ, ರಮೇಶ್‌ಕುಮಾರ್ ಅವರು ಒತ್ತುವರಿ ಭೂಮಿಯನ್ನು ಸರ್ಕಾರಕ್ಕೆ ಹಿಂದಿರುಗಿಸುವ ಮೂಲಕ ಮಾದರಿ ನಡವಳಿಕೆ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಹೋಬಳಿಯ ಜಿನಗಲಗುಂಟೆ ರಾಜ್ಯ ಅರಣ್ಯವು ಎಂಟು ಗ್ರಾಮಗಳಲ್ಲಿ ವ್ಯಾಪಿಸಿಕೊಂಡಿದ್ದು, 2,405.33 ಎಕರೆ ವಿಸ್ತೀರ್ಣ ಹೊಂದಿದೆ. ರಾಜ್ಯ ಅರಣ್ಯ ವ್ಯಾಪ್ತಿಗೆ ಬರುವ ಹೊಸಹುಡ್ಯ ಗ್ರಾಮದ ಸರ್ವೆ ನಂಬರ್ 1ರಲ್ಲಿ 9.10 ಎಕರೆ ಮತ್ತು ಸರ್ವೆ ನಂಬರ್ 2ರಲ್ಲಿ 52.29 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡ ಆರೋಪದ ಮೇಲೆ ರಮೇಶ್‌ಕುಮಾರ್ ವಿರುದ್ಧ 2006ರ ಜುಲೈ 15ರಂದು ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿ ಮೊಕದ್ದಮೆ ದಾಖಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಚಿಂತಾಮಣಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ರಮೇಶ್‌ಕುಮಾರ್ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು 2007ರ ಮಾರ್ಚ್ 13ರಂದು ಆದೇಶ ಹೊರಡಿಸಿದ್ದರು.ಈ ಆದೇಶ ಪ್ರಶ್ನಿಸಿ ರಮೇಶ್‌ಕುಮಾರ್ ಅವರು ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ನ್ಯಾಯಾಲಯ, ಒತ್ತುವರಿ ತೆರವಿಗೆ ಆದೇಶ ಹೊರಡಿಸಿತ್ತು. ನಂತರ ಅರ್ಜಿದಾರರ ಕೋರಿಕೆಯಂತೆ ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಜಂಟಿ ಸರ್ವೆಗೆ ಆದೇಶಿಸಲಾಗಿತ್ತು. ಹೊಸಹುಡ್ಯ ಗ್ರಾಮದ ಸರ್ವೆ ನಂಬರ್ 1ರಲ್ಲಿ 10 ಎಕರೆ 34 ಗುಂಟೆ ಮತ್ತು ಸರ್ವೆ ನಂಬರ್ 2ರಲ್ಲಿ 53 ಎಕರೆ 30 ಗುಂಟೆ ಅರಣ್ಯ ಭೂಮಿ ಒತ್ತುವರಿ ಆಗಿರುವುದು ಜಂಟಿ ಸರ್ವೆಯಲ್ಲಿ ಪತ್ತೆಯಾಗಿತ್ತು.ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ನ್ಯಾಯಾಲಯದ ತೀರ್ಮಾನ ಪ್ರಶ್ನಿಸಿ ಒತ್ತುವರಿದಾರರು ಅರಣ್ಯ ಸಂರಕ್ಷಣಾಧಿಕಾರಿಯವರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿದಾರರು ಮತ್ತು ಪ್ರತಿವಾದಿಗಳ ವಾದವನ್ನು ಆಲಿಸಿದ ಬಳಿಕ ಬೆಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ ಪುಷ್ಕರ ಅವರು ಮಾ.26ರಂದು ಆದೇಶ ಪ್ರಕಟಿಸಿದ್ದಾರೆ.`ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಹೋಬಳಿಯ ಹೊಸಹುಡ್ಯ ಗ್ರಾಮದ ಸರ್ವೆ ನಂಬರ್ 1ರಲ್ಲಿ 10 ಎಕರೆ 34 ಗುಂಟೆ ಮತ್ತು ಸರ್ವೆ ನಂಬರ್ 2ರಲ್ಲಿ 53 ಎಕರೆ 30 ಗುಂಟೆ ಅರಣ್ಯ ಭೂಮಿಯನ್ನು ಕೆ.ಆರ್.ರಮೇಶ್‌ಕುಮಾರ್ ಅವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಭೂಮಿಯನ್ನು ಅಲ್ಲಿರುವ ಸ್ಥಿರ ಮತ್ತು ಚರ ಆಸ್ತಿಗಳ ಸಮೇತ ಅವರು ಅರಣ್ಯ ಇಲಾಖೆಗೆ ವಹಿಸಿಕೊಟ್ಟು, ಆದೇಶ ಪ್ರಕಟವಾದ 30 ದಿನಗಳೊಳಗೆ ಒತ್ತುವರಿ ತೆರವು ಮಾಡಿ ಹೊರಹೋಗಬೇಕು~ ಎಂದು ಆದೇಶದಲ್ಲಿ ತಿಳಿಸಿದ್ದಾರೆ.ತಕ್ಷಣ ತೆರವಿಗೆ ಆಗ್ರಹ: ಅರಣ್ಯ ಸಂರಕ್ಷಣಾಧಿಕಾರಿಯವರ ಆದೇಶದ ಪ್ರತಿ ಪ್ರದರ್ಶಿಸಿದ ಹಿರೇಮಠ ಮತ್ತು ಬಾಲಸುಬ್ರಮಣಿಯನ್ ಅವರು, `ರಮೇಶ್‌ಕುಮಾರ್ ಅವರು ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿರುವವರು. ರಾಜ್ಯ ವಿಧಾನಸಭೆಯ ಅಧ್ಯಕ್ಷರ ಸ್ಥಾನವನ್ನೂ ನಿರ್ವಹಿಸಿದವರು. ಅರಣ್ಯ ಭೂಮಿ ಕಬಳಿಕೆಯಂತಹ ಗಂಭೀರ ಸ್ವರೂಪದ ಆರೋಪ ಅವರ ಮೇಲಿದೆ. ತಕ್ಷಣವೇ ಅರಣ್ಯ ಭೂಮಿಯನ್ನು ಇಲಾಖೆಗೆ ಹಿಂದಿರುಗಿಸುವ ದೊಡ್ಡತನ ಪ್ರದರ್ಶಿಸಬೇಕು~ ಎಂದು ಆಗ್ರಹಿಸಿದರು.`ಈ ಹಿಂದೆ ಹಲವು ಬಾರಿ ಒತ್ತುವರಿ ತೆರವಿಗೆ ಆದೇಶ ನೀಡಲಾಗಿತ್ತು. ಆದರೆ, ರಮೇಶ್‌ಕುಮಾರ್ ಅವರು ರಾಜಕೀಯ ಪ್ರಭಾವ ಬಳಸಿ ಆದೇಶ ಜಾರಿಯಾಗದಂತೆ ಮಾಡಿದ್ದರು. ಈಗ ಬೆಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಯವರು ಸುದೀರ್ಘಕಾಲ ವಿಚಾರಣೆ ನಡೆಸಿ ಆದೇಶ ಪ್ರಕಟಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಅರಣ್ಯ ಸಂರಕ್ಷಣಾಧಿಕಾರಿಯವರ ನ್ಯಾಯಾಲಯಕ್ಕೆ ತಲೆಬಾಗಬೇಕು~ ಎಂದು ಒತ್ತಾಯಿಸಿದರು.ಮಹತ್ವದ ವಿಚಾರಣೆ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿರುವ ಅರ್ಜಿಗಳ ಬಗ್ಗೆ ಇದೇ 11ರಂದು ಸುಪ್ರೀಂಕೋರ್ಟ್‌ನ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ವಿಚಾರಣೆ ನಡೆಸಲಿದೆ. ಇದೇ 13ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಎರಡೂ ವಿಚಾರಣೆಗಳು ರಾಜ್ಯದ ಪಾಲಿಗೆ ಅತ್ಯಂತ ಮಹತ್ವದ್ದಾಗಿವೆ ಎಂದು ಹಿರೇಮಠ ಹೇಳಿದರು.`ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಂದಾಲ್ ಸಮೂಹದಿಂದ ಲಂಚ ಪಡೆದಿದ್ದಾರೆ ಎಂಬ ಆರೋಪವೂ ಸೇರಿದಂತೆ ಕೆಲವು ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೋರಿ ನಾವು ಸಲ್ಲಿಸಿರುವ ಅರ್ಜಿಯ ಬಗ್ಗೆ ಸಿಇಸಿ ವಿಚಾರಣೆ ನಡೆಸಲಿದೆ.ನಂತರ ಇದೇ ವಿಷಯಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. ಅರ್ಜಿಯಲ್ಲಿ ಉಲ್ಲೇಖಿಸಿರುವ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಎರಡೂ ವಿಚಾರಣೆಗಳಲ್ಲಿ ನಾವು ಬಲವಾದ ವಾದ ಮಂಡಿಸಲು ಸಿದ್ಧತೆ ನಡೆಸಿದ್ದೇವೆ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.