ಶುಕ್ರವಾರ, ಜೂಲೈ 10, 2020
27 °C

ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣ ದುಃಖಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ವಿಶೇಷ ವರದಿ

ಸಾಲಿಗ್ರಾಮ:
ಪಟ್ಟಣದಲ್ಲಿ ಹಾಯ್ದು ಹೋಗಿರುವ ರಾಮನಾಥಪುರ, ಭೇರ್ಯ ರಾಜ್ಯ ಹೆದ್ದಾರಿ 87ರ ದುಃಸ್ಥಿತಿಯನ್ನು ಹೇಳತೀರದು. ಕಳೆದ 10 ವರ್ಷಗಳ ಹಿಂದೆ ರಾಜ್ಯ ಹೆದ್ದಾರಿ 87 ಅನ್ನು ನಿರ್ಮಾಣ ಮಾಡಿದ  ನಂತರ ಹೆದ್ದಾರಿ ಎಂಜಿನಿಯರ್‌ಗಳು ಇತ್ತ ತಿರುಗಿ ನೋಡಿಲ್ಲ. ಇದರಿಂದಾಗಿ ರಾಜ್ಯ ಹೆದ್ದಾರಿ ಸಾಮಾನ್ಯ ರಸ್ತೆಕ್ಕಿಂತ ಕೆಟ್ಟದಾಗಿದೆ.ರಾಮನಾಥಪುರದಿಂದ ಭೇರ್ಯ ಗ್ರಾಮದ ತನಕ ಹೆದ್ದಾರಿ ರಸ್ತೆಯನ್ನು ನಿರ್ಮಾಣ ಮಾಡಲಾಗಿದ್ದು ಪಟ್ಟಣ ದಿಂದ ಭೇರ್ಯ ಗ್ರಾಮದ ತನಕ ಇರುವ 10 ಕಿ.ಮೀ. ರಸ್ತೆ ನೋಡಿದ ಪ್ರಯಾಣಿಕರಿಗೆ ಇದು ರಾಜ್ಯ ಹೆದ್ದಾರಿಯೇ  ಎಂಬ ಅನುಮಾನ ಬರುವಷ್ಟು ಕೆಟ್ಟದಾಗಿ ಇದೆ. ಹೆದ್ದಾರಿ ಎಂದು ವಾಹನಗಳು ವೇಗವಾಗಿ ಬಂದರೆ ರಸ್ತೆಯಲ್ಲಿ  ಇರುವ ಗುಂಡಿಗಳನ್ನು ಕಂಡು ‘ಯಾಕಪ್ಪಾ ಈ ರಸ್ತೆಯಲ್ಲಿ ಬಂದೆವು’ ಎಂದು ಹಿಡಿಶಾಪ ಹಾಕುತ್ತಾ ವಾಹನವನ್ನು  ಚಾಲನೆ ಮಾಡುವುದು ಮಾಮೂಲಿಯಾಗಿದೆ.ಪಟ್ಟಣದ ಕೆಇಬಿ ಬಡಾವಣೆಯಲ್ಲಿ ರಾಜ್ಯ ಹೆದ್ದಾರಿ ಹಳ್ಳಬಿದ್ದು ವಾಹನಗಳು ಓಡಾಡಲು ಸಾಧ್ಯವಾಗುತ್ತಿಲ್ಲ. ಈ ರಸ್ತೆಯಲ್ಲಿ ಭಾರಿ ವಾಹನಗಳು ಬಂದರೆ ಎಲ್ಲಿ ಬಿದ್ದು ಹೋಗುತ್ತವೋ ಎಂಬ ಭಯ ಕಾಡದೆ ಇರುವುದಿಲ್ಲ. ಅಲ್ಲದೆ  ಹಲವು ವಾಹನಗಳು ಪಲ್ಟಿ ಹೊಡೆದು ಕೆಲವು ಪ್ರಯಾಣಿಕರು ಕೈಕಾಲು ಕಳೆದುಕೊಂಡಿದ್ದಾರೆ.ರಾಜ್ಯ ಹೆದ್ದಾರಿ ತೀವ್ರವಾಗಿ ಹದಗಟ್ಟಿದ್ದರೂ ಹೆದ್ದಾರಿ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಎಂಜಿನಿಯರ್  ಗಳು ಮಾತ್ರ ಇದು ಗೊತ್ತೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ಬಾಯಿ ತೆರೆದುಕೊಂಡಿರುವ ಗುಂಡಿ  ಮತ್ತು ಹಳ್ಳಗಳನ್ನು ಮುಚ್ಚಿ ಪ್ರಯಾಣಿಕರಿಗೆ ಓಡಾಡಲು ಆದಷ್ಟು ಬೇಗ ಅನುಕೂಲ ಮಾಡದಿದ್ದರೆ ಹೆದ್ದಾರಿಯಲ್ಲೇ ರಸ್ತೆ ತಡೆ ಚಳವಳಿಯನ್ನು ಮಾಡಬೇಕಾಗುತ್ತದೆ ಎಂದು ಜಿಲ್ಲಾ ಯುವ ಜೆಡಿಎಸ್ ಮುಖಂಡ ಸಾ.ರಾ.ನಂದೀಶ್  ಎಚ್ಚರಿಕೆ ನೀಡಿದ್ದಾರೆ.

-ಸಾಲಿಗ್ರಾಮ ಯಶವಂತ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.