ಮಂಗಳವಾರ, ಮಾರ್ಚ್ 2, 2021
31 °C

ರಾಜಕೀಯದಲ್ಲಿ ಮುಂದೆ, ಅಭಿವೃದ್ಧಿಯಲ್ಲಿ ಹಿಂದೆ!

ಉಮಾಶಂಕರ ಬ. ಹಿರೇಮಠ Updated:

ಅಕ್ಷರ ಗಾತ್ರ : | |

ರಾಜಕೀಯದಲ್ಲಿ ಮುಂದೆ, ಅಭಿವೃದ್ಧಿಯಲ್ಲಿ ಹಿಂದೆ!

ಯಲಬುರ್ಗಾ: ರಾಜಕೀಯ ಮತ್ತು ಸಾಮಾ­ಜಿಕವಾಗಿ ಮುಂಚೂಣಿಯಲ್ಲಿರುವ ಕರಮುಡಿ ಗ್ರಾಮ ಅಭಿವೃದ್ಧಿಯಲ್ಲಿ ಮಾತ್ರ ಹಿನ್ನಡೆ ಅನುಭವಿಸುತ್ತಿದೆ. ಗ್ರಾಮದ ಗಣ್ಯಾತೀಗಣ್ಯರು ರಾಜ್ಯ ರಾಜಕೀಯದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಹಾಗೆಯೇ ಶೈಕ್ಷಣಿಕವಾಗಿಯೂ ಉನ್ನತ ಸ್ಥಾನಮಾನ ಕಂಡುಕೊಂಡು ಗ್ರಾಮ­ವನ್ನು ನಾಡಿ­ನೂದ್ದಗಲಕ್ಕೂ ಹರಡುವಂತೆ ಮಾಡಿದ್ದಾರೆ. ಆದರೆ ಗ್ರಾಮ ಮಾತ್ರ ಕೊಳಗೇರಿಯಾಗಿಯೇ ಮುಂದುವರಿ­ಯುತ್ತಿರು­ವುದು ಮಾತ್ರ ವಿಪರ್ಯಾಸದ ಸಂಗತಿ.ಇತರೆ ಗ್ರಾಮ ಪಂಚಾಯಿತಿಗಳಿಗೆ ಹರಿದು ಬರುವ ರೀತಿಯಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಈ ಪಂಚಾಯಿತಿಗೂ ಸಾಕಷ್ಟು ಅನುದಾನ ಹರಿದು ಬರುತ್ತಿದೆ ಆದರೆ ನಿರೀಕ್ಷೆಯಂತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದಿರುವುದು ಗ್ರಾಮ ಹಿಂದುಳಿಯುವಂತೆ ಮಾಡಿದೆ.

ಸಂಬಂಧಪಟ್ಟ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯ ಧೋರಣೆಯಿಂದಾಗಿ ಗ್ರಾಮದ ಪ್ರಾಚೀನ ದೇವಾಲಯಗಳು ಅವಸಾನದ ಅಂಚಿನಲ್ಲಿವೆ. ಊರ ಮುಂದಿನ ದೊಡ್ಡ ಕೆರೆ ಸುತ್ತಲೂ ಒತ್ತೂವರೆಯಾಗಿದ್ದಲ್ಲದೇ ಸಾರ್ವಜನಿಕರು ತಿಪ್ಪೆ ಹಾಕಲು ಬಳಸಿಕೊಳ್ಳುತ್ತಿರುವುದರಿಂದ ಕ್ರಮೇಣ ಕ್ಷೀಣಿಸುತ್ತಾ ಸಾಗಿದೆ. ಒಂದೊಮ್ಮೆ ಗ್ರಾಮದ ಜೀವಾಳವಾಗಿದ್ದ ಈ ಊರ ಮುಂದಿನ ಕೆರೆ ಶೀಘ್ರದಲ್ಲಿಯೇ  ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಸ್ಥಳೀಯ ಮಲ್ಲಿಕಾರ್ಜುನ ಅವರು ಕಳವಳ ವ್ಯಕ್ತಪಡಿಸಿದರು.ಗ್ರಾಮದಲ್ಲಿ ಸಾಕಷ್ಟು ನೀರಿನ ಮೂಲಗಳಿದ್ದರೂ ಸರಿಯಾದ ನಿರ್ವಹಣೆ ಇಲ್ಲದೇ ಸಾಕಷ್ಟು ನೀರು ವ್ಯರ್ಥವಾಗಿ ಹರಿದು ಹೋಗುತ್ತಿವೆ. ಅಲ್ಲದೇ ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಿಮೆಂಟ್‌ ರಸ್ತೆ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ರಸ್ತೆಯ ಮೇಲೆಯೇ ಸಾಕಷ್ಟು ಕೊಳಚೆ ನೀರು ಹರಿದು ಹೋಗುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಅಲ್ಲದೆ ಸೊಳ್ಳೆಗಳ ತಾಣವಾಗಿ ಗ್ರಾಮಸ್ಥರ ಅನಾರೋಗ್ಯಕ್ಕೆ ಕಾರಣವಾಗುತ್ತಿವೆ. ಈ ಬಗ್ಗೆ ಪಂಚಾಯಿತಿಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನೀರಿನ ಟ್ಯಾಂಕ್‌ಗಳ ಶುದ್ಧೀಕರಣವಾಗದೆ ಸುಮಾರು ವರ್ಷಗಳೇ ಕಳೆದಿವೆ. ಈ ಬಗ್ಗೆ ಪಂಚಾಯಿತಿ ಸಿಬ್ಬಂದಿ ಆಸಕ್ತಿ ತೋರುತ್ತಿಲ್ಲ. ಅಧಿಕಾರಿಗಳ ಉದಾಸೀನತೆ ಗ್ರಾಮದ ಜನತೆ ವಿವಿಧ ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆಪಾದನೆ.ಪ್ರಾಚೀನ ಕುಸುಮೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ವಿಶೇಷ ಅನುದಾನ ಮಂಜೂರು ಮಾಡಿ ಅಭಿವೃದ್ಧಿಗೊಳಿಸಿ ಗ್ರಾಮದ ಅಭಿವೃದ್ಧಿಗೆ ಮುಂದಾಗಬೇಕು. ಗ್ರಾಮದಲ್ಲಿರುವ ಮತ್ತೊಂದು ದೇವಾಲಯದ ಬಹುಭಾಗ ಕುಸಿದಿದೆ ಇದನ್ನು ಪುನರ್‌ ನಿಮಾರ್ಣಕ್ಕೆ ಜಿಲ್ಲಾ ಆಡಳಿತ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ ಅವರ ಆಗ್ರಹವಾಗಿದೆ.ಕೆರೆ ಅಭಿವೃದ್ಧಿಗೊಳಿಸಿ

ಕುಡಿಯುವ ನೀರಿಗಾಗಿ ಕೆರೆಯನ್ನೇ ಅವಲಂಬಿಸಿದ ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಸರ್ಕಾರ ಕ್ರಿಯಾಶೀಲವಾಗಿದೆ. ಚುನಾಯಿತ ಪ್ರತಿನಿಧಿಗಳ ಭರವಸೆಗಳು ಈಡೇರದೆ ಇರುವುದರಿಂದ ಗ್ರಾಮ ಅಭಿವೃದ್ಧಿಯಲ್ಲಿ ವಂಚಿತವಾಗಿದೆ. ಕುಡಿಯುವ ನೀರಿನ ಕೆರೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಗೊಳಿಸಬೇಕು.

–ರಾಮಣ್ಣ ಮಾನಶೆಟ್ರ, ಗಣ್ಯರು  ಕರಮುಡಿಯೋಜನೆಗಳು ಜಾರಿಯಾದರೆ ಅಭಿವೃದ್ಧಿ


ಕರಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಮಂಜೂರಾದ ಸರ್ಕಾರಿ ಯೋಜನೆಗಳು ಸರಿಯಾಗಿ ಅನುಷ್ಠಾನಗೊಂಡರೆ ಮಾದರಿ ಗ್ರಾಮವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಗುತ್ತಿಗೆದಾರರು ಶಾಮೀಲಾಗಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದರಿಂದ ಅಭಿವೃದ್ಧಿಯಲ್ಲಿ ವಂಚಿತವಾಗಿದೆ. ಮುಖ್ಯವಾಗಿ ಗ್ರಾಮದ ಅಭಿವೃದ್ಧಿಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ವಿದ್ಯಾರ್ಥಿಗಳ ವಸತಿ ನಿಲಯ ಹಾಗೂ ಸಮರ್ಪಕ ಸಾರಿಗೆ ಸೌಲಭ್ಯ ಹಾಗೂ ವಸತಿ ಶಾಲೆ ಸ್ಥಾಪನೆಗೊಳ್ಳುವುದು ಅಗತ್ಯವಿದೆ.

– ಶರಣಪ್ಪ ಶಂಕ್ರಪ್ಪ ನಿಂಗೋಜಿ ಮಾಜಿ ಗ್ರಾಪಂ ಸದಸ್ಯರು ಕರಮುಡಿ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.