ಸೋಮವಾರ, ಮಾರ್ಚ್ 8, 2021
29 °C

ರಾಕ್‌ ಅಂಡ್‌ ರೋಲ್‌

ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ರಾಕ್‌ ಅಂಡ್‌ ರೋಲ್‌

ರಾಕ್‌ ಅಂಡ್‌ ರೋಲ್‌ ಹಾಗೂ ಕಂಟ್ರಿ ಸಂಗೀತದೆಡೆಗೆ ಪ್ರೀತಿ ಬೆಳೆಸಿಕೊಂಡ ಸಮಾನ ಮನಸ್ಕರು ಕಟ್ಟಿಕೊಂಡ ಬ್ಯಾಂಡ್‌ ‘ಸ್ಟ್ರೇಂಜರ್ಸ್‌’. ಕಣ್ಬಿಟ್ಟ ಎರಡೂವರೆ ತಿಂಗಳಲ್ಲಿ ಕಾರ್ಯಕ್ರಮಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಈ ತಂಡ ಇದೇ ಭಾನುವಾರ ಸಂಗೀತ ಸುಧೆ ಹರಿಸುವ ತಯಾರಿಯಲ್ಲಿದೆ.ಕಾರ್ಪೊರೇಟ್‌ ಕಂಪೆನಿಗಳಲ್ಲಿ ಉತ್ತಮ ಕೆಲಸದಲ್ಲಿದ್ದು, ಬಿಡುವಿನ ವೇಳೆಯಲ್ಲಿ ಸಂಗೀತಾಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಐವರು ಗೆಳೆಯರು ಸೇರಿ ‘ಸ್ಟ್ರೇಂಜರ್‌’ ತಂಡವನ್ನು ಹುಟ್ಟುಹಾಕಿದರು.ಎಮರ್ಶನ್‌ ಕಂಪ್ಯೂಟರ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಅಸ್ಸಾಂನ ವಿಕ್ಕಿ ಮಹಾಂತ (ಡ್ರಮ್ಮರ್‌) ಹಾಗೂ ಸಿಸ್ಕೊ ಕಂಪೆನಿಯಲ್ಲಿ ವೃತ್ತಿಜೀವನ ನಡೆಸುತ್ತಿರುವ ಅಭಿಜಿತ್‌ ಗೋಗೊಯ್‌ (ಲೀಡ್‌ ಗಿಟಾರ್‌) ಮೊದಲಿನಿಂದಲೂ ಸ್ನೇಹಿತರು. ಅಮೆಜಾನ್‌ನಲ್ಲಿ ಕೆಲಸ ಮಾಡುತ್ತಿರುವ ಅರ್ಣಬ್‌ ಕೂಡ ಅಸ್ಸಾಂನವರೇ ಆದ್ದರಿಂದ ಈ ಇಬ್ಬರೊಂದಿಗೆ ಸ್ನೇಹ ಬೆಸೆದುಕೊಂಡಿತು.

ಪರಿಚಯವಾಗುತ್ತಿದ್ದಂತೆ ತಾವೆಲ್ಲ ಸಂಗೀತ ಪ್ರಿಯರು, ಅದರಲ್ಲೂ ರಾಕ್‌ ಅಂಡ್ ರೋಲ್‌ ಹಾಗೂ ಕಂಟ್ರಿ ಸಂಗೀತ ಪ್ರಕಾರದ ಬಗ್ಗೆ ವಿಶೇಷ ಒಲವಿದೆ ಎಂದು  ತಿಳಿದಾಗ ಸಂಗೀತಾಭ್ಯಾಸದಲ್ಲಿ ತೊಡಗಿಕೊಂಡರು.ವಿಕ್ಕಿಯ ಸ್ನೇಹಿತರಾಗಿದ್ದ ಲಿಮಿಟೆಡ್‌ ಬ್ರಾಂಡ್‌ ನೌಕರ ಕಾರ್ತಿಕ್‌ ಶರ್ಮಾ (ಬಾಸ್‌ ಗಿಟಾರ್‌) ಹಾಗೂ ಕರ್ನಾಟಕದವರೇ ಆದ, ಡೆಲಾಯಿಟ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ತರುಣ್‌ ಸುರೇಂದ್ರನಾಥ (ಲೀಡ್‌ ಗಿಟಾರ್‌) ಸಂಗೀತಾಭ್ಯಾಸದಲ್ಲಿ ತೊಡಗಿಕೊಂಡರು.

ವಾರಾಂತ್ಯದಲ್ಲಿ ಸೇರಿ ಸಂಗೀತಾಭ್ಯಾಸದಲ್ಲಿ ತನ್ಮಯರಾದ ಗೆಳೆಯರಿಗೆ ನಿಧಾನವಾಗಿ ಬ್ಯಾಂಡ್‌ ಕಟ್ಟುವ ಬಯಕೆ ಶುರುವಾಯಿತು.‘ಸಂಗೀತಾಭ್ಯಾಸದ ದಾರಿ ಹಿಡಿದು ತುಂಬಾ ಸಮಯವಾಗಿತ್ತು. ಒಂದು ವಾರವೂ ತಪ್ಪಿಸದೆ ಅಭ್ಯಾಸ ಮಾಡುತ್ತಿದ್ದ ನಮಗೆ ತಂಡ ಹೊರಹೊಮ್ಮಿಸುತ್ತಿರುವ ಸಂಗೀತ ಚೆನ್ನಾಗಿ ಮೂಡಿಬರುತ್ತಿದೆ ಎಂಬ ವಿಶ್ವಾಸ ಮೂಡಿತು. ಅದೂ ಅಲ್ಲದೆ ಎಲ್ಲ ಸದಸ್ಯರೂ ಬೇರೆ ಬೇರೆ ಬ್ಯಾಂಡ್‌ಗಳಲ್ಲೂ ಭಾಗವಹಿಸಿದವರೇ ಆದ್ದರಿಂದ ನಮ್ಮ ಕನಸಿಗೆ ನಿರ್ದಿಷ್ಟ ರೂಪು ಕೊಡುವುದು ಕಷ್ಟ ಎನಿಸಲಿಲ್ಲ’ ಎಂದು ಮಾಹಿತಿ ನೀಡುವ ತಂಡದ ಗಾಯಕ ಅರ್ಣಬ್‌, ಶಾಸ್ತ್ರೀಯವಾಗಿ ಸಂಗೀತಾಭ್ಯಾಸ ಮಾಡಿರುವ ವಿಕ್ಕಿ ತಂಡದ ಬೆನ್ನೆಲುಬು ಎಂದು ಹೇಳುವುದುನ್ನು ಮರೆಯುವುದಿಲ್ಲ.ಸಂಗೀತಾಸಕ್ತಿ ಇದ್ದ ಮನೆತನದಲ್ಲಿಯೇ ಹುಟ್ಟಿ ಬೆಳೆದ ಬ್ಯಾಂಡ್‌ ಸದಸ್ಯರಿಗೆ ಚಿಕ್ಕಂದಿನಿಂದಲೂ ತಾವು ಹಾಡಬೇಕು, ಎಲ್ಲರ ಕಿವಿಗಿಂಪು ನೀಡುವ ಸಂಗೀತ ನುಡಿಸಬೇಕು ಎಂಬ ಬಯಕೆ ಇತ್ತು. ಆಸೆಯ ಈಡೇರಿಕೆಯ ಮೊದಲ ಹೆಜ್ಜೆ ಇಟ್ಟ ಸಂಭ್ರಮದಲ್ಲಿರುವ ಸದಸ್ಯರು ಕಾರ್ಯಕ್ರಮ ಇರುವಾಗ ವಾರದ ದಿನಗಳಲ್ಲೂ ಅಭ್ಯಾಸ ಮಾಡುತ್ತಾರೆ. ‘ಎಲ್ಲರೂ ತಪ್ಪದೇ ಹೋಂವರ್ಕ್‌ ಮಾಡಿಕೊಂಡು ಸೇರುತ್ತೇವೆ.ಗುಂಪಾಗಿ ಅಭ್ಯಾಸ ಮಾಡುವಾಗ ಹೊಂದಾಣಿಕೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಪ್ರಾರಂಭದಲ್ಲಿ ಯಾವ ವಯೋಮಾನದವರಿಗೆ ಎಂಥ ಸಂಗೀತ ನೀಡಬೇಕು ಎಂಬ ಗೊಂದಲ ಬಹುವಾಗಿ ಕಾಡುತ್ತಿತ್ತು. ಅದನ್ನು ನಿರ್ಧರಿಸಿದ ನಂತರದಿಂದ ಕಷ್ಟವಾಗಲಿಲ್ಲ’ ಎನ್ನುತ್ತಾರೆ ತಂಡದ ಸದಸ್ಯರು.ಬಯಕೆಗಳು ಒಂದೇ ಆಗಿದ್ದರೂ ಮನೋಧರ್ಮದಲ್ಲಿ ಬದಲಾವಣೆ ಇರುವುದು ಸಹಜ. ಹೀಗಾಗಿ ತಂಡದಲ್ಲಿ ಆಗಾಗ ಮನಸ್ತಾಪಗಳು, ಚರ್ಚೆಗಳು ಬರುತ್ತವೆ. ಆದರೆ ಸಂಗೀತವೇ ಮುಖ್ಯ ಎನಿಸಿ ಅಭ್ಯಾಸಕ್ಕೆ ಕುಳಿತಾಗ ಎಲ್ಲವನ್ನೂ ಮರೆಯುತ್ತಾರೆ. ಕೆಲವು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುವುದು ಅನಿವಾರ್ಯ ಎಂದು ಅರಿತು ನಡೆಯುತ್ತಿರುವ ತಂಡಕ್ಕೆ ಕುಟುಂಬದ ಪ್ರೋತ್ಸಾಹ ಖುಷಿ ನೀಡಿದೆ.ರಾಕ್‌ ಎಂಡ್‌ ರೋಲ್‌ ಹಾಗೂ ಕಂಟ್ರಿ ಸಂಗೀತ ನುಡಿಸುವ ತಂಡಗಳು ಕಡಿಮೆ ಇರುವುದರಿಂದ ಅವಕಾಶಗಳ ಕೊರತೆ ಈ ಸ್ನೇಹಿತರಿಗಿಲ್ಲ. ಪ್ರಾರಂಭದಲ್ಲಿ ಸಿಸಿಆರ್‌, ದಿ ಈಗಲ್ಸ್‌, ಚಕ್‌ಬೆರ್ರಿ, ಎರಿಕ್‌ ಕ್ಲಾಪ್ಟನ್‌, ಕ್ಲಿಫ್‌ ರಿಚರ್ಡ್‌, ದಿ ಡೋರ್ಸ್‌, ಬಾಬ್‌ ದಿಲನ್‌, ದಿ ಬೀಟಲ್ಸ್‌ ಮುಂತಾದವರಿಂದ ಸಂಗೀತ ಸ್ಫೂರ್ತಿ ಪಡೆದು ಅದೇ ಸಂಗೀತವನ್ನು ನುಡಿಸುತ್ತಿದ್ದಾರೆ. ಜನರ ಮನಸ್ಸಿನಲ್ಲಿ ನೆಲೆ ನಿಂತ ಮೇಲೆ ಸ್ವಂತ ಸಂಯೋಜನೆಯ ಸಂಗೀತ ನುಡಿಸುವ ತಯಾರಿಯಲ್ಲಿದೆ ಈ ತಂಡ.ಸಂಗೀತವನ್ನೇ ಉಸಿರಾಗಿಸಿಕೊಂಡಿರುವ ಬ್ಯಾಂಡ್‌ ಮೂಲಕ ದೇಶ ಸುತ್ತಬೇಕು, ಸಂಗೀತ ಸುಧೆ ಹರಿಸಬೇಕು, ದೊಡ್ಡ ದೊಡ್ಡ ಸಂಗೀತಗಾರರ ಮುಂದೆ ಬ್ಯಾಂಡ್‌ ಕಾರ್ಯಕ್ರಮ ನೀಡುವ ಅವಕಾಶ ಗಿಟ್ಟಿಸಿಕೊಳ್ಳಬೇಕು ಎಂಬುದು ಈ ಕಲಾವಿದರ ಮಹದಾಸೆ.

ಪ್ರದರ್ಶನದ ವಿವರ 

ಸ್ಟ್ರೇಂಜರ್ಸ್‌ ತಂಡದಿಂದ ಸಂಗೀತ: ಆಯೋಜನೆ– ಗಿಟಾರ್‌ ಕ್ಲಬ್‌. ಸ್ಥಳ: ಹಾರ್ಡ್‌ ರಾಕ್‌ ಕೆಫೆ. ಭಾನುವಾರ ಸಂಜೆ 7.30. ಮಾಹಿತಿಗೆ– www.guitarclub.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.