ಗುರುವಾರ , ಜೂನ್ 4, 2020
27 °C

ರಾಧಾ ರಾಗ

ಎಚ್.ಎಸ್.ರೋಹಿಣಿ Updated:

ಅಕ್ಷರ ಗಾತ್ರ : | |

ರಾಧಾ ರಾಗ

ಕನ್ನಡ ಸಿನಿಮಾ ಮತ್ತು ಕಿರುತೆರೆ ಪ್ರೇಕ್ಷಕರಿಗೆ ರಾಧಾ ರಾಮಚಂದ್ರ ಅಪರಿಚಿತರಲ್ಲ. ಮನೆಮುರುಕಿ, ಜಗಳಗಂಟಿ, ಸೌಮ್ಯ ಸ್ವಭಾವದ ಅಜ್ಜಿ, ಬುದ್ಧಿಭ್ರಮಣೆಯಾದ ಹೆಣ್ಣು, ಕಡು ಬಡವ ಹೆಂಗಸು, ದರ್ಪ ತುಂಬಿದ ಶ್ರೀಮಂತ ಮಹಿಳೆ- ಹೀಗೆ ಅವರು ಕಾಣಿಸಿಕೊಂಡ ಪಾತ್ರಗಳು ಹಲವು.

 

ಪೋಷಕ ಪಾತ್ರಗಳ ಮೂಲಕ ಹೆಸರಾದ ಅವರು ಇದುವರೆಗೂ 220ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ, 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದವರು.

ಮಂಡ್ಯ ಜಿಲ್ಲೆಯ ತೈಲೂರಿನವರಾದ ರಾಧಾ ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದರು. ದನಿ ಚೆನ್ನಾಗಿದ್ದ ಕಾರಣ ಆಕಾಶವಾಣಿಯಲ್ಲಿ ನಿಲಯದ ಕಲಾವಿದೆಯಾಗಿ ಸೇರಿಕೊಂಡರು.ಆಕಾಶವಾಣಿಯಲ್ಲಿ ಇದ್ದಾಗ ರೇಡಿಯೊ ನಾಟಕಗಳು, ನೃತ್ಯ ರೂಪಕಗಳು, ಸಾಕ್ಷ್ಯಚಿತ್ರಗಳು, ಕಮರ್ಷಿಯಲ್ ಕಾರ್ಯಕ್ರಮಗಳಲ್ಲಿ ಮಾತ್ರವಲ್ಲದೇ ಸಾಕಷ್ಟು ಸಿನಿಮಾಗಳಿಗೆ, ಕ್ಯಾಸೆಟ್‌ಗಳಿಗೂ ದನಿ ನೀಡಿದರು. ಇಂದಿಗೂ ಪ್ರತೀ ಭಾನುವಾರ ಬರುವ ಬೆಳಗಿನ ವಿಜ್ಞಾನ ಕಾರ್ಯಕ್ರಮದಲ್ಲಿ ಅವರ ದನಿ ಕೇಳಬಹುದು.ರಂಗಭೂಮಿಯಲ್ಲಿ ಜಾಗ ಕಂಡುಕೊಂಡ ರಾಧಾ, `ಕಾಲ ಬದಲಾಯ್ತು~, `ಜೋಕುಮಾರಸ್ವಾಮಿ~, `ಮಾಯಾದ್ವೀಪ~, `ಶ್ರೀರಾಮಚರಿತೆ~, `ಸಿಂಡ್ರೆಲಾ~, `ತುಘಲಕ್~, `ಸಿರಿಸಂಪಿಗೆ~, `ಫಾದರ್~ ಹೀಗೆ ಹಲವು ನಾಟಕಗಳಲ್ಲಿ ನಟಿಸಿದರು.ಎನ್.ಎ.ಸೂರಿ ಅವರು ವೀಣಾ ಶಾಂತೇಶ್ವರ ಅವರ ಕತೆ ಆಧರಿಸಿದ `ನೆರಳು~ ಟಿಲಿಫಿಲ್ಮ್‌ನಲ್ಲಿ ನಟಿಸುವ ಅವಕಾಶ ಕಲ್ಪಿಸಿದರು. ಆ ಮೂಲಕ ರಾಧಾ ಕಿರುತೆರೆಗೆ ಕಾಲಿಟ್ಟರು. ನಂತರ 1988ರಲ್ಲಿ `ಬೆಳ್ಳಿಬೆಳಕು~ ಸಿನಿಮಾದಿಂದ ಬೆಳ್ಳಿತೆರೆಗೆ ಮುಂದಡಿ ಇಟ್ಟರು.`ಕರಡಿಪುರ~, `ಹಗಲುವೇಷ~, `ಜನಪದ~, `ಉಗ್ರಗಾಮಿ~, `ಏಕಲವ್ಯ~, `ಭೂಮಿತಾಯಿ~, `ಜನುಮದ ಜೋಡಿ~, `ಆಘಾತ~, `ಚಿನ್ನಾರಿ ಮುತ್ತ~, `ಕೊಟ್ರೇಶಿ ಕನಸು~, `ಶಿವಸೈನ್ಯ~, `ಜನುಮದ ಜೋಡಿ~, `ದ್ವೀಪ~ ಹೀಗೆ ಅವರು ನಟಿಸಿದ ಸಿನಿಮಾಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

 

ಪ್ರಭಾಕರ್, ತಾರಾ, ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಅನಂತನಾಗ್, ಶಂಕರ್‌ನಾಗ್ ಹೀಗೆ ಕನ್ನಡದ ಪ್ರಮುಖ ನಟರೊಂದಿಗೆ ನಟಿಸಿರುವ ರಾಧಾಗೆ ಡಾ.ರಾಜ್‌ಕುಮಾರ್ ಅವರೊಂದಿಗೆ ನಟಿಸಲು ಆಗಲಿಲ್ಲ ಎಂಬ ಕೊರಗು ಇದೆ.

 

`ಆಕಸ್ಮಿಕ ಸಿನಿಮಾದಲ್ಲಿ ನಟಿಸಬೇಕಿತ್ತು. ಮಗನ ಮದುವೆ ಸಮಯದಲ್ಲಿ ಡೇಟ್ ಇದ್ದ ಕಾರಣ ಅಣ್ಣಾವ್ರೊಂದಿಗೆ ನಟಿಸಲು ಸಾಧ್ಯವಾಗಲಿಲ್ಲ~ ಎಂದು ನೊಂದುಕೊಳ್ಳುವ ರಾಧಾ ಅವರಿಗೆ ಪುಟ್ಟಣ ಕಣಗಾಲ್ ನಿರ್ದೇಶನದಲ್ಲಿ ಕೆಲಸ ಮಾಡುವಾಸೆಯೂ ಕೈಗೂಡಲಿಲ್ಲ ಎಂಬ ನೋವಿದೆ.ಆಟೋ ಡ್ರೈವರ್‌ಗಳು, ಕೂಲಿ ಮಾಡುವವರು ತಮ್ಮನ್ನು ಗುರುತಿಸಿದಾಗ ಆಗುವಷ್ಟೇ ಸಂತೋಷ ಅಮೆರಿಕದ ಕನ್ನಡಿಗರು ಗುರುತಿಸಿದಾಗ ಆಗಿತ್ತು ಎನ್ನುವ ಅವರು ಸದ್ಯ `ಕುಂಕುಮಾಂಕಿತೆ~, `ಜೀವನ ಸತ್ಯ~, `ಕಲ್ಯಾಣಿ~, `ಒಂದಾನೊಂದು ಕಾಲದಲ್ಲಿ ಮೂಕಾಂಬಿಕೆ~, `ಶುಭಮಂಗಳ~, `ಹೃದಯಸಾಕ್ಷಿ~ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.ಹಿಂದಿಯ `ಮಾಲ್ಗುಡಿ ಡೇಸ್~, `ಸನ್ ಸ್ಮರಣ್~ ಅಲ್ಲದೇ ಕನ್ನಡದಲ್ಲಿ ಅವರು ನಟಿಸಿದ ಧಾರಾವಾಹಿಗಳಲ್ಲಿ ಪ್ರಮುಖವಾದವು `ಲಾಲಿ~, `ಬೆಳದಿಂಗಳಾಗಿ ಬಾ~, `ಅಭಿಮಾನ~, `ಮನೆಮಗಳು~, `ಪ್ರೇರಣಾ~, `ಸಾಧನೆ~, `ನಿರ್ಜೀವ~, `ಅರ್ಧಸತ್ಯ~, `ಮುಸ್ಸಂಜೆ~ ಮುಂತಾದವು.ಸಿನಿಮಾ ಮತ್ತು ಕಿರುತೆರೆಯಿಂದ ಸಾಕಷ್ಟು ಅವಕಾಶಗಳು ಬರುತ್ತಿವೆ. ಈ ಅವಕಾಶಗಳಿಂದ ತಾವು ತೃಪ್ತರಾಗಿದ್ದು, ತಮ್ಮ ಇಬ್ಬರು ಗಂಡು ಮಕ್ಕಳನ್ನು ಡಾಕ್ಟರ್, ಎಂಜಿನಿಯರ್ ಓದಿಸಿರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ರಾಧಾ.ಯಾವುದೇ ಹಿನ್ನೆಲೆ, ಅನುಭವ, ತರಬೇತಿ ಇಲ್ಲದೇ ತಮಗೆ ಒಳ್ಳೆಯ ಅವಕಾಶಗಳು ಸಿಕ್ಕವು. ಎಲೆಮರೆಕಾಯಿಯಂಥ ತಮ್ಮನ್ನು ಜನ ಗುರುತಿಸಿದರಷ್ಟೇ ಸಾಕು ಎನ್ನುವ ಅವರು ಬಿಡುವಿನ ಸಮಯದಲ್ಲಿ ಅಡುಗೆ, ತೋಟಗಾರಿಕೆ, ಪ್ರವಾಸವನ್ನು ಎಂಜಾಯ್ ಮಾಡುತ್ತಾರಂತೆ.ಅಂದಹಾಗೆ ಮುಖದಲ್ಲಿ ಅಂಥ ಸುಕ್ಕುಗಳು ಇಲ್ಲವಾದರೂ ತಲೆ ತುಂಬ ಬಿಳಿ ಕೂದಲು ಬಿಟ್ಟುಕೊಂಡಿರುವ ರಾಧಾ ಅವರನ್ನು ಈ ಬಗ್ಗೆ ಕೇಳಿದರೆ, `ಇಂದಿನ ಧಾರಾವಾಹಿಗಳಲ್ಲಿ 30 ವರ್ಷದ ಹುಡುಗಿಯರೆಲ್ಲಾ ಅಮ್ಮನ ಪಾತ್ರ ನಿರ್ವಹಿಸುತ್ತಿದ್ದಾರೆ.ಅದರಿಂದ ನನಗೆ ಅಜ್ಜಿಯ ಪಾತ್ರವೇ ಕಟ್ಟಿಟ್ಟ ಬುತ್ತಿ. ಅದರಿಂದ ಬಿಳಿ ಕೂದಲು ಬಿಟ್ಟುಕೊಂಡಿರುವೆ. ಸದ್ಯ ನಾನು ನಟಿಸುತ್ತಿರುವ ಧಾರಾವಾಹಿಗಳು ಮುಗಿದ ನಂತರ ಕೂದಲ ಬಣ್ಣ ಬದಲಿಸುವ ಯೋಚನೆ ಇದೆ~ ಎಂದು ಮುಗುಳ್ನಗುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.