ಮಂಗಳವಾರ, ಜೂನ್ 22, 2021
27 °C

ರಷ್ಯ: ಪುಟಿನ್‌ಗೆ ಭಾರಿ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |
ಮಾಸ್ಕೊ (ಪಿಟಿಐ): ಚುನಾವಣಾ ಅಕ್ರಮಗಳ ತೀವ್ರ ಆರೋಪದ ಹೊರತಾಗಿಯೂ ರಷ್ಯ ಪ್ರಧಾನಿ ವ್ಲಾಡಿಮಿರ್ ಪುಟಿನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮೂರನೇ ಬಾರಿಗೆ ಪ್ರಚಂಡ ಗೆಲುವು ಸಾಧಿಸಿದ್ದಾರೆ.

ಚಲಾವಣೆಯಾದ ಒಟ್ಟು ಮತದಲ್ಲಿ ಸುಮಾರು ಶೇ 64ರಷ್ಟು ಮತಗಳನ್ನು ಪುಟಿನ್ ಗಳಿಸಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.`ಭಾನುವಾರ ನಡೆದ ಚುನಾವಣೆಯ ಫಲಿತಾಂಶದ ಪ್ರಾಥಮಿಕ ಅಂಕಿಅಂಶಗಳ ಪ್ರಕಾರ ವಾಡ್ಲಿಮಿರ್ ವಾಡ್ಲಿಮಿರೊವಿಚ್ ಪುಟಿನ್ ಅವರು ಆಯ್ಕೆ ಆಗಿದ್ದಾರೆ~ ಎಂದು ಚುನಾವಣಾ ಆಯೋಗ ಹೇಳಿದೆ. ಕ್ರೆಮ್ಲಿನ್ ಹೊರಭಾಗದಲ್ಲಿ ರಾಷ್ಟ್ರದ ಬಾವುಟ ಮತ್ತು ಫಲಕಗಳನ್ನು ಹಿಡಿದು ಭಾರಿ ಸಂಖ್ಯೆಯಲ್ಲಿ ಸೇರಿದ್ದ ಸಂಯುಕ್ತ ರಷ್ಯ ಪಕ್ಷದ ಬೆಂಬಲಿಗರೊಂದಿಗೆ ಗೆಲುವಿನ ಸಂಭ್ರಮವನ್ನು ಹಂಚಿಕೊಂಡ  ಪುಟಿನ್, `ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆದ ಸಮರದಲ್ಲಿ ಪ್ರಾಮಾಣಿಕವಾಗಿ ಜಯ ಸಾಧಿಸಿದ್ದೇವೆ~ ಎಂದಿದ್ದಾರೆ.`ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆ ನೀಡಿದ್ದೆ. ಅದರಂತೆ ಜಯ ಸಾಧಿಸಿದ್ದೇವೆ. ಇದು ರಾಷ್ಟ್ರದ ಯಶಸ್ಸು~ ಎಂದು ಭಾವುಕರಾಗಿ ಕಣ್ಣೀರು ಹಾಕುತ್ತಿದ್ದ ಪುಟಿನ್ ಹೇಳಿದ್ದಾರೆ.ಇದು (ಗೆಲುವು) ನಮಗೆ ಹೆಮ್ಮೆ ತಂದಿದೆ. ಯಾರೊಬ್ಬರೂ ನಮ್ಮ ಮೇಲೆ ಏನನ್ನೂ ಹೇರಲಾಗದು~ ಎಂದ ಪುಟಿನ್,  ತಮ್ಮ ಟೀಕಾಕಾರರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.ಈ ಫಲಿತಾಂಶವನ್ನು ಒಪ್ಪದ ಪುಟಿನ್ ವಿರೋಧಿಗಳು, ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆಸಲಾಗಿದೆ ಎಂದು ಆಪಾದಿಸಿದ್ದಾರೆ. ಈ ಫಲಿತಾಂಶವು ಯುರೋಪ್ ರಾಷ್ಟ್ರಗಳ ಭದ್ರತೆ ಮತ್ತು ಸಹಕಾರ ಒಕ್ಕೂಟದ (ಒಎಸ್‌ಸಿಇ) ಮೇಲೆ ಪರಿಣಾಮ ಬೀರುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ರಾಜಕೀಯ ವಿಶ್ಲೇಷಕರು ಅಧ್ಯಕ್ಷೀಯ ಚುನಾವಣೆಗೆ ನಡೆದ ಪ್ರಚಾರಾಂದೋಲನವು `ಪುಟಿನ್ ಅವರಿಗೆ ಅನುಕೂಲವಾಗುವಂತೆಯೇ ಇತ್ತು~ ಎಂದು ಹೇಳಿದ್ದಾರೆ.

 

ಪುಟಿನ್ ಅವರ ಸಮೀಪ ಪ್ರತಿಸ್ಪರ್ಧಿ ಕಮ್ಯುನಿಸ್ಟ್ ಪಕ್ಷದ ಗೆನ್ನಡಿ ಜೈಯುಗನಾವ್ ಶೇ 17.17ರಷ್ಟು ಮತವನ್ನು ಮಾತ್ರ ಗಳಿಸಿದ್ದಾರೆ. ಅವರು ನಾಲ್ಕನೇ ಬಾರಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಶೇ 7.82ರಷ್ಟು ಮತಗಳಿಸಿರುವ ಬಹು ದೊಡ್ಡ ಉದ್ದಿಮೆದಾರರೂ ಆದ ರಾಜಕಾರಣಿ ಮೈಕಲ್ ಪ್ರೊಖೊರೊವ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.`ಈ ಫಲಿತಾಂಶ ಸ್ವೀಕಾರಾರ್ಹವಲ್ಲ. ಚುನಾವಣೆ ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆದಿಲ್ಲ. ಆದ್ದರಿಂದ ನಾನು ಯಾರಿಗೂ ಶುಭ ಕೋರುವುದಿಲ್ಲ~ ಎಂದು ಗೆನ್ನಡಿ ಜೈಯುಗನಾವ್ ಪ್ರತಿಕ್ರಿಯೆ ನೀಡಿದ್ದಾರೆ.ಭಾನುವಾರ ಮಧ್ಯ ರಾತ್ರಿಯ ಹೊತ್ತಿಗೆ ತಮ್ಮ ಗೆಲುವು ಖಚಿತ ಎಂದು ಗೊತ್ತಾದ ಕೂಡಲೇ ಪುಟಿನ್, ಹಾಲಿ ಅಧ್ಯಕ್ಷ  ಡಿಮಿಟ್ರಿ ಮೆಡ್ವೆಡೆವ್ ಅವರನ್ನು ಭೇಟಿಯಾಗಿ ತಮ್ಮನ್ನು ಬೆಂಬಲಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ರಷ್ಯದ ಗುಪ್ತಚರ ಇಲಾಖೆ ಕೆಜಿಬಿ ಮಾಜಿ ಬೇಹುಗಾರರಾದ 59 ವರ್ಷ ವಯಸ್ಸಿನ ಪುಟಿನ್ 2000-2008ರ ಅವಧಿಯಲ್ಲಿ ಸತತ ಎರಡು ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದರು.ವಿರೋಧ ಪಕ್ಷಗಳು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲು ಯೋಜನೆ ನಡೆಸಿದ್ದ ಕಾರಣ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಪೊಲೀಸರು ರಾಜಧಾನಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಿದರು.

ಅಂತರಿಕ್ಷದಿಂದಲೇ ಮತ ಚಲಾವಣೆ!

ಭಾನುವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮೂವರು ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದಲೇ ಮತ ಚಲಾಯಿಸಿದ್ದಾರೆ ಎಂದು ರಷ್ಯದ ಬಾಹ್ಯಾಕಾಶ ಇಲಾಖೆ ಹೇಳಿದೆ.
ಮಾಹಿತಿ ಕಳ್ಳರ ಲಗ್ಗೆ

ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಹೊರಬೀಳುವ ಹೊತ್ತಿನಲ್ಲಿ ರಷ್ಯ ಕೇಂದ್ರೀಯ ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಮಾಹಿತಿ ಕಳ್ಳರು (ಹ್ಯಾಕರ್ಸ್‌) ಲಗ್ಗೆ ಇಟ್ಟು ಮಾಹಿತಿ ಕಳವಿಗೆ ಪ್ರಯತ್ನಿಸಿದ್ದಾರೆ.

ಆದರೆ,  ಸರ್ವರ್‌ಗಳಿಗೆ ತೊಂದರೆ ಆಗಿಲ್ಲ~ ಎಂದು ಚುನಾವಣಾ ಆಯೋಗದ ಉಪ ಮುಖ್ಯಸ್ಥರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.