ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಗಂಭೀರ ವಿಷಯ: ‘ಸುಪ್ರೀಂ’

ನವದೆಹಲಿ (ಪಿಟಿಐ): ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ರಾಷ್ಟ್ರಪತಿ ಆಳ್ವಿಕೆ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಎಸ್. ಖೇಹರ್ ನೇತೃತ್ವದ ಐವರು ಸದಸ್ಯರ ಪೀಠ, ಅರುಣಾಚಲ ಪ್ರದೇಶ ರಾಜಕೀಯ ಬಿಕ್ಕಟ್ಟು ‘ಗಂಭೀರ ವಿಷಯ’ ಎಂದು ಹೇಳಿತು.
ನೋಟಿಸ್ಗೆ ಶುಕ್ರವಾರದ ಒಳಗೆ ಉತ್ತರಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಮತ್ತು ರಾಜ್ಯಪಾಲ ಜ್ಯೋತಿ ಪ್ರಸಾದ್ ರಾಜ್ಖೋವಾ ಅವರಿಗೆ ಸೂಚಿಸಿತು. ಮುಂದಿನ ವಿಚಾರಣೆ ಸೋಮವಾರ ನಡೆಯಲಿದೆ.
ಅರುಣಾಚಲ ಪ್ರದೇಶದಲ್ಲಿ ‘ಸಾಂವಿಧಾನಿಕ ಬಿಕ್ಕಟ್ಟು’ ಎದುರಾಗಿದೆ ಎಂದು ಹೇಳಿ ಕೇಂದ್ರ ಸರ್ಕಾರವು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿತ್ತು. ರಾಜ್ಯಪಾಲ ರಾಜ್ಖೋವಾ ನೀಡಿದ ವರದಿಯನ್ನು ಆಧರಿಸಿ ಕೇಂದ್ರ ಈ ನಿಲುವು ತೆಗೆದುಕೊಂಡಿತ್ತು.
ಕಾಂಗ್ರೆಸ್ನ ತೀವ್ರ ವಿರೋಧದ ನಡುವೆಯೂ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಶಿಫಾರಸಿಗೆ ಮಂಗಳವಾರ ಸಹಿ ಹಾಕಿದ್ದರು. ಪ್ರಕರಣದ ತುರ್ತು ವಿಚಾರಣೆ ನಡೆಸಬೇಕೆಂದು ಕೋರಿ ಕಾಂಗ್ರೆಸ್ ಸಲ್ಲಿಸಿದ ಅರ್ಜಿಯನ್ನು ಪೀಠ ಪುರಸ್ಕರಿಸಿತು.
ಹೊಸ ಅರ್ಜಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಪ್ರಶ್ನಿಸಿಲ್ಲ ಎಂಬ ವಾದವನ್ನು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಪೀಠದ ಮುಂದಿಟ್ಟರು. ಇದನ್ನು ಒಪ್ಪದ ಪೀಠ, ಶುಕ್ರವಾರದ ಒಳಗಾಗಿ ಅರ್ಜಿಯಲ್ಲಿ ತಿದ್ದುಪಡಿ ಮಾಡುವಂತೆ ಅರ್ಜಿದಾರರಿಗೆ ಸೂಚಿಸಿತು.
ರಾಷ್ಟ್ರಪತಿ ಆಡಳಿತ ಹೇರುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯ ಪ್ರತಿಯನ್ನು ಒಪ್ಪಿಸುವಂತೆ ರಾಜ್ಯಪಾಲರಿಗೆ ಸುಪ್ರೀಂಕೋರ್ಟ್ ನಿರ್ದೇಶಿಸಿತು.
ರಾಜ್ಯಪಾಲರನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸತ್ಪಾಲ್ ಜೈನ್, ‘ವರದಿಯ ಗೋಪ್ಯತೆ ಕಾಪಾಡಬೇಕು’ ಎಂದು ಪೀಠವನ್ನು ಕೋರಿದರು. ಇದರಿಂದ ವರದಿಯ ಪ್ರತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸಿತು. ‘15 ನಿಮಿಷಗಳ ಒಳಗಾಗಿ ವರದಿ ಸಲ್ಲಿಸಬೇಕು’ ಎಂದು ಪೀಠ ತಿಳಿಸಿತು.
‘ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದ್ದರ ಹಿಂದಿನ ಕಾರಣ ಏನು ಎಂಬುದು ಎಲ್ಲರಿಗೂ ತಿಳಿಯಬೇಕು. ಅದುವರೆಗೆ ಯಾವುದೇ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು.
*
‘ಬಹುಮತ ಸಾಬೀತು’
ನವದೆಹಲಿ (ಪಿಟಿಐ): ಕಾಂಗ್ರೆಸ್ ಪಕ್ಷವು ರಾಜ್ಯ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಿದೆ ಎಂಬ ವಿಶ್ವಾಸವನ್ನು ಮಾಜಿ ಮುಖ್ಯಮಂತ್ರಿ ನಬಂ ಟುಕಿ ವ್ಯಕ್ತಪಡಿಸಿದ್ದಾರೆ.
‘ಖಂಡಿತವಾಗಿಯೂ ನಾವು ಬಹುಮತ ಸಾಬೀತುಪಡಿಸುವೆವು’ ಎಂದು ಅವರು ಬುಧವಾರ ‘ಟ್ವೀಟ್’ ಮಾಡಿದ್ದಾರೆ. ‘ಸತ್ಯಕ್ಕೆ ಎಂದಿಗೂ ಸೋಲಾಗದು ಎಂಬುದು ನಮಗೆ ತಿಳಿದಿದೆ. ಪ್ರತಿಬಾರಿಯೂ ಸತ್ಯವೇ ಗೆಲ್ಲುತ್ತದೆ’ ಎಂದು ಹೇಳಿದ್ದಾರೆ.
*
‘ಶಾಸಕರಿಗೆ ಭದ್ರತೆ’
ಇಟಾನಗರ (ಪಿಟಿಐ): ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿರುವ ಅರುಣಾಚಲ ಪ್ರದೇಶದಲ್ಲಿ ರಾಜ್ಯಪಾಲ ಜ್ಯೋತಿ ಪ್ರಸಾದ್ ರಾಜ್ಖೋವಾ ಅವರು ಆಡಳಿತದ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದು, ಶಾಸಕರಿಗೆ ಸೂಕ್ತ ಭದ್ರತೆಯ ಭರವಸೆ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ಸಭೆ ಕರೆದ ರಾಜ್ಯಪಾಲರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ರಮೇಶ್ ನೇಗಿ ಒಳಗೊಂಡಂತೆ ಹಲವರು ಪಾಲ್ಗೊಂಡಿದ್ದರು. ಮಾಜಿ ಮುಖ್ಯಮಂತ್ರಿ ಮತ್ತು ಸಚಿವರುಗಳಿಗೆ ಭದ್ರತೆ ಒದಗಿಸಲಾಗುವುದು ಎಂದು ಹೇಳಿದ ಅವರು, ‘ಭದ್ರತೆಯ ವಿಷಯಕ್ಕೆ ಸಂಬಂಧಿಸಿದಂತೆ ಯಾರಿಗೂ ಸಮಸ್ಯೆ ಎದುರಾಗಬಾರದು’ ಎಂದಿದ್ದಾರೆ.
ನಿರ್ಧಾರ ಕೈಗೊಳ್ಳುವಲ್ಲಿ ಮತ್ತು ವಿವಿಧ ಯೋಜನೆಗಳ ಜಾರಿಯ ವೇಳೆ ಪಾರದರ್ಶಕತೆ ಕಾಪಾಡಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕುರಿತು ಎಲ್ಲ ಇಲಾಖೆಗಳು ಮತ್ತು ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.