ಶನಿವಾರ, ಏಪ್ರಿಲ್ 17, 2021
31 °C

ರಾತ್ರಿಯಿಡೀ ಸ್ವಚ್ಛತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ರಾತ್ರಿಯಿಡೀ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಆಂದೋಲನಕ್ಕೆ ಬಿಬಿಎಂಪಿ ಶನಿವಾರ ಚಾಲನೆ ನೀಡಿತು. ಇನ್ನು ಮುಂದೆ ಪಾಲಿಕೆಯು ಪ್ರತಿ 15 ದಿನಗಳಿಗೊಮ್ಮೆ ಈ ರೀತಿ ಕಾರ್ಯಾಚರಣೆ ನಡೆಸಲಿದೆ.ನಗರದಲ್ಲಿ ಶನಿವಾರ ರಾತ್ರಿ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿದ ಪಾಲಿಕೆ ಆಯುಕ್ತ ಸಿದ್ದಯ್ಯ ಅವರು ಮಾತನಾಡಿ ‘ನಗರದಲ್ಲಿ ಹಗಲಿಗಿಂತ ರಾತ್ರಿ ವೇಳೆ ಸ್ವಚ್ಛತಾ ಕಾರ್ಯ ಕೈಗೊಳ್ಳುವುದು ಪರಿಣಾಮಕಾರಿ ಎನಿಸಿದೆ. ಆ ಹಿನ್ನೆಲೆಯಲ್ಲಿ ಈ ಆಂದೋಲನಕ್ಕೆ ಚಾಲನೆ ನೀಡಲಾಗಿದೆ’ ಎಂದರು.‘ಪ್ರತಿ 15 ದಿನಗಳಿಗೊಮ್ಮ ರಾತ್ರಿಯಿಡೀ ಸ್ವಚ್ಛತಾ ಕಾರ್ಯ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಕಾರ್ಯದಲ್ಲಿ ಪಾದಚಾರಿ ಮಾರ್ಗ ದುರಸ್ತಿ, ಚರಂಡಿ ಮತ್ತು ಕಾಲುವೆಗಳ ದುರಸ್ತಿ, ತ್ಯಾಜ್ಯ ವಿಲೇವಾರಿ, ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತದೆ. ಈ ಕೆಲಸ ಪ್ರತಿ ವಲಯದ ಪ್ರಮುಖ ರಸ್ತೆಗಳಲ್ಲಿ ಏಕಕಾಲಕ್ಕೆ ನಡೆಯಲಿದ್ದು, ಇದರಿಂದ ಸುಂದರ ನಗರ ನಿರ್ಮಾಣಕ್ಕೆ ಸಹಕಾರಿಯಾಗಲಿದೆ’ ಎಂದು ಅವರು ಹೇಳಿದರು.ರಿಚ್ಮಂಡ್ ರಸ್ತೆ, ಕಾಮರಾಜ ರಸ್ತೆ, ಹಳೆ ಮದ್ರಾಸ್ ರಸ್ತೆ, ಕೆ.ಆರ್.ಪುರ, ರಾಮಮೂರ್ತಿನಗರದ ಭೋವಿ ಕಾಲೊನಿ, ಮಹದೇವಪುರ ಸುತ್ತಮುತ್ತ ಆಯುಕ್ತರು ಪರಿಶೀಲನೆ ನಡೆಸಿದರು. ಎಲ್ಲ ವಲಯಗಳಲ್ಲಿ ರಾತ್ರಿಯಿಡೀ ನಡೆದ ಸ್ವಚ್ಛತಾ ಕಾರ್ಯಕ್ಕೆ 264 ಟ್ರಾಕ್ಟರ್, 51 ಲಾರಿ, ಐದು ಜೆಸಿಬಿ ಹಾಗೂ 4,600 ಸಿಬ್ಬಂದಿಯನ್ನು ಬಳಸಿಕೊಳ್ಳಲಾಯಿತು.ಅನಧಿಕೃತ ಜಾಹೀರಾತು ಫಲಕ ತೆರವು: ‘ನಗರದ ಹಲವೆಡೆ ಅನಧಿಕೃತ ಜಾಹೀರಾತು ಫಲಕಗಳು ಇರುವುದು ಕಂಡುಬಂದಿದೆ. ಇದರಿಂದ ನಗರ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಒಂದು ಫಲಕ ಅಳವಡಿಕೆಗೆ ಅನುಮತಿ ಪಡೆದಿರುವ ಕೆಲ ಸಂಸ್ಥೆಗಳು ಹತ್ತಾರು ಫಲಕಗಳನ್ನು ಅಳವಡಿಸಿರುವುದು ಗೊತ್ತಾಗಿದೆ. ಈ ರೀತಿಯ ಅನಧಿಕೃತ ಫಲಕಗಳನ್ನು ತೆರವುಗೊಳಿಸಲು ವಿಶೇಷ ಆಂದೋಲನ ನಡೆಸಲಾಗುವುದು’ ಎಂದು ಹೇಳಿದರು.‘ಈಗಾಗಲೇ ಎಲ್ಲ ವಲಯಗಳ ಜಂಟಿ ಆಯುಕ್ತರು ಮತ್ತು ಹೆಚ್ಚುವರಿ ಆಯುಕ್ತರಿಗೆ ತಮ್ಮ ವ್ಯಾಪ್ತಿಯಲ್ಲಿರುವ ಅನಧಿಕೃತ ಜಾಹೀರಾತು ಫಲಕಗಳ ಬಗ್ಗೆ ವಿವರ ನೀಡುವಂತೆ ಸೂಚಿಸಲಾಗಿದೆ. ಸದ್ಯದಲ್ಲೇ ಈ ಎಲ್ಲಾ ಫಲಕಗಳನ್ನು ತೆರವುಗೊಳಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.