ರಾಜ್ಯಪಾಲರ ಕ್ರಮ ಖಂಡಿಸಿ ವಿವಿಧೆಡೆ ಪ್ರತಿಭಟನೆ

7

ರಾಜ್ಯಪಾಲರ ಕ್ರಮ ಖಂಡಿಸಿ ವಿವಿಧೆಡೆ ಪ್ರತಿಭಟನೆ

Published:
Updated:

ಆನೇಕಲ್: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿರುವ ರಾಜ್ಯಪಾಲ ಎಚ್.ಆರ್.ಭಾರಧ್ವಜ್ ಅವರ ಕ್ರಮವನ್ನು ಖಂಡಿಸಿ ಬಿಜೆಪಿ ಕರೆ ನೀಡಿರುವ ರಾಜ್ಯ ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ರಾಜ್ಯಪಾಲರ ಪ್ರತಿಕೃತಿ ದಹನ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ರಸ್ತೆ ಸಂಚಾರ ಸಹ ಸ್ಥಗಿತವಾಗಿತ್ತು. ಪ್ರಮುಖ ವೃತ್ತಗಳಲ್ಲಿ ಟೈರ್‌ಗಳನ್ನು ಸುಡುವ ಮೂಲಕ ಬಿಜೆಪಿ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕಿಯೋನಿಕ್ಸ್ ಅಧ್ಯಕ್ಷ ಎಂ.ಯಂಗಾರೆಡ್ಡಿ ಮಾತನಾಡಿ, ರಾಜ್ಯಪಾಲರು ಕಾಂಗ್ರೆಸ್ ಮತ್ತು ಜೆಡಿಎಸ್ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು. ಪುರಸಭಾ ಉಪಾಧ್ಯಕ್ಷ ಎಂ.ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಬಿ.ನಾಗರಾಜು, ಮಾಜಿ ಉಪಾಧ್ಯಕ್ಷ ಕೆ.ನಾಗರಾಜು, ನಗರ ಬಿಜೆಪಿ ಅಧ್ಯಕ್ಷ ಶಿವರಾಮ್, ಪುರಸಭಾ ಸದಸ್ಯರಾದ ಎ.ಉದಯ್‌ಕುಮಾರ್, ನರಸಿಂಹರೆಡ್ಡಿ, ಶ್ರೀನಿವಾಸ್, ಕೃಷ್ಣಂರಾಜು, ಎಪಿಎಂಸಿ ಅಧ್ಯಕ್ಷ ಆದೂರ್ ಮಹದೇವಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ನಾರಾಯಣಪ್ಪ, ಬ್ಯಾಗಡದೇನಹಳ್ಳಿ ಗ್ರಾ.ಪಂ ಅಧ್ಯಕ್ಷ ಶಂಕರ್,  ಮುಖಂಡರಾದ ಸಿಡಿಹೊಸಕೋಟೆ ಮುನಿರಾಜು, ಎಂ.ಆರ್.ಯಲ್ಲಪ್ಪ, ಮಧು ಎಸ್.ಮೂರ್ತಿ, ಜಿ.ರಂಗರಾಜು, ಸಾ.ವ.ಪ್ರಕಾಶ್, ಸತ್ಯನಾರಾಯಣ್, ಅಶೋಕ್‌ರೆಡ್ಡಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತಾಲ್ಲೂಕಿನ ಬನ್ನೇರುಘಟ್ಟ, ಅತ್ತಿಬೆಲೆ, ಚಂದಾಪುರ, ದೊಮ್ಮಸಂದ್ರ, ಸರ್ಜಾಪುರಗಳಲ್ಲೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಾಜ್ಯಪಾಲರ ಕ್ರಮ ಖಂಡಿಸಿದರು.ಬಂದ್: ಮುಚ್ಚಿದ ಅಂಗಡಿ ಮುಂಗಟ್ಟುಗಳು

ವಿಜಯಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಖಂಡಿಸಿ ಬಿಜೆಪಿ ಶನಿವಾರ ಕರೆ ನೀಡಿದ್ದ ರಾಜ್ಯ ಬಂದ್ ಪಟ್ಟಣದಲ್ಲಿ ಸಂಪೂರ್ಣ ಯಶಸ್ವಿಯಾಯಿತು. ಪಟ್ಟಣದ ಪುರಸಭಾ ವೃತ್ತದಿಂದ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಸಾಗಿ, ಬಸ್‌ನಿಲ್ದಾಣದಲ್ಲಿ ಅಂಗಡಿಗಳನ್ನು ಮುಚ್ಚಿಸಿದರು.

 

ನಂತರ ಕೋಲಾರ-ಸೋಂಪುರ ಮುಖ್ಯ ರಸ್ತೆಯಲ್ಲಿ ಟೈರ್‌ಗಳನ್ನು ಸುಟ್ಟು ರಾಜ್ಯಪಾಲರ ವಿರುದ್ದ ಘೋಷಣೆಗಳನ್ನು ಕೂಗಿ ಮಾನವ ಸರಪಳಿ ನಿರ್ಮಿಸಿದರು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ಗಾಂಧಿಚೌಕದಲ್ಲಿ ನಡೆದ ಸಮಾವೇಶದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ನಾಗೇಶ್ ಮಾತನಾಡಿ, ರಾಜ್ಯಪಾಲರು ತೆಗೆದುಕೊಂಡಿರುವ ಕ್ರಮ ರಾಜಕೀಯ ಪ್ರೇರಿತ ಮತ್ತು ಪ್ರಜಾಪ್ರಭುತ್ವ ನೀತಿಗೆ ವಿರುದ್ಧವಾದದ್ದು ಎಂದು ಟೀಕಿಸಿದರು.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎನ್.ರಾಜಗೋಪಾಲ್ ಮಾತನಾಡಿ, ಬಿಜೆಪಿ ಸರ್ಕಾರವು ಅಸ್ತಿತ್ವಕ್ಕೆ ಬಂದಾಗಿನಿಂದಲೂ ವಿರೋಧ ಪಕ್ಷಗಳು ಮತ್ತು ರಾಜ್ಯಪಾಲರ ಕಿರುಕುಳ ಹೆಚ್ಚಿದೆ. ಬಿಜೆಪಿ ಸರ್ಕಾರದ ಜನಪರ ಕಾರ್ಯಕ್ರಮಗಳಿಂದ ವಿರೋಧ ಪಕ್ಷಗಳು ವಿಚಲಿತಗೊಂಡಿವೆ ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಎಂ.ತಮ್ಮೇಗೌಡ, ಹನುಮಂತರಾಯಪ್ಪ, ರಾಮಕೃಷ್ಣಹೆಗಡೆ, ಮುನೀಂದ್ರ, ಎನ್.ಕನಕರಾಜು, ನಾರಾಯಣಸ್ವಾಮಿ, ಮತ್ತಿತರರು ಇದ್ದರು. ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬಸ್‌ಗಳ ಸಂಚಾರವಿಲ್ಲದ್ದರಿಂದ ಬಸ್‌ನಿಲ್ದಾಣವು ಬಿಕೋ ಎನ್ನುತ್ತಿತ್ತು.ಮಿಶ್ರ ಪ್ರತಿಕ್ರಿಯೆ

ದೊಡ್ಡಬಳ್ಳಾಪುರ: ಶನಿವಾರ ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್ ನಗರದಲ್ಲಿ ಶಾಂತಿಯುತವಾಗಿದ್ದು ಬಂದ್‌ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರಸಭೆ, ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳು ಬಂದ್ ಆಗಿದ್ದವು. ಆದರೆ ರಾಷ್ಟ್ರೀಕೃತ ಬ್ಯಾಂಕುಗಳು ಶನಿವಾರ ಆಗಿದ್ದರಿಂದ ಮಧ್ಯಾಹ್ನದ ವರೆಗೆ ಕಾರ್ಯನಿರ್ವಹಿಸಿದವು. ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು.ಬೆಳಿಗ್ಗೆ 7 ಗಂಟೆಯಿಂದಲೆ ನಗರ ಹಾಗೂ ಕೈಗಾರಿಕಾ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು. ಕೆಎಸ್‌ಆರ್‌ಟಿಸಿ ಬಸ್ಸುಗಳು ಸೇರಿದಂತೆ ಖಾಸಗಿ ಬಸ್ಸುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಇದರಿಂದ ನಗರದ ಕೊಂಗಾಡಿಯಪ್ಪ ಬಸ್ ನಿಲ್ದಾಣದಲ್ಲಿ ಜನರಿಲ್ಲದೆ ಬಿಕೋ ಎನ್ನುತಿತ್ತು. ಆದರೆ ಬೆಳಿಗ್ಗೆ 11 ಗಂಟೆ ನಂತರ ನಗರದ ತರಕಾರಿ ಮಾರುಕಟ್ಟೆ ಸೇರಿದಂತೆ ಬಹುತೇಕ ಅಂಗಡಿಗಳು ತೆರೆದಿದ್ದು, ಪ್ರತಿದಿನದಂತೆ ವ್ಯಾಪಾರ ವಹಿವಾಟು ನಡೆಯಿತು.ತುಮಕೂರು-ದೊಡ್ಡಬಳ್ಳಾಪುರ ರಸ್ತೆಯ ಕೊಡಿಗೇಹಳ್ಳಿ ಹಾಗೂ ದೊಡ್ಡಬಳ್ಳಾಪುರ-ಬೆಂಗಳೂರು ರಸ್ತೆಯ ನಗರದ ರೈಲ್ವೆ ನಿಲ್ದಾಣದ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಇದರಿಂದ ಹೊರ ರಾಜ್ಯಗಳಿಗೆ ಹೋಗುವ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದ್ದು ರಸ್ತೆಯುದ್ದ ಲಾರಿಗಳು ಸಾಲುಗಟ್ಟಿ ನಿಂತಿದ್ದವು. ರಸ್ತೆತಡೆ ನಡೆಸುತ್ತಿದ್ದ ಕಡೆಗಳಲ್ಲಿ ವಾಹನಗಳಿಗೆ ಯಾವುದೇ ತೊಂದರೆಯಾಗದಂತೆ ಪೊಲೀಸರು ಕಾವಲು ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಿರೋಧ : ಕುಂಬಳ ಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳುವ ಕೆಲಸ ಬಿಜೆಪಿಗೆ ಬಂದಿದೆ. ಅಪರಾಧಗಳು ಮಾಡಿಲ್ಲ ಅಂದಮೇಲೆ ಯಾರು ಬೇಕಾದರೂ ತನಿಖೆ ನಡೆಸಿಕೊಳ್ಳಲಿ ಅದಕ್ಕೆ ಹೆದರುವ ಅಗತ್ಯವಿಲ್ಲ. ತನಿಖೆ ನಡೆದರೆ ಆರೋಪಗಳು ಸಾಬೀತಾಗುತ್ತದೆ ಎನ್ನುವ ಭೀತಿಯಲ್ಲಿ ಬಂದ್‌ಗೆ ಕರೆ ನೀಡಿರುವುದು ಖಂಡನೀಯ ಎಂದು ತಾಲ್ಲೂಕು ಕಾಂಗ್ರೆಸ್ ಕಾರ್ಯದರ್ಶಿ ಜಿ.ಲಕ್ಷ್ಮೀಪತಿ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ, ನಾವು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿದ್ದೇವೆ ಎನ್ನುವುದನ್ನು ರಾಜ್ಯದಲ್ಲಿನ ಬಿಜೆಪಿ ಮುಖಂಡರು ಮರೆತಿದ್ದಾರೆ ಎಂದು ಟೀಕಿಸಿದ್ದಾರೆ.ಕಾನೂನು ತಿಳಿಯಲಿ : ಭಾರತದ ಸಂವಿಧಾನದಲ್ಲಿ ಎಲ್ಲರಿಗೂ ಒಂದೇ ಕಾನೂನು. ಮುಖ್ಯಮಂತ್ರಿಗಳಾದ ಮಾತ್ರಕ್ಕೆ ಅವರ ವಿರುದ್ಧ ರಾಜ್ಯಪಾಲರು ಏನು ಮಾತನಾಡ ಬಾರದು ಎನ್ನುವಂತೆ ವರ್ತಿಸುವ ಬಿಜೆಪಿ ಮುಖಂಡರ ನಡವಳಿಕೆ ಖಂಡನೀಯ ಎಂದು ತಾಲ್ಲೂಕು ಜೆಡಿಎಸ್ ಯುವ ಘಟಕದ ಮಾಜಿ ಅಧ್ಯಕ್ಷ ಆಂಜನಗೌಡ, ಬಿ.ಲೋಕೇಶ್, ತಾಲ್ಲೂಕು ವಕ್ತಾರ ವಡ್ಡರಹಳ್ಳಿರವಿ, ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ಸಂಜೀವ್‌ನಾಯ್ಕಿ, ಡಿ.ಪಿ.ಆಂಜನೇಯ ಮತ್ತಿರರರು ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry