ಭಾನುವಾರ, ಜೂನ್ 20, 2021
25 °C

ರಾಜ್ಯಸಭೆಗೆ ಐವರು ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯಸಭೆಗೆ ಐವರು ನಾಮಪತ್ರ ಸಲ್ಲಿಕೆ

ಬೆಂಗಳೂರು: ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಸಭಾ ಚುನಾವಣೆಗೆ ಬಿಜೆಪಿಯ ಬಂಡಾಯ ಅಭ್ಯರ್ಥಿಯನ್ನಾಗಿ ಬಿ.ಜೆ.ಪುಟ್ಟಸ್ವಾಮಿ ಅವರನ್ನು ಕಣಕ್ಕೆ ಇಳಿಸುವ ಮೂಲಕ ಹೈಕಮಾಂಡ್‌ಗೆ ಸೆಡ್ಡು ಹೊಡೆದಿದ್ದಾರೆ.ಇದರ ಬೆನ್ನಲ್ಲೇ ಅವರನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿದೆ, ಅವರ ನಾಮಪತ್ರಕ್ಕೆ ಸಹಿ ಮಾಡಿರುವ ಹತ್ತು ಮಂದಿ ಶಾಸಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಪ್ರಕಟಿಸಿದ್ದಾರೆ. ಬಿಜೆಪಿಯ ಅಧಿಕೃತ ಅಭ್ಯರ್ಥಿಗಳಾದ ಬಸವರಾಜ ಪಾಟೀಲ ಸೇಡಂ, ನಿವೃತ್ತ ಐಎಎಸ್ ಅಧಿಕಾರಿ ಆರ್.ರಾಮಕೃಷ್ಣ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಪುಟ್ಟಸ್ವಾಮಿ ತಮ್ಮ ಸ್ಥಾನಕ್ಕೆರಾಜೀನಾಮೆ ನೀಡಿ, ಬಂಡಾಯ ಅಭ್ಯರ್ಥಿ ಯಾಗಿನಾಮಪತ್ರ ಸಲ್ಲಿಸಿದರು. 
ರಾಜ್ಯಸಭೆಯ ಉಪ ಸಭಾಪತಿ ಕೆ.ರೆಹಮಾನ್ ಖಾನ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಕಳೆದ ಬಾರಿಯಂತೆ ಈ ಸಲವೂ ರಾಜೀವ್ ಚಂದ್ರಶೇಖರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ನಿರೀಕ್ಷೆಯಂತೆ ಜೆಡಿಎಸ್-ಬಿಜೆಪಿ ಅವರಿಗೆ ಬೆಂಬಲ ನೀಡಿವೆ.ತಮಿಳುನಾಡು ಮೂಲದ ಡಾ.ಕೆ.ಪದ್ಮರಾಜನ್ ,ಶ್ರೀನಿವಾಸಪುರ ತಾಲ್ಲೂಕು ಕಾಡುದೇ ವಂಡಹಳ್ಳಿಯ ಡಾ.ಬಿ.ಆರ್. ವೆಂಕಟೇಶ್ ಗೌಡ, ಗುಲ್ಬರ್ಗದ ವೆಂಕಟೇಶ್ ದೊರೆಪಲ್ಲಿ ಅವರೂ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು.ವಿಧಾನ ಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೇ 30ರಂದು ನಡೆಯುವ ಚುನಾವಣೆಗೆ ಒಟ್ಟು ಎಂಟು ಜನ ನಾಮಪತ್ರ ಸಲ್ಲಿಸಿದ್ದು, ಮಂಗಳವಾರ ಅವುಗಳ ಪರಿಶೀಲನೆ ನಡೆಯಲಿದೆ. ಗುರುವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ.ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ಸುರೇಶ್ ಮಾರಿಹಾಳ, ಜಿ.ಶಿವಣ್ಣ, ರಾಮಣ್ಣ ಎಸ್. ಲಮಾಣಿ, ಕರಡಿ ಸಂಗಣ್ಣ, ಹೇಮಚಂದ್ರ ಸಾಗರ್, ಶಿವನಗೌಡ ನಾಯಕ್, ಚಿಕ್ಕನಗೌಡರ ಸಿದ್ದನಗೌಡ ಮತ್ತು ಜಗದೀಶ ಮೆಟಗುಡ್ಡ ಅವರು ಪುಟ್ಟಸ್ವಾಮಿ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಿದ್ದಾರೆ.

 

ನಾಮಪತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂದೇ ಪುಟ್ಟಸ್ವಾಮಿ ನಮೂದಿಸಿದ್ದಾರೆ. ಆದರೆ ಪಕ್ಷದ `ಬಿ ಫಾರಂ~ ನೀಡಿಲ್ಲ. ಮಂಗಳವಾರ ಬೆಳಿಗ್ಗೆ 11 ಗಂಟೆ ಒಳಗೆ ಬಿ ಫಾರಂ ನೀಡದಿದ್ದರೆ ಅವರನ್ನು ಪಕ್ಷೇತರ ಅಭ್ಯರ್ಥಿ ಎಂದು ಪರಿಗಣಿಸಲಾಗುವುದು ಎಂದು ಚುನಾವಣಾಧಿಕಾರಿ ಓಂಪ್ರಕಾಶ್ ತಿಳಿಸಿದರು.ತಾವು ಬಿಜೆಪಿಯ ಮೂರನೇ ಅಭ್ಯರ್ಥಿಯಾಗಿದ್ದು ಮಂಗಳವಾರ ಬಿ ಫಾರಂ ಸಲ್ಲಿಸುವುದಾಗಿ ಪುಟ್ಟಸ್ವಾಮಿ ಹೇಳಿದರು. ಹೈಕಮಾಂಡ್ ತಮಗೆ ಟಿಕೆಟ್ ನೀಡಿದೆಯೇ, ಯಾರ ಸೂಚನೆ ಮೇರೆಗೆ ನಾಮಪತ್ರ ಸಲ್ಲಿಸಿದ್ದೀರಿ? ಎಂಬ ಸುದ್ದಿಗಾರರ ಪ್ರಶ್ನೆಗೆ ಪುಟ್ಟಸ್ವಾಮಿ ಉತ್ತರ ನೀಡಲಿಲ್ಲ.ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ. ಕಾಂಗ್ರೆಸ್ಸೇತರ ಅಭ್ಯರ್ಥಿಗೆ ಹೆಚ್ಚುವರಿ ಮತಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ರಾಜೀವ್ ಚಂದ್ರಶೇಖರ್ ಅವರ ನಾಮಪತ್ರಕ್ಕೆ ಜೆಡಿಎಸ್ ಶಾಸಕರು ಸಹಿ ಮಾಡಿದ್ದಾರೆ.ಪದ್ಮರಾಜನ್, ವೆಂಕಟೇಶ್‌ಗೌಡ, ವೆಂಕಟೇಶ್ ದೊರೆಪಲ್ಲಿ ಅವರ ನಾಮಪತ್ರಕ್ಕೆ ನಿಯಮಾವಳಿ ಪ್ರಕಾರ ಹತ್ತು ಜನ ಶಾಸಕರು ಸೂಚಕರಾಗಿ ಸಹಿ ಮಾಡಿಲ್ಲ. ಹೀಗಾಗಿ ಅವರ ನಾಮಪತ್ರಗಳು ತಿರಸ್ಕೃತ ಆಗುವುದು ಬಹುತೇಕ ಖಚಿತ.ಒಟ್ಟು 224 ಸದಸ್ಯ ಬಲವನ್ನು ಹೊಂದಿರುವ ವಿಧಾನ ಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಲು ಒಬ್ಬ ಅಭ್ಯರ್ಥಿ 45 ಮತಗಳನ್ನು ಪಡೆಯಬೇಕು. 71 ಸದಸ್ಯ ಬಲವನ್ನು ಹೊಂದಿರುವ ಕಾಂಗ್ರೆಸ್ ಒಬ್ಬರನ್ನು ಮಾತ್ರ ಕಣಕ್ಕೆ ಇಳಿಸಿದ್ದು, 71 ಶಾಸಕರ ಮತಗಳನ್ನು ರೆಹಮಾನ್ ಖಾನ್ ಅವರಿಗೇ ನೀಡಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.ಸ್ಪೀಕರ್ ಸೇರಿ ಬಿಜೆಪಿ 120, ಜೆಡಿಎಸ್ 26, ಪಕ್ಷೇತರರು ಏಳು ಜನ ಇದ್ದಾರೆ. ಈ ಪೈಕಿ ವರ್ತೂರು ಪ್ರಕಾಶ್ ಸರ್ಕಾರದಲ್ಲಿದ್ದಾರೆ. ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ 90 ಮತಗಳನ್ನು ಹಂಚಿಕೆ ಮಾಡಿದ ನಂತರ 31 ಮತಗಳು ಹೆಚ್ಚುವರಿಯಾಗಿ ಉಳಿಯಲಿವೆ.ಆ ಮತಗಳನ್ನು ರಾಜೀವ್ ಚಂದ್ರಶೇಖರ್‌ಗೆ ನೀಡುವ ಸಾಧ್ಯತೆ ಇದೆ. ನಾಮಕರಣ ಸದಸ್ಯರಿಗೆ ಮತದಾನಕ್ಕೆ ಅವಕಾಶ ಇಲ್ಲ. ರಾಜಕೀಯ ಪಕ್ಷಗಳು ನೀಡುವ ವಿಪ್‌ಗೆ ಮಾನ್ಯತೆ ಇದ್ದು, ಮತದಾನ ಮಾಡಿದ ನಂತರ ಸದಸ್ಯರು ಏಜೆಂಟರಿಗೆ ಮತಪತ್ರವನ್ನು ತೋರಿಸಬೇಕಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.