ಶನಿವಾರ, ಮೇ 21, 2022
26 °C

ರಾಜ್ಯಗಳಿಗೆ ಅನುದಾನ ಸ್ಥಗಿತದ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿದ್ಯುತ್ ವಿತರಣಾ ಕಂಪೆನಿಗಳ ಹಣಕಾಸು ಪರಿಸ್ಥಿತಿಯನ್ನು ಸುಧಾರಿಸಲು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ವಿದ್ಯುತ್ ವಲಯದಲ್ಲಿ ತಾನು ನೀಡುತ್ತಿರುವ ಕೇಂದ್ರ ಪ್ರಾಯೋಜಿತ ಯೋಜನೆಗಳ ಎಲ್ಲ ಅನುದಾನಗಳನ್ನು ನಿಲ್ಲಿಸುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.ಕೇಂದ್ರ ವಿದ್ಯುತ್ ಸಚಿವಾಲಯ ತಯಾರಿಸಿರುವ ವರದಿ ಪ್ರಕಾರ, ದೇಶದ ಬಹುತೇಕ ವಿದ್ಯುತ್ ವಿತರಣಾ ಕಂಪೆನಿಗಳ (ಡಿಸ್ಕಾಮ್ಸ) ಆರ್ಥಿಕ ಪರಿಸ್ಥಿತಿ ಬಹಳ ದುರ್ಬಲವಾಗಿದ್ದು, 2009ರ ಮಾರ್ಚ್‌ವರೆಗೆ ಒಟ್ಟು ರೂ 73,000 ಕೋಟಿಗಳ ನಷ್ಟ ಅನುಭವಿಸಿವೆ. ಕರ್ನಾಟಕದ ವಿದ್ಯುತ್ ವಿತರಣಾ ಕಂಪೆನಿಗಳು 2004-05ರಿಂದ 2007-08ರ ಅವಧಿಯಲ್ಲಿ ಲಾಭ ಸಂಪಾದಿಸಿದರೂ ಸಹ 2009ರ ಮಾರ್ಚ್‌ವರೆಗೆ ರೂ 1,203 ಕೋಟಿಗಳಷ್ಟು ನಷ್ಟವನ್ನು ದಾಖಲಿಸಿವೆ.2009ರ ಮಾರ್ಚ್‌ವರೆಗೆ ಇಡೀ ದೇಶದ ಡಿಸ್ಕಾಮ್‌ಗಳ ಸ್ಥಾನಮಾನ ಕುರಿತ ವಿದ್ಯುತ್ ವಲಯದ ಮೇಲಿನ ವಿವರವಾದ ವರದಿಯನ್ನು ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದ ಹಿರಿಯ ಸಚಿವರ ತಂಡದ ಮುಂದೆ ಇತ್ತೀಚೆಗೆ ಸಲ್ಲಿಸಲಾಗಿದೆ.`ಡಿಸ್ಕಾಮ್‌ಗಳ ದುರ್ಬಲ ಆರ್ಥಿಕ ಪರಿಸ್ಥಿತಿಗೆ ಮುಖ್ಯ ಕಾರಣಗಳು ಪರಿಷ್ಕೃತ ವಿದ್ಯುತ್ ತೆರಿಗೆಯಲ್ಲ ಮತ್ತು ಕಲ್ಯಾಣ ಯೋಜನೆಗಳಡಿ ರೈತರು ಹಾಗೂ ಇತರ ವರ್ಗಗಳಿಗೆ ಪೂರೈಸಿದ ವಿದ್ಯುತ್‌ಗೆ ಸರ್ಕಾರ ಸಬ್ಸಿಡಿ ಹಣವನ್ನು ಹಿಂತಿರುಗಿಸಿರುವುದಲ್ಲ~ ಎಂದು ಸ್ಪಷ್ಪಪಡಿಸಿದೆ.ಕೇವಲ ಆಂಧ್ರಪ್ರದೇಶ, ಗುಜರಾತ್ ಹಾಗೂ ಛತ್ತೀಸ್‌ಗಡ ರಾಜ್ಯಗಳ ಡಿಸ್ಕಾಮ್‌ಗಳು ಮಾತ್ರ ಲಾಭ ಸಂಪಾದಿಸಿದ್ದು, ಉಳಿದ ರಾಜ್ಯಗಳ ಡಿಸ್ಕಾಮ್‌ಗಳು ಭಾರಿ ನಷ್ಟ ಹೊಂದಿವೆ ಎಂದು ವರದಿ ತಿಳಿಸಿದೆ.ಕರ್ನಾಟಕದಲ್ಲಿ 2004-05 ಮತ್ತು 2008-09ರ ಅವಧಿಯಲ್ಲಿ ವಿದ್ಯುತ್ ಖರೀದಿ ವೆಚ್ಚ ಶೇ 13.47ರಷ್ಟು ಹೆಚ್ಚಾಗಿದ್ದು, ಆದರೆ ವಿದ್ಯುತ್ ಮಾರಾಟದಿಂದ ಗಳಿಸಿದ ಆದಾಯ ಕೇವಲ ಶೇ 10.80ರಷ್ಟು ಏರಿಕೆಯಾಗುವ ಮೂಲಕ ಆದಾಯಕ್ಕಿಂತ ವೆಚ್ಚವೇ ಜಾಸ್ತಿ ಕಂಡುಬಂದಿದೆ ಎಂದು ವಿದ್ಯುತ್ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ರಾಜ್ಯದಲ್ಲಿ ಕೃಷಿ ಬಳಕೆಯು ವಾರ್ಷಿಕ ಶೇ 9.70ರಷ್ಟು ಬೆಳವಣಿಗೆ ದರ ತೋರಿದ್ದರೂ, ಕೃಷಿ ವಲಯದಲ್ಲಿನ ಆದಾಯವು ಕೇವಲ ಶೇ 5.09ರಷ್ಟಾಗಿದೆ. ವಿದ್ಯುತ್ ಸರಬರಾಜು ಮತ್ತು ವಿತರಣಾ ನಷ್ಟವು ರಾಜ್ಯದಲ್ಲಿ 2006-07ರಲ್ಲಿ ಶೇ 38.04ರಷ್ಟಿದ್ದು, ಅದು 2008-09ರಲ್ಲಿ ಶೇ 24.94ಕ್ಕೆ ಇಳಿಯುವ ಮೂಲಕ ಸುಧಾರಣೆ ಕಂಡಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.