ರವೀಂದ್ರ ವರ್ಗ: ಪ್ರಕರಣ ಸಿಐಡಿಗೆ

ಬೆಂಗಳೂರು:ಹೋಟೆಲ್ನಲ್ಲಿ ಮೊಬೈಲ್ನಿಂದ ಯುವತಿಯ ಆಕ್ಷೇಪಾರ್ಹ ಛಾಯಾಚಿತ್ರ ತೆಗೆದ ಆರೋಪ ಎದುರಿಸುತ್ತಿರುವ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್ಆರ್ಪಿ) ಎಡಿಜಿಪಿ ಡಾ.ಪಿ.ರವೀಂದ್ರನಾಥ್ ಅವರನ್ನು ಸರ್ಕಾರ ಬುಧವಾರ ರಾತ್ರಿ ವರ್ಗಾವಣೆ ಮಾಡಿದ್ದು, ಪ್ರಕರಣ ಸಂಬಂಧ ಸಿಐಡಿ ತನಿಖೆಗೆ ಆದೇಶ ಹೊರಡಿಸಿದೆ.
ರವೀಂದ್ರನಾಥ್ ಅವರ ಸ್ಥಾನಕ್ಕೆ ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಎಡಿಜಿಪಿ ಎನ್.ಎಸ್.ಮೇಘರಿಕ್ ಅವರನ್ನು ನಿಯೋಜಿಸಿದೆ. ರವೀಂದ್ರನಾಥ್ ಅವರಿಗೆ ಯಾವುದೇ ಸ್ಥಳ ನಿಯುಕ್ತಿಗೊಳಿಸಿಲ್ಲ.
ಕೆಎಸ್ಆರ್ಪಿ ಸಿಬ್ಬಂದಿ ರವೀಂದ್ರನಾಥ್ ಅವರಿಗೆ ನೈತಿಕ ಬೆಂಬಲ ಸೂಚಿಸಿ ನಗರದ ಕೋರಮಂಗಲದಲ್ಲಿ ಬುಧವಾರ ಸಂಜೆ ರಸ್ತೆಗಿಳಿದು ಐದು ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ಮಾಡಿದರು. ಸರ್ಜಾಪುರ ರಸ್ತೆಯಲ್ಲಿ ಟಯರ್ಗಳನ್ನು ಸುಟ್ಟು ಮತ್ತು ರಸ್ತೆ ತಡೆ ಮಾಡಿ ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
![]() |
ಡಿಜಿಪಿ ಡಾ.ಪಿ.ರವೀಂದ್ರನಾಥ್ |
ಕಮಿಷನರ್ ಷಡ್ಯಂತ್ರ: ‘ಬೆಂಗಳೂರು ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ಅವರು ವಿನಾಕಾರಣ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ’ ಎಂದು ರವೀಂದ್ರನಾಥ್ ನೇರ ಆರೋಪ ಮಾಡಿದ್ದಾರೆ.
ಪ್ರಕರಣ ಸಂಬಂಧ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ನಾನು ಯಾವುದೇ ತಪ್ಪು ಮಾಡಿಲ್ಲ. ಆದರೂ ಕಮಿಷನರ್ ಔರಾದಕರ್, ಬೆಂಗಳೂರು ನಗರ ಕೇಂದ್ರ ವಿಭಾಗದ ಡಿಸಿಪಿ ರವಿಕಾಂತೇಗೌಡ, ಹೈಗ್ರೌಂಡ್ಸ್ ಠಾಣೆ ಎಸ್ಐ ರವಿ ಹಾಗೂ ಇಲಾಖೆಯ ಕೆಲ ಹಿರಿಯ ಅಧಿಕಾರಿಗಳು ಪಿತೂರಿ ನಡೆಸಿ ನನ್ನನ್ನು ಬಲಿಪಶು ಮಾಡಿದ್ದಾರೆ’ ಎಂದು ದೂರಿದರು.
‘ನಾನು ಆಗಾಗ್ಗೆ ಕನ್ನಿಂಗ್ಹ್ಯಾಂ ರಸ್ತೆಯ ಓ ಬೋ ಪೆ ಹೋಟೆಲ್ಗೆ ಹೋಗುವ ಬಗ್ಗೆ ಔರಾದಕರ್ ಮತ್ತಿತರರಿಗೆ ಮೊದಲೇ ಮಾಹಿತಿ ಇತ್ತು. ಅವರು ಆ ಮಾಹಿತಿ ಆಧರಿಸಿ ವ್ಯವಸ್ಥಿತವಾಗಿ ಸಂಚು ರೂಪಿಸಿ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಈ ಸಂಬಂಧ ನ್ಯಾಯಾಂಗ ತನಿಖೆಯಾಗಬೇಕು. ಆಗ ಮಾತ್ರ ಸತ್ಯಾಂಶ ಹೊರ ಬರುತ್ತದೆ’ ಎಂದು ಗದ್ಗದಿತರಾದರು.
‘ಔರಾದಕರ್, ಆಡಳಿತ ವಿಭಾಗದ ಎಡಿಜಿಪಿ ಅಲೋಕ್ಮೋಹನ್ ಸೇರಿದಂತೆ ಕೆಲವೇ ಹಿರಿಯ ಅಧಿಕಾರಿಗಳ ಹಿಡಿತದಲ್ಲಿ ಇಲಾಖೆ ನಡೆಯುತ್ತಿದೆ. ಸರ್ಕಾರದ ಮಟ್ಟದಲ್ಲಿ ಪ್ರಭಾವಿಗಳಾಗಿರುವ ಆ ಅಧಿಕಾರಿಗಳು ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮಾ ಪಚಾವೊ ಅವರಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಬಿಡುತ್ತಿಲ್ಲ. ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯಾಗಿರುವ ಪಚಾವೊ ಅವರು ಇಲಾಖೆಯ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಔರಾದಕರ್ ಮತ್ತು ಅಲೋಕ್ಮೋಹನ್ ಅವರನ್ನು ಸಂಪರ್ಕಿಸಿಯೇ ನಿರ್ಧಾರ ಕೈಗೊಳ್ಳಬೇಕಾದ ಪರಿಸ್ಥಿತಿ ಇದೆ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿಯಾಗಿದ್ದ ಸಂದರ್ಭದಲ್ಲಿ ಇಲಾಖೆಯ ಕಾರ್ಯ ಚಟುವಟಿಕೆಗಳ ಬಗ್ಗೆಯಷ್ಟೇ ಮಾಹಿತಿ ಪಡೆದುಕೊಂಡರು. ಪ್ರಕರಣದ ಬಗ್ಗೆ ಮುಖ್ಯಮಂತ್ರಿಗಳು ನನ್ನಿಂದ ಯಾವುದೇ ವಿವರಣೆ ಕೇಳಲಿಲ್ಲ’ ಎಂದು ಹೇಳಿದರು.
ಜಿದ್ದು ಸಾಧಿಸುತ್ತಿದ್ದಾರೆ: ‘1997–98ರ ಸಂದರ್ಭದಲ್ಲಿ ಗುಲ್ಬರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಔರಾದಕರ್ ಅವರನ್ನು ಸರ್ಕಾರ ಬೇರೆಡೆಗೆ ವರ್ಗಾವಣೆ ಮಾಡಿ ನನ್ನನ್ನು ಆ ಹುದ್ದೆಗೆ ನಿಯೋಜಿಸಿತ್ತು. ನಂತರ ನಾನು ಅಧಿಕಾರ ವಹಿಸಿಕೊಂಡು ರಹಸ್ಯ ವೆಚ್ಚದ (ಸಿಕ್ರೇಟ್ ಫಂಡ್) ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಹಿಂದಿನ ಎಸ್ಪಿ ಔರಾದಕರ್ ಅವರ ಅಧಿಕಾರಾವಧಿಯಲ್ಲಿ ರಹಸ್ಯ ವೆಚ್ಚದಲ್ಲಿ ವ್ಯತ್ಯಾಸವಾಗಿರುವುದು ಗೊತ್ತಾಯಿತು. ಆ ಬಗ್ಗೆ ಆಗಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದೆ. ಆ ನಂತರ ಔರಾದಕರ್ ಅವರು ನನಗೆ ದೂರವಾಣಿ ಕರೆ ಮಾಡಿ, ರಹಸ್ಯ ವೆಚ್ಚದಲ್ಲಿನ ವ್ಯತ್ಯಾಸವನ್ನು ಭರಿಸುವುದಾಗಿ ಹೇಳಿದ್ದರು. ಆಗಿನಿಂದಲೂ ಅವರು ನನ್ನ ವಿರುದ್ಧ ಜಿದ್ದು ಸಾಧಿಸುತ್ತಿದ್ದಾರೆ’ ಎಂದು ತಿಳಿಸಿದರು.
‘ನಕ್ಸಲ್ ಮುಖಂಡ ಸಾಕೇತ್ ರಾಜನ್ ಎನ್ಕೌಂಟರ್ ನಡೆದ ಸಂದರ್ಭದಲ್ಲಿ ಗುಪ್ತಚರ ಇಲಾಖೆ ಡಿಐಜಿಯಾಗಿದ್ದ ಔರಾದಕರ್ ಅವರು ಆಂಧ್ರಪ್ರದೇಶ ಮೂಲದ ನನ್ನನ್ನು ಹಲವು ಬಾರಿ ತಮ್ಮ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದರು. ನನ್ನ ವಿದ್ಯಾಭ್ಯಾಸ, ಹುಟ್ಟೂರು, ಕೌಟುಂಬಿಕ ಹಿನ್ನೆಲೆ ಮತ್ತಿತರ ವೈಯಕ್ತಿಕ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಸಾಕೇತ್ ರಾಜನ್ ಶವದ ಬಳಿ ಪತ್ತೆಯಾಗಿದ್ದ ಡಿಜಿಟಲ್ ಡೈರಿಯಲ್ಲಿ ನನ್ನ ಮೊಬೈಲ್ ಸಂಖ್ಯೆ ಇತ್ತು ಎಂದು ಹೇಳಿ ನನ್ನನ್ನು ನಕ್ಸಲ್ ಎಂಬಂತೆ ಬಿಂಬಿಸಲು ಯತ್ನಿಸಿದ್ದರು’ ಎಂದು ಆರೋಪಿಸಿದರು.
ನ್ಯಾಯಾಂಗ ತನಿಖೆಯಾಗಬೇಕು
ಬುಧವಾರ ಇಡೀ ದಿನ ವಿವಿಧ ಸುದ್ದಿ ವಾಹಿನಿಗಳಲ್ಲಿ ಸಂವಾದದಲ್ಲಿ ಪಾಲ್ಗೊಂಡಿದ್ದ ರವೀಂದ್ರನಾಥ್ ಅವರು ಪೊಲೀಸ್ ಇಲಾಖೆಯ ಆಡಳಿತಾತ್ಮಕ ವಿಷಯಗಳನ್ನೆಲ್ಲಾ ಬಹಿರಂಗವಾಗಿ ಚರ್ಚಿಸಿದರು.
ಇದೇ ವೇಳೆ ದೂರವಾಣಿ ನೇರ ಸಂಪರ್ಕದಲ್ಲಿ ಗೃಹ ಸಚಿವ ಕೆ.ಜೆ.ಜಾರ್ಜ್ ಅವರೊಂದಿಗೆ ಮಾತನಾಡಿ, ‘ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆ ನಡೆಸಿ’ ಎಂದು ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಪ್ರತಿಕ್ರಿಯಿಸುವುದಿಲ್ಲ
‘ಆರೋಪದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಪ್ರಕರಣದ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸೂಕ್ತ ಸಮಯದಲ್ಲಿ ಆರೋಪಿಯನ್ನು ಬಂಧಿಸಲಿದ್ದಾರೆ. ತನಿಖೆ ವಿಷಯವಾಗಿ ಸಿಬ್ಬಂದಿ ಮೇಲೆ ಯಾವುದೇ ಒತ್ತಡ ಹೇರಿಲ್ಲ’.
– ರಾಘವೇಂದ್ರ ಔರಾದಕರ್,ಬೆಂಗಳೂರು ನಗರ ಪೊಲೀಸ್ ಕಮಿಷನರ್
ಸರ್ಕಾರವೇ ತೀರ್ಮಾನಿಸಬೇಕು
‘ಎಡಿಜಿಪಿ ರವೀಂದ್ರನಾಥ್ ಅವರು ಕೊಟ್ಟಿರುವ ರಾಜೀನಾಮೆಯ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ನನಗೆ ಇಲ್ಲ. ಆ ಬಗ್ಗೆ ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕು. ಇನ್ಸ್ಪೆಕ್ಟರ್ ಮತ್ತು ಆ ಹುದ್ದೆಗಿಂತ ಕೆಳಗಿನ ಹಂತದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಅಧಿಕಾರ ಮಾತ್ರ ನನಗಿದೆ’.
– ಲಾಲ್ ರೋಕುಮಾ ಪಚಾವೊ, ರಾಜ್ಯ ಪೊಲೀಸ್ ಮಹಾನಿರ್ದೇಶಕರು
ದಿನದ ಬೆಳವಣಿಗೆ
*ಮಧ್ಯಾಹ್ನ 1.20: ನಗರ ಪೊಲೀಸ್ ಕಮಿಷನರ್ ಕಚೇರಿಗೆ ರವೀಂದ್ರನಾಥ್ ಭೇಟಿ
*ಮಧ್ಯಾಹ್ನ 1.45: ಕಮಿಷನರ್ ಔರಾದಕರ್ ಮತ್ತು ರವೀಂದ್ರನಾಥ್ ಡಿಜಿಪಿ ಕಚೇರಿಗೆ ಆಗಮನ
*ಸಂಜೆ 5.30: ಕೆಎಸ್ಆರ್ಪಿ ಸಿಬ್ಬಂದಿ ಪ್ರತಿಭಟನೆ
*ರಾತ್ರಿ 9.30: ಸರ್ಕಾರದಿಂದ ರವೀಂದ್ರನಾಥ್ ವರ್ಗಾವಣೆ ಮತ್ತು ಸಿಐಡಿ ತನಿಖೆಗೆ ಆದೇಶ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.