ಮಂಗಳವಾರ, ಏಪ್ರಿಲ್ 20, 2021
32 °C

ರಾಕಂಗೇರಾ ಕೈಗಾರಿಕೆ ಪ್ರದೇಶ ನಿವೇಶನ ಅಕ್ರಮ:172 ಖೊಟ್ಟಿ ಉದ್ದಿಮೆದಾರರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ಪಟ್ಟಣದ ಹೊರವಲಯದ ರಾಕಂಗೇರಾ ಬಳಿ ಸರ್ವೇನಂಬರ 34 ಮತ್ತು 35ರಲ್ಲಿ ಸಣ್ಣ ಕೈಗಾರಿಕೆ ಸ್ಥಾಪಿಸಲು ಉದ್ದಿಮೆದಾರರು ನಿವೇಶಗಳನ್ನು ಪಡೆದುಕೊಂಡಿದ್ದಾರೆ. ನಿಯಮದ ಪ್ರಕಾರ ಉದ್ದಿಮೆ ಪ್ರಾರಂಭಿಸದೆ  ಉಲ್ಲಂಘನೆಯಾಗಿರುವಂತಹ ಫಲಾನುಭವಿಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತರಾದ ಬಿ.ಪಿ.ವಿಜಯ ಅವರು ಪ್ರಾದೇಶಿಕ ಆಯುಕ್ತರಿಗೆ ಹಾಗೂ ಗುಲ್ಬರ್ಗದ ಕೆಎಸ್‌ಎಸ್‌ಐಡಿಯ (ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ದಿ ನಿಗಮ) ಸಹಾಯಕ ಮಹಾ ವ್ಯವಸ್ಥಾಪಕರಿಗೆ ವರದಿ ಸಲ್ಲಿಸಿದ್ದಾರೆ.ರಾಕಂಗೇರಾ ಬಳಿ ಸಣ್ಣ ಕೈಗಾರಿಕೆ ಸ್ಥಾಪಿಸಲು ನಿಜವಾದ ಉದ್ದಿಮೆದಾರರನ್ನು ಬಿಟ್ಟು ಉದ್ದಿಮೆ ಇಲ್ಲದೆ ಇರುವ ಫಲಾನುಭವಿಗಳ ವಿರುದ್ಧ  ಕ್ರಮ ತೆಗೆದುಕೊಳ್ಳುವಂತೆ 2012 ಮೇ 9ರಂದು ಪ್ರಾದೇಶಿಕ ಆಯುಕ್ತರಿಗೆ ಜಾಕೀರ್ ಹುಸೇನ್ ಗೋಗಿಪೇಟ ಎನ್ನುವರು ದೂರು ಸಲ್ಲಿಸಿದ್ದರು.ದೂರಿಗೆ ಸಂಬಂಧಿಸಿದಂತೆ ಸಮಗ್ರವಾದ ವರದಿಯನ್ನು ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರು ಸಹಾಯಕ ಆಯುಕ್ತರಿಗೆ (ಎಸಿ) ನಿರ್ದೇಶನ ನೀಡಿದ್ದರು. ಅದರಂತೆ ಎಸಿಯವರು 2012 ಮೇ 25ರಂದು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಒಟ್ಟು 172 ಪ್ಲಾಟ್‌ಗಳ ವಸ್ತುಸ್ಥಿತಿಯ ಸಮಗ್ರವಾದ ವರದಿಯಲ್ಲಿ ಖೊಟ್ಟಿ ಉದ್ದಿಮೆದಾರರ ಪಟ್ಟಿಯು ಅನಾವರಣಗೊಂಡಿರುವ ಅಂಶ ಬೆಳಕಿಗೆ ಬಂದಿದೆ.ನಿವೇಶನಗಳನ್ನು ಪಡೆದ 54 ಪ್ಲಾಟ್‌ಗಳಲ್ಲಿ ಯಾವುದೇ ಕಟ್ಟಡ ಇರುವುದಿಲ್ಲ. 33 ಪ್ಲಾಟ್‌ಗಳಲ್ಲಿ ಕಟ್ಟಡ ನಿರ್ಮಿಸಿದ್ದಾರೆ, 20 ಪ್ಲಾಟ್‌ಗಳಲ್ಲಿ ಕೆಲಸ ಪ್ರಗತಿಯಲ್ಲಿದೆ. 3ಪ್ಲಾಟ್‌ಗಳಲ್ಲಿ ಒಂದು ಕೋಣೆ ಹಾಗೂ ಕಾಂಪೌಂಡ್ ನಿರ್ಮಿಸಿ ಹಾಲೋಬ್ಲಾಕ್ ತಯಾರಿಸುತ್ತಾರೆ. 6 ಪ್ಲಾಟ್‌ಗಳಲ್ಲಿ ಬೌಂಡರಿ ವಾಲ್ ಕಟ್ಟಿ ಗ್ರೀಲ್‌ಗೆಟ್ ಕೂಡಿಸಿದ್ದಾರೆ. 1ಪ್ಲಾಟ್‌ನಲ್ಲಿ ಕೋಲ್ಡ ಸ್ಟೋರೇಜ್ ಕಟ್ಟಡವಿದೆ. 50 ಪ್ಲಾಟ್‌ಗಳಲ್ಲಿ ತಾತ್ಕಾಲಿಕ ಶೆಡ್ ಹಾಕಿರುತ್ತಾರೆ.ಹೀಗೆ ಉದ್ದಿಮೆ ಹೆಸರಿನಲ್ಲಿ ಸ್ಥಾಪಿಸಲಾದ ಕಟ್ಟಡಗಳ ವಸ್ತುಸ್ಥಿತಿಯನ್ನು ವರದಿಯಲ್ಲಿ ಬಹಿರಂಗ ಪಡಿಸಲಾಗಿದೆ.

1996, 1999, 2000, 2002, 2005, 2010ನೇ ಸಾಲಿನಲ್ಲಿ  ಹಂತ ಹಂತವಾಗಿ ಸಣ್ಣ ಕೈಗಾರಿಕೆ ಸ್ಥಾಪಿಸಲು `172 ಪ್ಲಾಟ್‌ಗಳನ್ನು 2ವರ್ಷದ ಒಳಗಾಗಿ ಕೈಗಾರಿಕೆ ಪ್ರಾರಂಭಿಸಲು ಷರತ್ತಿನ ಮೇಲೆ ನಿವೇಶನಗಳನ್ನು ಮಂಜೂರು ಮಾಡಲಾಗಿತ್ತು.54 ಪ್ಲಾಟ್‌ಗಳಲ್ಲಿ ಯಾವ ಉದ್ದೇಶಕ್ಕಾಗಿ ಬಳಸಬೇಕಾಗಿತ್ತೋ ಅಲ್ಲಿ ಕಟ್ಟಡಗಳು ಇರದೆ ಖುಲ್ಲಾ ನಿವೇಶನಗಳನ್ನು ಇರುತ್ತವೆ. ಇನ್ನೂಳಿದ 50 ಪ್ಲಾಟ್‌ಗಳಲ್ಲಿ ತಾತ್ಕಾಲಿಕ ಶೆಡ್ ಹಾಕಿರುತ್ತಾರೆ. ಯಾವ ಉದ್ದೇಶಕ್ಕಾಗಿ ನಿವೇಶನ ನೀಡಲಾಗಿತ್ತೋ  ಆ ಉದ್ದೇಶಕ್ಕಾಗಿ ಬಳಸಿಕೊಂಡಿರುವುದಿಲ್ಲ~. ಕೆಲವೆಡೆ ಕಟ್ಟಡ ಪ್ರಗತಿಯಲ್ಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.ಲಕ್ಷಾವಧಿ ಮೌಲ್ಯ: ಶಹಾಪುರ- ಸುರಪುರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಕೈಗಾರಿಕೆ ಪ್ರದೇಶದಲ್ಲಿ ನಿವೇಶನಗಳು ಸದ್ಯ ಮಾರುಕಟ್ಟೆಯಲ್ಲಿ ಲಕ್ಷಾವಧಿ ಮೌಲ್ಯದ ಬೆಲೆಯಿದೆ. ಸ್ಥಳೀಯ ರಾಜಕೀಯ ಮುಖಂಡರು ರಾಜಕೀಯ ಪ್ರಭಾವ ಬಳಸಿಕೊಂಡು ಕೇವಲ ನಿವೇಶನಗಳನ್ನು ಗಿಟ್ಟಿಸಿಕೊಳ್ಳಲು ಖೊಟ್ಟಿ ಉದ್ದಿಮೆದಾರರು ಸೃಷ್ಟಿಯಾಗಿ ನಿವೇಶನಗಳನ್ನು ದಕ್ಕಿಸಿಕೊಂಡಿದ್ದಾರೆ.ಉಲ್ಲಂಘನೆ: ಸಣ್ಣ ಕೈಗಾರಿಕೆ ನಿಯಮದ ಪ್ರಕಾರ ನಿವೇಶನ ಮಂಜೂರಾದ ತಕ್ಷಣ ಕರಾರು ಒಪ್ಪಂದ ಮಾಡಿಕೊಳ್ಳುವಾಗ ಯಾವ ಉದ್ದೇಶಕ್ಕಾಗಿ ನಿವೇಶನವನ್ನು ಪಡೆದುಕೊಳ್ಳುತ್ತಾರೆ ಅದನ್ನು ವರ್ಷದ ಒಳಗೆ ಪೂರ್ಣಗೊಳಿಸಿ ಉದ್ದಿಮೆ ಆರಂಭಿಸಬೇಕು ಹೀಗೆ 18 ಕರಾರುಗಳನ್ನು ವಿಧಿಸಲಾಗಿದ್ದು ಅದರಲ್ಲಿ ಯಾವುದೆ ಒಂದು ಕರಾರು ಉಲ್ಲಂಘನೆಯಾದರೆ ನಿಗಮವು ನಿವೇಶವನ್ನು ಮರಳಿ ಪಡೆಯಲು ಅವಕಾಶವಿದೆ ಎಂದು ಸ್ಪಷ್ಟವಾಗಿ ಹೇಳಿದೆ.ವಿಚಿತ್ರವೆಂದರೆ ಉದ್ದಿಮೆದಾರರು ನಿವೇಶನಗಳನ್ನು ಗಿಟ್ಟಿಸಿಕೊಂಡ ನಂತರ ಕರಾರು ಪತ್ರವನ್ನು ಪಡೆದುಕೊಂಡು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ. ಉದ್ದಿಮೆ ಇಂದಿಗೂ ಸ್ಥಾಪಿಸದೆ ಉಲ್ಲಂಘನೆಯಾಗಿರುವುದು ವರದಿಯಿಂದ ಬಹಿರಂಗಗೊಂಡಿದೆ ಎನ್ನುತ್ತಾರೆ ಜಾಕೀರ ಹುಸೇನ್.ಅಧಿಕಾರಿಗಳು ಶಾಮೀಲು: ಸಣ್ಣ ಕೈಗಾರಿಕೆ ನಿಗಮದ ಅಧಿಕಾರಿಗಳು ಅಕ್ರಮದಲ್ಲಿ ಸಂಪೂರ್ಣವಾಗಿ ಶಾಮೀಲಾಗಿ ಕೋಟ್ಯಂತರ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ದುರ್ಬಳಕೆ ಮಾಡಿದ್ದಾರೆ. ಹಲವಾರು ವರ್ಷಗಳಿಂದ ತಾಲ್ಲೂಕು ಕೈಗಾರಿಕೆ ಅಧಿಕಾರಿಯೆಂದು ಕೆಲಸ ನಿರ್ವಹಿಸಿದ ಅಧಿಕಾರಿಯೂ ತಮ್ಮ ರಕ್ತ ಸಂಬಂಧಿಕರ ಹೆಸರಿನಲ್ಲಿ ನಾಲ್ಕು ನಿವೇಶನಗಳನ್ನು ಹಂಚಿಕೆ ಮಾಡಿ ಅಕ್ರಮ ಎಸಗಿದ್ದಾರೆ ಎನ್ನುತ್ತಾರೆ ಕಾರ್ಮಿಕ ಮುಖಂಡ ದಾವಲಸಾಬ್ ನದಾಫ್.ಪ್ರಾದೇಶಿಕ ಆಯುಕ್ತರು ತಕ್ಷಣವೇ ಖೊಟ್ಟಿ ಉದ್ದಿಮೆದಾರರ  ಪಟ್ಟಿಯನ್ನು ರದ್ದುಪಡಿಸಿ. ಅಕ್ರಮದಲ್ಲಿ ಶಾಮೀಲಾದ ಸಂಬಂಧಪಟ್ಟ ಅಧಿಕಾರಿಯಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಉದ್ದಿಮೆದಾರರು ಎಂದು ಖೊಟ್ಟಿ ಪ್ರಮಾಣ ಪತ್ರವನ್ನು ನೀಡಿ ನಿವೇಶ ಪಡೆದ ಫಲಾನುಭವಿಗಳ ವಿರುದ್ಧ ವಂಚನೆ ದೂರು ದಾಖಲಿಸಬೇಕೆಂದು ತಾಲ್ಲೂಕು ಸಿಪಿಐ (ಎಂ) ಕಾರ್ಯದರ್ಶಿ ಎಸ್.ಎಂ.ಸಾಗರ ಮನವಿ ಮಾಡಿದ್ದಾರೆ.ಭೇಟಿ: ಸತ್ಯಾಸತ್ಯತೆಯನ್ನು ಅರಿಯಲು ಜಿಲ್ಲಾಧಿಕಾರಿಯಾದ ಗುರುನೀತ ತೇಜ್ ಮೇನೆನ್ ಮಂಗಳವಾರ ಕೈಗಾರಿಕೆ ಪ್ರದೇಶದ ಸ್ಥಳಕ್ಕೆ ದೌಡಾಯಿಸಿ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದು ಪ್ರಕರಣ ಕೂತೂಹಲ ಮೂಡಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.