ಶನಿವಾರ, ಏಪ್ರಿಲ್ 17, 2021
32 °C

ರಾಜಕೀಯ ಹೆಜ್ಜೆ ಸ್ಪಷ್ಟತೆ ಇಲ್ಲ: ಎಸ್.ಎಂ.ಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೀಯ ಹೆಜ್ಜೆ ಸ್ಪಷ್ಟತೆ ಇಲ್ಲ: ಎಸ್.ಎಂ.ಕೃಷ್ಣ

ಬೆಂಗಳೂರು: ರಾಜಕೀಯ ಜೀವನದ ಮುಂದಿನ ಹೆಜ್ಜೆ ಕುರಿತು ತಮಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಹೇಳಿದರು.ವಿದೇಶಾಂಗ ವ್ಯವಹಾರಗಳ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಶುಕ್ರವಾರ ಮೊದಲ ಬಾರಿಗೆ ಅವರು ಬೆಂಗಳೂರಿಗೆ ಬಂದರು. ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸಂಜೆ ಪತ್ರಕರ್ತರ ಜೊತೆ ಮಾತನಾಡಿದ ಅವರು, `ರಾಜಕೀಯದ ಮುಂದಿನ ದಾರಿ ಬಗ್ಗೆ ಈಗ ನನಗೆ ಸ್ಪಷ್ಟತೆ ಇಲ್ಲ. ಸದ್ಯದ ರಾಜಕೀಯ ಪರಿಸ್ಥಿತಿ ಕುರಿತು ಈಗ ಯಾವುದೇ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ~ ಎಂದರು.`ಮೂರೂವರೆ ವರ್ಷಗಳ ಕಾಲ ವಿದೇಶಾಂಗ ವ್ಯವಹಾರಗಳ ಸಚಿವನಾಗಿ ಎಂಟು ಲಕ್ಷ ಕಿ.ಮೀ. ಪ್ರಯಾಣ ಮಾಡಿದ್ದೇನೆ. ಹೊರಗಿನಿಂದ ನೋಡುವವರಿಗೆ ಪ್ರಯಾಣ ಸುಲಭ ಎಂಬ ಭಾವನೆ ಇರಬಹುದು. ಆದರೆ, ಓಡಾಟ ಮಾಡುವವರಿಗೆ ಅದರಿಂದ ಆಗುವ ಪ್ರಯಾಸ ತಿಳಿದಿರುತ್ತದೆ. ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲು ನಾನು ಬಯಸಿದ್ದೇನೆ. ವಿಶ್ರಾಂತಿಯ ಬಳಿಕವೇ ಮುಂದಿನ ದಾರಿಯ ಬಗ್ಗೆ ಯೋಚಿಸುತ್ತೇನೆ~ ಎಂದು ಹೇಳಿದರು.`ದೇವನಹಳ್ಳಿಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕ್ಷಣದಿಂದ ಮನೆ ತಲುಪುವವರೆಗೂ ನನ್ನ ಸ್ನೇಹಿತರು, ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಹೃದಯಸ್ಪರ್ಶಿ ಸ್ವಾಗತ ನೀಡಿದ್ದಾರೆ.

ರಾಜಕೀಯ ಜೀವನದಲ್ಲಿ ಇರುವವರು ನಿಸ್ವಾರ್ಥ ಭಾವನೆಯಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ದೇಶ, ರಾಜ್ಯದ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರ ದೊರಕಿಸಲು ಶ್ರಮಿಸಿದರೆ ಅಧಿಕಾರದಲ್ಲಿ ಇಲ್ಲದ ಸಂದರ್ಭದಲ್ಲೂ ಜನರು ನಮ್ಮನ್ನು ಪ್ರೀತಿಸುತ್ತಾರೆ ಎಂಬ ಸಂದೇಶ ಇದರಿಂದ ರವಾನೆಯಾಗಿದೆ~ ಎಂದರು.`ವಿಮಾನ ನಿಲ್ದಾಣಕ್ಕೆ ಹೆಚ್ಚು ಜನರು ಬಂದರೆ ಸಾರ್ವಜನಿಕರಿಗೆ ತೊಂದರೆ ಆಗಬಹುದು ಎಂದು ಮೊದಲೇ ನಾನು ಮನವಿ ಮಾಡಿದ್ದೆ. ಆದರೂ ಸಾವಿರಾರು ಸಂಖ್ಯೆಯಲ್ಲಿ ಸ್ನೇಹಿತರು, ಕಾರ್ಯಕರ್ತರು ಅಲ್ಲಿಗೆ ಬಂದು ಸ್ವಾಗತ ಕೋರಿದರು. ದಾರಿಯುದ್ದಕ್ಕೂ ಜನರು ಅತ್ಯಂತ ಪ್ರೀತಿ, ಆದರಗಳಿಂದ ಸ್ವಾಗತಿಸಿದರು. ಈ ಪ್ರೀತಿಯನ್ನು ಮುಂದೆಯೂ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ~ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.