ಭಾನುವಾರ, ಮೇ 22, 2022
22 °C

ರಸಗೊಬ್ಬರ ದರ ಗಗನಕ್ಕೆ: ರೈತರು ಕಂಗಾಲು

ಎಂ.ಜಿ.ಬಾಲಕೃಷ್ಣ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲಾ ವಿಶೇಷ ವರದಿ: ದಕ್ಷಿಣ ಕನ್ನಡ

ಮಂಗಳೂರು: ರೂಪಾಯಿ ಅಪಮೌಲ್ಯ ಆಗಿರುವುದರ ನೇರ ಪರಿಣಾಮವು ರಸಗೊಬ್ಬರ ದರ ಏರಿಕೆಯ ರೂಪದಲ್ಲಿ ರೈತರ ಮೇಲೆ ನೇರವಾಗಿ ಆಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಹುತೇಕ ಎಲ್ಲಾ ರಸಗೊಬ್ಬರಗಳ ಬೆಲೆ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ.ಜತೆಗೆ ಈ ಬಾರಿ ಮೇ ತಿಂಗಳಲ್ಲಿ ಮಳೆ ಬಾರದೆ ಇದ್ದುದರಿಂದ ಬಿತ್ತನೆ ಕಾರ್ಯಕ್ಕೆ ತೀವ್ರ ಹಿನ್ನಡೆ ಉಂಟಾಗಿದ್ದು, ಒಟ್ಟಾರೆ ಬೇಸಾಯದ ಮೇಲೆ ಈ ಎರಡೂ ಸಂಗತಿಗಳು ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ.ರಸಗೊಬ್ಬರವನ್ನು ಬತ್ತದ ಗದ್ದೆಗೆ ಮಾತ್ರವಲ್ಲದೆ, ಅಡಿಕೆ, ತೆಂಗು ಮತ್ತಿತರ ತೋಟದ ಬೆಳೆಗಳಿಗೂ ಬಳಸಲಾಗುತ್ತದೆ. ಹೀಗಾಗಿ ರಸಗೊಬ್ಬರ ಬೆಲೆ ಏರಿಕೆ ಇಡೀ ರೈತ ಸಮುದಾಯವನ್ನು ಚಿಂತೆಗೀಡು ಮಾಡಿದೆ.ದ.ಕ. ಜಿಲ್ಲೆಯಲ್ಲಿ ಮಳೆ ಅಧಿಕ. ರಭಸವಾಗಿ ಸುರಿಯುವ ಮಳೆ ನೀರು, ಇಲ್ಲಿನ ಕೆಂಪು ಮಣ್ಣಿನಲ್ಲಿರುವ ಪೊಟ್ಯಾಷ್ ಅಂಶವನ್ನು ಕೊಚ್ಚಿಕೊಂಡು ಹೋಗುತ್ತದೆ. ಹೀಗಾಗಿ ಪೊಟ್ಯಾಷ್ ರಸಗೊಬ್ಬರವನ್ನು ಸೇರಿಸುವುದು ಅಗತ್ಯವಾಗುತ್ತದೆ.

 

ಆದೇ ಪೊಟ್ಯಾಷ್‌ಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದರ ದುಪ್ಟಟ್ಟಿಗಿಂತಲೂ ಹೆಚ್ಚಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ 50 ಕೆ.ಜಿ. ಎಂಒಪಿ ಬೆಲೆ ವಿವಿಧ ರಸಗೊಬ್ಬರ ತಯಾರಿಕಾ ಕಂಪೆನಿಗಳ ಸರಾಸರಿ ನೋಡಿದರೆ ರೂ 315ಗಳಷ್ಟಿತ್ತು. ಆದರೆ, ಈ ವರ್ಷ ಜೂನ್ 2ನೇ ವಾರ ಅದರ ಬೆಲೆ ರೂ 882ಗೆ ಏರಿದೆ. ಇದೇ ರೀತಿ ಸಾರಜನಕ, ರಂಜಕ ಗೊಬ್ಬರಗಳ ಬೆಲೆಯೂ ಗಗನಕ್ಕೇರಿದೆ. ಕಳೆದ ವರ್ಷ ಮೇನಲ್ಲಿ ಡಿಎಪಿಗೆ 50 ಕೆ.ಜಿ. ಚೀಲಕ್ಕೆ ಸರಾಸರಿ ರೂ 630ರಷ್ಟಿದ್ದ ಬೆಲೆ ಇಂದು ಸರಾಸರಿ ರೂ 1200ಕ್ಕೆ ಏರಿದೆ. ಈ ಭಾಗದಲ್ಲಿ ಸಾಮಾನ್ಯವಾಗಿ ರೈತರ ಮನೆ ಮಾತಾಗಿರುವ ಸುಫಲದ ಬೆಲೆ ಕಳೆದ ವರ್ಷ ರೂ 400   ಇದ್ದುದು ಈ ಬಾರಿ ರೂ 600ಗೆ ಏರಿಕೆಯಾಗಿದೆ.`ಯೂರಿಯಾಕ್ಕೆ ಮಾತ್ರ ಸರ್ಕಾರದ ನಿರ್ದಿಷ್ಟ ಪ್ರಮಾಣದ ಸಬ್ಸಿಡಿ ಇದೆ. ಹೀಗಾಗಿ ಕಳೆದ ವರ್ಷ 50 ಕೆ.ಜಿ. ಚೀಲಕ್ಕೆ ಇದ್ದಂತಹ ರೂ 281  ದರ ಈ ವರ್ಷವೂ ಹಾಗೆಯೇ ಇದೆ. ಆದರೆ, ಪೊಟ್ಯಾಷ್ ಸಹಿತ ಇತರ ಬಹುತೇಕ ರಾಸಾಯನಿಕಗಳನ್ನು ದೇಶ ಆಮದು ಮಾಡಿಕೊಳ್ಳುತ್ತಿದೆ. ಡಾಲರ್ ಮುಂದೆ ರೂಪಾಯಿಯ ಮೌಲ್ಯ ಕುಸಿದಂತೆ ಆಮದು ಮಾಡಿಕೊಳ್ಳುವ ರಾಸಾಯನಿಕಗಳ ದರದಲ್ಲೂ ಹೆಚ್ಚಳವಾಗುತ್ತದೆ. ಸರ್ಕಾರ ಇವುಗಳಿಗೆಲ್ಲ ಒಂದು ಸೂಚಿತ ಸಬ್ಸಿಡಿಯನ್ನಷ್ಟೇ ನೀಡುತ್ತದೆಯೇ ಹೊರತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ವಿಷಮ ಪರಿಸ್ಥಿತಿಗಳಿಗೆ ಹೆಗಲು ಕೊಡುವುದಿಲ್ಲ.ಹೀಗಾಗಿಯೇ ರಸಗೊಬ್ಬರಗಳ ದರ ಹೆಚ್ಚಾಗಿದೆ~ ಎಂದು ಜಂಟಿ ಕೃಷಿ ನಿರ್ದೇಶಕ ಪದ್ಮಯ ನಾಯ್ಕ ಸೋಮವಾರ `ಪ್ರಜಾವಾಣಿ~ಗೆ ತಿಳಿಸಿದರು.ರಸಗೊಬ್ಬರಗಳ ಬೆಲೆ ಏರಿಕೆ ರೈತರನ್ನು ಕಂಗೆಡಿಸಿದ್ದು, ಸಾವಯವ ಗೊಬ್ಬರದ ವ್ಯವಸ್ಥೆ ಮಾಡಿಕೊಳ್ಳದೆ ಇರುವವರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.`ನಾವು ಸಾವಯವ ಗೊಬ್ಬರದತ್ತ ಹೊರಳಬೇಕೆಂದರೂ ಬಹಳ ಖರ್ಚು ಇದೆ. ಜಾನುವಾರು ಸಾಕಬೇಕು, ಕೆಲಸಕ್ಕೆ ಜನ ಬೇಕು, ಹುಲ್ಲು, ಹಿಂಡಿ ದರವೂ ಹೆಚ್ಚಿದೆ. ರಸಗೊಬ್ಬರ ದರ ಹೆಚ್ಚಳ ಮಧ್ಯಮ ವರ್ಗದ ರೈತರ ಮೇಲಂತೂ ಭಾರಿ ಹೊಡೆತವೆ~ ಎಂದು ಪೆರಿಯಡ್ಕದ ಕೃಷಿಕ ಸೋಮನಾಥ ಹೇಳಿದರು.ಇಚ್ಲಂಪಾಡಿಯ ಪ್ರಗತಿಪರ ಕೃಷಿಕ ಶ್ರೀಧರ್ ಅವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಡಿಕೆ, ರಬ್ಬರ್‌ಗೆ ಧಾರಣೆ ಇದೆ ಎಂಬ ಕಾರಣಕ್ಕೆ ಈ ವರ್ಷ ಕೆಲವು ರೈತರಾದರೂ ರಸಗೊಬ್ಬರ ಕೊಂಡುಕೊಂಡಾರು. ಮುಂದಿನ ದಿನಗಳಲ್ಲಿ ಬೆಳೆಗಳ ಬೆಲೆ ಕುಸಿದು ರಸಗೊಬ್ಬರ ಬೆಲೆ ಹೆಚ್ಚಾಗುತ್ತಲೇ ಹೋದರೆ ಕೃಷಿ ಇನ್ನಷ್ಟು ಹಿಂದೆ ಬೀಳುವ ಅಪಾಯ ಇದೆ ಎಂದು ಹೇಳುತ್ತಾರೆ.ಗಾಯದ ಮೇಲೆ ಬರೆ:
  ಈ ಬಾರಿ ಮೇ ತಿಂಗಳಲ್ಲಿ ಮಳೆ ಬೀಳದೆ ಇರುವುದರಿಂದ ಬತ್ತ ಬಿತ್ತನೆ ಕಾರ್ಯ ಬಹುತೇಕ ಕುಂಠಿತವಾಗಿದೆ. ಜೂನ್ ಮೊದಲ ವಾರ ಆರಂಭವಾದ ಮಳೆ ಎರಡನೇ ವಾರವೇ ಕೈಕೊಟ್ಟಿರುವುದು ಸಹ ಆತಂಕವನ್ನು ಹೆಚ್ಚಿಸಿದೆ.ದಕ್ಷಿಣ ಕನ್ನಡ ಜಿಲ್ಲೆಗೆ 1,750 ಕ್ವಿಂಟಲ್‌ನಷ್ಟು ಬಿತ್ತನೆ ಬೀಜ ಪೂರೈಸುವುದಕ್ಕೆ ಅವಕಾಶ ಇದ್ದರೂ ಇದುವರೆಗೆ 25 ಕ್ವಿಂಟಲ್‌ನಷ್ಟೂ ಬಿತ್ತನೆ ಬೀಜವನ್ನು ರೈತರು ಖರೀದಿಸಿಲ್ಲ. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಕಿಲೋಗೆ ರೂ 26ಕ್ಕೆ ಬಿತ್ತನೆ ಬೀಜ (ಇದರಲ್ಲಿ ರೂ 9.5 ಸಬ್ಸಿಡಿ) ವಿತರಿಸಲಾಗುತ್ತಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಈ ಅವಧಿಯಲ್ಲಿ 100ರಿಂದ 150 ಕ್ವಿಂಟಲ್‌ನಷ್ಟು ಬಿತ್ತನೆ ಬೀಜವನ್ನು ರೈತರು ಖರೀದಿಸುತ್ತಾರೆ.ಮುಂಗಾರು ಮಳೆ ಚುರುಕಾದಲ್ಲಿ ಕರಾವಳಿಯಲ್ಲಿ ಬತ್ತದ ನಾಟಿ ಪ್ರಕ್ರಿಯೆಯೂ ಚುರುಕಾಗುವ ವಿಶ್ವಾಸ ಇದೆ. ಆದರೆ, ರಸಗೊಬ್ಬರ ಬೆಲೆ ಏರಿಕೆ ಮಾತ್ರ ರೈತರನ್ನೂ ದುಃಸ್ವಪ್ನವಾಗಿ ಕಾಡುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.