ಭಾನುವಾರ, ಆಗಸ್ಟ್ 1, 2021
23 °C

ರಾತ್ರಿಯಿಡೀ ಎಚ್ಚರವಿದ್ದ ಭಕ್ತ ಸಮೂಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಜಾಲಾರಿ ಗಂಗಮಾಂಭ ದೇವಾಲಯದ 51ನೇ ಧರ್ಮ ರಾಯರ ಹೂವಿನ ಕರಗ ಶನಿವಾರ ರಾತ್ರಿ ನೆರವೇರಿತು. ಗಂಗಮ್ಮಗುಡಿ ರಸ್ತೆ ಗಂಗಮಾಂಭ ದೇವಾಲಯದ ಮುಂಭಾಗದಲ್ಲಿ ಬೇತಮಂಗಲದ ಬಿ.ಎಂ.ನಾಗರಾಜು ಅವರು ಕರಗ ಹೊರುವುದರ ಮೂಲಕ ರಾತ್ರಿ 10.30ಕ್ಕೆ ಕರಗ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.ಗಂಗಮ್ಮಗುಡಿ ರಸ್ತೆ, ಎಂ.ಜಿ.ರಸ್ತೆ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.ಇಡೀ ರಾತ್ರಿ ನಡೆದ ಮೆರವಣಿಗೆ ಮತ್ತು ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಮಹೋತ್ಸವದ ಪ್ರಯುಕ್ತ ನಗರದ ಪ್ರಮುಖ ಬೀದಿಗಳಲ್ಲಿ ದೀಪಾಲಾಂಕರ ಮಾಡಲಾಗಿತ್ತು.ಗೃಹಿಣಿಯರು ತಮ್ಮ ಮನೆಗಳ ಮುಂದೆ ಸಗಣಿಯನ್ನು ಸಾರಿಸಿ, ರಂಗೋಲಿ ಬಿಡಿಸಿದ್ದರು.ಕರಗ ಮೆರವಣಿಗೆ ನಡೆದ ಸ್ಥಳದಲ್ಲೆಲ್ಲ ಪೂಜೆ ಮಾಡಲಾಯಿತು. ಪ್ರಾರ್ಥನೆ ಸಲ್ಲಿಸಲಾಯಿತು. ಬಗೆಬಗೆ ರೀತಿಗಳಲ್ಲಿ ಹೆಜ್ಜೆಗಳನ್ನು ಹಾಕುತ್ತ ಕುಣಿಯುತ್ತಿದ್ದ ಬಿ.ಎಂ.ನಾಗರಾಜು ಅವರನ್ನು ಕಿರಿಯರು ಮತ್ತು ಹಿರಿಯರು ಆಸಕ್ತಿಯಿಂದ ನೋಡಿದರು. ತಾಲ್ಲೂಕಿನ ವಿವಿಧ ಹಳ್ಳಿಗಳ ಗ್ರಾಮಸ್ಥರು ದೇವರ ಮುತ್ತಿನ ಪಲ್ಲಕ್ಕಿಗಳ ಮೆರವಣಿಗೆ ನಡೆಸಿದ್ದು ವಿಶೇಷವಾಗಿತ್ತು.ಕೀಲು ಕುದುರೆ ನೃತ್ಯ, ಪೂಜಾ ಕುಣಿತ, ವೀರಗಾಸೆ ನೃತ್ಯ, ಕೀಲು ಕುದುರೆ ನೃತ್ಯ, ಕಂಸಾಳೆ, ಡೊಳ್ಳು ಕುಣಿತ ಮುಂತಾದವು ನಡೆದವು. ಬೃಹದಾಕಾರದ ಗೊಂಬೆಗಳ ವೇಷ ತೊಟ್ಟು ಕಲಾವಿದರು ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ನಗರದ ಪ್ರಮುಖ ಸ್ಥಳಗಳಲ್ಲಿ ಅನ್ನ ಸಂತರ್ಪಣೆ ಕೂಡ ಆಯೋಜಿಸ ಲಾಗಿತ್ತು.ಮಧ್ಯರಾತ್ರಿ ನಗರದ ಯಾವುದೇ ಭಾಗದಲ್ಲಿ ಓಡಾಡಿದರೂ ಜನದಟ್ಟಣೆ ಇತ್ತು. ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.ಕರಗದ ನೃತ್ಯ ಮತ್ತು ಪೂಜಾ ಕಾರ್ಯವನ್ನು  ಜನರು ತಮ್ಮ ಮನೆ, ಕಟ್ಟಡಗಳ ಮೇಲೆ ನಿಂತು ನೋಡಿದರು. ಕಟ್ಟಡದ ತುದಿಯಲ್ಲಿ ಕೂತು ಎಲ್ಲವನ್ನೂ ವೀಕ್ಷಿಸುತ್ತಿದ್ದ ಜನರಿಗೆ ಬೀಳುವ ಭಯವಿರಲಿಲ್ಲ. ಅಲ್ಲಲ್ಲಿ ಸೇರುತ್ತಿದ್ದ ಜನರ ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನಂದಿ ರಂಗಮಂದಿರದರಲ್ಲಿ ಕರಗದ ವಿಶೇಷ ನೃತ್ಯ ನಡೆಯಿತು. ನಂತರ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯು ಭಾನುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಜಿ.ಎನ್‌. ವೆಂಕಟ ರಾಯಲು ರಸ್ತೆ ತಲುಪಿತು. ಅಲ್ಲಿಂದ ಮೆರವಣಿಗೆಯು ಎಲೆಪೇಟೆ, ಗಂಗಮ್ಮ ಗುಡಿ ರಸ್ತೆ ಮೂಲಕ ಮುಂದುವರೆ ಯಿತು.ಮಧ್ಯಾಹ್ನ 12 ಗಂಟೆ ಸುಮಾರಿಗೆ ಜಾಲಾರಿ ಗಂಗಮಾಂಭ ದೇವಾಲಯದ ಎದುರು ಅಗ್ನಿಕುಂಡ ಪ್ರವೇಶ ನೆರವೇರಿತು. ಕರಗ ಹೊತ್ತ ನಾಗರಾಜು ಅವರು ಮೂರು ಬಾರಿ ಅಗ್ನಿಕುಂಡ ಪ್ರವೇಶಿಸಿದರು ಅವ ರೊಂದಿಗೆ ಹರಕೆ ಹೊತ್ತವರು ಸಹ ಅಗ್ನಿಕುಂಡ ಪ್ರವೇಶಿಸಿದರು.ಈ ಅಗ್ನಿಕುಂಡ ಪ್ರವೇಶ ವೀಕ್ಷಣೆಗೂ ಭಾರಿ ಜನಸ್ತೋಮವೇ ಸೇರಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.