ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಶುದ್ಧೀಕರಣ

ಕಳಂಕಿತ ಸಂಸದರ ವಿರುದ ಕ್ರಮ: ಮೋದಿ ಭರವಸೆ
Last Updated 21 ಏಪ್ರಿಲ್ 2014, 20:07 IST
ಅಕ್ಷರ ಗಾತ್ರ

ಹರ್ದೋಯಿ  /ಉತ್ತರ ಪ್ರದೇಶ  (ಪಿಟಿಐ): ರಾಜಕೀಯ ವ್ಯವಸ್ಥೆಯಲ್ಲಿ ಸುಧಾರಣೆ, ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಸಂಸದರ ವಿರುದ್ಧ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಹಾಗೂ ಸಂಸತ್ತನ್ನು ಅಪರಾಧಿಗಳಿಂದ ಮುಕ್ತಗೊ­ಳಿಸುವ ಭರವಸೆಯನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನೀಡಿದ್ದಾರೆ.

ಸೋಮವಾರ ಇಲ್ಲಿ ನಡೆದ ಚುನಾ­ವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಕ್ರಿಮಿನಲ್‌ ಹಿನ್ನೆಲೆ ಇರುವ ಎಲ್ಲಾ ಪಕ್ಷಗಳ ಸಂಸದರ ವಿರುದ್ಧ ಕಿಡಿಕಾರಿದರು. ‘ಸಂಸತ್‌ ಶುದ್ಧಿಯಾಗ­ಬೇಕಿದ್ದರೆ ಮೊದಲು ಕ್ರಿಮಿನಲ್‌ ಹಿನ್ನೆಲೆ ಇರುವವರನ್ನು ರಾಜಕೀಯದಿಂದ ದೂರವಿರಿಸಬೇಕು. ಈ ನಿಟ್ಟಿನಲ್ಲಿ ಸಂಸದರ ವಿರುದ್ಧ ಇರುವ ಪ್ರಕರಣ­ಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸುಪ್ರೀಂ ಕೋರ್ಟನ್ನು ಕೋರಲಾಗುವುದು. ತಪ್ಪಿತಸ್ಥರನ್ನು ಮುಲಾಜಿಲ್ಲದೆ ಜೈಲಿಗಟ್ಟಲಾಗುವುದು. ಅಂತಹ ಕಠಿಣ ಕ್ರಮ ಕೈಗೊಂಡಲ್ಲಿ ಕಳಂಕಿತ ವ್ಯಕ್ತಿಗಳು ಚುನಾವಣೆ ಎದುರಿ­ಸುವ ಧೈರ್ಯ ಮಾಡುವುದಿಲ್ಲ.’ ಎಂದರು.

‘ಮೇ 16ರ ನಂತರ ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಹೊಸ ಸರ್ಕಾರ ರಚನೆಯಾದ ಕೂಡಲೇ ನಾನು ಮಾಡುವ ಮೊದಲ ಕೆಲಸ ಯಾರ್‍್ಯಾರ (ಲೋಕಸಭಾ ಸದಸ್ಯರು) ವಿರುದ್ಧ ಎಷ್ಟೆಷ್ಟು ಪ್ರಕರಣಗಳು ಬಾಕಿ ಇವೆ ಎಂದು ತಿಳಿಯಲು ಸಮಿತಿ ರಚಿಸಿ,  ತನಿಖೆ ನಡೆಸುವುದು. ಈ ವಿಚಾರದಲ್ಲಿ ನಮ್ಮವರು (ಬಿಜೆಪಿ/ಎನ್‌ಡಿಎ) ಮತ್ತು ಇತರರು ಎಂಬ ಭೇದ ಖಂಡಿತ ಮಾಡುವುದಿಲ್ಲ’ ಎಂದರು.

ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ ವಿರುದ್ಧ ಟೀಕೆ: ‘ಸಮಾಜವಾದಿ ಪಕ್ಷ (ಎಸ್‌ಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಕಾಂಗ್ರೆಸ್‌ ಪಕ್ಷ,  ಅಧಿಕಾರಕ್ಕಾಗಿ ಆಡುತ್ತಿರುವ ಆಟಗಳು ಎಲ್ಲರಿಗೂ ಗೊತ್ತಿದೆ. ಉತ್ತರ ಪ್ರದೇಶದಲ್ಲಿನ ಈ ದಾರುಣ ಸ್ಥಿತಿಗೆ ಈ ಪಕ್ಷಗಳೇ ಕಾರಣ’ ಎಂದು ಅವರು ದೂಷಿಸಿದರು.

‘ದೇಶವನ್ನು ತಾಯಿ ಮತ್ತು ಮಗ (ಸೋನಿಯಾ, ರಾಹುಲ್‌) ಹಾಳು ಮಾಡಿದರೆ, ಈ ರಾಜ್ಯವನ್ನು ಅಪ್ಪ ಹಾಗೂ ಮಗ (ಮುಲಾಯಂ, ಅಖಿಲೇಶ್‌) ನಾಶ ಮಾಡುತ್ತಿದ್ದಾರೆ. ಬೆಹನ್‌ಜಿ (ಮಾಯಾವತಿ) ಅವರು ಮಾಡಿದ್ದು ಇಂತಹ ಕಾರ್ಯವನ್ನೆ. ಎಸ್‌ಪಿ ಮತ್ತು ಬಿಎಸ್‌ಪಿಗಳು ತಮ್ಮ ಆಡಳಿತದಲ್ಲಿ ಪರಸ್ಪರ ಪ್ರತೀಕಾರ ತೀರಿಸಿಕೊಳ್ಳುವ ಕಾರ್ಯವನ್ನೇ ಮಾಡಿವೆ’ ಎಂದು ದೂರಿದರು.

ಕಾಂಗ್ರೆಸ್‌, ಎಸ್‌ಪಿ ಪಕ್ಷಗಳು ವಂಶಪಾ-­ರಂಪರ್‍ಯ ಆಡಳಿತ, ಸ್ವಜನಪಕ್ಷಪಾತ ಮಾಡುತ್ತಿವೆ ಎಂದ ಮೋದಿ, ಈ ಬಗ್ಗೆ ಸೋನಿಯಾ ಗಾಂಧಿ ಮತ್ತು ಅವರ ಅಳಿಯ ರಾಬರ್ಟ್‌ ವಾಧ್ರಾ ಅವರನ್ನು ಟೀಕಿಸಿದರು.
ಬಡತನವೂ ಪ್ರವಾಸೋದ್ಯಮ: ‘ಆಗ್ರಾದ ತಾಜ್‌­ಮಹಲ್‌ನ ಭವ್ಯತೆ ಕಾಣಲು ಪ್ರವಾಸಿಗರು ಬಂದಂತೆ, ಚಿನ್ನದ ಚಮಚವನ್ನು ಬಾಯಿಲ್ಲಿ­ಟ್ಟುಕೊಂಡು ಹುಟ್ಟಿದ ಶ್ರೀಮಂತರು ಬಡತನವನ್ನು ಕಣ್ಣಾರೆ ಕಾಣುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ.’

‘ಹಾಗೆಯೇ ರಾಹುಲ್‌ ಭಯ್ಯಾ ಬಡವರ ಮನೆಗಳಿಗೆ ಹೋಗು­ತ್ತಿ­­ದ್ದಾರಷ್ಟೆ. ಇದೊಂದು ರೀತಿಯ ಬಡತನದ ಪ್ರವಾಸೋದ್ಯಮ’ ಎಂದು ರಾಹುಲ್‌ ಗಾಂಧಿ ಅವರನ್ನು  ಲೇವಡಿ ಮಾಡಿದರು.

‘ಬಡವರ ಮನೆಗೆ ರಾಹುಲ್‌ ಅವರು ಭೇಟಿ ನೀಡಿದಾಗ ಅವರನ್ನು ಸುದ್ದಿ ವಾಹಿನಿಗಳ ಕ್ಯಾಮೆರಾಗಳು ಹಿಂಬಾಲಿ­ಸುತ್ತವೆ. ಆ ಮನೆಯ ಮಗುವೊಂದನ್ನು ಎತ್ತಿ ತೊಡೆ ಮೇಲೆ ಕೂರಿಸಿಕೊಳ್ಳುವ ರಾಹುಲ್‌ ಆ  ದೃಶ್ಯ ಕ್ಯಾಮೆರಾದಲ್ಲಿ ದಾಖಲಾದ ನಂತರ ಮಗುವನ್ನು ಕೆಳಗಿಳಿಸುತ್ತಾರೆ’ ಎಂದ ಮೋದಿ, ಬಾಲ್ಯದಲ್ಲಿ ತಾವು ಅನುಭವಿ­ಸಿದ ಬಡತನ­ವನ್ನು ನೆನಪಿಸಿ­ಕೊಂಡರು.

ಚಹ ಮಾರಾಟಗಾರನೆಂಬ ಹೆಮ್ಮೆ: ‘ನಾನು ಬಡವರ ಮನೆ­ಯಲ್ಲಿ ಹುಟ್ಟಿದವ. ಬಾಲ್ಯದಲ್ಲಿ ಚಹ ಮಾರುತ್ತಿದ್ದೆ. ಮೈಕೊರೆ­ಯುವ ಚಳಿಗಾಲದ ರಾತ್ರಿ­ಗಳನ್ನು ಸ್ವತಃ ಅನುಭವಿಸಿದ್ದೇನೆ. ಚಹ ತಣ್ಣಗಾಗಿದೆ ಎಂದು ಜನರು ನನ್ನ ಕೆನ್ನೆಗೆ ಹೊಡೆದ ಏಟುಗಳನ್ನು ಮರೆತಿಲ್ಲ. ಅದರ ಕಲೆಗಳು ಈಗಲೂ ಇವೆ’ ಎಂದು ಅವರ ಹೇಳಿದರು.

‘ಚಹ ಮಾರಾಟಗಾರ ಎಂಬ ಹೀಯಾಳಿಕೆ­ಯಿಂದಾಗಿ ನಾನೇನೂ ಅವಮಾನಿತನಾಗಿಲ್ಲ. ಬದಲಿಗೆ ಚಹ ಮಾರಾಟ ಮಾಡುತ್ತಿದ್ದೆ ಎಂಬ ಹೆಮ್ಮೆ ಇದೆ. ಆದರೆ, ಅವರು (ಕಾಂಗ್ರೆಸ್‌, ಎಸ್‌ಪಿ, ಬಿಎಸ್‌ಪಿಗಳ ಟೀಕಾಕಾರರು) ಮಾಡಿದ್ದೇನು? ದೇಶವನ್ನೇ ಮಾರಾಟ ಮಾಡಿದರು’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT