ಶನಿವಾರ, ಮೇ 21, 2022
28 °C

ರಾಜಧಾನಿ ಚರಿತೆ ಹಾಗೂ ಯಶೋಗಾಥೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಾಜಧಾನಿ’ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ. ವೇದಿಕೆಯ ಮೇಲೆ ಗೃಹ ಸಚಿವ ಆರ್. ಅಶೋಕ್ ಇದ್ದರು. ನಾಯಕನಟರಾದ ಸುದೀಪ್ ಹಾಗೂ ಯಶ್ ಇದ್ದರು. ತಾರಾ, ರಾಗಿಣಿ ಜೊತೆಗೆ ನಿರ್ಮಾಪಕ ಶಂಕರೇಗೌಡ ಇದ್ದರು. ಆದರೆ, ‘ರಾಜಧಾನಿ’ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರೇ ಇರಲಿಲ್ಲ. ವೇದಿಕೆಯ ಮೇಲೆ ಚಿತ್ರತಂಡದವರಿಗಿಂತ ಮುಖ್ಯ ಅತಿಥಿಗಳೇ ಹೆಚ್ಚಾಗಿದ್ದರು.‘ರಾಜಧಾನಿ’ ಚಿತ್ರದ ನಾಯಕ ಯಶ್. ಅವರು ಚಿತ್ರದ ಸಾಹಸ ದೃಶ್ಯವೊಂದರಲ್ಲಿ ಕಟ್ಟಡವೊಂದರ ಇಪ್ಪತ್ತನಾಲ್ಕನೇ ಅಂತಸ್ತಿನಿಂದ ಕೆಳಗೆ ಜಿಗಿದಿದ್ದಾರಂತೆ. ಈ  ಸಾಹಸಮಯ ದೃಶ್ಯವನ್ನು ಯಶ್ ಅಳುಕಿಲ್ಲದೆ ಮಾಡಿದರು ಎಂದು ಚಿತ್ರದ ಸಹಾಯಕ ನಿರ್ದೇಶಕ ಶರಣಪ್ಪ ಹೊಗಳಿದರು.ಯಶ್ ಅವರ ಉತ್ಸಾಹ ಸುದೀಪ್ ಅವರಿಗೂ ಇಷ್ಟವಾಗಿತ್ತು. ಆದರೆ ಅವರ ಮೆಚ್ಚುಗೆಯ ಮಾತುಗಳಲ್ಲಿ ಎಚ್ಚರಿಕೆಯ ಹಿತನುಡಿಯೂ ಇತ್ತು. ‘ಯೌವನದಲ್ಲಿ ಉತ್ಸಾಹ ಇರುತ್ತದೆ. ಇದೀಗ ತುಂಬಾ ತಾಂತ್ರಿಕತೆ ಬಂದಿರುವುದರಿಂದ ಹಾಗೆ ಜಿಗಿಯುವ ಸಾಹಸವನ್ನು ಯಶ್ ಮಾಡಬಾರದು. ಆರೋಗ್ಯ ತುಂಬಾ ಮುಖ್ಯ’ ಎನ್ನುವುದು ಅವರ ಸಲಹೆ.ಯಶ್‌ಗೆ ಸುದೀಪ್ ಸಲಹೆ ನೀಡಿದರೆ, ಅವರಿಗೆ ಸಲಹೆ ನೀಡಿದ್ದು ನಟಿ ತಾರಾ. ‘ಸುದೀಪ್ ಇತರರಿಗೆ ಸಲಹೆ ನೀಡುವ ಮೊದಲು ತಾವು ಆರೋಗ್ಯ ಸರಿ ಇಲ್ಲದಿದ್ದರೂ ಕೆಲಸ ಮಾಡುವ ಪ್ರವೃತ್ತಿಯನ್ನು ಬಿಡಬೇಕು’ ಎನ್ನುವುದು ಅವರು ಪ್ರೀತಿಯಿಂದಲೇ ಮಾಡಿದ ಒತ್ತಾಯ.ಅಂದಹಾಗೆ, ‘ರಾಜಧಾನಿ’ ಹಲವು ಕನಸು ಮತ್ತು ಆಸೆಗಳನ್ನು ಹೊತ್ತಿರುವ ಯುವಕರ ಕತೆ. ಎದುರಾಗುವ ಅಡ್ಡಿ ಆತಂಕಗಳನ್ನು ಎದೆಯೊಡ್ಡಿ ಬದುಕು ರೂಪಿಸಿಕೊಳ್ಳುವ ಕತೆ. ಸಿನಿಮಾ ತಾಂತ್ರಿಕವಾಗಿ ಅದ್ಭುತವಾಗಿದೆ, ಮಾರ್ಚ್‌ನಲ್ಲಿ ‘ರಾಜಧಾನಿ’ ಬಿಡುಗಡೆಯಾಗಲಿದೆ ಎಂಬುದು ಚಿತ್ರತಂಡದ ಮಾತು.

‘ಚಿತ್ರದಲ್ಲಿ ಎಲ್ಲರ ಕೆಲಸ ಅಚ್ಚುಕಟ್ಟಾಗಿದೆ. ಅರ್ಜುನ್ ಡಾನ್ಸ್‌ಗೆ ಅವಕಾಶ ಇರುವ ಟ್ಯೂನ್‌ಗಳನ್ನು ಕೊಟ್ಟಿದ್ದಾರೆ’ ಎಂದು ನಗುನಗುತ್ತಾ ಮಾತನಾಡಿ ಕುಳಿತರು ಯಶ್.ಸಂಗೀತ ನಿರ್ದೇಶಕ ಅರ್ಜುನ್ ಈ ಚಿತ್ರಕ್ಕಾಗಿ ಕವಿ ಡಿ.ವಿ.ಗುಂಡಪ್ಪನವರ ಅವರ ‘ಮಂಕುತಿಮ್ಮನ ಕಗ್ಗ’ದ ‘ತೊಟ್ಟಿಲುಗಳೆಷ್ಟು..’ ಪದ್ಯ ಬಳಸಿಕೊಂಡಿದ್ದಾರಂತೆ. ಕೆ.ವಿ.ರಾಜು ಅವರಂಥ ನಿರ್ದೇಶಕರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಅವರು,  ‘ಚಿತ್ರದ ರೀರೆಕಾರ್ಡಿಂಗ್ ಸವಾಲು ಎನಿಸಿತು. ಯಾಕೆಂದರೆ ಸ್ಕ್ರಿಪ್ಟ್ ಅಂಥಹುದು’ ಎಂದು ಕುತೂಹಲ ಹುಟ್ಟಿಸುವಂತೆ ಮಾತನಾಡಿದರು.ಹಾಡು ಬರೆದಿರುವ ಶಿವನಂಜೇಗೌಡರು ‘ಅಪ್ಪ ಅಮ್ಮ ಬೈತಾರೋ..’ ಎಂದು ಆರಂಭವಾಗುವ ಯುವಕರ ಆಸೆ, ಆಕಾಂಕ್ಷೆಗಳನ್ನು ಹೇಳುವ ಹಾಡು ಬರೆದಿರುವುದಾಗಿ ಹೇಳಿದರು.‘45 ದಿನ ಚಿತ್ರೀಕರಣ ನಡೆಯಿತು. ಕೋಲಾರ ಮತ್ತು ಗೋವಾದಲ್ಲಿ ಹಾಡುಗಳ ಚಿತ್ರೀಕರಣ ಮಾಡಲಾಗಿದೆ. ನಿರ್ದೇಶಕ ಕೆ.ವಿ.ರಾಜು ಪ್ರತಿ ಹಂತದಲ್ಲೂ ಚಿತ್ರಕ್ಕೆ ಸಹಕರಿಸಿದರು’ ಎಂದರು ಸಹ ನಿರ್ದೇಶಕ ಶರಣಪ್ಪ.ಸಚಿವ ಆರ್.ಅಶೋಕ್ ಮಾತಿನಲ್ಲಿ ಚಿತ್ರರಂಗಕ್ಕೆ ಸರ್ಕಾರ ಬೆಂಬಲವಾಗಿ ನಿಂತಿರುವ ಸೂಚನೆಯಿತ್ತು. ‘ಕಂಠೀರವ ಸ್ಟುಡಿಯೋ ನವೀಕರಣ, ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿತ್ರಿಕರಣಕ್ಕೆ ಸುಲಭ ಅವಕಾಶ ಮುಂತಾಗಿ ಉದ್ಯಮ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಬೆಂಬಲ ಸೂಚಿಸುತ್ತಿದೆ. ಪೈರಸಿ ಸಮಸ್ಯೆಯನ್ನು ಮೆಟ್ಟುವಂತೆ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು.ಚಿತ್ರಗಳ ವಿಫಲತೆಗೆ ಸಮಸ್ಯೆ ಎಲ್ಲಿದೆ ಎಂದು ತಿಳಿದುಕೊಂಡು ಅದನ್ನು ಪರಿಹರಿಸಿಕೊಳ್ಳಬೇಕು. ಅದಕ್ಕೆ ನೆರವಾಗಲು ಸರ್ಕರ ಸಿದ್ಧವಿದೆ’ ಎಂದು ಸಚಿವರು ಅಭಯ ಇತ್ತರು. ‘ಚಿತ್ರದ ನಾಯಕ ಯಶ್ ತಮ್ಮ ಸಾರಿಗೆ ಸಂಸ್ಥೆಯ ನೌಕರರ ಮಗ’ ಎಂದು ಮೆಚ್ಚಿಕೊಂಡ ಅವರು ‘ರಾಜಧಾನಿ’ಗೆ ಶುಭ ಕೋರಿದರು. ರಾಗಿಣಿ, ಶಂಕರೇಗೌಡ, ಆನಂದ್ ಆಡಿಯೋ ಮಾಲೀಕ ಮೋಹನ್ ಚಿತ್ರಕ್ಕೆ ಶುಭ ಕೋರಿದವರಲ್ಲಿ ಸೇರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.