ಸೋಮವಾರ, ಮೇ 17, 2021
22 °C

ರಸಿಕರ ಕಂಗಳ ಸೆಳೆಯುವ ನೋಟ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಕ್ಕಿಗಳ ಹಾರಾಟದ ವಿಲಾಸವನ್ನು ಕುವೆಂಪು `ದೇವರು ರುಜು ಮಾಡಿದನು~ ಎಂದು ಪರವಶತೆಯಿಂದ ಕರೆದರು. ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ ಪಾಲಿಗೆ, ಹಕ್ಕಿಗಳು `ಹಾರಾಡುವ ಹಾಡುಗಳು~. ನಮ್ಮ ಕನಸಿನ ಸಾಕಾರ ರೂಪಗಳಂತೆ ಹಾರಾಡುವ ಬಗೆ ಬಗೆ ಹಕ್ಕಿಗಳನ್ನು ಕಣ್ತುಂಬಿಕೊಳ್ಳಲು, ಅವುಗಳ ವಿಚಿತ್ರವಾದ ಸ್ವರಸದ್ದು ಆಲಿಸಿ ಪುಳಕಗೊಳ್ಳಲು ಮಹಾರಾಷ್ಟ್ರದ ನಾಗಜಿರಾ ವನ್ಯಮೃಗ ಧಾಮಕ್ಕೆ ಭೇಟಿ ನೀಡಬೇಕು.ನಾಗಜಿರಾ ವನ್ಯಮೃಗ ತಾಣದಲ್ಲಿ ಒಂದೆರಡಲ್ಲ, ಹತ್ತಾರೂ ಅಲ್ಲ, 166 ಜಾತಿಯ ಪಕ್ಷಿಗಳು ಮನೆ ಮಾಡಿಕೊಂಡಿವೆ. ಒಂದಕ್ಕಿಂಥ ಒಂದು ಭಿನ್ನ. ಅತಿ ಸಣ್ಣ ಗಾತ್ರದ ಹಕ್ಕಿಗಳೂ ಇಲ್ಲಿವೆ. ದೊಡ್ಡವೂ ಇವೆ. ವಸತಿ ಪ್ರದೇಶಗಳಲ್ಲಿ ಕಾಣಸಿಗದಂಥ ಅಪರೂಪದ ಚೆಲುವಿನ ಈ ಹಕ್ಕಿಗಳು ನೋಡುತ್ತ, ಅವುಗಳನ್ನು ಕ್ಯಾಮೆರಾದ ಕಣ್ಣುಗಳಿಗೂ ತುಂಬಿಸಿಕೊಳ್ಳುವುದು ಒಂದು ಬಗೆಯ ರೋಚಕ ಆಟವೇ ಸರಿ.ಪಕ್ಷಿಗಳಷ್ಟೇ ಅಲ್ಲ, ನಾಗಜಿರಾ ವನ್ಯಮೃಗಧಾಮದಲ್ಲಿ ಪಕ್ಷಿಗಳೊಂದಿಗೆ 34 ಜಾತಿಯ ಸಸ್ತನಿಗಳು, 36 ಜಾತಿಯ ಸರೀಸೃಪಗಳು ಕೂಡ ಜೀವಿಸಿವೆ. ಭಂಡಾರ ಜಿಲ್ಲೆಗೆ ಸೇರಿದ ಈ ಜಾಗಕ್ಕೆ ಭೇಟಿ ನೀಡಲು ಏಪ್ರಿಲ್‌ನಿಂದ ಮೇ ತಿಂಗಳು ಸೂಕ್ತ ಸಮಯ.ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ನಿರಂತರವಾಗಿ ಮಳೆ ಸುರಿಯುವುದರಿಂದ ವನ್ಯಧಾಮವನ್ನು ಮುಚ್ಚಲಾಗಿರುತ್ತದೆ. ಉಳಿದ ವೇಳೆಯಲ್ಲಿ ಅರಣ್ಯ ಸಿಬ್ಬಂದಿ ನೆರವು ಪಡೆದು ಕಾಡಿನಲ್ಲಿ ಸಂಚರಿಸಬಹುದು.ಹುಲಿ, ಚಿರತೆ, ಕಾಡೆಮ್ಮೆ, ಜಿಂಕೆಗಳು, ಕಾಡು ನಾಯಿ, ಕಾಡು ಕರಡಿಗಳಲ್ಲದೇ ವಿಶಿಷ್ಟ ಕೀಟಗಳು, ಬಣ್ಣ ಬಣ್ಣದ ಚಿಟ್ಟೆಗಳು ಇರುವುದು ಈ ಕಾಡಿನ ಆಕರ್ಷಣೆ. ಅಪರೂಪದ ಮರಗಳು, ಅವುಗಳ ನಡುವೆ ಹರಿಯುವ ತೊರೆಗಳು ಕಾಡಿಗೆ ಮತ್ತಷ್ಟು ಅಂದ ತಂದಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.