ಶನಿವಾರ, ಏಪ್ರಿಲ್ 17, 2021
31 °C

ರಾಜ್ಯದಲ್ಲಿ ಇಳಿಮುಖ

ಪ್ರಜಾವಾಣಿ ವಾರ್ತೆ ಬಸವರಾಜ್ ಸಂಪಳ್ಳಿ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ವಯಸ್ಕರ ಮೂಲಕ ಎಚ್‌ಐವಿ ಸೋಂಕು ಹರಡುವಿಕೆ ಪ್ರಮಾಣ ರಾಜ್ಯದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಇದು 2003-04ರಲ್ಲಿದ್ದ ಶೇ 1.5ರಿಂದ 2010ರಲ್ಲಿ ಶೇ 1ಕ್ಕೆ ಇಳಿದಿದೆ.

ವಿಶೇಷವಾಗಿ 15 ರಿಂದ 24 ವರ್ಷದ ಒಳಗಿನ ಮಹಿಳೆಯರಲ್ಲಿ ಎಚ್‌ಐವಿ ಸೋಂಕು ಹರಡುವಿಕೆ ಕಡಿಮೆಯಾಗಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯು (ನ್ಯಾಕೊ) ರಾಜ್ಯದಲ್ಲಿ  ಎರಡು ದಶಕಗಳಿಂದ ಎಚ್‌ಐವಿ ಕುರಿತು ಕೈಗೊಂಡಿರುವ ಪ್ರಚಾರಾಂದೋಲನದ ಫಲವಾಗಿ ಸೋಂಕು ಹರಡುವಿಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಐಇಸಿ ಜಂಟಿ ನಿರ್ದೇಶಕಿ ಡಾ. ಲೀಲಾ ಸಂಪಿಗೆ.

ದಕ್ಷಿಣ ಭಾರತದಲ್ಲಿ ಎಚ್‌ಐವಿ ಸೋಂಕು ಹೆಚ್ಚಿರುವ ನಾಲ್ಕು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಎಚ್‌ಐವಿ ಕಣ್ಗಾವಲು ಸಮೀಕ್ಷೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ 2,45,522 ಮಂದಿ ಎಚ್‌ಐವಿ ಸೋಂಕಿತರಿದ್ದಾರೆ.

ರಾಜ್ಯದಲ್ಲಿ ಇರುವ 49 ಎಆರ್‌ಟಿ ಮತ್ತು 167 ಲಿಂಕ್ ಎಆರ್‌ಟಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡ ಎಚ್‌ಐವಿ ಸೋಂಕಿತರ ಒಟ್ಟು ಸಂಖ್ಯೆ 2,32,761. ಅದರಲ್ಲಿ 85,605 ಜನರು ಆ್ಯಂಟಿ ರಿಟ್ರೋವೈರಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 39,950 ಪುರುಷರು, 39,888 ಮಹಿಳೆಯರು ಮತ್ತು 149 ಲಿಂಗಪರಿವರ್ತಿತರು ಹಾಗೂ  5,618 ಮಕ್ಕಳು (ಗಂಡು 3,214 ಮತ್ತು ಹೆಣ್ಣು 2,404) ಸೇರಿದ್ದಾರೆ.

ಪ್ರಮುಖವಾಗಿ ಪ್ರಸವಪೂರ್ವ ಕ್ಲಿನಿಕ್‌ಗಳಿಗೆ ಬರುವ ಮಹಿಳೆಯರಲ್ಲಿ ಎಚ್‌ಐವಿ ಸೋಂಕು ಶೇ 0.24 ಮತ್ತು ಸಾಮಾನ್ಯರಲ್ಲಿ ಶೇ 4 ಕ್ಕೆ ಇಳಿದಿರುವುದು ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿನ (ಐಸಿಟಿಸಿ) ಅಂಕಿ ಅಂಶಗಳಿಂದ ರುಜುವಾತಾಗಿದೆ ಎಂದು ಲೀಲಾ ಸಂಪಿಗೆ ಹೇಳಿದರು.

ಎಚ್‌ಐವಿ ಸ್ಥಿತಿಗತಿ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿಯ ಸೋಂಕು ರೋಗ ತಜ್ಞರಾದ ಡಾ. ವಾಣಿ ಶ್ರೀನಿವಾಸ್, ದೇಶದಲ್ಲಿ ಅತಿ ಹೆಚ್ಚು ಎಚ್‌ಐವಿ ಸೋಂಕಿತರು ಇರುವ ರಾಜ್ಯ ಮಣಿಪುರ. ಕರ್ನಾಟಕ ಐದನೇ ಸ್ಥಾನದಲ್ಲಿದೆ ಎಂದರು.

ಬೆಳಗಾವಿ ಪ್ರಥಮ: ಬೆಳಗಾವಿ (27,751 ಸೋಂಕಿತರು) ರಾಜ್ಯದಲ್ಲಿ ಅತಿ ಹೆಚ್ಚು ಎಚ್‌ಐವಿ ಸೋಂಕಿತರನ್ನು ಹೊಂದಿರುವ ಜಿಲ್ಲೆಯಾದರೆ, ಬಾಗಲಕೋಟೆ (25,081), ಬೆಂಗಳೂರು ನಗರ (18,871), ಧಾರವಾಡ (15,998) ಜಿಲ್ಲೆಗಳು ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ರಾಜ್ಯದಲ್ಲಿ ಎಚ್‌ಐವಿ ಸೋಂಕಿತರನ್ನು ಒಳಗೊಂಡ ಜಿಲ್ಲೆಗಳ ಪಟ್ಟಿಯಲ್ಲಿ ಕೊಡಗು ಕೊನೆಯ ಸ್ಥಾನದಲ್ಲಿದೆ. ರಾಜ್ಯದಲ್ಲಿ ಇದುವರೆಗೆ ಏಡ್ಸ್ ಮಾರಿಗೆ  44,727 ಮಂದಿ ಬಲಿಯಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.