ಶನಿವಾರ, ಆಗಸ್ಟ್ 15, 2020
21 °C
ಕೆಸರು ಗದ್ದೆಯಾದ ರಸ್ತೆ ದುರಸ್ತಿಗೆ ಒತ್ತಾಯ

ರಸ್ತೆ ತಡೆದು ಮಹಿಳೆಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆ ತಡೆದು ಮಹಿಳೆಯರ ಪ್ರತಿಭಟನೆ

ಹಾವೇರಿ: ಕೆಸರು ಗದ್ದೆಯಂತಾಗಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕೆಂದು ಒತ್ತಾಯಿಸಿ ಪುರದ ಓಣಿಯ ನಾಗರಿಕರು ರಸ್ತೆಗೆ ಕಲ್ಲುಗಳನ್ನಿಟ್ಟು ಶನಿವಾರ ಪ್ರತಿಭಟನೆ ನಡೆಸಿದರು.ಪುರದ ಓಣಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳು ರಸ್ತೆಗೆ ಅಡ್ಡಲಾಗಿ ಹಗ್ಗವನ್ನು ಕಟ್ಟಿ, ಕಲ್ಲುಗಳನ್ನಿಟ್ಟು ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಳಿಸಿದರಲ್ಲದೇ, ರಸ್ತೆ ದುರಸ್ತಿ ಹಾಗೂ ಗಟಾರು ಸ್ವಚ್ಛಗೊಳಿಸದ ನಗರಸಭೆ ವಿರುದ್ಧ ಘೋಷಣೆಗಳನ್ನು ಕೂಗಿದರು.ಈ ಸಂದರ್ಭದಲ್ಲಿ ಓಣಿಯ ನಿವಾಸಿ ಲಕ್ಷ್ಮಕ್ಕ ದೇವಿಹೊಸೂರು ಮಾತನಾಡಿ, ಕಳೆದ ಎರಡ್ಮೂರು ವರ್ಷಗಳಿಂದ ಒಳಚರಂಡಿ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಅದನ್ನು ಈವರೆಗೆ ಡಾಂಬರು ಮಾಡಲಾಗಿಲ್ಲ. ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗುತ್ತವೆ. ಮಕ್ಕಳು, ಸಾರ್ವಜನಿಕರು ರಸ್ತೆಯಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗುತ್ತದೆ. ಆದರೂ, ನಗರಸಭೆ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.ಕಳೆದ ವರ್ಷ ಮಳೆಗಾಲದಲ್ಲಿಯೂ ಇದೇ ಪರಿಸ್ಥಿತಿಯಾಗಿತ್ತು. ಹಲವಾರು ಮಕ್ಕಳು, ವೃದ್ದರು ರಸ್ತೆಯಲ್ಲಿ ಬಿದ್ದು ಕೈಕಾಲುಗಳನ್ನು ಮುರಿದುಕೊಂಡಿದ್ದಾರಲ್ಲದೇ, ಅನೇಕ ದ್ವಿಚಕ್ರವಾಹನ ಸವಾರರು ಸ್ಕಿಡ್‌ಆಗಿ ಬಿದ್ದು ಗಾಯಗೊಂಡಿದ್ದಾರೆ. ಇಷ್ಟಾದರೂ ನಗರಸಭೆ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸುತ್ತಿಲ್ಲ ಎಂದು ಆಪಾದಿಸಿದರು.ಹಿಂದಿನ ವರ್ಷದಿಂದಲೇ ನಗರಸಭೆ ಅಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ರಸ್ತೆ ದುರಸ್ತಿ ಮಾಡಿಸಿ, ಡಾಂಬರ್ ಮಾಡಬೇಕೆಂದು ಒತ್ತಾಯಿಸಿ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಿತ್ಯದ ಸಮಸ್ಯೆ ತಾಳಿಕೊಳ್ಳಲಾಗದೇ ಅನಿವಾರ್ಯವಾಗಿ ಪ್ರತಿಭಟನೆಗಿಳಿದಿದ್ದೇವೆ ಎಂದು ಪ್ರತಿಭಟನಾ ನಿರತ ಮಹಿಳೆಯರು ಹೇಳಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧಿಕಾರಿಗಳ ಜೊತೆ ಪ್ರತಿಭಟನಾಕಾರರು ಮಾತಿನ ಚಕಮಕಿ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಈಗಲೇ ರಸ್ತೆ ದುರಸ್ತಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ತಾತ್ಕಾಲಿಕವಾಗಿ ಕೆಸರು ನಿಲ್ಲದಂತೆ ವ್ಯವಸ್ಥೆ ಮಾಡಲಾಗುತ್ತದೆ. ಗಟಾರು ಸ್ವಚ್ಛ ಮಾಡುವ ಭರವಸೆ ನೀಡಿದರಲ್ಲದೇ, ಮಳೆಗಾಲ ಮುಗಿದ ನಂತರ ರಸ್ತೆ ದುರಸ್ತಿಯ ಜತೆಗೆ ಡಾಂಬರ್ ಮಾಡುವ ಭರವಸೆ ನೀಡಿದರು.ನಗರಸಭೆ ನೂತನ ಸದಸ್ಯ ಕರಬಸಪ್ಪ ಹಳದೂರ ಸೇರಿದಂತೆ ಓಣಿಯ ಮಹಿಳೆಯರಾದ ಅನ್ನಪೂರ್ಣ, ರತ್ನಕ್ಕ, ಲಲಿತಾ ಕಳ್ಳಿ, ಮಹಾದೇವಿ ಮಡ್ಲಿ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.