ಶನಿವಾರ, ಫೆಬ್ರವರಿ 27, 2021
28 °C

ರಾಜ್‌ ಮೇಲಿನ ಅಭಿಮಾನ ಪೇಚಿಗೆ ಸಿಲುಕಿದ ಶರವಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್‌ ಮೇಲಿನ ಅಭಿಮಾನ ಪೇಚಿಗೆ ಸಿಲುಕಿದ ಶರವಣ

ಬೆಂಗಳೂರು: ಜೆಡಿಎಸ್‌ನ ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಅವರು ಡಾ.ರಾಜ್‌ಕುಮಾರ್‌  ಮೇಲಿನ ಅತಿಯಾದ ಅಭಿಮಾನದಿಂದ ಪೇಚಿಗೆ ಸಿಲುಕಿದ ಪ್ರಸಂಗ ಶುಕ್ರವಾರ ನಡೆದಿದ್ದು, ಅದಕ್ಕೆ ಸಮಜಾಯಿಷಿ ನೀಡುವುದಕ್ಕೇ ಇಡೀ ದಿನ ಕಳೆದರು.ಘಟನೆ ನಡೆದಿದ್ದು ಹೀಗೆ, ಇತ್ತೀಚೆಗೆ ನವಲಗುಂದ ತಾಲ್ಲೂಕಿನ ಯಮನೂರಿನಲ್ಲಿ ನಡೆದ ಪೊಲೀಸ್‌ ದೌರ್ಜನ್ಯದ ಘಟನೆ ವಿರೋಧಿಸಿ ರಾಜ್‌ ಸಮಾಧಿಯಿಂದ ರಾಜಭವನದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು.ಶರವಣ ಅವರ ಸ್ಥಳಕ್ಕೆ ಬರುವುದಕ್ಕೆ ಮುನ್ನ ಅವರ ಬೆಂಬಲಿಗರು ಅಲ್ಲಿ ಜಮಾಯಿಸಿದ್ದರು. ರಾಜ್‌ ಸಮಾಧಿಯಿಂದ ಪಾದಯಾತ್ರೆ ನಡೆಸುವುದಕ್ಕೆ ಪೊಲೀಸರು ತಕರಾರು ಎತ್ತಿ, ಅನುಮತಿ ಇಲ್ಲದೇ ಪಾದಯಾತ್ರೆ ಮಾಡಕೂಡದು ಎಂದು ತಾಕೀತು ಮಾಡಿದರು. ಬೆಂಬಲಿಗರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಆಗುತ್ತಿರುವ ವಿಚಾರ ತಿಳಿದು ತಕ್ಷಣವೇ ಶರವಣ ಆಗಮಿಸಿ, ತಾವು ಅನುಮತಿ ಪಡೆದಿರುವುದಾಗಿ ಸಮಜಾಯಿಷಿ ನೀಡಿದರು. ಆದರೂ ಪೊಲೀಸರು ಪಾದಯಾತ್ರೆ ನಡೆಸುವುದಕ್ಕೆ ಒಪ್ಪಲಿಲ್ಲ.ಹೇಗಾದರೂ ಸೈ ಪಾದಯಾತ್ರೆಗೆ ಚಾಲನೆ ನೀಡಬೇಕು ಎಂದು ಶರವಣ, ರಾಜ್‌ ಅವರ ಸಮಾಧಿ ಸ್ಥಳದ ಮೇಲೆ ನಿಂತು ಹೂಮಾಲೆ ಹಾಕಿ ನಮಸ್ಕರಿಸಿದರು. ಅಲ್ಲಿ ಹತ್ತುವಂತಿಲ್ಲ ಎಂದು ತಕ್ಷಣ ಯಾರೋ ಅವರ ಕಿವಿಯಲ್ಲಿ ಉಸುರಿ ದರು. ಈ ವಿಚಾರ ರಾಜ್‌ ಅವರ ಅಭಿಮಾನಿಗಳಿಗೆ ಗೊತ್ತಾದರೆ ಅನಾಹುತ ಆಗುತ್ತದೆ ಎಂದು ಗಾಬರಿ ಬಿದ್ದ ಶರವಣ ಅವರು ತಕ್ಷಣ ಅಲ್ಲಿಂದ ಇಳಿದು, ಮಾಡಿದ ತಪ್ಪಿಗೆ ಪ್ರಾಯಃಶ್ಚಿತವಾಗಿ ಸಮಾಧಿಗೆ ಆರತಿ ಬೆಳಗಿದರು ಮತ್ತು  ನಮಸ್ಕರಿಸಿದರು.ಈ ಕುರಿತು ಶರವಣ ‘ಪ್ರಜಾವಾಣಿ’ಗೆ ಹೇಳಿದ್ದು ಹೀಗೆ, ‘ಸಮಾಧಿ ಭಾವಚಿತ್ರದ ಬಳಿ ಹತ್ತಬಾ ರದು ಎಂಬುದು ಗೊತ್ತಿರಲಿಲ್ಲ.  ನನ್ನಿಂದ ತಪ್ಪಾಗಿತ್ತು. ಕೂಡಲೇ ಆರತಿ ಮಾಡಿ ನಮಸ್ಕರಿಸಿದೆ. ಇದು ಸತ್ಯಭೂಮಿ ಮತ್ತು ಅಪಾರ ಶಕ್ತಿ ಇರುವ ಸ್ಥಳ ಎಂದು ನನಗೆ ಗೊತ್ತು. ಈ ಕಾರಣಕ್ಕೆ ಇಲ್ಲಿಂದ ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದು. ರಾಜಣ್ಣನವರ ಆಶೀರ್ವಾದವನ್ನು ಪಡೆದೇ ಮುಂದುವರೆಯೋಣ ಎಂಬುದು ನನ್ನ ಆಶಯವಾಗಿತ್ತು’ ಎಂದು ಅವರು ತಿಳಿಸಿದರು.‘ಪೊಲೀಸರು ನಮ್ಮನ್ನು ಬಂಧಿಸಿ ಅನಂತರ ಬಿಟ್ಟರು. ಆ ಬಳಿಕ ರಾಜಭವನಕ್ಕೆ ಬಂದು ಅಧಿಕಾರಿ ಗಳಿಗೆ ನಮ್ಮ ಮನವಿಯನ್ನು ಅರ್ಪಿಸಿ, ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದೆವು’ ಎಂದು ಶರವಣ ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.