ಸೋಮವಾರ, ಮೇ 17, 2021
29 °C
ಸಚಿವ ಲಾಡ್ ತರಾಟೆ: ವೈದ್ಯರ ಅಸಮಾಧಾನ

ರಾಜೀನಾಮೆಗೆ ಮುಂದಾದ ಕಿಮ್ಸ ನಿರ್ದೇಶಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಕಿಮ್ಸ) ದಿಢೀರ್ ಭೇಟಿ ನೀಡಿದ ಸಚಿವ ಸಂತೋಷ್ ಲಾಡ್ ಅವರ ಕಟು ಮಾತಿನಿಂದ ನೊಂದು ಸಂಸ್ಥೆಯ ನಿರ್ದೇಶಕಿ ಡಾ. ವಸಂತಾ ಕಾಮತ್ ರಾಜೀನಾಮೆಗೆ ಮುಂದಾದ ಪ್ರಸಂಗ ಶನಿವಾರ ನಡೆಯಿತು.ಡೆಂಗೆಗೆ ಬಾಲಕಿಯೊಬ್ಬಳು ಬಲಿಯಾದ ಹಿನ್ನೆಲೆಯಲ್ಲಿ ವೈದ್ಯರಿಗೆ ಧಾರವಾಡ ಶಾಸಕ ವಿನಯ ಕುಲಕರ್ಣಿ ಥಳಿಸಿದ ಘಟನೆ ಇನ್ನೂ ಹಸಿಯಾಗಿರುವಾಗಲೇ ಕಿಮ್ಸನಲ್ಲಿ ಮತ್ತೊಮ್ಮೆ ರಾಜಕಾರಣಿಗಳು ಮೇಲಾಟ ಮೆರೆದ ಕಾರಣ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವೈದ್ಯಕೀಯ ಸಿಬ್ಬಂದಿ ಮಧ್ಯಾಹ್ನ ಸಭೆ ಸೇರಿ ಘಟನೆಯನ್ನು ಖಂಡಿಸಿದರು.ಶುಕ್ರವಾರ ಬೆಳಿಗ್ಗೆ ಧಾರವಾಡದ ಹೊರವಲಯದಲ್ಲಿ ಸಂಭವಿಸಿದ ರಸ್ತೆ ಅಪಘಾತದ ಗಾಯಾಳುಗಳನ್ನು ಲಾಡ್ ಶುಕ್ರವಾರ ರಾತ್ರಿ ಕಿಮ್ಸನಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಶನಿವಾರ ಬೆಳಿಗ್ಗೆ ಮತ್ತೆ ಆಸ್ಪತ್ರೆಗೆ ಬಂದ ಅವರು ವಿವಿಧ ವಿಭಾಗಗಳನ್ನು ಪರಿಶೀಲಿಸಿದರು. ಜನರಲ್ ವಾರ್ಡ್ ಬಳಿ ತುಂಬಿದ್ದ  ಕಸದ ಡಬ್ಬವನ್ನು ಕಂಡು ರೇಗಿ ಜೊತೆಯಲ್ಲಿದ್ದ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಏಕವಚನದಲ್ಲೇ ನಿಂದಿಸಿದ್ದರು. ಜತೆಗೆ ಇತರೆ ಸಿಬ್ಬಂದಿ ಮೇಲೂ ರೇಗಾಡಿದ್ದರು. ಕಸದ ಡಬ್ಬಾಗಳನ್ನು ಮೇಲ್ವಿಚಾರಕರು ಮತ್ತು ಹಿರಿಯ ಶುಶ್ರೂಷಕ ಸಿಬ್ಬಂದಿ ಕೈಯಿಂದಲೇ ಹೊರಕ್ಕೆ ಸಾಗಿಸಿದ್ದರು.ಇದರಿಂದ ಬೇಸರಗೊಂಡ ನಿರ್ದೇಶಕರು ತಕ್ಷಣ ರಜೆ ಹಾಕಿ ಕಿಮ್ಸ ಆವರಣದಲ್ಲಿರುವ ತಮ್ಮ ಸರ್ಕಾರಿ ನಿವಾಸಕ್ಕೆ ತೆರಳಿ ರಾಜೀನಾಮೆ ನೀಡಲು ಮುಂದಾದರು ಎನ್ನಲಾಗಿದೆ. ವಿಷಯ ತಿಳಿದ ಕಿಮ್ಸ ಅಧಿಕಾರಿ ವರ್ಗ, ಹಿರಿಯ ವೈದ್ಯರು ಮತ್ತು ಸಿಬ್ಬಂದಿ, ದುಡುಕಿ ನಿರ್ಧಾರ ತೆಗೆದುಕೊಳ್ಳದಂತೆ ನಿರ್ದೇಶಕಿಗೆ ಮನವಿ ಮಾಡಿಕೊಂಡರು. ಒಂದು ಹಂತದಲ್ಲಿ ಯಾವುದೇ ಮನವಿಗೂ ಕಿವಿಗೊಡದ ಡಾ. ವಸಂತಾ `ರಾಜೀನಾಮೆ ನೀಡಿಯೇ ತೀರುತ್ತೇನೆ' ಎಂದು ಹೇಳಿದರು.ಈ ಸಂದರ್ಭದಲ್ಲಿ `ಪ್ರಜಾವಾಣಿ' ಜೊತೆ ಮಾತನಾಡಿದ ಅವರು ಘಟನೆ ಕುರಿತು ಹೇಳಿಕೆ ನೀಡಲು ನಿರಾಕರಿಸಿದರು. `ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಸಂಜೆಯೊಳಗೆ ಮಾಧ್ಯಮದ ಮುಂದೆ ಬರುತ್ತೇನೆ, ಎಲ್ಲವನ್ನೂ ಅಲ್ಲೇ ಹೇಳುತ್ತೇನೆ' ಎಂದಷ್ಟೇ ತಿಳಿಸಿದರು. ಆದರೆ ರಾತ್ರಿವರೆಗೂ ಅವರು ನಿರ್ಧಾರ ಪ್ರಕಟಿಸಲಿಲ್ಲ.ಸಾಲುಗಟ್ಟಿ ಬಂದ ಸಿಬ್ಬಂದಿ: ನಿರ್ದೇಶಕರು ರಾಜೀನಾಮೆಗೆ ಮುಂದಾಗಿರುವ ವಿಷಯ ತಿಳಿದ ಕಿಮ್ಸ ಸಿಬ್ಬಂದಿ ಸಾಲು ಸಾಲಾಗಿ ಅವರ ಮನೆಗೆ ತೆರಳಿ ಸಮಾಧಾನಪಡಿಸಿ ರಾಜೀನಾಮೆ ನೀಡದಂತೆ ಕೋರಿಕೊಂಡರು. ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಮುಖ ಹುದ್ದೆಗಳನ್ನು ನಿಭಾಯಿಸುವವರು ಮೊದಲು ಮನವೊಲಿಸಲು ಯತ್ನಿಸಿದರು. ನಂತರ ವೈದ್ಯಕೀಯ ಸಿಬ್ಬಂದಿ ಕೂಡ ಗುಂಪು ಗುಂಪಾಗಿ ಬಂದರು. ಸ್ವಲ್ಪ ಹೊತ್ತಿನಲ್ಲೇ ಇತರ ವಿಭಾಗಗಳ ಸಿಬ್ಬಂದಿ ಕೂಡ ಬಂದರು. ಈ ಸಂದರ್ಭದಲ್ಲಿ `ಪ್ರಜಾವಾಣಿ' ಜೊತೆ ಮಾತನಾಡಿದ ಕೆಲವರು `ಸ್ವಚ್ಛತಾ ಕಾರ್ಯ ನಿತ್ಯವೂ ಸಮರ್ಪಕವಾಗಿ ನಡೆಯುತ್ತದೆ. ಶಸ್ತ್ರಚಿಕಿತ್ಸಾ ವಿಭಾಗದ ಮುಂದೆ ಇದ್ದ ಕಸ ತೆಗೆಯುವ ಸಿಬ್ಬಂದಿ ಬರುವ ಮೊದಲೇ ಸಚಿವರು ಬಂದಿದ್ದರು.ವಿಷಯ ತಿಳಿಯದೇ ಅವರು ರೇಗಾಡಿದ್ದು ಸರಿಯಲ್ಲ. ಕಸ ತೆಗೆಯುವುದು ನಿರ್ದೇಶಕರ ಕೆಲಸವೇ. ಸಚಿವರಿಗೆ ಇದೂ ಗೊತ್ತಿಲ್ಲವೇ' ಎಂದು ಪ್ರಶ್ನಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.