ಮಂಗಳವಾರ, ಮೇ 11, 2021
27 °C

ರಾಜ್ಯದ ಹಿತಾಸಕ್ತಿ ಕಡೆಗಣನೆ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಪ್ರಾದೇಶಿಕ ಪಕ್ಷಗಳ ಆಡಳಿತ ಪ್ರಗತಿಗೆ ಪೂರಕ ಎಂಬ ಸಂದೇಶ ವ್ಯಾಪಿಸಿರುವ ಪರಿಣಾಮ ರಾಜ್ಯದಲ್ಲಿಯೂ ಪರ್ಯಾಯ ಶಕ್ತಿಯಾಗಿರುವ ಜಾತ್ಯತೀತ ಜನತಾದಳ ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದರಲ್ಲಿ ಸಂದೇಹವಿಲ್ಲ ಎಂದು ಜೆಇಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಿ.ಎಂ. ಸತೀಶ್ ಭವಿಷ್ಯ ನುಡಿದರು.ಸ್ಥಳೀಯ ನಟರಾಜ ಕಲಾಭವನದಲ್ಲಿ ಪಕ್ಷದ ಯುವ ಘಟಕ ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಕಾಂಗ್ರೆಸ್ ಹಾಗೂ ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳಿಂದ ಪ್ರಾದೇಶಿಕ ಸಮಸ್ಯೆಗಳ ಪರಿಹಾರ ಸಾಧ್ಯವಿಲ್ಲ. ಸಣ್ಣಪುಟ್ಟ ವಿಚಾರಗಳಿಗೂ ಕೇಂದ್ರದ ವರಿಷ್ಠರ ಅನುಮತಿಗಾಗಿ ಕಾಯಬೇಕಾದ ಪರಿಸ್ಥಿತಿಯನ್ನು ರಾಷ್ಟ್ರೀಯ ಪಕ್ಷಗಳು ಎದುರಿಸುತ್ತಿವೆ.ಸ್ಥಳೀಯ ಸಮಸ್ಯೆಗಳು ಬೇರೆ ರಾಜ್ಯಕ್ಕೆ ಪ್ರತಿಕೂಲ ಪರಿಸ್ಥಿತಿ ಉಂಟುಮಾಡುವಂತಿದ್ದರೆ, ಅಂತಹ ಸಮಸ್ಯೆಗಳನ್ನು ಕೇಂದ್ರದ ವರಿಷ್ಠರು ಪರಿಹರಿಸಲು ಸಾಧ್ಯವೇ ಇಲ್ಲ. ಹೀಗಾಗಿ, ಬಿಜೆಪಿ-ಕಾಂಗ್ರೆಸ್‌ಗೆ ರಾಜ್ಯದ ಹಿತಾಸಕ್ತಿಗಿಂತ ಕೇಂದ್ರದ ಅನುಮತಿಯೇ ಮುಖ್ಯವಾಗಿರುತ್ತದೆ. ಸ್ಥಳೀಯ ಸಮಸ್ಯೆಗಳ ಪರಿಹಾರದ ಜತೆಗೆ, ರಾಜ್ಯದ ಸರ್ವತೋಮುಖ ಅಭಿವೃದ್ಧಿ ಪ್ರಾದೇಶಿಕ ಪಕ್ಷಗಳ ಮೇಲೆ ಅವಲಂಬಿಸಿದೆ ಎಂದರು.ಎಚ್.ಡಿ. ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ಬಡವರು, ನಿರ್ಗತಿಕರು, ಶೋಷಿತರು ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕೈಗೊಂಡ ಹಲವು ಜನಪರ ಯೋಜನೆಗಳು ಜನಮನದಾಳದಲ್ಲಿ ಅಚ್ಚಳಿಯದೆ ಉಳಿದಿವೆ.ಬಿಜೆಪಿ ನಾಯಕರ ಅನಾಚಾರ, ಅತ್ಯಾಚಾರ, ಭ್ರಷ್ಟಾಚಾರ ರಾಜ್ಯಕ್ಕೆ ಮಾರಕವಾಗಿದೆ. ಬಿಜೆಪಿಯ ಜನವಿರೋಧಿ ನೀತಿಗಳು ಹಾಗೂ ಕುಮಾರಸ್ವಾಮಿ ಅವರ ಪ್ರಗತಿಪರ ಯೋಜನೆಗಳು ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಗುತ್ತವೆ. ಈ ಸಂದರ್ಭದಲ್ಲಿ ಯುವಶಕ್ತಿಯ ಹೊಣೆಗಾರಿಕೆ ಅತ್ಯಂತ ಪ್ರಮುಖವಾದದು.

 

ಮನೆಮನೆಗಳಿಗೂ ತೆರಳಿ ಪಕ್ಷವನ್ನು ಸಂಘಟಿಸುವತ್ತ ಕಾರ್ಯೋನ್ಮುಖವಾಗುವಂತೆ ಕರೆ ನೀಡಿದರು.

ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಮಾನುಲ್ಲಾ ಖಾನ್, ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿಕಾರಿ ಬಾಲಪ್ಪ, ಜಂಟಿ ಕಾರ್ಯದರ್ಶಿ ಕೆ. ಪಾಪಣ್ಣ ಇತರರು ಮಾತನಾಡಿದರು.ತಾಲ್ಲೂಕು ಯುವ ಘಟಕದ ಅಧ್ಯಕ್ಷ ಡೆಂಕಿ ಇಮ್ರಾನ್‌ಬಾಷಾ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಳಿಗಾನೂರು ರಾಮನಗೌಡ, ನಂದಿಬೇವೂರು ಮಲ್ಲಿಕಾರ್ಜುನ, ಡೆಂಕಿ ಮೆಹಬೂಬ್ ಬಾಷಾ, ಶಾಕೀರ್ ಅಲಿ, ಸೈಯದ್, ಹಾರಕನಾಳು ಗುಡ್ಡಪ್ಪ, ದ್ಯಾಪನಹಳ್ಳಿ ಹನುಮಂತಪ್ಪ, ಕೋಡಿಹಳ್ಳಿ ಕೆಂಚಪ್ಪ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.