ಗುರುವಾರ , ಫೆಬ್ರವರಿ 25, 2021
17 °C
ಕ್ರಿಕೆಟ್‌: ಸೋಲು ತಪ್ಪಿಸಿಕೊಳ್ಳಲು ಕಿವೀಸ್‌ ಬಳಗದ ಹೋರಾಟ, ಶತಕದ ಹೊಸ್ತಿಲಲ್ಲಿ ಎಡವಿದ ಧವನ್‌

ರಹಾನೆ ಶತಕ, ಭಾರತ ತಂಡದ ಬಿಗಿಹಿಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಹಾನೆ ಶತಕ, ಭಾರತ ತಂಡದ ಬಿಗಿಹಿಡಿತ

ವೆಲಿಂಗ್ಟನ್‌ (ಪಿಟಿಐ): ಅಜಿಂಕ್ಯ ರಹಾನೆ (118) ಗಳಿಸಿದ ಶತಕದ ನೆರವಿನಿಂದ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಹಾಗೂ ಕೊನೆಯ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಭಾರಿ ಮುನ್ನಡೆ ಪಡೆದಿದೆ.ಬೇಸಿನ್‌ ರಿಸರ್ವ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನ ಮಹೇಂದ್ರ ಸಿಂಗ್‌ ದೋನಿ ಬಳಗ 438 ರನ್‌ ಕಲೆ ಹಾಕಿತು. ಈ ಮೂಲಕ ಒಟ್ಟು 246 ರನ್‌ಗಳ ಮುನ್ನಡೆ ಪಡೆದು ಪಂದ್ಯದ ಮೇಲಿನ ಹಿಡಿತವನ್ನು ಬಿಗಿಗೊಳಿಸಿದೆ.ಶನಿವಾರದ ಆಟದ ಅಂತ್ಯಕ್ಕೆ ಕಿವೀಸ್‌ ತಂಡ ಎರಡನೇ ಇನಿಂಗ್ಸ್‌ನಲ್ಲಿ ಒಂದು ವಿಕೆಟ್‌ಗೆ 24 ರನ್‌ ಗಳಿಸಿತ್ತು. ಇದೀಗ 222 ರನ್‌ಗಳ ಹಿನ್ನಡೆಯಲ್ಲಿರುವ ಆತಿಥೇಯರಿಗೆ ಸೋಲು ತಪ್ಪಿಸಲು ಅಸಾಮಾನ್ಯ ಪ್ರದರ್ಶನ ನೀಡುವುದು ಅನಿವಾರ್ಯ.ಶತಕವಂಚಿತ ಧವನ್‌: ಭಾರತ ತಂಡ ಎರಡು ವಿಕೆಟ್‌ಗೆ 100 ರನ್‌ಗಳಿಂದ ಶನಿವಾರ ಆಟ ಮುಂದುವರಿಸಿತ್ತು. ಶಿಖರ್‌ ಧವನ್‌ ಮತ್ತು ಇಶಾಂತ್‌ ಶರ್ಮ ಬೆಳಿಗ್ಗೆ ಎಚ್ಚರಿಕೆಯಿಂದ ಆಡಿದರು. ಮೂರನೇ ವಿಕೆಟ್‌ಗೆ 52 ರನ್‌ ಜೊತೆಯಾಟ ನೀಡಿದ ಬಳಿಕ ಇಶಾಂತ್‌ (26) ಔಟಾದರು.ಆತ್ಮವಿಶ್ವಾಸದ ಆಟದ ಮೂಲಕ ಶತಕದೆಡೆಗೆ ಹೆಜ್ಜೆಯಿಟ್ಟಿದ್ದ ಧವನ್‌ ಕೇವಲ ಎರಡು ರನ್‌ಗಳ ಅಂತರದಲ್ಲಿ ಶತಕ ಗಳಿಸುವ ಅವಕಾಶ ಕಳೆದು ಕೊಂಡರು. 98 ರನ್‌ ಗಳಿಸಿದ್ದ ವೇಳೆ ಟಿಮ್‌ ಸೌಥಿ ಎಸೆತದಲ್ಲಿ ವಿಕೆಟ್‌ ಕೀಪರ್‌ ವಾಟ್ಲಿಂಗ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ದೆಹಲಿಯ ಬ್ಯಾಟ್ಸ್‌ಮನ್‌ಗೆ ಸತತ ಎರಡನೇ ಶತಕ ಗಳಿಸುವ ಅದೃಷ್ಟ ಇರಲಿಲ್ಲ. 127 ಎಸೆತಗಳನ್ನು ಎದುರಿಸಿದ ಅವರು 14 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು.ಮೂರು ರನ್‌ಗಳ ಅಂತರದಲ್ಲಿ ರೋಹಿತ್‌ ಶರ್ಮ (0) ಕೂಡಾ ಔಟಾದ ಕಾರಣ ಭಾರತ ಒತ್ತಡಕ್ಕೆ ಒಳಗಾಯಿತು. ಜಿಮ್ಮಿ ನೀಶಮ್‌ ಎಸೆತದಲ್ಲಿ ರೋಹಿತ್‌ ಕೆಟ್ಟ ಹೊಡೆತಕ್ಕೆ ಮುಂದಾಗಿ ‘ಕ್ಲೀನ್‌ ಬೌಲ್ಡ್‌’ ಆದರು. ರಹಾನೆ ಚೊಚ್ಚಲ ಶತಕ: 165 ರನ್‌ಗಳಿಗೆ ಐದು ವಿಕೆಟ್‌ ಕಳೆದುಕೊಂಡ  ಪ್ರವಾಸಿ ತಂಡವನ್ನು ಉತ್ತಮ ಮೊತ್ತದೆಡೆಗೆ ಮುನ್ನಡೆಸಿದ ಶ್ರೇಯ ಅಜಿಂಕ್ಯ ರಹಾನೆಗೆ ಸಲ್ಲಬೇಕು. ಟೆಸ್ಟ್‌ನಲ್ಲಿ ಚೊಚ್ಚಲ ಶತಕ ಗಳಿಸಿದ ಅವರು ಭಾರತದ ಇನಿಂಗ್ಸ್‌ಗೆ ಬಲ ತುಂಬಿದರು. ರಹಾನೆ ಮತ್ತು ವಿರಾಟ್‌ ಕೊಹ್ಲಿ (38) ಆರನೇ ವಿಕೆಟ್‌ಗೆ 63 ರನ್‌ಗಳ ಜೊತೆಯಾಟ ನೀಡಿದರು. ಉತ್ತಮ ಆರಂಭ ಪಡೆದಿದ್ದ ಕೊಹ್ಲಿ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ಎಡವಿದರು.ದೋನಿ ಮತ್ತು ರಹಾನೆ ಜೊತೆಯಾದ ಬಳಿಕ ಪಂದ್ಯದ ಚಿತ್ರಣವೇ ಬದಲಾಯಿತು. ಕಿವೀಸ್‌ ಬೌಲರ್‌ ಗಳ ಮೇಲೆ ಪ್ರಭುತ್ವ ಸಾಧಿಸಿದ ಈ ಜೋಡಿ ಏಳನೇ ವಿಕೆಟ್‌ಗೆ 120 ರನ್‌ ಕಲೆಹಾಕಿತು. ವೇಗವಾಗಿ ರನ್‌ ಪೇರಿಸಿದ ದೋನಿ 86 ಎಸೆತಗಳಲ್ಲಿ 68 ರನ್‌ ಕಲೆಹಾಕಿ ದರು. ಭಾರತ ತಂಡದ ನಾಯಕನ ಬ್ಯಾಟ್‌ನಿಂದ ಒಂದು ಸಿಕ್ಸರ್‌ ಹಾಗೂ ಒಂಬತ್ತು ಬೌಂಡರಿ ಸಿಡಿದವು.ರಹಾನೆ ಆ ಬಳಿಕ ರವೀಂದ್ರ ಜಡೇಜ  (26, 16 ಎಸೆತ, 6 ಬೌಂ) ಜೊತೆ ಎಂಟನೇ ವಿಕೆಟ್‌ಗೆ 37 ರನ್‌ ಸೇರಿಸಿದರು. ಜಡೇಜ ಔಟಾದಾಗ ರಹಾನೆಗೆ ಶತಕ ಪೂರೈಸಲು ಇನ್ನೂ 10 ರನ್‌ಗಳು ಬೇಕಿದ್ದವು. ಜಹೀರ್‌ ಖಾನ್‌ ಅವರಿಂದ ಉತ್ತಮ ಬೆಂಬಲ ಲಭಿಸಿದ ಕಾರಣ ಮುಂಬೈನ ಬ್ಯಾಟ್ಸ್‌ಮನ್‌ ಯಾವುದೇ ಒತ್ತಡವಿಲ್ಲದೆ ಮೂರಂಕಿಯ ಗಡಿ ದಾಟಿದರು. ಕೋರಿ ಆ್ಯಂಡರ್‌ಸನ್‌ ಎಸೆತದಲ್ಲಿ ಚೆಂಡನ್ನು ಬೌಂಡರಿಗೆ ಅಟ್ಟಿ ಚೊಚ್ಚಲ ಶತಕದ ಸಂಭ್ರಮ ಆಚರಿಸಿದರು.ದಕ್ಷಿಣ ಆಫ್ರಿಕಾ ವಿರುದ್ಧ ಡರ್ಬನ್‌ನಲ್ಲಿ ನಡೆದ ಪಂದ್ಯದಲ್ಲಿ 96 ರನ್‌ ಗಳಿಸಿದ್ದು ರಹಾನೆ ಅವರ ಇದುವರೆಗಿನ ಅತ್ಯುತ್ತಮ ಇನಿಂಗ್ಸ್‌ ಎನಿಸಿಕೊಂಡಿತ್ತು. ಟ್ರೆಂಟ್‌ ಬೌಲ್ಟ್‌ ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ರಹಾನೆ ಔಟಾದರು. 158 ಎಸೆತಗಳನ್ನು ಎದುರಿಸಿದ ಅವರು 17 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿದರು. ಮುಂದಿನ ಓವರ್‌ನಲ್ಲಿ ಜಹೀರ್‌ ಔಟಾಗುವುದ ರೊಂದಿಗೆ ಭಾರತದ ಇನಿಂಗ್ಸ್‌ಗೆ ತೆರೆಬಿತ್ತು.ಎರಡನೇ ದಿನ ಭಾರತ ವೇಗವಾಗಿ ರನ್‌ ಪೇರಿಸಿತು. 74.4 ಓವರ್‌ಗಳಲ್ಲಿ 4.26ರ ಸರಾಸರಿಯಲ್ಲಿ 338 ರನ್‌ ಕಲೆಹಾಕಿತು. ಆತಿಥೇಯ ತಂಡದ ಟ್ರೆಂಟ್‌ ಬೌಲ್ಟ್‌, ಟಿಮ್‌ ಸೌಥಿ ಮತ್ತು ನೀಲ್‌ ವಾಗ್ನರ್‌ ತಲಾ ಮೂರು ವಿಕೆಟ್‌ ಪಡೆದರು.ಭಾರಿ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿರುವ ಕಿವೀಸ್‌ ತಂಡ ಆರಂಭದಲ್ಲೇ ಆಘಾತ ಅನುಭವಿಸಿದೆ. ಜಹೀರ್‌ ಖಾನ್‌ ಅವರು ಪೀಟರ್‌ ಫುಲ್ಟಾನ್‌ (1) ಅವರನ್ನು ಬೇಗನೇ  ಪೆವಿಲಿಯನ್‌ ಗಟ್ಟಿದರು.  ಹಾಮಿಷ್‌ ರುದರ್‌ಫೋರ್ಡ್‌ (18) ಮತ್ತು ಕೇನ್‌ ವಿಲಿಯಮ್ಸನ್‌ (4) ಭಾನುವಾರ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.ಸ್ಕೋರ್ ವಿವರ:

ನ್ಯೂಜಿಲೆಂಡ್: ಮೊದಲ ಇನಿಂಗ್ಸ್‌ 52.5 ಓವರ್‌ಗಳಲ್ಲಿ 192ಭಾರತ: ಮೊದಲ ಇನಿಂಗ್ಸ್‌ 102.4 ಓವರ್‌ಗಳಲ್ಲಿ 438

(ಶುಕ್ರವಾರದ ಆಟದ ಅಂತ್ಯಕ್ಕೆ 28 ಓವರ್‌ಗಳಲ್ಲಿ  2 ವಿಕೆಟ್‌ಗೆ 100)

ಶಿಖರ್ ಧವನ್‌ ಸಿ ವಾಟ್ಲಿಂಗ್‌ ಬಿ ಟಿಮ್‌ ಸೌಥಿ  98

ಇಶಾಂತ್‌ ಶರ್ಮ ಸಿ ವಾಟ್ಲಿಂಗ್‌ ಬಿ ಟ್ರೆಂಟ್‌ ಬೌಲ್ಟ್‌  26

ವಿರಾಟ್‌ ಕೊಹ್ಲಿ ಸಿ ರುದರ್‌ಫೋರ್ಡ್‌ ಬಿ ನೀಲ್‌ ವಾಗ್ನರ್‌  38

ರೋಹಿತ್ ಶರ್ಮ ಬಿ ಜಿಮ್ಮಿನೀಶಮ್‌  00

ಅಜಿಂಕ್ಯ ರಹಾನೆ ಸಿ ಬೌಲ್ಟ್‌ ಬಿ ಟಿಮ್‌ ಸೌಥಿ  118

ಮಹೇಂದ್ರ ಸಿಂಗ್‌ ದೋನಿ ಸಿ ವಾಟ್ಲಿಂಗ್‌ ಬಿ ಟ್ರೆಂಟ್‌ ಬೌಲ್ಟ್‌  68

ರವೀಂದ್ರ ಜಡೇಜ ಸಿ ಫುಲ್ಟಾನ್‌ ಬಿ ನೀಲ್‌ ವಾಗ್ನರ್‌  26

ಜಹೀರ್‌ ಖಾನ್‌ ಸಿ ವಾಟ್ಲಿಂಗ್‌ ಬಿ ನೀಲ್‌ ವಾಗ್ನರ್‌  22

ಮೊಹಮ್ಮದ್‌ ಶಮಿ ಔಟಾಗದೆ  00

ಇತರೆ: (ಬೈ–8, ಲೆಗ್‌ಬೈ-4, ವೈಡ್‌–7, ನೋಬಾಲ್‌-2) 21

ವಿಕೆಟ್ ಪತನ: 1–2 (ವಿಜಯ್‌; 1.6), 2–89 (ಪೂಜಾರ; 24.2), 3-141 (ಇಶಾಂತ್‌; 36.6), 4-162 (ಧವನ್‌; 42.6), 5-165 (ರೋಹಿತ್‌; 45.1), 6-228 (ಕೊಹ್ಲಿ; 68.1), 7-348 (ದೋನಿ; 92.2), 8-385 (ಜಡೇಜ; 96.3), 9-423 (ರಹಾನೆ; 101.1), 10-438 (ಜಹೀರ್‌; 102.4)

ಬೌಲಿಂಗ್‌: ಟ್ರೆಂಟ್ ಬೌಲ್ಟ್್ 26-7-99-3, ಟಿಮ್‌ ಸೌಥಿ 20-0-93-3, ನೀಲ್‌ ವಾಗ್ನರ್‌ 22.4-3-106-3, ಕೋರಿ ಆ್ಯಂಡರ್‌ಸನ್‌ 16-2-66-0, ಜಿಮ್ಮಿ ನೀಶಮ್‌ 18-2-62-1.

ನ್ಯೂಜಿಲೆಂಡ್‌: ಎರಡನೇ ಇನಿಂಗ್ಸ್‌ 9 ಓವರ್‌ಗಳಲ್ಲಿ 1 ವಿಕೆಟ್‌ಗೆ 24

ಪೀಟರ್‌ ಫುಲ್ಟಾನ್‌ ಎಲ್‌ಬಿಡಬ್ಲ್ಯು ಬಿ ಜಹೀರ್‌ ಖಾನ್‌  01

ಹಾಮಿಷ್‌ ರುದರ್‌ಫೋರ್ಡ್‌ ಬ್ಯಾಟಿಂಗ್‌  18

ಕೇನ್‌ ವಿಲಿಯಮ್ಸನ್‌ ಬ್ಯಾಟಿಂಗ್‌  04

ಇತರೆ: (ನೋಬಾಲ್‌-1)  01

ವಿಕೆಟ್‌ ಪತನ: 1-1 (ಫುಲ್ಟಾನ್‌; 1.3)

ಬೌಲಿಂಗ್‌: ಇಶಾಂತ್‌ ಶರ್ಮ 3-0-9-0, ಜಹೀರ್‌ ಖಾನ್‌ 3-2-7-1, ಮೊಹಮ್ಮದ್‌ ಶಮಿ 3-0-8-0

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.